ಈ ಆಹಾರಗಳ ಸೇವನೆ ಮಾಡಿದರೆ ಮುಖದಲ್ಲಿ ಕಪ್ಪು ಕಲೆಗಳು ಬರುವುದು ಖಚಿತ
ನಮ್ಮ ಚರ್ಮವನ್ನು ಆರೋಗ್ಯವಾಗಿಡಲು, ಕೇವಲ ಕ್ರೀಮ್‌ಗಳನ್ನು ಹಚ್ಚುವುದು ಮಾತ್ರವಲ್ಲ ನಾವು ಸೇವಿಸುವ ಆಹಾರವು ನಮ್ಮ ಮುಖದ ಮೇಲೆ ತಕ್ಷಣದ ಪರಿಣಾಮ ಬೀರುವುದರಿಂದ ಒಳ್ಳೆಯ ಆಹಾರ ಸೇವನೆ ಮಾಡಬೇಕು. ಆ ಮೂಲಕ ಮೊಡವೆ, ಕಪ್ಪು ಕಲೆಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಹಾಗಾದರೆ ಯಾವ ರೀತಿಯ ಆಹಾರಗಳು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ನಮ್ಮ ಚರ್ಮ (Skin) ಆರೋಗ್ಯವಾಗಿ, ಕಾಂತಿಯುತವಾಗಿರಲು ಕೇವಲ ಕ್ರೀಮ್‌ಗಳನ್ನು ಹಚ್ಚಿದರೆ ಸಾಲುವುದಿಲ್ಲ. ನಾವು ಸೇವಿಸುವ ಆಹಾರ ಕೂಡ ಮುಖ್ಯವಾಗಿರುತ್ತದೆ. ಕೆಲವು ರೀತಿಯ ಆಹಾರವನ್ನು ಸೇವಿಸುವುದರಿಂದ ಮುಖದ ಮೇಲೆ ಮೊಡವೆ, ಕಪ್ಪು ಕಲೆಗಳು ಉಂಟಾಗಬಹುದು. ಹಾಗಾಗಿ ನಮ್ಮ ಆಹಾರದ ಸೇವನೆ ಚರ್ಮದ ಆರೋಗ್ಯ (Health) ಕಾಪಾಡಿಕೊಳ್ಳಲು ಬಹಳ ಮುಖ್ಯವಾಗುತ್ತದೆ. ಚರ್ಮ ಕಾಂತಿಯುತವಾಗಿ, ಸ್ವಚ್ಛವಾಗಿ, ಯಾವುದೇ ರೀತಿಯ ಕಲೆಗಳಿಲ್ಲದೆ (Clear Skin) ಇರಬೇಕು ಎಂದರೆ ನಾವು ಕೆಲವು ಆಹಾರಗಳನ್ನು ಕಷ್ಟವಾದರೂ ಕೂಡ ಬಿಡಬೇಕು. ಹಾಗಾದರೆ ಆ ಆಹಾರಗಳು (foods) ಯಾವುವು? ಯಾಕೆ ಅವುಗಳ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಸಿಹಿ ಆಹಾರ:
ಪ್ರತಿನಿತ್ಯ ಅತಿಯಾಗಿ ಸಿಹಿ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ. ಇದು ಹಾರ್ಮೋನುಗಳ ಸಮತೋಲನಕ್ಕೆ ಅಡ್ಡಿಯಾಗುತ್ತದೆ. ಈ ರೀತಿ ದೇಹದಲ್ಲಾಗುವ ಬದಲಾವಣೆಗಳು ಮುಖದ ಮೇಲೆ ಗೋಚರಿಸುತ್ತದೆ. ಕಪ್ಪು ಕಲೆ ಮತ್ತು ಮೊಡವೆಗಳಂತಹ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಸಿಹಿ ಪದಾರ್ಥಗಳನ್ನು ಮಿತವಾಗಿ ಸೇವಿಸುವುದು ಅವಶ್ಯಕ.
ಡೈರಿ ಉತ್ಪನ್ನ:
ಹಾಲು, ಮೊಸರು ಮತ್ತು ಚೀಸ್ ನಂತಹ ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟದಲ್ಲಿ ಬದಲಾವಣೆ ಉಂಟಾಗುತ್ತದೆ. ಇದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮುಖದ ಮೇಲೆ ಅಲ್ಲಲ್ಲಿ ಕಪ್ಪು ಕಲೆಗಳಾಗುತ್ತವೆ. ಆದ್ದರಿಂದ, ಅಗತ್ಯಕ್ಕಿಂತ ಹೆಚ್ಚು ಡೈರಿ ಆಹಾರವನ್ನು ಸೇವಿಸಬೇಡಿ.
ಕರಿದ ಆಹಾರ:
ಬರ್ಗರ್, ಪಿಜ್ಜಾ ಮತ್ತು ಹುರಿದ ಅಥವಾ ಕರಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ಏಕೆಂದರೆ ಇಂತಹ ಆಹಾರಗಳಲ್ಲಿ ಉತ್ತಮ ಪೋಷಕಾಂಶಗಳು ಇರುವುದಿಲ್ಲ. ಅವು ನಮ್ಮ ದೇಹದಲ್ಲಿ ಕೆಟ್ಟ ಪದಾರ್ಥಗಳ ಶೇಖರಣೆಗೆ ಕಾರಣವಾಗುತ್ತದೆ, ಇದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಚರ್ಮದ ಕಾಂತಿ ಕಡಿಮೆ ಆಗುತ್ತದೆ. ನಾನಾ ರೀತಿಯ ಚರ್ಮ ಸಂಬಂಧಿತ ಕಾಯಿಲೆಗಳು ಬರುತ್ತವೆ.
ಚಾಕೊಲೇಟ್:
ಕೆಲವರಿಗೆ ಚಾಕೊಲೇಟ್‌ಗಳು ತುಂಬಾ ಇಷ್ಟವಾಗಿರುತ್ತದೆ. ಆದರೆ ಇದನ್ನು ಅತಿಯಾಗಿ ಸೇವನೆ ಮಾಡಬೇಡಿ. ಏಕೆಂದರೆ ಇದು ಸಿಹಿಯಾಗಿರುತ್ತದೆ ಮಾತ್ರವಲ್ಲದೆ ಇದು ಡೈರಿ ಉತ್ಪನ್ನಗಳನ್ನು ಸಹ ಒಳಗೊಂಡಿರುತ್ತವೆ. ಈ ಎರಡು ಕಾರಣಗಳಿಂದ ಚಾಕೊಲೇಟ್ ಸೇವನೆಯನ್ನು ಮಿತಿಯಲ್ಲಿರಬೇಕು. ಇಲ್ಲವಾದಲ್ಲಿ ಮುಖದಲ್ಲಿ ಕಲೆಗಳು ಹೆಚ್ಚಾಗುತ್ತದೆ. ಒಣ ಚರ್ಮದಂತಹ ಸಮಸ್ಯೆ ಉಂಟಾಗುತ್ತದೆ.
ಬಾಳೆಹಣ್ಣು:
ಸಾಮಾನ್ಯವಾಗಿ ಬಾಳೆಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆಗಳು ಅತಿಯಾಗಿ ಸೇವಿಸಿದರೆ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು. ಇದು ಚರ್ಮದ ಮೇಲೂ ಪರಿಣಾಮ ಬೀರುತ್ತದೆ, ಕಲೆ ಮತ್ತು ಮೊಡವೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇವುಗಳನ್ನು ಕೂಡ ಅತಿಯಾಗಿ ಸೇವನೆ ಮಾಡಬಾರದು.
ಇದನ್ನೂ ಓದಿ: Eye Cancer: ಕಣ್ಣಿನ ಕ್ಯಾನ್ಸರ್ ಬಗ್ಗೆ ಕೇಳಿದ್ದೀರಾ? ಲಕ್ಷಣಗಳು ಹೇಗಿರುತ್ತವೆ ನೋಡಿ
ಕಾಫಿ ಸೇವನೆ:
ಪ್ರತಿದಿನ ಹೆಚ್ಚು ಕಾಫಿ ಕುಡಿಯುವುದರಿಂದ ದೇಹದಲ್ಲಿನ ಹಾರ್ಮೋನುಗಳು ಬದಲಾಗಬಹುದು. ಕಾಫಿಯಲ್ಲಿರುವ ಕೆಫೀನ್ ಮುಖದ ಮೇಲೆ ಕಲೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇಂತಹ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ ಮುಖವನ್ನು ಸುಂದರವಾಗಿ ಮತ್ತು ಆರೋಗ್ಯವಾಗಿಡಲು, ಒಳ್ಳೆಯ ಆಹಾರವನ್ನು ಸೇವನೆ ಮಾಡಬೇಕು. ಅತಿಯಾದ ಸಕ್ಕರೆ ಆಹಾರಗಳು, ಫಾಸ್ಟ್ ಫುಡ್ ಮತ್ತು ಡೈರಿ ಉತ್ಪನ್ನಗಳನ್ನು ತಪ್ಪಿಸುವುದರಿಂದ ಚರ್ಮ ಕಾಂತಿಯುತವಾಗುವುದಲ್ಲದೆ ಆರೋಗ್ಯವಾಗಿರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








