ಇತ್ತೀಚೆಗೆ ಹಲವು ಸೆಲೆಬ್ರಿಟಿಗಳು, ಕ್ರಿಕೆಟ್ ಪಟುಗಳು ಐಸ್ ವಾಟರ್ ಸ್ನಾನ ಮಾಡುವ ವಿಡಿಯೋಗಳು ಇನ್ಸ್ಟಾಗ್ರಾಂ, ಫೇಸ್ಬುಕ್, ಯೂಟ್ಯೂಬ್ನಲ್ಲಿ ಹರಿದಾಡುತ್ತಿವೆ. ಐಸ್ ನೀರಿನಲ್ಲಿ ಕುಳಿತ ಸೆಲೆಬ್ರಿಟಿಗಳನ್ನು ಜನಸಾಮಾನ್ಯರೂ ಅನುಸರಿಸುತ್ತಿದ್ದಾರೆ. ಹೀಗಾಗಿ, ಇದು ಬಹಳ ಟ್ರೆಂಡಿಂಗ್ನಲ್ಲಿದೆ. ಐಸ್ ವಾಟರ್ ಸ್ನಾನವನ್ನು ಹಲವರು ಚಾಲೆಂಜ್ ಆಗಿಯೂ ಸ್ವೀಕರಿಸಿದ್ದಾರೆ. ಐಸ್ ವಾಟರ್ನಲ್ಲಿ 10ರಿಂದ 15 ನಿಮಿಷ ಕುಳಿತುಕೊಳ್ಳುವ ಮೂಲಕ ಈ ಥೆರಪಿಯನ್ನು ತೆಗೆದುಕೊಳ್ಳಲಾಗುತ್ತದೆ.
ವಿರಾಟ್ ಕೊಹ್ಲಿ, ಉಸೇನ್ ಬೋಲ್ಟ್, ರಾಕುಲ್ ಪ್ರೀತ್ ಸಿಂಗ್, ಸಮಂತಾ ಒಳಗೊಂಡಂತೆ ಅನೇಕ ಸೆಲೆಬ್ರಿಟಿಗಳು ಐಸ್ ವಾಟರ್ ಬಾತ್ ಮಾಡುವ ವಿಡಿಯೋ ಹಾಕಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ. ವರ್ಕ್ಔಟ್ ಮಾಡಿದ ನಂತರ ನಮ್ಮ ದೇಹದ ಉಷ್ಣಾಂಶ ಅತಿಯಾಗಿರುತ್ತದೆ. ಈ ವೇಳೆ ಐಸ್ ವಾಟರ್ ಬಾತ್ ತೆಗೆದುಕೊಳ್ಳುವುದು ನಿಜಕ್ಕೂ ಒಳ್ಳೆಯದು. ನಿಮ್ಮ ಸ್ನಾನದ ಬಕೆಟ್ಗೆ ಕೆಲವು ತುಂಡು ಐಸ್ ಹಾಕಿಕೊಂಡು ಸ್ನಾನ ಮಾಡುವುದಲ್ಲ. ಐಸ್ ನೀರಿರುವ ಟಬ್ನಲ್ಲಿ ನಿಮ್ಮ ತಲೆಯನ್ನು ಮಾತ್ರ ಮೇಲೆತ್ತಿಕೊಂಡು ಸಂಪೂರ್ಣವಾಗಿ ದೇಹವನ್ನು ಮುಳುಗಿಸಬೇಕು. ಆಗ ಮಾತ್ರ ಇದರಿಂದ ಪ್ರಯೋಜನ ಸಿಗಲು ಸಾಧ್ಯ.
ಇದನ್ನೂ ಓದಿ: ಸ್ನಾನ ಮಾಡಿದ ತಕ್ಷಣ ಬೆವರುತ್ತೀರಾ? ಇದಕ್ಕೆ ಪರಿಹಾರವೇನು?
ದೇಹ ಮತ್ತು ಮಾಂಸಖಂಡಗಳಿಗೆ ಆಗುವ ಗಾಯ ಹಾಗೂ ನೋವಿಗೆ ಐಸ್ ಬಾತ್ನಿಂದ ಪರಿಹಾರ ಸಿಗುತ್ತದೆ. ಹೀಗಾಗಿ, ಕ್ರೀಡಾಪಟುಗಳು ಹೆಚ್ಚಾಗಿ ಈ ಐಸ್ ಬಾತ್ ಥೆರಪಿ ತೆಗೆದುಕೊಳ್ಳುತ್ತಾರೆ. ಐಸ್ ಬಾತ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ನೋವನ್ನು ನಿವಾರಿಸಲು ಅಥವಾ ಗಾಯದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಐಸ್ ಸ್ನಾನದಿಂದ ಉಂಟಾಗುವ ತಂಪಾದ ತಾಪಮಾನವು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಸ್ನಾಯುಗಳಿಂದ ಲ್ಯಾಕ್ಟಿಕ್ ಆಮ್ಲ ಮತ್ತು ಇತರ ಚಯಾಪಚಯ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಸ್ನಾಯುವಿನ ಚೇತರಿಕೆಯನ್ನು ಹೆಚ್ಚಿಸುತ್ತದೆ ಮತ್ತು ವ್ಯಾಯಾಮದ ನಂತರದ ನೋವನ್ನು ಕಡಿಮೆ ಮಾಡುತ್ತದೆ.
ಐಸ್ ನೀರಿಗೆ ದೇಹವನ್ನು ಒಡ್ಡಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಲಗುವ ಮುನ್ನ ಐಸ್ ಸ್ನಾನ ಮಾಡುವುದರಿಂದ ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಹಾಗೇ, ಇದರಿಂದ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ತಣ್ಣೀರಿಗೆ ಒಡ್ಡಿಕೊಂಡಾಗ ದೇಹದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಪಿರಿಯಡ್ಸ್ ಆದಾಗ ಮಹಿಳೆಯರು ಸ್ನಾನ ಮಾಡಬಹುದಾ?
ಐಸ್ ವಾಟರ್ ಬಾತ್ನಿಂದ ಯಾರಿಗೆ ತೊಂದರೆ?:
ನಮ್ಮ ದೇಹಕ್ಕೆ ಐಸ್ ವಾಟರ್ ಬಾತ್ ನಿಜಕ್ಕೂ ಆರೋಗ್ಯಕರವೇ? ಎಂಬ ಬಗ್ಗೆ ನಾವು ಯೋಚಿಸಬೇಕು. ಐಸ್ ನೀರಿನ ಸ್ನಾನದಿಂದ ಹಲವು ಪ್ರಯೋಜನಗಳಿದ್ದರೂ ಕೆಲವರಿಗೆ ಇದು ತೊಂದರೆಯನ್ನೂ ಉಂಟುಮಾಡಬಹುದು.
ಒಂದುವೇಳೆ ನಿಮಗೆ ಹೈಫೋಥರ್ಮಿಯಾ ಸಮಸ್ಯೆ ಇದ್ದರೆ, ನರಕ್ಕೆ ಸಂಬಂಧಿಸಿದ ತೊಂದರೆಯಿದ್ದರೆ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅಥವಾ ನಿಮ್ಮ ಚರ್ಮ ಸೂಕ್ಷ್ಮವಾಗಿದ್ದರೆ, ಚರ್ಮಕ್ಕೆ ಸಂಬಂಧಿಸಿದ ಬೇರೆ ಸಮಸ್ಯೆಗಳಿದ್ದರೆ ಐಸ್ ಬಾತ್ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಲೇಬೇಕು. ಈ ಸಮಸ್ಯೆಗಳಿರುವವರಿಗೆ ಐಸ್ ವಾಟರ್ ಬಾತ್ನಿಂದ ಅಡ್ಡಪರಿಣಾಮಗಳು ಹೆಚ್ಚಾಗಿರುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:50 am, Thu, 16 November 23