ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳ ಕಾಟವೇ ಇರೋಲ್ಲ ನೋಡಿ
ಪ್ರತಿಯೊಂದು ಸೀಸನ್‌ನಲ್ಲೂ ಸೊಳ್ಳೆಗಳ ಕಾಟವಂತೂ ವಿಪರೀತವಾಗಿರುತ್ತದೆ. ಈ ಸೊಳ್ಳೆಗಳ ಹಾವಳಿಯಿಂದ ಡೆಂಗ್ಯೂ ಸೇರಿದಂತೆ, ಇತರೆ ಕಾಯಿಲೆಗಳು ಕೂಡ ಬೇಗನೆ ಹರಡುತ್ತವೆ. ನಿಮ್ಮ ಮನೆಯಲ್ಲೂ ಇದೇ ರೀತಿ ಸೊಳ್ಳೆಗಳ ಹಾವಳಿ ಇದ್ಯಾ. ಹಾಗಿದ್ರೆ ಈ ಕೆಲವೊಂದು ಗಿಡಗಳನ್ನು ಮನೆಯ ಸುತ್ತಲೂ ನೆಡುವ ಮೂಲಕ ನೈಸರ್ಗಿಕ ರೀತಿಯಲ್ಲಿ ಸೊಳ್ಳೆಗಳಿಂದ ಮುಕ್ತಿಯನ್ನು ಪಡೆಯಿರಿ.

ಮಳೆಗಾಲ ಮಾತ್ರವಲ್ಲದೆ ಪ್ರತಿಯೊಂದು ಸೀಸನ್‌ನಲ್ಲೂ ಸೊಳ್ಳೆಗಳ (mosquitoes) ಕಾಟ ಇದ್ದೇ ಇರುತ್ತದೆ. ಅದರಲ್ಲೂ ಸಂಜೆಯಾಗುತ್ತಿದ್ದಂತೆ ಇವುಗಳು ಮನೆಯೊಳಗೆ ಹಾವಳಿ ಇಡುತ್ತವೆ. ಇವುಗಳು ಕಚ್ಚಿದ್ರೆ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಬರುತ್ತವೆ. ಅಲ್ಲದೆ ಮನೆಯೊಳಗೆ ಬರುವ ಈ ಸೊಳ್ಳೆಗಳನ್ನು ನಿಯಂತ್ರಿಸಲು ಕಾಯಿಲ್, ಸ್ಪ್ರೇ ಅಂತೆಲ್ಲಾ ಉಪಯೋಗಿಸುತ್ತಾರೆ. ರಾಸಾಯನಿಕಯುಕ್ತವಾದ ಈ ಉತ್ಪನ್ನಗಳು ಕೂಡ ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ನಿಮ್ಮ ಮನೆಯಲ್ಲಿ ಈ ಕೆಲವೊಂದು ಗಿಡಗಳನ್ನು (Plants) ನೆಡುವ ಮೂಲಕ ನೈಸರ್ಗಿಕ ರೀತಿಯಲ್ಲಿ ಸೊಳ್ಳೆಗಳಿಂದ ಮುಕ್ತಿಯನ್ನು ಪಡೆಯಬಹುದು.
ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯಲ್ಲಿ ಈ ಗಿಡಗಳನ್ನು ನೆಡಿ:
ತುಳಸಿ ಗಿಡ: ಮನೆಯ ಸುತ್ತಲೂ ತುಳಸಿ ಗಿಡ ನೆಡುವ ಮೂಲಕ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬಹುದು. ಧಾರ್ಮಿಕ ಪ್ರಾಧಾನ್ಯತೆಯನ್ನು ಪಡೆದಿರುವ ತುಳಸಿ ಗಿಡ ಆರೋಗ್ಯಕ್ಕೂ ಪ್ರಯೋಜನಕಾರಿ. ಮಾತ್ರವಲ್ಲದೆ ಶುದ್ಧ ಗಾಳಿಯನ್ನೂ ನಮಗೆ ನೀಡುತ್ತದೆ. ಅಷ್ಟೇ ಯಾಕೆ ಸೊಳ್ಳೆಗಳ ಕಾಟದಿಂದಲೂ ಇವು ನಮ್ಮನ್ನು ರಕ್ಷಿಸುತ್ತದೆ.
ಚೆಂಡು ಹೂವಿನ ಗಿಡ: ಚೆಂಡು ಹೂವುಗಳು ನೋಡಲು ತುಂಬಾನೇ ಆಕರ್ಷಕವಾಗಿರುತ್ತವೆ. ಇವುಗಳನ್ನು ನೆಡುವ ಮೂಲಕ ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನೀವು ಸೊಳ್ಳೆಗಳ ಕಾಟವನ್ನು ಕೂಡಾ ನಿಯಂತ್ರಿಸಬಹುದು. ಹೌದು ಸೊಳ್ಳೆಗಳು ಚೆಂಡು ಹೂವುಗಳ ವಾಸನೆಯನ್ನು ಇಷ್ಟಪಡುವುದಿಲ್ಲ ಮತ್ತು ಅವುಗಳಿಂದ ದೂರವಿರಲು ಬಯಸುತ್ತವೆ. ಆದ್ದರಿಂದ, ನಿಮ್ಮ ಮನೆಯ ಬಳಿ ಈ ಗಿಡಗಳನ್ನು ನೆಡುವುದರಿಂದ ಸೊಳ್ಳೆಗಳನ್ನು ಸುಲಭವಾಗಿ ತೊಡೆದು ಹಾಕಬಹುದು.
ರೋಸ್ಮರಿ ಗಿಡ: ರೋಸ್ಮರಿ ಸಸ್ಯಗಳನ್ನು ನೈಸರ್ಗಿಕ ಸೊಳ್ಳೆ ನಿವಾರಕಗಳೆಂದು ಪರಿಗಣಿಸಲಾಗುತ್ತದೆ. ಆದರೆ ಸೊಳ್ಳೆಗಳು ಅದರ ಗಾಢವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಮತ್ತು ಇವುಗಳ ಹತ್ತಿರಕ್ಕೂ ಸುಳಿಯೊಲ್ಲ. ಹಾಗಿರುವಾಗ ಈ ಗಿಡಗಳನ್ನು ಮನೆಯ ಸುತ್ತಲೂ ನೆಡುವ ಮೂಲಕ ಸೊಳ್ಳೆಗಳ ಕಾಟದಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.
ಲೆಮನ್ ಗ್ರಾಸ್: ಲೆಮನ್ ಗ್ರಾಸ್ ಎಂಬ ಗಿಡಮೂಲಿಕಾ ಸಸ್ಯವು ಸಹ ಸೊಳ್ಳೆಗಳನ್ನು ದೂರವಿಡುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಹೌದು ಸೊಳ್ಳೆಗಳು ಈ ಸಸ್ಯದ ವಾಸನೆಯನ್ನು ಇಷ್ಟಪಡುವುದಿಲ್ಲ. ಇದರ ವಾಸನೆ ಅವುಗಳಿಗೆ ಕಿರಿಕಿರಿ ಉಂಟು ಮಾಡುತ್ತವೆ. ಹಾಗಿರುವಾಗ ನೀವು ಮನೆಯ ಮುಂಭಾಗದಲ್ಲಿ, ಬಾಲ್ಕನಿಯಲ್ಲಿ ಈ ಗಿಡವನ್ನು ನೆಟ್ಟರೆ, ಸೊಳ್ಳೆಗಳ ಕಾಟವನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: ಮದುವೆಗೆ ವಯಸ್ಸು ಮುಖ್ಯನಾ? ಮ್ಯಾರೇಜ್ ಆಗೋಕೆ ಪರ್ಫೆಕ್ಟ್ ಏಜ್ ಯಾವುದು? ಇಲ್ಲಿದೆ ಮಾಹಿತಿ
ಪುದೀನಾ ಗಿಡ: ಪುದೀನಾ ಎಲೆಗಳಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ ಅಲ್ವಾ. ಅದೇ ರೀತಿ ಈ ಪುದೀನಾ ಗಿಡಗಳನ್ನು ಮನೆಯಲ್ಲಿ ನೆಡುವ ಮೂಲಕ ಸೊಳ್ಳೆಗಳ ಕಾಟದಿಂದಲೂ ಮುಕ್ತಿ ಪಡೆಯಬಹುದು. ಈ ಸಸ್ಯದ ಸುವಾಸನೆಯು ಸೊಳ್ಳೆ, ಕೀಟ ಮತ್ತು ಜೇಡಗಳನ್ನು ದೂರವಿಡುತ್ತದೆ. ನೀವು ಬಯಸಿದರೆ, ಮನೆಯಲ್ಲಿ ಪುದೀನಾ ಎಣ್ಣೆಯನ್ನು ಸಹ ಸಿಂಪಡಿಸಬಹುದು.
ಲ್ಯಾವೆಂಡರ್ ಸಸ್ಯ: ಲ್ಯಾವೆಂಡರ್ ಸಾರಭೂತ ತೈಲವು ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದೇ ರೀತಿ ಲ್ಯಾವೆಂಡರ್ ಸಸ್ಯದ ಸುವಾಸನೆಯು ಸೊಳ್ಳೆಗಳನ್ನು ಓಡಿಸಲು ಕೂಡಾ ಸಹಕಾರಿಯಾಗಿದೆ. ನೀವು ಅಂಗಳ, ಬಾಲ್ಕನಿ ಅಥವಾ ಕಿಟಕಿ ಪಕ್ಕ ಲ್ಯಾವೆಂಡರ್ ಸಸ್ಯವನ್ನು ಇಡುವ ಮೂಲಕ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








