International Dog Day 2024 : ಈ ರೀತಿಯ ಸೂಚನೆ ನೀಡಿದ್ರೆ ಶ್ವಾನಗಳಿಗೆ ಕಾಡುತ್ತಿದೆ ಒಂಟಿತನ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 26, 2024 | 11:52 AM

ನಿಯತ್ತಿಗೆ ಮತ್ತೊಂದು ಹೆಸರೇ ಈ ಶ್ವಾನ. ಹೀಗಾಗಿ ಶ್ವಾನ ಎಂದರೆ ಎಲ್ಲರಿಗೂ ಇಷ್ಟನೇ. ಎಲ್ಲರ ಮನೆಗ ಕಾವಲಾಗಿರುವ ಈ ನಾಯಿಗಳು ಪ್ರೀತಿ, ಪ್ರಾಮಾಣಿಕತೆ ಹಾಗೂ ಶಿಸ್ತಿಗೆ ಹತ್ತಿರವಾದ ಪ್ರಾಣಿಗಳು. ಈ ಶ್ವಾನಗಳಿಗಾಗಿ ಒಂದು ದಿನ ಮೀಸಲಾಗಿದ್ದು ಅದುವೇ ಅಂತಾರಾಷ್ಟ್ರೀಯ ಶ್ವಾನ ದಿನ. ಪ್ರತಿ ವರ್ಷ ಆಗಸ್ಟ್ 26 ರಂದು ಅಂತಾರಾಷ್ಟ್ರೀಯ ಶ್ವಾನ ದಿನ ದಿನವನ್ನು ಆಚರಿಸಲಾಗುತ್ತಿದ್ದು ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಹಾಗೂ ಶ್ವಾನಗಳ ಕುತೂಹಲಕಾರಿ ಅಂಶಗಳ ಬಗೆಗಿನ ಮಾಹಿತಿ ಇಲ್ಲಿದೆ.

International Dog Day 2024 : ಈ ರೀತಿಯ ಸೂಚನೆ ನೀಡಿದ್ರೆ ಶ್ವಾನಗಳಿಗೆ ಕಾಡುತ್ತಿದೆ ಒಂಟಿತನ
Follow us on

ಇಡೀ ಜಗತ್ತಿನಲ್ಲಿ ಅಕ್ಕರೆಯಿಂದ ಪ್ರೀತಿಸುವ ಸಾಕು ಪ್ರಾಣಿಗಳಲ್ಲಿ ಪೈಕಿ ಮೊದಲ ಪ್ರಾಣಿಯೇ ಈ ಶ್ವಾನ. ಮನುಷ್ಯನ ಉತ್ತಮ ಸ್ನೇಹಿತ ಎಂದರೂ ತಪ್ಪಾಗಲ್ಲ. ನೀತಿ, ನಿಯತ್ತಿಗೆ ಇರುವ ಪ್ರಾಣಿ ಅಂದ್ರೆ ಅದು ಶ್ವಾನ ಮಾತ್ರ ಹೇಳುವುದನ್ನು ಕೇಳಿರಬಹುದು. ಆದರೆ ಈ ನಾಯಿಯಲ್ಲಿ ಅದೆಷ್ಟೋ ತಳಿಗಳಿವೆ. ಒಂದೊಂದು ಒಂದು ಬಗೆಯ ಗುಣ, ಸ್ವಭಾವ, ನಡವಳಿಕೆ ಹೊಂದಿದೆ. ಕೆಲವು ಮುದ್ದಾದರೆ, ಇನ್ನೂ ಕೆಲವು ಅಪಾಯಕಾರಿ ಶ್ವಾನಗಳಿವೆ. ರಕ್ಷಿಸಬೇಕಾದ ವಿವಿಧ ತಳಿಯ ನಾಯಿಗಳನ್ನು ಗುರುತಿಸಲು ಸಾರ್ವಜನಿಕರನ್ನು ಉತ್ತೇಜಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಪ್ರತಿ ವರ್ಷವು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಶ್ವಾನ ದಿನದ ಇತಿಹಾಸ ಹಾಗೂ ಮಹತ್ವ

2004 ರಲ್ಲಿ, ಪೆಟ್ & ಫ್ಯಾಮಿಲಿ ಲೈಫ್ ಸ್ಟೈಲ್ ಎಕ್ಸ್‌ಪರ್ಟ್, ಅನಿಮಲ್ ರೆಸ್ಕ್ಯೂ ಅಡ್ವೊಕೇಟ್, ಕನ್ಸರ್ವಶನಿಸ್ಟ್ ಡಾಗ್ ಟ್ರೈನರ್ ಮತ್ತು ಲೇಖಕ ಕೊಲೀನ್ ಪೈಜ್ ಅವರು ಈ ದಿನವನ್ನು ಆಚರಿಸಲು ಮುಂದಾದರು. ಪೈಜ್ ಅವರ ಕುಟುಂಬವು ತಮ್ಮ ಮೊದಲ ನಾಯಿ ‘ಶೆಲ್ಟಿ’ ಅನ್ನು ಈ ದಿನದಂದು ದತ್ತು ಪಡೆದ ಕಾರಣ ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ಪ್ರಪಂಚದಾದ್ಯಂತ ಪ್ರಾಣಿಗಳ ಪ್ರಾಮುಖ್ಯತೆಯನ್ನು ಗಮನಕ್ಕೆ ತರಲು ಮತ್ತು ದತ್ತು ಪಡೆಯಲು ಪ್ರೋತ್ಸಾಹಿಸಲು ಈ ದಿನವನ್ನು ಆಚರಣೆಯನ್ನು ಆರಂಭಿಸಿದರು. ಅವನತಿಯಂಚಿನಲ್ಲಿರುವ ವಿವಿಧ ನಾಯಿಗಳನ್ನು ಗುರುತಿಸಲು ಸಾರ್ವಜನಿಕರನ್ನು ಪ್ರೇರೇಪಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಹೀಗಾಗಿ ಪ್ರತಿ ವರ್ಷ ಆಗಸ್ಟ್ 26 ರಂದು ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ನಿಮ್ಮ ಬದುಕಿನ ಈ ಗುಟ್ಟುಗಳು ರಟ್ಟಾಗದಿರಲಿ ಜೋಕೆ

ಶ್ವಾನಗಳ ಕುರಿತಾದ ಕುತೂಹಲಕಾರಿ ಅಂಶಗಳು

  1. ಶ್ವಾನದ ಮೂಗು ನಿಮಗಿಂತ 10,000 ಪಟ್ಟು ಶಕ್ತಿಶಾಲಿಯಾಗಿದ್ದು, ಹೀಗಾಗಿ ವಾಸನೆಯಿಂದಲೇ ಏನನ್ನು ಬೇಕಾದರು ಕಂಡು ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.
  2. ನಾಯಿಯ ಡಿಎನ್‌ಎ ಮತ್ತು ಬೂದು ತೋಳದ ಡಿಎನ್‌ಎ ಎರಡೂ ಒಂದೇ ರೀತಿಯಾಗಿದ್ದು ಹೀಗಾಗಿ ಕೆಲವು ಶ್ವಾನಗಳು ನೋಡಲು ತೋಳಗಳಂತೆ ಇರುತ್ತವೆ.
  3. ಮನುಷ್ಯರಂತೆ ಶ್ವಾನಗಳು ಬೆವರುತ್ತವೆ. ಆದರೆ ಅವುಗಳ ಮೈ ಒದ್ದೆಯಾಗುವುದಿಲ್ಲ. ಈ ಪ್ರಾಣಿಯು ತನ್ನ ಮೂಗು ಮತ್ತು ಪಾದಗಳಲ್ಲಿ ಮಾತ್ರ ಬೆವರುತ್ತದೆ.
  4. ಮುದ್ದಾದ ಶ್ವಾನಗಳು ಮನುಷ್ಯನ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವ ಮೂಲಕ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ.
  5. ಶ್ವಾನಗಳ ಡೇಂಜರಸ್‌ ತಳಿಗಳಲ್ಲಿ ಅಮೇರಿಕನ್‌ ಬುಲ್ಲಿ ಎಕ್ಸ್‌ಎಲ್‌ ಕೂಡ ಒಂದು. ಕೆಲವು ದೇಶಗಳಲ್ಲಿ ಈ ತಳಿಗಳನ್ನು ನಿಷೇಧಿಸಲಾಗಿದೆ.
  6. ಚಾಕೊಲೇಟ್ ನೀಡುವುದರಿಂದ ನಾಯಿಯ ಆರೋಗ್ಯ ಹಾಳಾಗುತ್ತದೆ. ಆರೋಗ್ಯ ಸಮಸ್ಯೆಯು ಹೆಚ್ಚಾಗಿ ಮರಣ ಹೊಂದುವ ಸಾಧ್ಯತೆಯೂ ಇದೆ.
  7. ನಾಯಿಗಳು ಸಹ ಬುದ್ಧಿವಂತ ಪ್ರಾಣಿಯಾಗಿದೆ. ಎರಡು ವರ್ಷದ ಮಗುವಿನಂತೆ, ಸುಮಾರು ನೂರು ಪದಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
  8. ಶ್ವಾನಗಳು ಕೂಡ ರಾತ್ರಿಯ ವೇಳೆ ಒಂಟಿತನ ಕಾಡಿದಾಗ ಕೂಡ ಜೋರಾಗಿ ಅಳುತ್ತದೆಯಂತೆ.
  9. ನಾಯಿಗಳು ಕಷ್ಟದಲ್ಲಿದ್ದರೆ, ಬೇಸರವಾದರೂ ಕೂಡ ಜೋರಾಗಿ ಬೊಗಳುತ್ತವೆ. ಜೊತೆಗೆ ಮನುಷ್ಯರನ್ನು ಆಕರ್ಷಿಸಲು ನಾಯಿಗಳು ಕೂಗುತ್ತವೆ ಎಂದು ಅನೇಕ ಅಧ್ಯಯನಗಳಿಂದ ತಿಳಿದು ಬಂದಿದೆ.
  10. ನಾಯಿಗಳು ವಯಸ್ಸಾದಂತೆ, ಅವರು ಹೆಚ್ಚು ಭಯಪಡುತ್ತದೆಯಂತೆ. ತನ್ನನ್ನು ಪ್ರೀತಿಸುವ ವ್ಯಕ್ತಿಯು ಇಹಲೋಕ ತ್ಯಜಿಸಿದರೆ ಶ್ವಾನಗಳು ದುಃಖದಿಂದ ಕಣ್ಣೀರು ಹಾಕುತ್ತವೆಯಂತೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ