ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆ ಕಂಡು ಬರುವುದು ಸಾಮಾನ್ಯ. ಅತಿಯಾದ ಬೆವರುವಿಕೆ ಮತ್ತು ಹೆಚ್ಚುತ್ತಿರುವ ತಾಪಮಾನದಿಂದಾಗಿ ಈ ರೀತಿಯ ಸಮಸ್ಯೆ ಕಂಡುಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಂಬೆ ರಸವನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ರೀತಿಯ ಪ್ರಯೋಜನವಿದೆ. ಇದು ಆಯಾಸವನ್ನು ಕಡಿಮೆ ಮಾಡಿ ದಿನಪೂರ್ತಿ ತಾಜಾತನದಿಂದ ಇರುವಂತೆ ನೋಡಿಕೊಳ್ಳುತ್ತದೆ. ಆದರೆ ಎಲ್ಲವೂ ಕೂಡ ಅಗತ್ಯಕ್ಕಿಂತ ಹೆಚ್ಚಾಗಿ ಬಳಸಬಾರದು. ಹಾಗಾದರೆ ಬೇಸಿಗೆಯಲ್ಲಿ ನಿಂಬೆ ರಸವನ್ನು ಸೇರಿಸಿದ ನೀರನ್ನು ಎಷ್ಟು ಬಾರಿ ಕುಡಿಯಬಹುದು? ಇದು ಯಾವ ರೀತಿಯ ಪರಿಣಾಮ ಬೀರುತ್ತದೆ? ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೇಸಿಗೆಯಲ್ಲಿ ಹೈಡ್ರೇಟ್ ಆಗಿರುವುದು ಬಹಳ ಮುಖ್ಯ ಎಂದು ಆಹಾರ ತಜ್ಞೆ ರಕ್ಷಿತಾ ಮೆಹ್ರಾ ಹೇಳುತ್ತಾರೆ. ಇದಕ್ಕಾಗಿ, ಪ್ರತಿದಿನ ಕನಿಷ್ಠ 3 ಲೀಟರ್ ನೀರನ್ನು ಕುಡಿಯಬೇಕು. ಹಾಗಾಗಿ ಸ್ವಲ್ಪ ಪ್ರಮಾಣದ ನೀರಿಗೆ ನಿಂಬೆ ರಸವನ್ನು ಸೇರಿಸಿಕೊಂಡು ಕುಡಿಯಬಹುದು. ನಿಂಬೆಯಲ್ಲಿ ವಿಟಮಿನ್ ಸಿ ಇದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಜೊತೆಗೆ ಇದರಲ್ಲಿ ಕಂಡುಬರುವ ವಿಟಮಿನ್ ಬಿ -6, ಇ, ಥಯಾಮಿನ್, ನಿಯಾಸಿನ್, ರಿಬೋಫ್ಲೇವಿನ್ ಮತ್ತು ಫೋಲೇಟ್ ಅಂಶವು ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ ನೀವು ದಿನಕ್ಕೆ ಎರಡು ಲೋಟಕ್ಕಿಂತ ಹೆಚ್ಚು ನಿಂಬೆ ರಸವನ್ನು ಸೇರಿಸಿದ ನೀರನ್ನು ಕುಡಿಯಬಾರದು. ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.
ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಹದಗೆಡದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಜೊತೆಗೆ ಇದು ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಹೊಟ್ಟೆಯುಬ್ಬರ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ನಿಂಬೆ ರಸದಲ್ಲಿ ಪೆಕ್ಟಿನ್ ಎಂಬ ಫೈಬರ್ ಅಂಶವು ಕಂಡುಬರುತ್ತದೆ, ಇದು ಹೊಟ್ಟೆ ತುಂಬಿದ ಅನುಭವವನ್ನು ನೀಡುವುದರಿಂದ ಹೆಚ್ಚು ಹಸಿವಾಗುವುದಿಲ್ಲ ಇದರಿಂದ ತೂಕ ನಿಯಂತ್ರಣದಲ್ಲಿರುತ್ತದೆ. ನಿಂಬೆಯಲ್ಲಿ ಕಂಡುಬರುವ ವಿಟಮಿನ್ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ನೀವು ನಿಂಬೆ ನೀರಿನ ರುಚಿಯನ್ನು ಹೆಚ್ಚಿಸಿಕೊಳ್ಳಲು ಪುದೀನಾ, ಸೌತೆಕಾಯಿ ಅಥವಾ ಶುಂಠಿಯನ್ನು ಸಹ ಸೇರಿಸಬಹುದು. ಒಂದು ಚಿಟಿಕೆ ಉಪ್ಪು ಮತ್ತು ಕರಿಮೆಣಸು ಸೇರಿಸುವುದರಿಂದ ರುಚಿ ಮತ್ತು ಆರೋಗ್ಯ ಎರಡೂ ಉತ್ತಮವಾಗಿರುತ್ತದೆ. ಮಧುಮೇಹ ರೋಗಿಗಳು ನಿಂಬೆ ನೀರಿನಲ್ಲಿ ಜೇನುತುಪ್ಪದ ಬದಲು ಬೇವು ಅಥವಾ ತುಳಸಿ ಎಲೆಗಳನ್ನು ಬಳಸಬಹುದು.+
ಇದನ್ನೂ ಓದಿ: ಅತಿಯಾದ ಅಂತರ್ಜಾಲದ ಬಳಕೆ ಯುವ ಸಮುದಾಯಕ್ಕೆ ಮಾರಕ
ಸಿಟ್ರಸ್ ಹಣ್ಣುಗಳು ಟೈರಮೈನ್ ಅನ್ನು ಹೊಂದಿರುತ್ತವೆ, ಇದು ತಲೆನೋವಿಗೆ ಕಾರಣವಾಗಬಹುದು, ಆದ್ದರಿಂದ ಮೈಗ್ರೇನ್ ನಿಂದ ಬಳಲುತ್ತಿರುವವರು ನಿಂಬೆ ರಸದ ಸೇವನೆಯನ್ನು ತಪ್ಪಿಸಬೇಕು, ಜೊತೆಗೆ ಇದರಲ್ಲಿ ಹೆಚ್ಚಿನ ಪ್ರಮಾಣದ ಸಿಟ್ರಿಕ್ ಆಮ್ಲವಿದ್ದು ಇದು ಮೂಳೆಗಳು ಮತ್ತು ಹಲ್ಲುಗಳನ್ನು ದುರ್ಬಲಗೊಳಿಸುತ್ತದೆ. ಹೊಟ್ಟೆ ಉರಿ ಅಥವಾ ಅತಿಸಾರದ ಸಮಸ್ಯೆ ಇರುವವರು ಹೆಚ್ಚು ನಿಂಬೆ ರಸವನ್ನು ಸೇರಿಸಿದ ಪಾನೀಯಗಳನ್ನು ಕುಡಿಯಬಾರದು ಎಂದು ಆಹಾರ ತಜ್ಞೆ ರಕ್ಷಿತಾ ಮೆಹ್ರಾ ಹೇಳುತ್ತಾರೆ. ನೀವು ಈ ಮೊದಲೇ ಯಾವುದಾದರೂ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ನಿಂಬೆ ರಸವನ್ನು ಕುಡಿಯುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ