
ದೇಶದಾದಂತ್ಯ ಮಹಾ ಶಿವರಾತ್ರಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಶಿವರಾತ್ರಿ ಹಬ್ಬವನ್ನು ಈ ಬಾರಿ ಫೆಬ್ರವರಿ 26 ರಂದು ಆಚರಿಸಲಾಗುತ್ತಿದೆ. ಅನೇಕ ಜನರು ಉಪವಾಸ ಮಾಡಿ ಜಾಗರಣೆ ಮಾಡುತ್ತಾರೆ. ಈ ಹಬ್ಬದ ದಿನ ಶಿವನಿಗೆ ಇಷ್ಟವಾದ ಅಡುಗೆ ತಯಾರಿಸಿ ನೈವೇದ್ಯ ಇಡುವುದು ವಾಡಿಕೆ. ಅದರಲ್ಲಿ ಶಿವನಿಗೆ ಪ್ರಿಯವಾದ ತಂಬಿಟ್ಟು ಇಲ್ಲದೇ ಹೋದರೆ ಹೇಗೆ ಅಲ್ಲವೇ. ಶೇಂಗಾ, ಬಿಳಿ ಎಳ್ಳು, ಕೊಬ್ಬರಿ, ಬೆಲ್ಲ ಬಳಸಿ ತಯಾರಿಸಲಾಗುವ ತಂಬಿಟ್ಟು ಹಬ್ಬದ ವೇಳೆ ಉಪವಾಸ ಮಾಡುವವರಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಮನೆಯಲ್ಲಿ ಈ ಸಾಮಗ್ರಿಗಳಿದ್ದರೆ ಸಾಕು ಹುರಿದ ಅಕ್ಕಿ ತಂಬಿಟ್ಟು ಮಾಡಿ ಶಿವನಿಗೆ ನೈವೇದ್ಯವಾಗಿ ಅರ್ಪಿಸಬಹುದು.
* ಅಕ್ಕಿ – 1 ಕಪ್
* ಹುರಿ ಕಡಲೆ – 1/2 ಕಪ್
* ಶೇಂಗಾ – 1 ಕಪ್
* ಒಣ ಕೊಬ್ಬರಿ ತುರಿ- 1 ಕಪ್
* ಬಿಳಿ ಎಳ್ಳು – 1 ಕಪ್
* ಬೆಲ್ಲ – 1 ಕಪ್
* ನೀರು – 1/2 ಕಪ್
ಇದನ್ನೂ ಓದಿ: ಮಹಾಶಿವರಾತ್ರಿಯಂದು ಈ ದೇವಾಲಯಗಳಿಗೆ ಭೇಟಿ ನೀಡಿ
* ಮೊದಲಿಗೆ ದಪ್ಪ ತಳದ ಪಾತ್ರೆಯನ್ನು ಗ್ಯಾಸ್ ಮೇಲಿಟ್ಟು ಅಕ್ಕಿ ಕೆಂಪಗಾಗುವರೆಗೂ ಹುರಿದುಕೊಳ್ಳಿ, ಅದನ್ನು ಪಕ್ಕಕ್ಕೆ ಇಟ್ಟುಕೊಳ್ಳಿ.
* ಅದೇ ಪಾತ್ರೆಗೆ ಒಣಕೊಬ್ಬರಿ ಹಾಕಿ ಕಂದು ಬಣ್ಣ ತಿರುಗುವಂತೆ ಹುರಿದುಕೊಂಡು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.
* ಮತ್ತದೇ ಪಾತ್ರೆಗೆ ಎಳ್ಳು ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಆ ಬಳಿಕ ಶೇಂಗಾ ಬೀಜ ಹುರಿದು ಸಿಪ್ಪೆ ತೆಗೆದಿಟ್ಟುಕೊಳ್ಳಿ.
* ಈಗಾಗಲೇ ಹುರಿದ ಅಕ್ಕಿ ತಣ್ಣಗಾದ ಬಳಿಕ ಮಿಕ್ಸಿ ಜಾರ್‌ಗೆ ವರ್ಗಾಯಿಸಿಕೊಳ್ಳಿ. ಸ್ವಲ್ಪ ಪ್ರಮಾಣದಲ್ಲಿ ಶೇಂಗಾ, ಹುರಿ ಕಡಲೆ ಹಾಗೂ ಎಳ್ಳು ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
* ತದನಂತರದಲ್ಲಿ ಅಕ್ಕಿ ಪುಡಿಗೆ, ಈಗಾಗಲೇ ಪುಡಿ ಮಾಡಿಟ್ಟ ಶೇಂಗಾ, ಹುರಿ ಕಡಲೆ ಹಾಗೂ ಎಳ್ಳು ಮಿಶ್ರಣ ಹಾಗೂ ಹುರಿದಿಟ್ಟ ಶೇಂಗಾ, ಹುರಿ ಕಡಲೆ ಹಾಗೂ ಕೊಬ್ಬರಿ ತುರಿಯನ್ನು ಸೇರಿಸಿಕೊಳ್ಳಿ. ಬೇಕಿದ್ದರೆ ಏಲಕ್ಕಿ ಪುಡಿ ಸೇರಿಸಿಕೊಳ್ಳಬಹುದು.
* ಒಂದು ಪಾತ್ರೆಗೆ ಬೆಲ್ಲ ಹಾಕಿ, 1/2 ಕಪ್ ನೀರು ಸೇರಿಸಿ ಬಿಸಿಯಾಗಲು ಬಿಡಿ. ಬೆಲ್ಲ ಕರಗಿ ಒಂದು ಕುದಿ ಬರುತ್ತಿದ್ದಂತೆ ಸ್ಟೌವ್ ಆಫ್ ಮಾಡಿಕೊಳ್ಳಿ.
* ತದನಂತರದಲ್ಲಿ ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಈ ಬೆಲ್ಲದ ಪಾಕವನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಉಂಡೆಗಳಾಗಿ ಮಾಡಿಕೊಂಡರೆ ಹುರಿದ ಅಕ್ಕಿ ತಂಬಿಟ್ಟು ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ