ಬಡತನವೆನ್ನುವುದು ಕೇವಲ ದುಡ್ಡಿನ ಮೇಲೆ ನಿರ್ಧರಿತವಾಗುವುದಿಲ್ಲ. ಇವತ್ತಿಗೂ ಕೂಡ ಜಗತ್ತಿನಲಿ ಅದೆಷ್ಟೋ ಜನರು ಒಂದೊತ್ತಿನ ಊಟವಿಲ್ಲದೇ ಸಾಯುತ್ತಿದ್ದಾರೆ. ಹೀಗಾಗಿ ವಿಶ್ವವನ್ನೇ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಲ್ಲಿ ಒಂದು ಈ ಬಡತನ. ಆದರೆ ಇದರಿಂದ ಹೊರಬರಲು ಅಭಿವೃದ್ಧಿಶೀಲ ರಾಷ್ಟ್ರಗಳು, ಬಡರಾಷ್ಟ್ರಗಳು ಸಾಕಷ್ಟು ಪ್ರಯತ್ನವನ್ನು ಮಾಡುತ್ತಲೇ ಇದೆ. ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆಯೇ ಹೊರತು ಸಂಪೂರ್ಣವಾಗಿ ಬಡತನವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಈ ಬಡತನ ತೊಡೆದು ಹಾಕುವುದು, ಈ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಅಕ್ಟೋಬರ್ 17 ರಂದು ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನದ ಇತಿಹಾಸ. ವಿಶ್ವಸಂಸಸ್ಥೆಯು ಈ ಬಡತನ ನಿರ್ಮೂಲನೆಗಾಗಿ ಒಂದು ದಿನವನ್ನೇ ಮೀಸಲಿಟ್ಟಿದೆ. ಅಕ್ಟೋಬರ್ 17 ರಂದು ವಿಶ್ವದೆಲ್ಲೆಡೆ ಬಡತನ ನಿರ್ಮೂಲನೆ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನಾಚರಣೆಯನ್ನು ಅಧಿಕೃತವಾಗಿ ಆರಂಭಿಸಿದ್ದು ವಿಶ್ವಸಂಸ್ಥೆಯಾದರೂ ಅದಕ್ಕಿಂತಲೂ ಮೊದಲು 1987 ರಲ್ಲಿ ಪ್ಯಾರಿಸ್‌ನಲ್ಲಿ ಸುಮಾರು ಒಂದು ಲಕ್ಷ ಕ್ಕೂ ಅಧಿಕ ಜನ ಭಾಗವಹಿಸಿದ್ದ ಸಭೆಯಲ್ಲಿ ಬಡತನ, ಹಸಿವು ಮತ್ತು ಹಿಂಸೆ ತಡೆಯುವ ಕುರಿತು ನಿರ್ಣಯವೊಂದನ್ನು ಕೈಗೊಂಡಿತ್ತು. ಇದರಲ್ಲಿ ಬಡನತವೆಂಬುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಎಲ್ಲರಿಗೂ ಉತ್ತಮ ಗುಣಮಟ್ಟದ ಜೀವನವನ್ನು ನಡೆಸುವ ಹಕ್ಕಿದೆ ಎಂದು ಪ್ರತಿಪಾದಿಸಿತ್ತು. ತದನಂತರದಲ್ಲಿ 1992ರ ಡಿಸೆಂಬರ್ 22ರಂದು, ಅಕ್ಟೋಬರ್ 17ನ್ನು ಅಂತಾರಾಷ್ಟ್ರೀಯ ಬಡತನದ ನಿರ್ಮೂಲನಾ ದಿನ ಎಂದು ಗುರುತಿಸಲಾಯಿತು. ಅಂದು ವಿಶ್ವಸಂಸ್ಥೆಯೂ ಕೂಡಾ ಇದಕ್ಕೆ ಮಾನ್ಯತೆ ನೀಡಿತು. ಅಂದಿನಿಂದ ಪ್ರತಿ ವರ್ಷ ಅಂತಾ ರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನವು ಜಗತ್ತಿನಲ್ಲಿ ಬಡತನ ಮತ್ತು ದಾರಿದ್ರವನ್ನು ಹೋಗಲಾಡಿಸುವುದು. ಮುಂದುವರಿಯುತ್ತಿರುವ ದೇಶಗಳಲ್ಲಿ ಬಡತನವನ್ನು ತೊಡೆದು ಹಾಕುವ ಸಲುವಾಗಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಬಡತನ, ಹಿಂಸೆ ಮತ್ತು ಹಸಿವನ್ನು ಗುರುತಿಸಿ ಅದಕ್ಕೆ ಪರಿಹಾರ ನೀಡುವುದು ಮತ್ತು ಬಡತನದಲ್ಲಿರುವವರಿಗೆ ಧ್ವನಿಯಾಗಿಸಲು ಪ್ರಯತ್ನಿಸುವ ಉದ್ದೇಶವನ್ನು ಹೊಂದಿದೆ. ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಬಡತನ ನಿರ್ಮೂಲನೆಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತಂದಿವೆ. ಈ ವಿಶೇಷ ದಿನದಂದು ಅಭಿಯಾನಗಳು, ವಿವಿಧ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ.
ಇದನ್ನೂ ಓದಿ; ಮಹರ್ಷಿ ವಾಲ್ಮೀಕಿಯ ಸ್ಫೂರ್ತಿದಾಯಕ ನುಡಿಮುತ್ತುಗಳು ಇಲ್ಲಿವೆ
ಪ್ರಸ್ತುತ ಭಾರತದಲ್ಲಿ ಬಡತನವು ಗಣನೀಯವಾಗಿ ಇಳಿಕೆ ಕಂಡಿದೆ. ಇತ್ತೀಚೆಗಷ್ಟೇ ಎನ್‌ಸಿಎಇಆರ್ ಚಿಂತನಾ ಸಂಸ್ಥೆಯ ಮುಖ್ಯಸ್ಥ ಹಣಕಾಸು ತಜ್ಞ ಸೋನಲ್ದೇ ದೇಸಾಯಿ ಅವರ ತಂಡವು ಅಧ್ಯಯನ ವರದಿಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಬಹುತೇಕ ಗ್ರಾಮೀಣ ಭಾಗದಲ್ಲಿ ಬಡತನ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. 2011 – 12 ರಲ್ಲಿ ಗ್ರಾಮೀಣ ಭಾಗದಲ್ಲಿ ಬಡತನ ಪ್ರಮಾಣ ಶೇ. 24.8ರಷ್ಟು ಇತ್ತು. ಆದರೆ ಪ್ರಸ್ತುತ ಶೇ. 8.6ಕ್ಕೆ ಕುಸಿತ ಕಂಡಿದೆ. ಅದಲ್ಲದೇ, ನಗರ ಪ್ರದೇಶದಲ್ಲಿ ಬಡತನ ಪ್ರಮಾಣ ಶೇ. 13.4 ರಷ್ಟಿತ್ತು,ಸದ್ಯಕ್ಕೆ ಶೇ. 8.4ಕ್ಕೆ ಕುಸಿತ ಕಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವು ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿರುವ ಕಾರಣವೇ ಬಡತನದ ಪ್ರಮಾಣವು ಗಣನೀಯ ಇಳಿಕೆ ಕಂಡಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ