World Telecommunication Day 2024: ಅತಿಯಾದ ಅಂತರ್ಜಾಲದ ಬಳಕೆ ಯುವ ಸಮುದಾಯಕ್ಕೆ ಮಾರಕ
ಸಮಾಜದಲ್ಲಿ ಸಂಹವನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಶ್ವ ದೂರಸಂಪರ್ಕ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.
ಸಂವಹನ ಜನರ ಜೀವನದ ಪ್ರಮುಖ ಭಾಗವಾಗಿದೆ. ಆಗಿನ ಕಾಲಘಟ್ಟದಲ್ಲಿ ಒಬ್ಬರಿಂದ ಒಬ್ಬರಿಗೆ ಸಂವಹನ ನಡೆಸಲು ಮುಖತಃ ಭೇಟಿಯಾಗಬೇಕಿತ್ತು. ಅದಲ್ಲದೇ ಪತ್ರದ ಸಂದೇಶದ ಮೂಲಕ ಸಂವಹನ ಮಾಡಬೇಕಾಗಿತ್ತು. ಇವುಗಳಲ್ಲೆವನ್ನು ಮೀರಿ ದೂರವಾಣಿ ಸಂಪರ್ಕ ಅವಿಷ್ಕಾರಗೊಂಡ ಬಳಿಕ ತಂತ್ರಜ್ಞಾನದ ಯುಗವು ಆರಂಭವಾಯಿತು. ಇಂದು ನಾವು ನೀವುಗಳು ಡಿಜಿಟಲ್ ಯುಗದಲ್ಲಿದ್ದೇವೆ. ಇಂಟರ್ನೆಟ್ ವಿಶ್ವದಾದ್ಯಂತ ಸಂವಹನಕ್ಕೆ ದಾರಿಯಾಗಿದೆ. ಇದರಿಂದ ದೂರದಲ್ಲಿರುವ ಪ್ರೀತಿ ಪಾತ್ರರೊಂದಿಗೆ ಕ್ಷಣಾರ್ಧದಲ್ಲಿಯೇ ಮಾತುಕತೆಯನ್ನು ನಡೆಸಬಹುದಾಗಿದೆ. ಈ ದೂರಸಂಪರ್ಕದಿಂದ ಸಂವಹನವಾದರೆ, ಅಂತರ್ಜಾಲವು ದೇಶದಲ್ಲಿ ನಡೆಯುವ ಆಗುಹೋಗುಗಳನ್ನು ತಿಳಿಯಲು ಸಹಕಾರಿಯಾಗಿದೆ.
ವಿಶ್ವ ದೂರಸಂಪರ್ಕ ದಿನದ ಇತಿಹಾಸ
1865 ಮೇ 17ರಂದು ಅಂತಾರಾಷ್ಟ್ರೀಯ ಟೆಲಿಗ್ರಾಫ್ ಒಕ್ಕೂಟ ‘ಐಟಿಯು’ ಸ್ಥಾಪನೆಯಾದ ನೆನಪಿನಲ್ಲಿ ವಿಶ್ವ ದೂರಸಂಪರ್ಕ ದಿನವನ್ನು ಆಚರಿಸಲಾಯಿತು. 1969 ರಲ್ಲಿ ಮೇ 17 ರಲ್ಲಿ ಮೊದಲ ವಿಶ್ವ ದೂರಸಂಪರ್ಕ ದಿನವನ್ನು ಆಚರಿಸಲಾಯಿತು. 1876ರ ದೂರವಾಣಿ ಆವಿಷ್ಕಾರ, 1957ರ ಚೊಚ್ಚಲ ಉಪಗ್ರಹ ಉಡಾವಣೆ, ನಂತರ 60ರ ದಶಕದ ಅಂತರ್ಜಾಲದ ಆವಿಷ್ಕಾರವನ್ನು ನೆನಪಿಸುತ್ತದೆ. 1973 ರಲ್ಲಿ ಮಲಗಾ-ಟೊರೆಮೊಲಿನೋಸ್‌ನಲ್ಲಿ ಪ್ಲೆನಿಪೊಟೆನ್ಷಿಯರಿ ಸಮ್ಮೇಳನದಿಂದ ಸ್ಥಾಪನೆ ಮಾಡಲಾಯಿತು.
ಆದಾದ ಕೆಲವು ವರ್ಷ ಬಳಿಕ ಅಂದರೆ ನವೆಂಬರ್ 2005ರಲ್ಲಿ, ಮಾಹಿತಿ ಸೊಸೈಟಿಯ ವಿಶ್ವ ಶೃಂಗಸಭೆಯು ಯುಎನ್ ಜನರಲ್ ಅಸೆಂಬ್ಲಿಗೆ ಮೇ 17 ಅನ್ನು ವಿಶ್ವ ಮಾಹಿತಿ ಸಮಾಜದ ದಿನವೆಂದು ಘೋಷಿಸುವಂತೆ ಕರೆಯನ್ನು ನೀಡಿತು. ಆದರೆ ಮಾರ್ಚ್ 2006ರಲ್ಲಿ, ಸಾಮಾನ್ಯ ಸಭೆಯು ವಿಶ್ವ ಮಾಹಿತಿ ಸಮಾಜ ದಿನವನ್ನು ವಾರ್ಷಿಕವಾಗಿ ಮೇ 17ರಂದು ಆಚರಿಸಲು ನಿರ್ಧಾರ ಮಾಡಿತು. ನವೆಂಬರ್ 2006ರಲ್ಲಿ, ಟರ್ಕಿಯ ಅಂಟಲ್ಯದಲ್ಲಿ ನಡೆದ ITU ಪ್ಲೆನಿಪೊಟೆನ್ಷಿಯರಿ ಸಮ್ಮೇಳನವು ಮೇ 17ರಂದು ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸಮಾಜದ ದಿನವನ್ನು ಒಟ್ಟಿಗೆ ಆಚರಿಸಲು ಮುಂದಾಯಿತು. ಅಂದಿನಿಂದ ಪ್ರತಿ ವರ್ಷವು ವಿಶ್ವ ದೂರಸಂಪರ್ಕ ಹಾಗೂ ಮಾಹಿತಿ ಸಮಾಜದ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಅಧಿಕ ರಕ್ತದೊತ್ತಡದ ಲಕ್ಷಣಗಳೇನು? ನಿಯಂತ್ರಿಸುವುದು ಹೇಗೆ?
ವಿಶ್ವ ದೂರಸಂಪರ್ಕ ದಿನದ ಮಹತ್ವ
ಅಂತರ್ಜಾಲ, ಸಂಪರ್ಕ ಸೇರಿದಂತೆ ಹೊಸ ತಂತ್ರಜ್ಞಾನಗಳಿಂದಾಗಿ ಸಾಮಾಜಿಕ ಹಾಗೂ ಸಮುದಾಯದಲ್ಲಾದ ಬದಲಾವಣೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ. ಈ ದಿನದಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಆಗುತ್ತಿರುವ ಬೆಳವಣಿಗೆಗಳ ಕುರಿತು ರಾಷ್ಟ್ರೀಯ ಕಾರ್ಯಕ್ರಮಗಳು, ಸಂವಾದ ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ