National Science Day 2026: ಫೆಬ್ರವರಿ 28 ರಂದೇ ಏಕೆ ವಿಜ್ಞಾನ ದಿನವನ್ನು ಆಚರಿಸುವುದು? ಇದರ ಹಿನ್ನೆಲೆಯನ್ನು ತಿಳಿಯಿರಿ

ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿ ವರ್ಷ ಫೆಬ್ರವರಿ 28 ರಂದು ಆಚರಿಸಲಾಗುತ್ತದೆ. ಶ್ರೇಷ್ಠ ವಿಜ್ಞಾನಿ ಸಿ.ವಿ. ರಾಮನ್‌ ಅವರ ರಾಮನ್‌ ಪರಿಣಾಮ ಆವಿಷ್ಕಾರದ ಸ್ಮರಣಾರ್ಥವಾಗಿ ಆಚರಿಸಲಾಗುವ ಈ ದಿನವು ದೇಶದಲ್ಲಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದು, ವೈಜ್ಞಾನಿಕ ಚಿಂತನೆಯನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು, ಇದರ ಮಹತ್ವವೇನು ಎಂಬುದನ್ನು ತಿಳಿಯೋಣ ಬನ್ನಿ.

National Science Day 2026: ಫೆಬ್ರವರಿ 28 ರಂದೇ ಏಕೆ ವಿಜ್ಞಾನ ದಿನವನ್ನು ಆಚರಿಸುವುದು? ಇದರ ಹಿನ್ನೆಲೆಯನ್ನು ತಿಳಿಯಿರಿ
ರಾಷ್ಟ್ರೀಯ ವಿಜ್ಞಾನ ದಿನ
Image Credit source: Freepik

Updated on: Feb 28, 2026 | 10:05 AM

ಭಾರತೀಯ ಇತಿಹಾಸದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವು (Science Day) ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಈ ದಿನವನ್ನು ಭಾರತೀಯ ವಿಜ್ಞಾನಿ ಸಿ.ವಿ. ರಾಮನ್ ಅವರ ಆವಿಷ್ಕಾರವಾದ ರಾಮನ್ ಪರಿಣಾಮದ ಗೌರವಾರ್ಥವಾಗಿ ಆಚರಿಸಲಾಗುತ್ತದೆ. 1928 ರ ಫೆಬ್ರವರಿ 28 ರಂದು ಸಿ.ವಿ. ರಾಮನ್ ಅವರು ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರದಲ್ಲಿ ಪ್ರಮುಖ ಆವಿಷ್ಕಾರವನ್ನು ಮಾಡಿ ರಾಮನ್ ಪರಿಣಾಮವನ್ನು ಕಂಡುಹಿಡಿದರು. ಈ ಕಾರಣಕ್ಕಾಗಿಯೇ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ದೇಶದಲ್ಲಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದು, ವೈಜ್ಞಾನಿಕ ಚಿಂತನೆಯನ್ನು ಪ್ರೋತ್ಸಾಹಿಸುವುದು ಮತ್ತು ಭಾರತೀಯ ವಿಜ್ಞಾನಿಗಳ ಕೊಡುಗೆಗಳನ್ನು ಗೌರವಿಸುವುದು ಈ ದಿನದ ಮುಖ್ಯ  ಉದ್ದೇಶವಾಗಿದೆ. ವಿಜ್ಞಾನ ಕ್ಷೇತ್ರದ ಈ ವಿಶೇಷ ದಿನದ ಇತಿಹಾಸ, ಮಹತ್ವವನ್ನು ತಿಳಿಯಿರಿ.

ರಾಷ್ಟ್ರೀಯ ವಿಜ್ಞಾನ ದಿನವನ್ನು ಏಕೆ ಆಚರಿಸಲಾಗುತ್ತದೆ?

ಭಾರತದಲ್ಲಿ, ಈ ದಿನವನ್ನು ವಿಶೇಷವಾಗಿ ಸಿ.ವಿ. ರಾಮನ್ ಅವರ “ರಾಮನ್ ಪರಿಣಾಮ”ದ ಹೆಗ್ಗುರುತು ಆವಿಷ್ಕಾರದ ಸ್ಮರಣಾರ್ಥ ಆಚರಿಸಲಾಗುತ್ತದೆ. ಫೆಬ್ರವರಿ 28, 1928 ರಂದು, ಅವರು ಬೆಳಕಿನ ವರ್ತನೆಯ ತಿಳುವಳಿಕೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ರಾಮನ್‌ ಪರಿಣಾಮವನ್ನು ಆವಿಷ್ಕಾರ ಮಾಡಿದರು. ರಾಮನ್ ಪರಿಣಾಮವು ಬೆಳಕಿನ ಚದುರುವಿಕೆಯ ಒಂದು ವಿದ್ಯಮಾನವಾಗಿದ್ದು, ಇದರಲ್ಲಿ ಬೆಳಕು ಪಾರದರ್ಶಕ ವಸ್ತುವಿನ ಮೂಲಕ (ಘನ, ದ್ರವ ಅಥವಾ ಅನಿಲ) ಹಾದುಹೋದಾಗ, ಅದರ ತರಂಗಾಂತರ ಮತ್ತು ಆವರ್ತನ ಬದಲಾಗುತ್ತದೆ.

ರಾಷ್ಟ್ರೀಯ ವಿಜ್ಞಾನ ದಿನದ ಇತಿಹಾಸವೇನು?

1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಂಮ್ಯುನಿಕೇಷನ್ನ್ ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 28 ರಂದು ಆಚರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತ್ತು. ಆ ಬಳಿಕ ಎನ್‌ಸಿಎಸ್‌ಟಿಸಿ’ಯ ಈ ಮನವಿಯನ್ನು ಒಪ್ಪಿದ ಅಂದಿನ ಸರ್ಕಾರವು  ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ದೇಶದಾದ್ಯಂತ ಆಚರಿಸುವಂತೆ ಘೋಷಣೆಯನ್ನು ಮಾಡಿತು. ತದನಂತರದಲ್ಲಿ ಮೊದಲ ಬಾರಿಗೆ 1987 ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಅಂದಿನಿಂದ ವಿಜ್ಞಾನ ಮತ್ತು ನಾವೀನ್ಯತೆಗೆ ದೇಶದ ಕೊಡುಗೆಗಳನ್ನು ಸ್ಮರಿಸಲು ಮತ್ತು ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ವಿಶ್ವ ಎನ್‌ಜಿಒ ದಿನವನ್ನು ಆಚರಿಸುವುದೇಕೆ ಗೊತ್ತಾ? ಇದರ ಹಿನ್ನೆಲೆಯನ್ನು ತಿಳಿಯಿರಿ

ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವವೇನು?

  • ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಜನರಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವುದು ಮತ್ತು ವಿಜ್ಞಾನದ ಮಹತ್ವವನ್ನು ಅವರಿಗೆ ಅರ್ಥಮಾಡಿಸುವುದು.
  • ಈ ದಿನವು ಭಾರತೀಯ ವಿಜ್ಞಾನಿಗಳನ್ನು ಮತ್ತು ಅವರ ಕೊಡುಗೆಗಳನ್ನು ಗೌರವಿಸಲು ಒಂದು ಅವಕಾಶವನ್ನು ಒದಗಿಸುತ್ತದೆ.
  • ಈ ದಿನವು ವಿಜ್ಞಾನಿಗಳ ಸಾಧನೆಗಳನ್ನು ನೆನಪಿಸಿಕೊಳ್ಳುವ ಸಂದರ್ಭ ಮಾತ್ರವಲ್ಲದೆ, ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಮತ್ತಷ್ಟು ಪ್ರಗತಿಗೆ ಪ್ರೇರಣೆ ನೀಡುವ ಸಂದರ್ಭವಾಗಿದೆ.
  • ಈ ದಿನವು ಯುವಜನರನ್ನು ವಿಜ್ಞಾನದತ್ತ ಆಕರ್ಷಿಸಲು ಮತ್ತು ಭವಿಷ್ಯದ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us