ಕಾರ್ತಿಕ ಮಾಸದ ಅಮವಾಸ್ಯೆಯ ದಿನದಂದು ಆಚರಿಸಲಾಗುವ ದೀಪಾವಳಿ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ. ದೀಪಾವಳಿಯ ಎರಡು ದಿನಗಳ ಮೊದಲು ಧನತ್ರಯೋದಶಿ ಅಥವಾ ಧನತೇರಸ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಚಿನ್ನ, ಬೆಳ್ಳಿ ಆಭರಣಗಳು, ಪಾತ್ರೆಗಳು ಇತ್ಯಾದಿಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ನಂಬಿಕೆಗಳ ಪ್ರಕಾರ ಧನತ್ರಯೋದಶಿ ದಿನದಂದು ಚಿನ್ನವನ್ನು ಖರೀದಿಸಿದರೆ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಈ ಶುಭದಿನದಂದು ಹೆಚ್ಚಿನ ಭಾರತೀಯರು ಚಿನ್ನವನ್ನು ಖರೀದಿಸುತ್ತಾರೆ ಈ ಶುಭ ಸಂದರ್ಭದಲ್ಲಿ ನೀವು ಕೂಡ ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ಚಿನ್ನದ ಶುದ್ಧತೆಯನ್ನು ಕ್ಯಾರೆಟ್ಗಳಲ್ಲಿ ಅಳೆಯಲಾಗುತ್ತದೆ. 24 ಕ್ಯಾರೆಟ್ ಚಿನ್ನವು ಪರಿಶುದ್ಧವಾದ ಚಿನ್ನವಾಗಿದೆ. . ಆದರೆ ಚಿನ್ನವನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡಲು ಅದಕ್ಕೆ ಇತರ ಲೋಹಗಳನ್ನು ಬೆರೆಸಲಾಗುತ್ತದೆ. ಚಿನ್ನವು 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಮತ್ತು 16 ಕ್ಯಾರೆಟ್ಗಳಲ್ಲಿ ದೊರೆಯುತ್ತದೆ. ಚಿನ್ನದ ಶುದ್ಧತೆಯು ಹೆಚ್ಚಿದ್ದಷ್ಟು ಅದರ ಬೆಲೆಯೂ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಆಭರಣ ತಯಾರಿಕೆಗೆ 22 ಕ್ಯಾರೆಟ್ ಚಿನ್ನವನ್ನು ಬಳಸಲಾಗುತ್ತದೆ. ಹಾಗಾಗಿ ನೀವು ಖರೀದಿಸುತ್ತಿರುವ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಅತ್ಯಗತ್ಯ.
ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಲು ನೀವು ಖರೀದಿಸುವ ಚಿನ್ನದ ಮೇಲೆ ಹಾಲ್ ಮಾರ್ಕ್ ಚಿಹ್ನೆ ಇದೇಯೇ ಎಂಬುವುದನ್ನು ಪರಿಶೀಲಿಸುವುದು ಮುಖ್ಯ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಹಾಲ್ಮಾರ್ಕ್ ಶುದ್ಧತೆಯ ವಿಶ್ವಾಸಾರ್ಹ ಸೂಚಕವಾಗಿದೆ. ಈ ಹಾಲ್ಮಾರ್ಕ್ ತ್ರಿಕೋನ ಚಿಹ್ನೆಯನ್ನು ಹೊಂದಿದೆ. ಹಾಗಾಗಿ BSI ಹಾಲ್ಮಾರ್ಕ್ ಇರುವ ಚಿನ್ನವನ್ನು ಖರೀದಿಸುವುದು ಹೆಚ್ಚು ಉತ್ತಮ.
ಚಿನ್ನಾಭರಣಗಳನ್ನು ಖರೀದಿಸುವಾಗ, ಅದರ ಮೇಕಿಂಗ್ ಚಾರ್ಜ್ ಬಗ್ಗೆ ಪರಿಶೀಲಿಸುವುದು ಮುಖ್ಯ. ಬ್ರಾಂಡ್ ಅಥವಾ ಮಳಿಗೆಗಳನ್ನು ಅವಲಂಬಿಸಿ ಮೇಕಿಂಗ್ ಚಾರ್ಜಸ್ ಬದಲಾಗುತ್ತಿರುತ್ತವೆ. ದೀಪಾವಳಿ ಹಬ್ಬ ಅಥವಾ ಇನ್ನಾವುದೇ ಹಬ್ಬಗಳ ಸಂದರ್ಭಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು, ಅನೇಕ ಆಭರಣ ಬ್ರಾಂಡ್ಗಳು ಮೇಕಿಂಗ್ ಚಾರ್ಜ್ಗಳಲ್ಲಿ (ದೀಪಾವಳಿ ಕೊಡುಗೆ) 50%, 30%, ಶೇಕಡಾ ಇತ್ಯಾದಿ ಭಾರಿ ರಿಯಾಯಿತಿಗಳನ್ನು ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮೇಕಿಂಗ್ ಶುಲ್ಕಗಳ ಮಾಹಿತಿಯನ್ನು ಪರಿಶೀಲಿಸಿ, ಅತೀ ಕಡಿಮೆ ಮೇಕಿಂಗ್ ಚಾರ್ಜ್ ಇರುವ ಆಭರಣ ಮಳಿಗೆಗಳಲ್ಲಿ ಚಿನ್ನವನ್ನು ಖರೀದಿಸಿ. ಏಕೆಂದರೆ ಇದರಿಂದ ನೀವು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ:ಚಿನ್ನ ಖರೀದಿಸುವಾಗ ಈ ವಿಚಾರಗಳು ತಿಳಿದಿರಲಿ
ನೀವು ಚಿನ್ನಾಭರಣವನ್ನು ಖರೀದಿಸುವ ಮೊದಲು, ಇಂದಿನ ಚಿನ್ನದ ಬೆಲೆ ಎಷ್ಟು ಎಂದು ಖಚಿತಪಡಿಸಿಕೊಳ್ಳಿ. ರಾಜ್ಯಗಳು ಮತ್ತು ನಗರಗಳಿಗೆ ಅನುಗುಣವಾಗಿ ಚಿನ್ನದ ಬೆಲೆಗಳು ಬದಲಾಗುತ್ತಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಕಡಿಮೆ ಇರುವ ಮಳಿಗೆ ಅಥವಾ ಅಂಗಡಿಗಳಲ್ಲಿ ಚಿನ್ನವನ್ನು ಖರೀದಿಸುವುದು ಉತ್ತಮ. ಇದರೊಂದಿಗೆ ನೀವು ಮೇಕಿಂಗ್ ಚಾರ್ಜ್ ಎಷ್ಟು ಎಂಬುದನ್ನು ತಿಳಿಯುವುದು ಕೂಡಾ ಮುಖ್ಯವಾಗಿದೆ.
ದೀಪಾವಳಿ ಹಬ್ಬದಂದು ಚಿನ್ನವನ್ನು ಖರೀದಿಸಲು ಹೋದರೆ, ವಿಶ್ವಾಸಾರ್ಹ ಆಭರಣ ವ್ಯಾಪಾರಿಗಳಿಂದ ಅಥವಾ ವಿಶ್ವಾಸಾರ್ಹ ಬ್ರ್ಯಾಂಡ್ಗಳಿಂದ ಮಾತ್ರ ಚಿನ್ನವನ್ನು ಖರೀದಿಸಿ ಹೀಗೆ ಮಾಡುವುದರಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳು ಬಹಳವಾಗಿ ಕಡಿಮೆಯಾಗುತ್ತವೆ.
ನಿಮ್ಮ ಖರೀದಿಯನ್ನು ಮಾಡುವ ಮೊದಲು ಚಿನ್ನದ ರಿಟರ್ನ್ ಪಾಲಿಸಿಯ ಬಗ್ಗೆ ವಿಚಾರಿಸಿ. ನಿಮ್ಮ ಚಿನ್ನವನ್ನು ಅವರಿಗೆ ಮರಲಿ ಮಾರಾಟ ಮಾಡುವ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಕೆಲವೊಮ್ಮೆ ಆರ್ಥಿಕ ಸಮಸ್ಯೆ ಉಂಟಾದಾಗ ಚಿನ್ನವನ್ನು ಮಾರಾಟ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಎಷ್ಟು ಹಣ ಪಡೆಯುತ್ತೀರಿ ಮತ್ತು ಅದರ ಷರತ್ತುಗಳು ಯಾವುವು ಎಂದುದನ್ನು ತಿಳಿಯಿರಿ. ಇದನ್ನು ಬೈ ಬ್ಯಾಕ್ ಪಾಲಿಸಿ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಅಗತ್ಯವಿದ್ದರೆ ನೀವು ಖರೀದಿಸಿದ ಚಿನ್ನವನ್ನು ಸುಲಭವಾಗಿ ಮರಳಿ ಮಾರಾಟ ಮಾಡಲು ಸಾಧ್ಯವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ