
ಭಾರತೀಯ ನೌಕಾಪಡೆಯು (Indian Navy) ವಿಶ್ವದ ಅತ್ಯಂತ ಬಲಿಷ್ಠ ನೌಕಾಪಡೆಗಳಲ್ಲಿ ಒಂದಾಗಿದ್ದು, ಈ ನೌಕಾಪಡೆ ದೇಶದ ಕಡಲ ಗಡಿಗಳನ್ನು ರಕ್ಷಿಸುವಲ್ಲಿ, ದೇಶಕ್ಕೆ ಭದ್ರತೆಯನ್ನು ಒದಗಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಸಮುದ್ರ ಗಡಿಗಳನ್ನು ಶತ್ರುಗಳಿಂದ ರಕ್ಷಣೆ ಮಾಡುವುದರ ಜೊತೆಗೆ ಬೇರೆ ದೇಶಗಳ ಜೊತೆ ಬಂದರು ಭೇಟಿ, ಜಂಟಿ ಕವಾಯತು, ವಿಪತ್ತು ಪರಿಹಾರ ಮುಂತಾದ ಅಂತಾರಾಷ್ಟ್ರೀಯ ಸಂಬಂಧವನ್ನು ವೃದ್ಧಿಸುವ ಕೆಲಸವನ್ನೂ ಮಾಡುತ್ತಿದೆ. ನೌಕಾಪಡೆಯ ಈ ಅದಮ್ಯ ಧೈರ್ಯ, ಶೌರ್ಯ ಮತ್ತು ಸಾಧನೆಗಳನ್ನು ಗೌರವಿಸಲು ಪ್ರತಿವರ್ಷ ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆ ದಿನವನ್ನು ಆಚರಿಸಲಾಗುತ್ತದೆ.
ಭಾರತಕ್ಕೆ ಈ ದಿನ ವಿಜಯ್ ದಿವಸ್ ಇದ್ದಂತೆ. 1971 ರ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಭಾರತೀಯ ನೌಕಾಪಡೆಯು ಮಹತ್ವದ ಪಾತ್ರ ವಹಿಸಿತ್ತು. ಡಿಸೆಂಬರ್ 3 ರಂದು ಪಾಕಿಸ್ತಾನವು ಭಾರತೀಯ ವಾಯುನೆಲೆಯ ಮೇಲೆ ದಾಳಿ ಮಾಡಿದಾಗ, ನಮ್ಮ ನೌಕಾಪಡೆಯು ಆಪರೇಷನ್ ಟ್ರೈಡೆಂಟ್ ಹೆಸರಿನ ಕಾರ್ಯಾಚರಣೆಯಲ್ಲಿ ಡಿಸೆಂಬರ್ 4 ಮತ್ತು 5 ರ ರಾತ್ರಿ ಪ್ರತಿದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಈ ಕಾರ್ಯಾಚರಣೆಯಲ್ಲಿ ಹಲವು ಸೈನಿಕರು ವೀರ ಮರಣವನ್ನು ಹೊಂದಿದರು. ಹಾಗಾಗಿ ಆಪರೇಷನ್ ಟ್ರೈಡೆಂಟ್‌ನಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದೇಶ ರಕ್ಷಣೆಗಾಗಿ ಕೆಚ್ಚೆದೆಯಿಂದ ಹೋರಾಡಿ ವೀರ ಮರಣ ಹೊಂದಿದ ವೀರ ಯೋಧರನ್ನು ಸ್ಮರಿಸುವ ಸಲುವಾಗಿ ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ವಿಶೇಷ ಚೇತನರ ದಿನವನ್ನು ಆಚರಿಸುವ ಉದ್ದೇಶವೇನು?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 am, Thu, 4 December 25