
ತ್ರಿವರ್ಣ ಧ್ವಜವು (National Flag) ಕೇವಲ ಧ್ವಜವಲ್ಲ, ಅದು ಭಾರತದ ಸ್ವಾತಂತ್ರ್ಯ, ಏಕತೆ, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಶೌರ್ಯ, ತ್ಯಾಗದ ಅಮರ ಸಂಕೇತವಾಗಿದೆ. ತ್ರಿವರ್ಣ ಧ್ವಜವನ್ನು ನೋಡಿದಾಗ ಪ್ರತಿಯೊಬ್ಬರ ಭಾರತೀಯರಲ್ಲೂ ದೇಶಭಕ್ತಿಯ ಭಾವನೆ ಜಾಗೃತಗೊಳ್ಳುತ್ತದೆ. ಭಾರತ ಮಾತೆಯನ್ನು ಸ್ವತಂತ್ರಗೊಳಿಸಲು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಹೋರಾಟ ಮತ್ತು ಬಲಿದಾನವನ್ನು ಇದು ನೆನಪಿಸುತ್ತದೆ. ತ್ರಿವರ್ಣ ಧ್ವಜವು ಆಕಾಶದೆತ್ತರ ಹಾರಿದಾಗಲೆಲ್ಲಾ, ಇದು ಭಾರತದ ಏಕತೆ, ಸಮಗ್ರತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವುದು ಅತ್ಯುನ್ನತವಾದುದು ಎಂಬ ಸಂದೇಶವನ್ನು ರವಾನಿಸುತ್ತದೆ. ತ್ರಿವರ್ಣ ಧ್ವಜದ ಈ ಮಹತ್ವ ಮತ್ತು ಭಾರತವು ಈ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಂಡ ದಿನವನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಜುಲೈ 22 ರಂದು ರಾಷ್ಟ್ರೀಯ ಧ್ವಜ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 15, 1947 ರಂದು ಬ್ರಿಟಿಷ್ ಆಳ್ವಿಕೆಯಿಂದ ದೇಶ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮೊದಲು, ಸಂವಿಧಾನ ಸಭೆಯು ಜುಲೈ 22, 1947 ರಂದು ಅಧೀಕೃತವಾಗಿ ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರೀಯ ಧ್ವಜವಾಗಿ ಅಂಗೀಕರಿಸಿತು. ಭಾರತದ ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಂಡದ್ದನ್ನು ಸ್ಮರಿಸುವ ಸಲುವಾಗಿ ನಮ್ಮ ದೇಶದಲ್ಲಿ ಪ್ರತಿವರ್ಷ ಜುಲೈ 22 ರಂದು ರಾಷ್ಟ್ರೀಯ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಮಾಹಿತಿಗಳ ಪ್ರಕಾರ, ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವದ ಸಂಕೇತವನ್ನು ಗೌರವಿಸುವ ಈ ದಿನವು ಹೆಚ್ಚಿನ ಮಹತ್ವವನ್ನು ಹೊಂದಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಚೆಸ್ ದಿನದ ಇತಿಹಾಸ, ಮಹತ್ವ ತಿಳಿಯಿರಿ
” ತಿರಂಗ ” ಎಂದು ಕರೆಯಲ್ಪಡುವ ಭಾರತ ರಾಷ್ಟ್ರ ಧ್ವಜವು ಸಮಾನ ಅಗಲದ ಮೂರು ಅಡ್ಡ ಪಟ್ಟೆಗಳನ್ನು ಹೊಂದಿದೆ. ಬಿಳಿ ಪಟ್ಟಿಯ ಮಧ್ಯದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಕಡು ನೀಲಿ ಅಶೋಕ ಚಕ್ರವಿದೆ. ಮತ್ತು ಈ ತ್ರಿವರ್ಣ ಧ್ವಜವು 2:3 ಅನುಪಾತದಲ್ಲಿವೆ. ಈ ವಿನ್ಯಾಸವು ಆಳವಾದ ಸಂಕೇತಗಳನ್ನು ಹೊಂದಿದ್ದು, ಭಾರತೀಯ ರಾಷ್ಟ್ರದ ಮೌಲ್ಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ತ್ರಿವರ್ಣ ಧ್ವಜದಲ್ಲಿರುವ ಕೇಸರಿ ಬಣ್ಣವು ಧೈರ್ಯ, ತ್ಯಾಗ ಮತ್ತು ರಾಷ್ಟ್ರದ ಮೇಲಿನ ಭಕ್ತಿಯನ್ನು ಸಂಕೇತಿಸುತ್ತದೆ. ಬಿಳಿ ಬಣ್ಣವು ಶಾಂತಿ, ಸತ್ಯವನ್ನು ಸಂಕೇತಿಸುತ್ತದೆ, ಮತ್ತು ಹಸಿರು ಬಣ್ಣವು ಸಮೃದ್ಧಿ, ಅಭಿವೃದ್ಧಿ ಮತ್ತು ಶುಭದ ಸಂಕೇತವಾಗಿದೆ. ಇನ್ನೂ ತ್ರಿವರ್ಣ ಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರವು ಧೈರ್ಯ, ತಾಳ್ಮೆ, ಸ್ವಯಂ ತ್ಯಾಗ, ಸತ್ಯತೆ, ಸದಾಚಾರ, ಪ್ರೀತಿ, ಆಧ್ಯಾತ್ಮಿಕ ಜ್ಞಾನ, ನೈತಿಕತೆ, ಕಲ್ಯಾಣ, ಉದ್ಯಮ, ಸಮೃದ್ಧಿ ಮತ್ತು ನಂಬಿಕೆಯಂತಹ ತತ್ವಗಳನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಶ್ರೋಕ ಚಕ್ರದ ಕಡ್ಡಿಗಳು ದಿನದ ಇಪ್ಪತ್ತನಾಲ್ಕು ಗಂಟೆಗಳನ್ನು ಪ್ರತಿನಿಧಿಸುವುದರಿಂದ ಇದನ್ನು ಸಮಯದ ಚಕ್ರ ಎಂದೂ ಸಹ ಕರೆಯಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 pm, Tue, 21 July 26