ಮಾತೃ ಭಾಷೆಯಲ್ಲಿ ಹೇಳುವಷ್ಟು ಸುಲಭವಾಗಿ ಬೇರೆ ಯಾವ ಭಾಷೆಯಲ್ಲಿ ಸಂವಹನ ನಡೆಸಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಹಲವಾರು ಭಾಷೆಗಳಿದ್ದು, ಇತ್ತ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿದ್ದರೂ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು. ಆದರೆ ಇಂದು ಹೆಚ್ಚಿನವರು ಮಾತೃ ಭಾಷೆಯ ಬದಲಾಗಿ ಇಂಗ್ಲಿಷ್ ಭಾಷೆಯನ್ನೇ ಮಾತೃ ಭಾಷೆ ಎನ್ನುವಂತೆ ಪ್ರೀತಿಸುತ್ತಿದ್ದಾರೆ. ತಂದೆ ತಾಯಿಯಂದಿರು ಕೂಡ ತಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆಯನ್ನೇ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ತಾಯಿಯ ಭಾಷೆಗಿರುವ ಶ್ರೀಮಂತಿಕೆ ಹಾಗೂ ಸ್ವಾದವನ್ನು ಇಂಗ್ಲಿಷ್ ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ. ತಾಯಿ ಭಾಷೆಯನ್ನು ಉಳಿಸುವ ಉದ್ದೇಶದಿಂದ ಯುನೆಸ್ಕೋ ವಿಶ್ವ ಮಾತೃ ಭಾಷೆ ದಿನವನ್ನು ಪ್ರತಿ ವರ್ಷ ಫೆಬ್ರವರಿ 21 ರಂದು ಆಚರಿಸುತ್ತ ಬರಲಾಗುತ್ತಿದೆ.
ಮಾತೃ ಭಾಷಾ ದಿನ ಘೋಷಣೆಯಾದ ದಿನದಿಂದ ಪ್ರತಿ ವರ್ಷ ಆಯಾಯ ದೇಶದ ಜನರು ತಮ್ಮ ತಮ್ಮ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಮಾತೃ ಭಾಷೆಯನ್ನು ದಿನವನ್ನು ಆಚರಿಸುತ್ತಿದ್ದಾರೆ. ಮೊದಲ ಬಾರಿಗೆ ಅಂತರಾಷ್ಟ್ರೀಯ ಮಾತೃ ಭಾಷಾ ದಿನವನ್ನು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕೃತಿಕ ಸಂಘಟನೆಯಾದ ಯುನೆಸ್ಕೊ ನವೆಂಬರ್ 1999ರಲ್ಲಿ ಘೋಷಿಸಿತು. ಬಾಂಗ್ಲಾದೇಶದ ಮಾತೃಭಾಷೆ ಬಂಗಾಳಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕೆಂದು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟ ವಿದ್ಯಾರ್ಥಿಗಳ ನೆನಪಿಗಾಗಿ ಈ ದಿನವನ್ನು ಅಂತಾರಾಷ್ಟ್ರೀಯ ಮಾತೃ ಭಾಷಾ ದಿನವನ್ನಾಗಿ ಆಚರಿಸಲಾಯಿತು. ವಿಶ್ವಸಂಸ್ಥೆಯು 2008 ನ್ನು ವಿಶ್ವ ಭಾಷೆಗಳ ವರ್ಷ ಎಂದು ಆಚರಿಸಿತು. ಹೀಗಾಗಿ ಕಳೆದ 2000 ರಿಂದ ಪ್ರತಿ ವರ್ಷ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಬೇಸಿಗೆಗಾಲದಲ್ಲಿ ಅಪ್ಪಿ ತಪ್ಪಿಯೂ ಈ ಆಹಾರಗಳನ್ನು ಸೇವಿಸಲೇಬೇಡಿ
ಪ್ರಪಂಚದಾದಂತ್ಯ ಕೆಲವು ಮಾತೃ ಭಾಷೆಗಳು ಅವನತಿಯನ್ನು ಹೊಂದುತ್ತಿದೆ. ಹೀಗಾಗಿ ಮಾತೃ ಭಾಷೆಯನ್ನು ಉಳಿಸುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿರುವ ಕಾರಣ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನವನ್ನು ನಾವೆಲ್ಲರೂ ಆಚರಿಸುವುದು ಅಗತ್ಯ. ಹೀಗಾಗಿ ಶಾಲೆಯಲ್ಲಿ ಮಕ್ಕಳಿಗೆ ಮಾತೃ ಭಾಷೆಯ ಶಿಕ್ಷಣ ನೀಡುವುದು ಅಗತ್ಯ. ಹುಟ್ಟಿನಿಂದಲೇ ಕಲಿಯುವ ಭಾಷೆಯಿಂದಲೇ ಪಾಠವನ್ನು ಮಾಡುವುದರಿಂದ ಮಕ್ಕಳು ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಕ ಮಾತೃ ಭಾಷೆಯನ್ನು ಉಳಿಸಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ