
ಈ ಬೇಸಿಗೆಯ (summer) ತಾಪಕ್ಕೆ ಮನುಷ್ಯರಾದ ನಾವು, ಪ್ರಾಣಿ ಪಕ್ಷಿಗಳು ಮಾತ್ರವಲ್ಲ ಮರಗಿಡಗಳು ಸಹ ಬಸವಳಿದು ಹೋಗುತ್ತವೆ. ಆದ್ದರಿಂದ ಈ ಸುಡು ಬೇಸಿಗೆಯಲ್ಲಿ ಮನೆಯಲ್ಲಿರುವ ಗಿಡಗಳ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಈ ಶಾಖಕ್ಕೆ ಗಿಡಗಳು ಒಣಗುವ, ಸತ್ತು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ಗಿಡಗಳನ್ನು ರಕ್ಷಿಸಲು ಹೆಚ್ಚಿನವರು ಬೆಳಗ್ಗೆ ಮತ್ತು ಸಂಜೆ ಗಿಡಗಳಿಗೆ ಅತಿಯಾಗಿ ನೀರು ಹಾಕಿ ಪೋಷಿಸುತ್ತಲೇ ಇರುತ್ತಾರೆ. ಆದ್ರೆ ಅತಿಯಾಗಿ ನೀರು ಹಾಕುತ್ತಲೇ ಇರುತ್ತಾರೆ. ಹೀಗೆ ಅತಿಯಾಗಿ ನೀರು ಹಾಕುವುದರಿಂದ ಸಸ್ಯದ ಬೇರುಗಳು ಕೊಳೆಯಬಹುದು. ಬೇಸಿಗೆಯಲ್ಲಿ ಸಸ್ಯಗಳು ಒಣಗುವುದನ್ನು ತಡೆಯಲು, ಅತಿಯಾಗಿ ನೀರು ಹಾಕುವ ಬದಲು ಸರಿಯಾದ ಸಮಯದಲ್ಲಿ ನೀರು ಹಾಕುವುದು ಮುಖ್ಯ. ಹಾಗಾಗದರೆ ಬೆಳಗ್ಗೆ ಅಥವಾ ಸಂಜೆ ಗಿಡಗಳಿಗೆ ಯಾವ ಸಮಯದಲ್ಲಿ ನೀರು ಹಾಕುವುದು ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಬೆಳಗಿನ ಜಾವ ಸಸ್ಯಗಳಿಗೆ ನೀರು ಹಾಕಲು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ತಾಪಮಾನವು ತುಲನಾತ್ಮಕವಾಗಿ ಕಡಿಮೆಯಿರುತ್ತದೆ, ಇದರಿಂದಾಗಿ ನೀರು ನಿಧಾನವಾಗಿ ಮಣ್ಣಿನೊಳಗೆ ಇಂಗಿ ಬೇರುಗಳನ್ನು ತಲುಪುತ್ತದೆ. ತೀವ್ರವಾದ ಸೂರ್ಯನ ಬೆಳಕು ಬೀಳುವ ಮೊದಲು ಸಸ್ಯಗಳು ಸಂಪೂರ್ಣವಾಗಿ ಜಲಸಂಚಯನಗೊಳ್ಳುತ್ತವೆ, ಇದು ಶಾಖವನ್ನು ಉತ್ತಮವಾಗಿ ತಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಬೆಳಿಗ್ಗೆ ಹಾಕುವ ನೀರು ಬೇಗನೆ ಒಣಗುತ್ತದೆ, ಶಿಲೀಂಧ್ರಗಳ ಸೋಂಕು ಅಥವಾ ಕೊಳೆಯುವಿಕೆಯ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಸಂಜೆ ನೀರು ಹಾಕುವುದರಿಂದ ಸಸ್ಯಕ್ಕೆ ವಿಶ್ರಾಂತಿ ಸಿಗುತ್ತದೆ. ಆದರೆ, ಸಂಜೆ ನೀರು ಹಾಕುವುದರ ಪ್ರಮುಖ ಅನಾನುಕೂಲವೆಂದರೆ ತೇವಾಂಶವು ರಾತ್ರಿಯಿಡೀ ಉಳಿಯುತ್ತದೆ, ಇದು ಶಿಲೀಂಧ್ರ ಮತ್ತು ಕೀಟಗಳ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಸುಡು ಬಿಸಿಲಿಗೆ ಬಸವಳಿದ ಮೂಕ ಜೀವಿಗಳಿಗೆ ಈ ರೀತಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ
ಬೇಸಿಗೆಯಲ್ಲಿ ಸಸ್ಯಗಳಿಗೆ ನೀರು ಹಾಕಲು ಬೆಳಗ್ಗಿನ ಸಮಯ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಸಸ್ಯಗಳಿಗೆ ನೀರು ಹಾಕುವುದರಿಂದ ಸಸ್ಯಗಳಿಗೆ ದಿನವಿಡೀ ಸಾಕಷ್ಟು ತೇವಾಂಶವನ್ನು ಒದಗಿಸುತ್ತದೆ ಮತ್ತು ಸಸ್ಯಗಳ ಆರೋಗ್ಯವೂ ಸುಧಾರಿಸುತ್ತದೆ. ಒಂದು ವೇಳೆ ತೀವ್ರವಾದ ಶಾಖವಿದ ಕಾರಣ ಮಣ್ಣು ಒಣಗಿ ಹೋದರೆ ಮಾತ್ರ ಸಂಜೆ ಹೊತ್ತಲ್ಲಿ ಸ್ವಲ್ಪ ನೀರನ್ನು ಚಿಮುಕಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ