ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ?

ಬೇಸಿಗೆಯ ಧಗೆಯಿಂದ ಪಾರಾಗಲೂ ಬಹುತೇಕ ಎಲ್ಲರೂ ಕಲ್ಲಂಗಡಿ ತಿನ್ನಲು ಇಷ್ಟಪಡುತ್ತಾರೆ. ರುಚಿಕರ, ರಸಭರಿತವಾದ ಕಲ್ಲಂಗಡಿ ಹಣ್ಣು ದೇಹವನ್ನು ತಂಪಾಗಿಸುವುದಲ್ಲದೆ ನಿರ್ಜಲೀಕರಣವನ್ನು ತಡೆಯುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸುವಂತಹ ಕಲ್ಲಂಗಡಿ ಸಿಹಿಯಾಗಿರುವುದಿಲ್ಲ. ಹೀಗಿರುವಾಗ ಈ ಕೆಲವೊಂದು ಸರಳ ಸಲಹೆಯನ್ನು ಅನುಸರಿಸುವ ಮೂಲಕ ಮಾಗಿದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡಬಹುದು.

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ?
ಕಲ್ಲಂಗಡಿ ಹಣ್ಣು
Image Credit source: Unsplash

Updated on: Mar 10, 2026 | 2:58 PM

ನೀರಿನಾಂಶದಿಂದ ಸಮೃದ್ಧವಾಗಿರುವ ಕಲ್ಲಂಗಡಿ ಹಣ್ಣನ್ನು (watermelon) ಬೇಸಿಗೆಯ ಸಮಯದ ಅಮೃತವೆಂದೇ ಹೇಳಬಹುದು. ಹೌದು ರುಚಿಕರ, ರಸಭರಿತವಾದ ಈ ಹಣ್ಣು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುವುದು ಮಾತ್ರವಲ್ಲದೆ, ನಿರ್ಜಲೀಕರಣವನ್ನೂ ತಡೆಯುತ್ತದೆ. ಅದಕ್ಕಾಗಿಯೇ ಈ ಸಮಯದಲ್ಲಿ ಕಲ್ಲಂಗಡಿ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ದೇಹವನ್ನು ತಂಪಾಗಿರಿಸಲು, ದೇಹವನ್ನು ಹೈಡ್ರೇಟ್‌ ಆಗಿರಿಸಲು ಜನ ಈ ಹಣ್ಣನ್ನೇ ಹೆಚ್ಚಾಗಿ ಖರೀದಿಸುತ್ತಾರೆ. ಆದ್ರೆ ಅನೇಕ ಸಂದರ್ಭದಲ್ಲಿ ನಾವು ಖರೀದಿಸುವಂತಹ ಕಲ್ಲಂಗಡಿ ಹಣ್ಣು ಅಷ್ಟೇನು ರುಚಿಕರವಾಗಿರುವುದಿಲ್ಲ, ಜೊತೆಗೆ ಅನೇಕರಿಗೆ ರಸಭರಿತ ಕಲ್ಲಂಗಡಿ ಹಣ್ಣನ್ನು ಹೇಗೆ ಆಯ್ಕೆ ಮಾಡೋದು ಅನ್ನೋದು ಸಹ ಗೊತ್ತಿಲ್ಲ. ಹೀಗಿರುವಾಗ ಈ ಕೆಲವೊಂದು ಸರಳ ಸಲಹೆಗಳನ್ನು ಪಾಲಿಸುವ ಮೂಲಕ ರಸಭರಿತ, ರುಚಿಕರ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡಬಹುದು.

ಮಾಗಿದ, ರಸಭರಿತ ಕಲ್ಲಂಗಡಿ ಹಣ್ಣನ್ನು ಈ ರೀತಿ ಆರಿಸಿ ಖರೀದಿಸಿ:

ಹಳದಿಯಾಗಿದೆಯೇ ಗಮನಿಸಿ: ಕಲ್ಲಂಗಡಿಯ ಬುಡ ಭಾಗದಲ್ಲಿ ತಿಳಿ ಹಳದಿ ಚುಕ್ಕೆ ಕಾಣಿಸಿಕೊಂಡರೆ,  ಅದನ್ನು ಹಣ್ಣಾದ ಬಳಿಕವೇ ಕೊಯ್ಲು ಮಾಡಲಾಗಿದೆ ಎಂದರ್ಥ.  ಇಂತಹ ಕಲ್ಲಂಗಡಿ ತುಂಬಾನೇ ರುಚಿಕರವಾಗಿರುತ್ತವೆ.

ಲಘುವಾಗಿ ಟ್ಯಾಪ್‌ ಮಾಡಿ: ಕಲ್ಲಂಗಡಿ ಹಣ್ಣನ್ನು ಖರೀದಿಸುವ ಮುನ್ನ ನಿಮ್ಮ ಬೆರಳುಗಳಿಂದ ಆ ಹಣ್ಣುಗಳನ್ನು ಟ್ಯಾಪ್ ಮಾಡಿ ಶಬ್ದವನ್ನು ಆಲಿಸಿ. ಆಳವಾದ, ಪ್ರತಿಧ್ವನಿಸುವ ಢಕ್‌ ಢಕ್‌ ಎನ್ನುವ ಶಬ್ದವನ್ನು ಕೇಳಿದರೆ, ಆ ಹಣ್ಣು ತುಂಬಾನೇ ಸಿಹಿಯಾಗಿದೆ ಎಂದರ್ಥ.

ತೂಕ ನೋಡಿ: ರಸಭರಿತ, ಸಿಹಿ ಮತ್ತು ಮಾಗಿದ ಕಲ್ಲಂಗಡಿ ಯಾವಾಗಲೂ ಭಾರವಾಗಿರುತ್ತವೆ. ಕಲ್ಲಂಗಡಿ ಹಗುರವಾಗಿದ್ದರೆ, ಆ ಕಲ್ಲಂಗಡಿ ಒಳಗಿನಿಂದ ಒಣಗಿದೆ, ಅವುಗಳು ರುಚಿಕರವಾಗಿಲ್ಲ ಎಂದರ್ಥ. ಹಾಗಾಗಿ ಯಾವಾಗಲೂ ಭಾರವಾಗಿರುವ ಹಣ್ಣನ್ನೇ ಖರೀದಿಸಿ.

ಕಂದು ಗುರುತುಗಳು: ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಮೇಲಿನ ವಿನ್ಯಾಸಗಳು ಅಥವಾ ಮಾದರಿಗಳನ್ನು ನೋಡಿ. ನೀವು ಕಂದು, ಒರಟಾದ, ಬಲೆ ತರಹದ ಗುರುತುಗಳನ್ನು ನೋಡಿದರೆ, ಆ ಕಲ್ಲಂಗಡಿ  ಹಣ್ಣು ತುಂಬಾನೇ ಸಿಹಿಯಾಗಿರುತ್ತದೆ ಎಂದರ್ಥ.

ಹೊಳಪಾಗಿದೆಯೇ ಎಂಬುದನ್ನು ನೋಡಿ: ಕಲ್ಲಂಗಡಿ ಹಣ್ಣು ತುಂಬಾ ಹೊಳೆಯುತ್ತಿದ್ದರೆ, ಅದು ಹಣ್ಣಾಗದೇ ಇರಬಹುದು. ಅದು ಹಣ್ಣಾಗುತ್ತಿದ್ದಂತೆ, ಅದರ ಬಣ್ಣ ಮಸುಕಾಗಲು ಪ್ರಾರಂಭವಾಗುತ್ತದೆ. ಆದ್ದರಿಂದ, ಯಾವಾಗಲೂ ಮಸುಕಾದ ಬಣ್ಣದ ಕಲ್ಲಂಗಡಿ ಹಣ್ಣನ್ನೇ ಖರೀದಿಸಿ.

ಇದನ್ನೂ ಓದಿ: ಯಾವ ಸಮಯದಲ್ಲಿ ಪಪ್ಪಾಯಿ ಹಣ್ಣು ತಿನ್ನೋದು ಬೆಸ್ಟ್?

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಏಕೆ ತಿನ್ನಬೇಕು?

  • ಬೇಸಿಗೆಯಲ್ಲಿ ನಿರ್ಜಲೀಕರಣದ ಸಮಸ್ಯೆ ಸಾಮಾನ್ಯ. ಕಲ್ಲಂಗಡಿಯಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ, ಇದು ದೇಹದ ನೀರಿನ ಕೊರತೆಯನ್ನು ನೀಗಿಸುತ್ತದೆ ಮತ್ತು ಶಾಖದ ಹೊಡೆತದಿಂದ ನಮ್ಮನ್ನು ರಕ್ಷಿಸುತ್ತದೆ.
  • ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹವು ಒಳಗಿನಿಂದ ತುಂಬಾನೇ ತಂಪಾಗಿರುತ್ತದೆ.
  • ಕಲ್ಲಂಗಡಿಯಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಮತ್ತು ಫೈಬರ್ ಅಧಿಕವಾಗಿರುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುವಂತೆ ಭಾಸವಾಗುತ್ತದೆ. ಈ ಮೂಲಕ ಇದು ತೂಕ ಇಳಿಸಿಕೊಳ್ಳಲೂ ಸಹಾಯ ಮಾಡುತ್ತದೆ.
  • ಕಲ್ಲಂಗಡಿಯಲ್ಲಿ ‘ಲೈಕೋಪೀನ್’ ಎಂಬ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಿದೆ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಕಲ್ಲಂಗಡಿಯಲ್ಲಿರುವ ನೀರಿನಾಂಶ ಮತ್ತು ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ ಮತ್ತು ಹೊಟ್ಟೆಯನ್ನು ತಂಪಾಗಿಸುತ್ತದೆ.
  • ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾಗಿರುವ ಕಲ್ಲಂಗಡಿ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ, ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಚರ್ಮವನ್ನು ಸುಕ್ಕು ರಹಿತವಾಗಿರಿಸುತ್ತದೆ ಮತ್ತು ಇದು ಕೂದಲನ್ನು ಬಲಪಡಿಸಲು ಸಹಕಾರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us