ನಿಮ್ಮ ದಾಂಪತ್ಯ ಜೀವನದಲ್ಲಿ ಈ ಬದಲಾವಣೆಗಳು ಕಂಡು ಬಂದರೆ ಸಂಬಂಧ ಮುರಿದು ಬೀಳುತ್ತಿದೆ ಎಂದರ್ಥ!

| Updated By: ಅಕ್ಷತಾ ವರ್ಕಾಡಿ

Updated on: Feb 04, 2024 | 4:50 PM

ಯಾವುದೇ ಸಂಬಂಧವಿರಲಿ, ಅಲ್ಲಿ ಪ್ರೀತಿಯ ಜೊತೆಗೆ ನಂಬಿಕೆ ಹಾಗೂ ವಿಶ್ವಾಸ ಎನ್ನುವುದಿರಬೇಕು. ಇಲ್ಲವಾದರೆ ಈ ಸಂಬಂಧವನ್ನು ದೀರ್ಘಕಾಲದವರೆಗೂ ಕಾಪಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಸಣ್ಣ ಪುಟ್ಟ ಮನಸ್ತಾಪಗಳು ಸಂಬಂಧವನ್ನು ಹಾಳು ಮಾಡುತ್ತದೆ. ಈ ಸಮಯದಲ್ಲಿ ಇಬ್ಬರೂ ಕೂಡ ಕೂತು ಮಾತನಾಡಿ ಮತ್ತೆ ಪ್ರೀತಿಯ ಸಂಬಂಧವನ್ನು ಕಟ್ಟಿಕೊಳ್ಳಬೇಕು. ಆದರೆ ಕೆಲವೊಮ್ಮೆ ಇಬ್ಬರ ನಿರ್ಲಕ್ಷ್ಯತನವು ಸಂಬಂಧವು ಹಾಳಾಗಲು ಕಾರಣವಾಗಬಹುದು. ಇಲ್ಲವಾದರೆ ಸಂಬಂಧದಲ್ಲಿನ ಕೆಲವು ಬದಲಾವಣೆಗಳು ಸಂಗಾತಿಯ ಜೊತೆಗೆ ಸಂಬಂಧವು ಚೆನ್ನಾಗಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ನಿಮ್ಮ ದಾಂಪತ್ಯ ಜೀವನದಲ್ಲಿ ಈ ಬದಲಾವಣೆಗಳು ಕಂಡು ಬಂದರೆ ಸಂಬಂಧ ಮುರಿದು ಬೀಳುತ್ತಿದೆ ಎಂದರ್ಥ!
Image Credit source: Pinterest
Follow us on

ಮನುಷ್ಯನು ಒಂಟಿಯಾಗಿ ಬದುಕುವುದು ಕಷ್ಟ. ತನ್ನ ಭಾವನೆಗಳನ್ನು ಹಂಚಿಕೊಳ್ಳಲು, ತನ್ನ ನೋವು ಕಷ್ಟಗಳನ್ನು ಹಂಚಿಕೊಳ್ಳುವುದಕ್ಕೆ ಒಬ್ಬ ವ್ಯಕ್ತಿಯಿರಬೇಕು. ಒಂದು ವೇಳೆ ನಿಮ್ಮ ಜೊತೆಗೆ ಬೆಸ್ಟ್ ಎನಿಸುವ ಒಬ್ಬ ಜೀವನ ಸಂಗಾತಿಯೊಬ್ಬರು ಇದ್ದು ಬಿಟ್ಟರೆ ಜೀವನವು ಸುಖಕರವಾಗಿಯೇ ಸಾಗುತ್ತದೆ. ನಿಮ್ಮ ಸಂಗಾತಿಯು ನೋವು ನಲಿವು ಕಷ್ಟ ಸುಖಗಳಲ್ಲಿ ಸಮಭಾಗಿಯಾಗಿ ಜೊತೆಗೆ ನಿಲ್ಲುತ್ತಾರೆ. ಆದರೆ ಕೆಲವೊಮ್ಮೆ ಕಾರಣವಿಲ್ಲದೇ ಸಂಗಾತಿಯೊಂದಿಗೆ ಅಥವಾ ಸಂಬಂಧದಲ್ಲಿ ಮನಸ್ತಾಪಗಳು ಬರಬಹುದು. ಈ ಸಮಯದಲ್ಲಿ ಈ ಸಂಬಂಧವೇ ಬೇಡ ಎಂದು ಅನಿಸಲು ಬಹುದು. ಸಮಯ ಕಳೆಯುತ್ತ ಹೋದಂತೆ ದಾಂಪತ್ಯ ಜೀವನದಲ್ಲಿ ಕೆಲವು ಬದಲಾವಣೆಗಳು ಕಂಡು ಬಂದರೆ ಸಂಬಂಧವು ಹಾಳಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.

ದಾಂಪತ್ಯ ಜೀವನವು ಮುರಿದು ಬೀಳುತ್ತಿದೆ ಎನ್ನುವುದರ ಸೂಚನೆಗಳಿವು:

  1. ಜೊತೆಗೆ ಇದ್ದರೂ ಒಬ್ಬಂಟಿಯಾಗಿರುತ್ತೀರಿ :ಸಂಗಾತಿಯ ಜೊತೆಗೆ ಜೀವನ ಹಂಚಿಕೊಂಡಿದ್ದರೂ ಒಂಟಿಯೆನ್ನುವ ಭಾವವು ಕಾಡುತ್ತಿರುತ್ತದೆ. ಇದು ಇಬ್ಬರ ನಡುವಿನ ಅಂತರವನ್ನು ಹೆಚ್ಚಿಸಿ ಸಂಬಂಧವು ಮುರಿದು ಬೀಳಲು ಕಾರಣವಾಗುತ್ತದೆ.
  2. ಇಬ್ಬರಿಗೂ ಜೊತೆಗಿರಲು ಸಮಯವಿರುವುದಿಲ್ಲ : ಸಂಗಾತಿಗಳಿಬ್ಬರೂ ಎಷ್ಟೇ ಬ್ಯುಸಿಯಾಗಿರಲಿ ತಮ್ಮರಿಗಾಗಿ ಸಮಯವನ್ನು ಮೀಸಲಿಡುತ್ತಾರೆ. ಆದರೆ ನಿಮ್ಮ ಅಥವಾ ಸಂಗಾತಿಯ ಬಳಿ ಸಮಯವಿದ್ದರೂ ಜೊತೆಯಾಗಿ ಕಳೆಯಲು ಇಷ್ಟವಿರದಿರುವುದು. ಏನೋ ಒಂದು ನೆಪ ಹೇಳಿ, ಬ್ಯುಸಿಯಾಗುವುದು, ಇದು ಇಬ್ಬರೂ ಕೂಡ ದೂರವಾಗುತ್ತಿರುವುದನ್ನು ತೋರಿಸುತ್ತದೆ.
  3. ಆತ್ಮೀಯತೆಯ ಕೊರತೆ: ಸಂಬಂಧದಲ್ಲಿ ಆತ್ಮೀಯತೆಯಿದ್ದರೆ ಆ ಸಂಬಂಧವು ಗಟ್ಟಿಯಾಗುತ್ತದೆ. ಇಲ್ಲಿ ದೈಹಿಕ ಆತ್ಮೀಯತೆ ಹಾಗೂ ಮಾನಸಿಕ ಆತ್ಮೀಯತೆ ಎರಡು ಕೂಡ ಮುಖ್ಯವಾಗುತ್ತದೆ. ಸಂಗಾತಿಯು ಅಂತರವನ್ನು ಕಾಯ್ದುಕೊಳ್ಳುತ್ತಿದ್ದರೆ ಸಂಬಂಧವು ಮುರಿದು ಬೀಳುವುದರ ಲಕ್ಷಣವಾಗಿರಬಹುದು.
  4. ಸಣ್ಣ ಪುಟ್ಟದಕ್ಕೂ ವಾದ ವಿವಾದಗಳು : ಸಂಬಂಧದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ಮನಸ್ತಾಪ, ಜಗಳ ಹಾಗೂ ವಾದಗಳನ್ನು ಮಾಡುತ್ತಿರುವುದು. ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ವಾದ ಮಾಡುವ ಮೂಲಕ ತಾವು ಮಾಡಿರುವುದೇ ಸರಿ ಎಂದು ವಾದಿಸುವುದರಿಂದಲು ಸಂಬಂಧವು ಹಾಳಾಗುತ್ತದೆ.
  5. ಭಾವನಾತ್ಮಕ ಸಂಬಂಧದ ಕೊರತೆ : ದಾಂಪತ್ಯ ಜೀವನದಲ್ಲಿ ಭಾವನಾತ್ಮಕತೆಯನ್ನು ಬೆಳೆಸುವುದು ಮುಖ್ಯವಾಗುತ್ತದೆ. ನನ್ನ ಕಷ್ಟ ಸುಖಗಳಿಗೆ ಜೊತೆಯಾಗುವ ಸಂಬಂಧವಿದ್ದರೆ ಅದುವೇ ಸಂಗಾತಿ ಎನ್ನುವ ಭಾವ ಮೂಡಬೇಕು. ಇಲ್ಲದಿದ್ದರೆ ಭಾವನಾತ್ಮಕವಾಗಿ ಸಂಬಂಧದಲ್ಲಿ ಇಲ್ಲದೆ ಹೋದರೆ ದಾಂಪತ್ಯ ಜೀವನವು ಹೆಚ್ಚು ದಿನ ಉಳಿಯುವುದಿಲ್ಲ.
  6. ಸಂಗಾತಿಗಳ ನಡುವೆ ನಂಬಿಕೆಯ ಕುಸಿತ: ಯಾವುದೇ ಸಂಬಂಧಕ್ಕೂ ನಂಬಿಕೆಯೆನ್ನುವುದು ತಳಹದಿಯಾಗಿದೆ. ಆದರೆ ಸಂಗಾತಿಯು ನಿಮ್ಮ ಮೇಲಿನ ನಂಬಿಕೆ ಕಳೆದುಕೊಂಡರೆ ಅದನ್ನು ಮರುಸೃಷ್ಟಿಸುವುದು ಕಷ್ಟ. ಒಬ್ಬರ ಮೇಲೆ ಇನ್ನೊಬ್ಬರಿಗೆ ನಂಬಿಕೆಯಿಲ್ಲದೇ ಇದ್ದಾಗ ಸಂಬಂಧದಲ್ಲಿ ವ್ಯಕ್ತಿಗಳಿಬ್ಬರ ನಡುವೆ ಅಂತರವು ಕಂಡು ಬರುತ್ತದೆ.
  7. ಇಬ್ಬರ ಗುರಿಯು ಹೊಂದಿಕೆಯಾಗದೇ ಇರುವುದು : ಸಂಗಾತಿಗಳಿಬ್ಬರೂ ನಮಗಾಗಿ ಬದುಕುವುದಕ್ಕೆ ಕಲಿಯುವುದು ಸಂಬಂಧವು ಧೀರ್ಘಕಾಲ ಉಳಿಯಲು ಸಾಧ್ಯ. ಇಲ್ಲಿ ಇಬ್ಬರ ಆಲೋಚನೆಗಳು, ಜೀವನದ ಗುರಿ ಬೇರೆ ಬೇರೆಯಾಗುತ್ತಿದೆ ಎಂದಾದರೆ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುವುದರ ಅರ್ಥ.
  8. ರಹಸ್ಯಗಳನ್ನು ಕಾಪಾಡುವುದು : ಸಂಗಾತಿಗಳಿಬ್ಬರ ನಡುವೆ ಯಾವುದೇ ರಹಸ್ಯಗಳು ಇರಬಾರದು. ಇಬ್ಬರೂ ಕೂಡ ಮುಚ್ಚುಮರೆಯಿಲ್ಲದೇ, ರಹಸ್ಯಗಳನ್ನು ಕಾಪಾಡದೇ ಎಲ್ಲಾ ವಿಚಾರಗಳನ್ನು ಹೇಳಿಕೊಂಡರೆ ದಾಂಪತ್ಯ ಜೀವನವು ಸಂತೋಷದಿಂದ ಕೂಡಿರುತ್ತದೆ. ಅದೇ ರಹಸ್ಯಗಳನ್ನು ಕಾಪಾಡಿಕೊಳ್ಳುತ್ತ ಹೋದಂತೆ ಒಬ್ಬರಿಗೆ ಮತ್ತೊಬ್ಬರ ಮೇಲೆ ಸಂದೇಹಗಳು ಬೆಳೆದು ಬಾಂಧವ್ಯದ ಕೊಂಡಿಯು ಕ್ಷೀಣಿಸುತ್ತ ಸಾಧ್ಯತೆಯೇ ಹೆಚ್ಚು.
  9. ಭಾವನಾತ್ಮಕ ಅಂತರ : ದಾಂಪತ್ಯ ಜೀವನವು ಸುಖಕರವಾಗಿರಬೇಕೆಂದರೆ ಭಾವನಾತ್ಮಕವಾಗಿ ಒಬ್ಬರಿಗೊಬ್ಬರು ಹತ್ತಿರವಾಗಿರಬೇಕು. ಆದರೆ ಸಂಗಾತಿಯ ಜೊತೆಗೆ ಭಾವನಾತ್ಮಕವಾಗಿ ಮಾತುಕತೆಯನ್ನು ನಡೆಸದೆ ಇರುವುದು. ಅಭಿಪ್ರಾಯಗಳು ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳದೇ ಇದ್ದರೆ ಇಬ್ಬರ ನಡುವೆ ಭಾವನಾತ್ಮಕ ಅಂತರವು ಬೆಳೆಯುತ್ತದೆ. ಈ ಬದಲಾವಣೆಯು ಸಂಬಂಧ ಮುರಿದು ಬೀಳುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ