ಚುಮು ಚುಮು ಚಳಿ ಜೊತೆ ಬಿಸಿ ಬಿಸಿ ಜೋಳ ಸೂಪ್ ಕುಡಿಯಿರಿ; ವಿಧಾನ ಸುಲಭವಿದೆ

Corn Soup: ಊಟದ ಜೊತೆಗೂ ಜೋಳ ಸೂಪ್ ಕುಡಿಯಬಹುದು. ಇಲ್ಲಿ ತಿಳಿಸಿದ ಸಾಮಾಗ್ರಿಗಳನ್ನು ಬಳಸಿ ಸೂಪ್ ಮಾಡಿದರೆ ಯಾವ ರೆಸ್ಟೋರೆಂಟ್​ಗೂ ಕಡಿಮೆ ಇಲ್ಲದಂತೆ ಹೆಚ್ಚು ರುಚಿಕರವಾದ ಸೂಪ್​ನ ಕುಡಿಯುತ್ತೀರಿ.

ಚುಮು ಚುಮು ಚಳಿ ಜೊತೆ ಬಿಸಿ ಬಿಸಿ ಜೋಳ ಸೂಪ್ ಕುಡಿಯಿರಿ; ವಿಧಾನ ಸುಲಭವಿದೆ
ಜೋಳ ಸೂಪ್
Updated By: sandhya thejappa

Updated on: Dec 14, 2021 | 8:25 AM

ಅಬ್ಬಾ.. ಎಷ್ಟು ಚಳಿ! ಏನಾದ್ರು ಬಿಸಿ ಬಿಸಿ ತಿನ್ನಬೇಕು, ಕುಡಿಯಬೇಕು ಅಂತ ಅನಿಸುತ್ತೆ ಅಲ್ವಾ? ಕೆಲಸ ಎಲ್ಲ ಬಿಟ್ಟು ಕೈ ಕಟ್ಟಿ ಕುಳಿತರೆ ಸಾಕು ಈ ಚಳಿಗೆ ಮತ್ತೆ ಕೈ ಬಿಡಿಸಬೇಕು ಅಂತ ಅನಿಸಲ್ಲ. ಮಳೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಚಳಿ ಶುರುವಾಗಿದೆ. ಚಳಿಗಾಲದಲ್ಲಿ ರುಚಿ ರುಚಿಯಾದ ತಿಂಡಿ ಅಥವಾ ಬಿಸಿ ಬಿಸಿ ಸೂಪ್ ಕುಡಿಬೇಕು ಅಂತ ಅನಿಸುತ್ತೆ. ಚಳಿಯಲ್ಲಿ ಗಡ ಗಡ ಅಂತ ನಡುಗುತ್ತಾ ಬಿಸಿ ಬಿಸಿ ಸೂಪ್ ಮಾಡಿ ಕುಡಿಯಿರಿ. ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುವ ಜೋಳದಿಂದ ಸೂಪ್ ಹೇಗೆ ಮಾಡ್ತಾರೆ ಅಂತ ಇಲ್ಲಿ ತಿಳಿಸಿದ್ದೇವೆ, ಗಮನಿಸಿ.

ಊಟದ ಜೊತೆಗೂ ಜೋಳ ಸೂಪ್ ಕುಡಿಯಬಹುದು. ಇಲ್ಲಿ ತಿಳಿಸಿದ ಸಾಮಾಗ್ರಿಗಳನ್ನು ಬಳಸಿ ಸೂಪ್ ಮಾಡಿದರೆ ಯಾವ ರೆಸ್ಟೋರೆಂಟ್​ಗೂ ಕಡಿಮೆ ಇಲ್ಲದಂತೆ ಹೆಚ್ಚು ರುಚಿಕರವಾದ ಸೂಪ್​ನ ಕುಡಿಯುತ್ತೀರಿ. ಚಳಿಗೆ ಮಜಾ ಕೊಡುವ ಜೋಳ ಸೂಪ್ ಮಾಡುವ ವಿಧಾನ ಹೀಗಿದೆ.

ಬೇಕಾಗುವ ಸಾಮಾಗ್ರಿಗಳು (Ingredients)
ಜೋಳ – ಅರ್ಧ ಕಪ್
ತುರಿದ ಬೆಳ್ಳುಳ್ಳಿ- ಒಂದು ಚಮಚ
ತುರಿದ ಕ್ಯಾರೆಟ್ – ಅರ್ಧ ಕಪ್
ವೆನಿಗಾರ್- ಒಂದು ಚಮಚ
ಬೆಣ್ಣೆ- ಎರಡು ಚಮಚ
ತುರಿದ ಶುಂಠಿ- ಒಂದು ಚಮಚ
ಹಸಿರು ಈರುಳ್ಳಿ- 5 ಚಮಚ
ಕಾರ್ನ್ ಫ್ಲೋರ್- ಒಂದು ಚಮಚ
ಕರಿಮೆಣಸು- ¼ ಚಮಚ
ಹಸಿಮೆಣಸಿನಕಾಯಿ- 3 ( ಸಣ್ಣದಾಗಿ ಕತ್ತರಿಸಿ)
ರುಚಿಗೆ ತಕ್ಕಷ್ಟು ಉಪ್ಪು

ವಿಧಾನ ನೋಡಿ
ಮೊದಲು ಗ್ಯಾಸ್ ಮೇಲೆ ಒಂದು ಬಾಣಲೆ ಇಡಿ. ಅದಕ್ಕೆ ಬೆಣ್ಣೆ ಹಾಕಿ. ಬೆಣ್ಣೆ ಕರಗಿದ ಬಳಿಕ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಒಂದು ನಿಮಿಷ ಫ್ರೈ ಮಾಡಿ. ನಂತರ ಇದಕ್ಕೆ ಹಸಿರು ಈರುಳ್ಳಿ ಹಾಕಿ, ಫ್ರೈ ಮಾಡಿ. ನಂತರ ಅರ್ಧ ಕಪ್ನಲ್ಲಿ ಅರ್ಧ ಭಾಗದಷ್ಟು ಜೋಳ ಮತ್ತು ತುರಿದ ಕ್ಯಾರೆಟ್ನ ಸೇರಿಸಿ. ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿ.

ನಂತರ ಉಳಿದ ಅರ್ಧ ಭಾಗದಷ್ಟು ಜೋಳ, ಎರಡು ಟೇಬಲ್ ಸ್ಪೂನ್ ನೀರು ಹಾಕಿ ರುಬ್ಬಿ. ಬಳಿಕ ರುಬ್ಬಿದ ಜೋಳವನ್ನು ಬಾಣಲೆಗೆ ಹಾಕಿ 3ರಿಂದ 4 ನಿಮಿಷಗಳ ಕಾಲ ಫೈ ಮಾಡಿ.

4 ನಿಮಿಷಗಳ ಬಳಿಕ 3 ಕಪ್ ನೀರು ಹಾಕಿ. 10ರಿಂದ 12 ನಿಮಿಷಗಳ ಕಾಲ ಕುದಿಯಲು ಬಿಡಿ. ಒಂದು ಕಪ್ ನೀರು ಬತ್ತುವವರೆಗೂ ಕುದಿಸಿ. ನಂತರ ಒಂದು ಚಮಚ ಕಾರ್ನ್ ಫ್ಲೋರ್ಗೆ ಎರಡು ಚಮಚ ನೀರು ಹಾಕಿ ಮಿಶ್ರಣ ಮಾಡಿ. ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಸೂಪ್ಗೆ ಹಾಕಿ. ಸೂಪ್ ದಪ್ಪವಾಗುವರೆಗೂ ಕುದಿಸಿ (ಐದರಿಂದ ಆರು ನಿಮಿಷ).

ಕೊನೆಯದಾಗಿ ಅದಕ್ಕೆ ವೆನಿಗಾರ್, ಕರಿಮೆಣಸು ಪುಡಿ, ಹಸಿಮೆಣಸಿನಕಾಯಿ, ಸ್ವಲ್ಪ ಉಪ್ಪು ಹಾಕಿ. ನಂತರ ಬಿಸಿ ಬಿಸಿ ಜೋಳ ಸೂಪ್ನ ಕುಡಿಯಿರಿ.

ಇದನ್ನೂ ಓದಿ

ಕ್ರಿಸ್​ಮಸ್​ಗೆ ಮನೆಯಲ್ಲೇ ಸುಲಭವಾಗಿ ಚಾಕೊಲೇಟ್ ಕೇಕ್ ಮಾಡಿ; ವಿಧಾನ ಹೀಗಿದೆ

Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು