Navaratri 2024: ನವರಾತ್ರಿಯ ಏಳನೇ ದಿನ ಕ್ಯಾರೆಟ್ ಪಾಯಸ ತಯಾರಿಸಿ ದೇವಿಗೆ ಅರ್ಪಿಸಿ, ಸುಲಭ ಪಾಕವಿಧಾನ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 09, 2024 | 10:04 AM

ಹಬ್ಬ ಎಂದ ಮೇಲೆ ಸಿಹಿ ತಿಂಡಿಗಳು ಇಲ್ಲದಿದ್ದರೆ ಹೇಗೆ ಅಲ್ಲವೇ. ಹೀಗಾಗಿ ಹಬ್ಬಹರಿದಿನಗಳಲ್ಲಿ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಮಾಡಲಾಗುತ್ತದೆ. ಆದರೆ ನವರಾತ್ರಿಗೆ ನೈವೇದ್ಯವಿಡಲು ಕ್ಯಾರೆಟ್ ಪಾಯಸ ಅಥವಾ ಕ್ಯಾರೆಟ್ ಖೀರ್ ಮಾಡಬಹುದು. ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಪೋಷಣೆ ನೀಡುವ ಇದು ಸಿಹಿಯಡುಗೆಯಾಗಿದ್ದು, ಕೆಲವು ಕೆಲವು ಐಟಂಗಳಿದ್ದರೆ ಸಾಕು. ಬಹಳ ಸುಲಭ ಹಾಗೂ ಸರಳ ವಿಧಾನಗಳನ್ನು ಒಳಗೊಂಡಿರುವ ಈ ಕ್ಯಾರೆಟ್ ಪಾಯಸ ಪಾಕವಿಧಾನವನ್ನು ಮನೆಯಲ್ಲಿ ಪ್ರಯತ್ನಿಸಬಹುದು.

ಹಿಂದೂಗಳ ಪಾಲಿಗೆ ನವರಾತ್ರಿ ಎಂದರೆ ಬಹಳ ವಿಶೇಷ. ನವರಾತ್ರಿ ಸಮಯದಲ್ಲಿ ಹಬ್ಬದಡುಗೆ ಸರ್ವೇ ಸಾಮಾನ್ಯ. ಸರಿಸುಮಾರು ಒಂಬತ್ತು ದಿನಗಳ ಕಾಲ ಮನೆಯಲ್ಲಿ ವಿಶೇಷವಾದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಅದಲ್ಲದೇ ವಿವಿಧ ಖಾದ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯವಾಗಿ ಇಡಲಾಗುತ್ತದೆ. ಸಾಮಾನ್ಯವಾಗಿ ಲಡ್ಡು, ಪಾಯಸ, ಹೋಳಿಗೆ ಈ ರೀತಿಯ ಅಡುಗೆಯನ್ನು ಎಲ್ಲರೂ ಮಾಡುತ್ತಾರೆ. ಆದರೆ ಏಳನೇ ದಿನ ದೇವಿಗೆ ನೈವೇದ್ಯ ಅರ್ಪಿಸಲು ಕ್ಯಾರೆಟ್ ಪಾಯಸವನ್ನು ಮಾಡಬಹುದು. ಇದನ್ನು ಒಮ್ಮೆ ಸವಿದರೆ ಮನಸ್ಸು ಮತ್ತು ನಾಲಿಗೆ ಮತ್ತೆ ಮತ್ತೆ ತಿನ್ನಲು ಬಯಸದೇ ಇರಲಾರಿರಿ. ಹಾಗಾದ್ರೆ ಈ ರೆಸಿಪಿಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಕ್ಯಾರೆಟ್ ಪಾಯಸ ಮಾಡಲು ಬೇಕಾಗುವ ಸಾಮಾಗ್ರಿಗಳು

* ಅರ್ಧ ಲೀಟರ್ ಗಟ್ಟಿ ಹಾಲು

* ಮೂರು ನಾಲ್ಕು ದೊಡ್ಡ ಗಾತ್ರದ ಕ್ಯಾರೆಟ್

* ಗೋಡಂಬಿ

* ಅರ್ಧ ಚಮಚ ಏಲಕ್ಕಿ ಪುಡಿ

* ಚಮಚ ತುಪ್ಪ

* ಸಕ್ಕರೆ

* ಮಿಲ್ಕ್ ಮೇಡ್

ಕ್ಯಾರೆಟ್ ಪಾಯಸ ಮಾಡುವ ವಿಧಾನ

* ಮೊದಲಿಗೆ ಬಾಣಲೆಗೆ ತುಪ್ಪ ಹಾಕಿ ಗೋಡಂಬಿ ಹಾಕಿ ಕಂದು ಬಣ್ಣ ಬರುವಂತೆ ಹುರಿದುಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ.

* ಆ ಬಳಿಕ ಕ್ಯಾರೆಟನ್ನು ಸಣ್ಣಗೆ ಹೋಳುಗಳಾಗಿ ಕತ್ತರಿಸಿಕೊಳ್ಳಿ. ಒಂದು ಬಾಣಲೆಗೆ ತುಪ್ಪ ಹಾಕಿ ಕತ್ತರಿಸಿಕೊಂಡ ಕ್ಯಾರೆಟನ್ನು ಫ್ರೈ ಮಾಡಿಕೊಳ್ಳಿ.

* ಇದಕ್ಕೆ ಗಟ್ಟಿ ಹಾಲು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ತಣ್ಣಗಾದ ಬಳಿಕ ಮಿಕ್ಸಿಗೆ ಈ ಮಿಶ್ರಣದೊಂದಿಗೆ ಏಲಕ್ಕಿ ಹಾಗೂ ಸಕ್ಕರೆಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

* ಬಾಣಲೆಗೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ, ಇದಕ್ಕೆ ಅರ್ಧ ಕಪ್ ನಷ್ಟು ಗಟ್ಟಿ ಹಾಲು, ಮಿಲ್ಕ್ ಮೇಡ್ ಹಾಗೂ ಬೇಕಿದ್ದರೆ ಸಕ್ಕರೆ ಹಾಕಿ ಕುದಿಸಿಕೊಳ್ಳಿ.

* ಆ ಬಳಿಕ ಗೋಡಂಬಿ ಹಾಕಿದರೆ ರುಚಿಕರವಾದ ಕ್ಯಾರೆಟ್ ಪಾಯಸ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ