National Mathematics Day 2025: ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು ಗೊತ್ತಾ?

ಗಣಿತ ಕ್ಷೇತ್ರಕ್ಕೆ ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಕೊಡುಗೆ ಅಪಾರ. ಹಾಗಾಗಿ ಇವರ ಕೊಡುಗೆಗಳನ್ನು ಸ್ಮರಿಸಲು, ಸಾಧನೆಗಳನ್ನು ಗೌರವಿಸಲು ಹಾಗೂ ಗಣಿತದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಡಿಸೆಂಬರ್‌ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

National Mathematics Day 2025: ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು ಗೊತ್ತಾ?
ರಾಷ್ಟ್ರೀಯ ಗಣಿತ ದಿನ
Image Credit source: vecteezy

Updated on: Dec 22, 2025 | 10:12 AM

ಗಣಿತ (Mathematics) ಅಂದ್ರೆ ಅನೇಕರಿಗೆ ಕಬ್ಬಿಣದ ಕಡಲೆಕಾಯಿ. ಲೆಕ್ಕಗಳನ್ನು ಸರಿಯಾಗಿ ಮಾಡಲು ಸಿಕ್ಕಾಪಟ್ಟೆ ಒದ್ದಾಟ ನಡೆಸುತ್ತಾರೆ. ಇನ್ನೂ ಕೆಲವರಿಗೆ ಗಣಿತ ಅಂದ್ರೆ ಸಖತ್‌ ಇಷ್ಟ.  ನೀರು ಕುಡಿದಷ್ಟು ಈಸಿಯಾಗಿ ಲೆಕ್ಕವನ್ನು ಮಾಡ್ತಾರೆ. ಈ ಲೆಕ್ಕಾಚಾರ ಎನ್ನುವಂತದ್ದು ನಮ್ಮ ದೈನಂದಿನ ಬದುಕಿಗೆ ಬಹುಮುಖ್ಯ. ಹೀಗಾಗಿ ಗಣಿತದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್‌ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲು ಹಾಗೂ ಅವರ ಸಾಧನೆಗಳನ್ನು ಗೌರವಿಸಲು ಡಿಸೆಂಬರ್‌ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಗಣಿತ ದಿನದ ಇತಿಹಾಸವೇನು?

ಡಿಸೆಂಬರ್ 2011 ರಲ್ಲಿ, ಭಾರತ ಸರ್ಕಾರ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲು ನಿರ್ಧರಿಸಿತು. 2012 ರಲ್ಲಿ ಆಗಿನ ಪ್ರಧಾನಮಂತ್ರಿಯಾಗಿದ್ದ ಡಾ. ಮನಮೋಹನ್‌ ಸಿಂಗ್‌ ಅವರು ಡಿಸೆಂಬರ್‌ 22 ಅಂದರೆ ಶ್ರೀನಿವಾಸ್‌ ರಾಮಾನುಜನ್‌ ಅವರ ಜನ್ಮಜಯಂತಿಯನ್ನು ರಾಷ್ಟ್ರೀಯ ಗಣಿತ ದಿನವಾಗಿ ಆಚರಿಸಲು ಕರೆಕೊಟ್ಟರು. ಅಂದಿನಿಂದ ಪ್ರತಿವರ್ಷ ಡಿಸೆಂಬರ್‌ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಶ್ರೀನಿವಾಸ ರಾಮಾನುಜನ್ ಯಾರು?

ಶ್ರೀನಿವಾಸ ರಾಮಾನುಜನ್ ಒಬ್ಬ ಶ್ರೇಷ್ಠ ಭಾರತೀಯ ಗಣಿತಜ್ಞ. ಅವರು ಡಿಸೆಂಬರ್ 22, 1887 ರಂದು ತಮಿಳುನಾಡಿನಲ್ಲಿ ಜನಿಸಿದರು. ಇವರ ಕಲಿಕೆ ಮತ್ತು ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗಲಿಲ್ಲ. ಬದಲಾಗಿ ಇವರಿಗಿದ್ದ ಗಣಿತದ ಮೇಲಿನ ಪ್ರೀತಿ ಇವರ ಉನ್ನತ ಸಾಧನೆಗೆ ಮೆಟ್ಟಿಲಾಯಿತು. ಮತ್ತು ಗಣಿತ ಕ್ಷೇತ್ರದಲ್ಲಿ ಸಾಕಷ್ಟು  ಪ್ರಗತಿ ಸಾಧಿಸಿದರು. ರಾಮಾನುಜನ್ ಅನೇಕ ಸಂಕೀರ್ಣ ಗಣಿತ ವಿಷಯಗಳ ಮೇಲೆ ಕೆಲಸ ಮಾಡಿದರು. ಅವರು ಸಂಖ್ಯಾ ಸಿದ್ಧಾಂತ, ಅನಂತ ಸರಣಿಗಳಂತಹ ವಿಷಯಗಳಲ್ಲಿ ಹೊಸ ಸೂತ್ರಗಳನ್ನು ಪರಿಚಯಿಸಿದರು. ಅವರು ಸರಿಸುಮಾರು 3,900 ಸೂತ್ರಗಳು ಮತ್ತು ಫಲಿತಾಂಶಗಳನ್ನು ಪ್ರಸ್ತುತಪಡಿಸಿದರು. ಇಂದಿಗೂ ರಾಮಾನುಜನ್‌ ಅವರನ್ನು ಸಾರ್ವಕಾಲಿಕ ಭಾರತದ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ನೀರೆಯರ ಮನಗೆದ್ದ ಸೀರೆಗೂ ಒಂದು ದಿನ; ಆಚರಣೆಯ ಮಹತ್ವವನ್ನು ತಿಳಿಯಿರಿ

ರಾಷ್ಟ್ರೀಯ ಗಣಿತ ದಿನದ ಆಚರಣೆಯ ಉದ್ದೇಶವೇನು?

  • ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುವ ಉದ್ದೇಶವು ಜನರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಗಣಿತದ ಮಹತ್ವದ ಬಗ್ಗೆ ಶಿಕ್ಷಣ ನೀಡುವುದಾಗಿದೆ.
  • ಗಣಿತದಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸುವುದು, ಸಂಶೋಧನೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುವುದು ಈ ದಿನದ ಉದ್ದೇಶವಾಗಿದೆ.
  • ಈ ದಿನದಂದು ರಾಮಾನುಜನ್ ಅವರ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ. ದೇಶಾದ್ಯಂತ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಮಕ್ಕಳಿಗೆ ಗಣಿತವನ್ನು ಕಲಿಯಲು ಪ್ರೇರೇಪಿಸಲು ಗಣಿತ ಸಂಬಂಧಿತ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ