
ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಅಜ್ಜ-ಅಜ್ಜಿಯರೊಂದಿಗಿನ (grandparents) ಮೊಮ್ಮಕ್ಕಳ (Grandchildren) ಸಂಪರ್ಕವು ಉತ್ತಮ ರೀತಿಯಲ್ಲಿ ರೂಪುಗೊಳ್ಳುತ್ತಿಲ್ಲ. ಮಕ್ಕಳು ಅಜ್ಜ-ಅಜ್ಜಿಯರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಈಗಿನ ಮಕ್ಕಳಂತೂ ಓದು, ಕ್ರೀಡೆ, ಇತರೆ ಚಟುವಟಿಕೆಗಳು ಮತ್ತು ಮೊಬೈಲ್‌ನಲ್ಲಿ ಹೆಚ್ಚು ನಿರತರಾಗಿರುತ್ತಾರೆ. ಮತ್ತು ಇದರಿಂದ ಅವರು ತಮ್ಮ ಅಜ್ಜ ಅಜ್ಜಿಯರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಹೆತ್ತವರು ತಮ್ಮ ಮಕ್ಕಳನ್ನು ಅಜ್ಜ-ಅಜ್ಜಿಯೊಂದಿಗೆ ಬೆರೆಯುವಂತೆ ನೋಡಿಕೊಳ್ಳಬೇಕು. ಏಕೆಂದರೆ ಮಕ್ಕಳು ಹಿರಿಯರೊಂದಿಗೆ ಇದ್ದಷ್ಟು ಸಾಕಷ್ಟು ಕಲಿಯುತ್ತಾರೆ. ಹಾಗಾದರೆ ಮಕ್ಕಳು ಹಿರಿಯರೊಂದಿಗೆ ಬೆರೆತು ಸಮಯ ಕಳೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ ಬನ್ನಿ.
ಮಕ್ಕಳಲ್ಲಿ ಗೌರವದ ಭಾವನೆ ಹುಟ್ಟುತ್ತದೆ: ಮಕ್ಕಳು ತಮ್ಮ ಅಜ್ಜ-ಅಜ್ಜಿಯರೊಂದಿಗೆ ಸಮಯ ಕಳೆದರೆ, ಇದು ಹಿರಿಯರೊಂದಿಗೆ ಮೊಮ್ಮಕ್ಕಳ ಸಂಬಂಧವನ್ನು ಬಲಪಡಿಸುವುದು ಮಾತ್ರವಲ್ಲದೆ, ತಾತ ಅಜ್ಜಿಯೊಂದಿಗೆ ಬೆರೆತಷ್ಟು ಮಕ್ಕಳು ಹಿರಿಯರನ್ನು ಗೌರವಿಸಲು ಕಲಿಯುತ್ತಾರೆ. ಹಿರಿಯರಿಗೆ ಯಾವ ರೀತಿ ಗೌರವ ನೀಡಬೇಕು ಎಂಬ ಜೀವನ ಪಾಠವನ್ನು ಕಲಿಯುತ್ತಾರೆ.
ಆತ್ಮವಿಶ್ವಾಸ ಹೆಚ್ಚುತ್ತದೆ: ಮಕ್ಕಳು ಅಜ್ಜ ಅಜ್ಜಿಯರೊಂದಿಗೆ ಸಮಯ ಕಳೆದಾಗ ಅಥವಾ ಅವಿಭಕ್ತ ಕುಟುಂಬದಲ್ಲಿ ವಾಸಿಸುವಾಗ, ಅವರ ಮನೋಸ್ಥೈರ್ಯ ಹೆಚ್ಚಾಗುತ್ತದೆ. ಅಜ್ಜಿ ತಾತನ ಪ್ರೋತ್ಸಾಹದ ಮಾತುಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ನಿಲ್ಲುವುದನ್ನು ಕಲಿಯುತ್ತಾರೆ.
ಭಾವನಾತ್ಮಕ ಬೆಂಬಲ: ಅಜ್ಜ-ಅಜ್ಜಿಯರೊಂದಿಗೆ ಸಮಯ ಕಳೆಯುವ ಮಕ್ಕಳು ಭಾವನಾತ್ಮಕವಾಗಿ ಬಲಶಾಲಿಗಳಾಗಿರುತ್ತಾರೆ. ಹೌದು ಅವರಿಗೆ ಪ್ರತಿಯೊಂದು ಹಂತದಲ್ಲಿಯೂ ಅಜ್ಜ ಅಜ್ಜಿಯಿಂದ ಭಾವನಾತ್ಮಕ ಬೆಂಬಲವನ್ನು ಪಡೆಯುತ್ತಾರೆ. ಇಂತಹ ಮಕ್ಕಳು ಯಾವಾಗಲೂ ಉತ್ಸಾಹದಿಂದ ಇರುತ್ತಾರೆ.
ಸಮಸ್ಯೆಗಳನ್ನು ಎದುರಿಸುವುದನ್ನು ಕಲಿಯುತ್ತಾರೆ: ಮಕ್ಕಳು ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ದೊಡ್ಡವರನ್ನು ನೋಡಿ ಕಲಿಯುತ್ತಾರೆ. ಹೌದು ಅಜ್ಜ-ಅಜ್ಜಿ ಹೇಳುವಂತಹ ಕಥೆಗಳಿಂದ ಅವರು ಕಲಿಸುವ ಜೀವನ ಪಾಠಗಳಿಂದ ಮಕ್ಕಳು ಸಮಸ್ಯೆಗಳನ್ನು ಹೇಗೆ ಎದುರಿಸುವುದು ಎಂಬುದನ್ನು ಕಲಿಯುತ್ತಾರೆ.
ಮೌಲ್ಯಗಳು ಬೆಳೆಯುತ್ತದೆ: ಜೀವನ ಮೌಲ್ಯಗಳನ್ನು ಕಲಿಸಿಕೊಡುವಲ್ಲಿ ಅಜ್ಜ-ಅಜ್ಜಿಯ ಪಾತ್ರ ಮಹತ್ತರವಾದದ್ದು. ಹೌದು ಹಿರಿಯರು ನೀತಿ ಕಥೆಗಳು, ತಮ್ಮ ಜೀವನ ಪಾಠಗಳನ್ನು ಹೇಳುವ ಮೂಲಕವೇ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಉತ್ತಮ ಮೌಲ್ಯಗಳನ್ನು ಬೆಳೆಸುತ್ತಾರೆ. ಅಲ್ಲದೆ ಮಕ್ಕಳಲ್ಲಿ ಸಕಾರಾತ್ಮಕತೆಯನ್ನು, ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಮಾತನಾಡಬೇಕು ಎಂಬುದನ್ನು ಸಹ ಕಲಿಸುತ್ತದೆ.
ಇದನ್ನೂ ಓದಿ: ನಿಮ್ಮ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಹೀಗೆ ಮಾಡಿ
ಒತ್ತಡ ನಿವಾರಣೆ: ಇಂದಿನ ಕಾಲದಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡುವುದರಿಂದ ಮಕ್ಕಳಿಗೆ ಒಂಟಿತನ ಕಾಡುತ್ತದೆ, ಇದರಿಂದ ಅವರು ಒತ್ತಡವನ್ನು ಕೂಡ ಅನುಭವಿಸುತ್ತಾರೆ. ಹೀಗಿರುವಾಗ ಈ ಮಕ್ಕಳು ತಮ್ಮ ಅಜ್ಜಿ ತಾತನೊಂದಿಗೆ ಸಮಯ ಕಳೆಯುವುದರಿಂದ ಅವರ ಒತ್ತಡ, ಖಿನ್ನತೆ ಎನ್ನುವಂತಹದ್ದು ದೂರವಾಗುತ್ತದೆ.
ಸಂಸ್ಕೃತಿಯ ಬಗ್ಗೆ ಕಲಿಯುತ್ತಾರೆ: ಮಕ್ಕಳು ತಮ್ಮ ಅಜ್ಜ-ಅಜ್ಜಿಯರೊಂದಿಗೆ ಹೆಚ್ಚು ಸಮಯ ಕಳೆಯುವಾಗ, ಅವರಿಗೆ ತಮ್ಮ ಕುಟುಂಬವನ್ನು ಅರ್ಥಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಮತ್ತು ಇದರ ಮೂಲಕ ಅವರು ಹಿರಿಯರು ಆಚರಿಸಿಕೊಂಡು ಬಂದಂತಹ ಪದ್ಧತಿಗಳು ಮತ್ತು ಸಂಸ್ಕೃತಿಯ ಬಗ್ಗೆ ಕಲಿಯುತ್ತಾರೆ. ಜೊತೆಗೆ ಮುಖ್ಯವಾಗಿ ಮಕ್ಕಳು ಯಾವುದೇ ಕಾರಣಕ್ಕೂ ದಾರಿಯನ್ನು ತಪ್ಪುವುದಿಲ್ಲ. ಅವರು ಅಜ್ಜ ಅಜ್ಜಿ ತೋರಿಸಿದ ದಾರಿಯಲ್ಲಿಯೇ ನಡೆಯಲು ಪ್ರಯತ್ನಿಸುತ್ತಾರೆ. ಅದಕ್ಕಾಗಿಯೇ ಮಕ್ಕಳು ಅಜ್ಜ-ಅಜ್ಜಿಯೊಂದಿಗೆ ಬೆಳೆಯಬೇಕು ಎಂದು ಹೇಳುವುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ