ಬ್ಲ್ಯಾಕ್ ಹೆಡ್ಸ್ ಸಮಸ್ಯೆ ನಿವಾರಣೆ ಹೇಗೆ? ಇಲ್ಲಿದೆ ಸರಳ ಮನೆಮದ್ದು

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 11, 2024 | 2:34 PM

ಅತಿಯಾದ ಬೆವರು ನಿಮ್ಮ ಚರ್ಮದ ಮೇಲಿನ ರಂಧ್ರಗಳನ್ನು ಮುಚ್ಚಿ ಬ್ಲ್ಯಾಕ್‌ಹೆಡ್ಸ್ ಗೆ ಕಾರಣವಾಗಬಹುದು. ಆರೋಗ್ಯ ಸಮಸ್ಯೆ, ಒತ್ತಡ, ಪಿಸಿಓಎಸ್, ಪಿಎಂಎಸ್ ಸಹ ಬ್ಲ್ಯಾಕ್ ಹೆಡ್ಸ್ ಮತ್ತು ಮೊಡವೆ ಬರಲು ಕಾರಣವಾಗಬಹುದು. ಹಾಗಾಗಿ ಇದರಿಂದ ಮುಕ್ತಿ ಪಡೆಯಲು ಒಂದು ಸುಲಭ ಮನೆಮದ್ದನ್ನು ಟ್ರೈ ಮಾಡಬಹುದು.

ಬ್ಲ್ಯಾಕ್ ಹೆಡ್ಸ್ ಸಮಸ್ಯೆ ನಿವಾರಣೆ ಹೇಗೆ? ಇಲ್ಲಿದೆ ಸರಳ ಮನೆಮದ್ದು
Follow us on

ಬ್ಲ್ಯಾಕ್ ಹೆಡ್ಸ್ ನಿವಾರಣೆ ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದೀರಾ? ಇದಕ್ಕೆ ಔಷಧ ಹುಡುಕುವ ಮೊದಲು ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಕಪ್ಪು ಚುಕ್ಕೆಯ ತರಹ, ಇನ್ನು ಕೆಲವರಲ್ಲಿ ಮುಳ್ಳು ಚುಚ್ಚಿದ ತರಹ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಇದು ಮೂಗಿನ ಮೇಲೆ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಹಣೆ ಮತ್ತು ಗಲ್ಲದ ಮೇಲೆಯೂ ಕಂಡು ಬರಬಹುದು. ಮುಟ್ಟಿನಿಂದ ಉಂಟಾಗುವ ಹಾರ್ಮೋನುಗಳ ಬದಲಾವಣೆ, ಗರ್ಭಧಾರಣೆ ಮತ್ತು ಜನನ ನಿಯಂತ್ರಣ ಮಾತ್ರೆಗಳ ಬಳಕೆ ಬ್ಲ್ಯಾಕ್‌ಹೆಡ್ಸ್ ಗೆ ಕಾರಣವಾಗಬಹುದು. ಜೊತೆಗೆ ಸೌಂದರ್ಯವರ್ಧಕಗಳನ್ನು ಬಳಸುವುದು, ಅತಿಯಾದ ಬೆವರು ನಿಮ್ಮ ಚರ್ಮದ ಮೇಲಿನ ರಂಧ್ರಗಳನ್ನು ಮುಚ್ಚಿ ಕೂಡ ಬ್ಲ್ಯಾಕ್‌ಹೆಡ್ಸ್ ಗೆ ದಾರಿ ಮಾಡಿಕೊಡುತ್ತವೆ. ಆರೋಗ್ಯ ಸಮಸ್ಯೆ, ಒತ್ತಡ, ಪಿಸಿಓಎಸ್, ಪಿಎಂಎಸ್ ಸಹ ಬ್ಲ್ಯಾಕ್ ಹೆಡ್ಸ್ ಮತ್ತು ಮೊಡವೆ ಬರಲು ಕಾರಣವಾಗಬಹುದು. ಹಾಗಾಗಿ ಇದರಿಂದ ಮುಕ್ತಿ ಪಡೆಯಲು ಒಂದು ಸುಲಭ ಮನೆಮದ್ದನ್ನು ಟ್ರೈ ಮಾಡಬಹುದು. ಕೊತ್ತಂಬರಿ ಸೊಪ್ಪು ಮತ್ತು ಅರಿಶಿನ ಪುಡಿಯಿಂದ ಮಾಡಿದ ಫೇಸ್ ಪ್ಯಾಕ್ ನಿಮಗೆ ಇದರಿಂದ ಮುಕ್ತಿ ನೀಡುವುದರಲ್ಲಿ ಸಂಶಯವಿಲ್ಲ.

ಬ್ಲ್ಯಾಕ್ ಹೆಡ್ಸ್ ತೆಗೆಯಲು ಕೊತ್ತಂಬರಿ ಮತ್ತು ಅರಿಶಿನವನ್ನು ಹೇಗೆ ಬಳಸುವುದು?

ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ ಕೊತ್ತಂಬರಿ ಮತ್ತು ಅರಿಶಿನ ಎರಡು ಜನಪ್ರಿಯವಾಗಿವೆ. ಅರಿಶಿನವು ಉರಿಯೂತ ನಿವಾರಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದರೆ, ಕೊತ್ತಂಬರಿ ಶುದ್ಧೀಕರಣ ಗುಣಗಳನ್ನು ಹೊಂದಿದ್ದು ಇವು ಬ್ಯಾಕ್ಟೀರಿಯಾ ಕಡಿಮೆ ಮಾಡಲು ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಕೊತ್ತಂಬರಿ ಸೊಪ್ಪು ಮತ್ತು ಅರಿಶಿನ ಪುಡಿಯನ್ನು ಮಿಶ್ರಣ ಮಾಡುವ ಮೂಲಕ ನೀವು ಫೇಸ್ ಪ್ಯಾಕ್ ತಯಾರಿಸಬಹುದು.

• ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಅದಕ್ಕೆ ಎರಡು ಟೀ ಚಮಚ ಅರಿಶಿನ ಪುಡಿಯನ್ನು ಸೇರಿಸಿ.

• ಅದಕ್ಕೆ ಸ್ವಲ್ಪ ನೀರು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.

• ಮಲಗುವ ಮುನ್ನ ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ, ವಿಶೇಷವಾಗಿ ಗಲ್ಲ, ಮೂಗು ಮತ್ತು ಹಣೆಗೆ ಹಚ್ಚಿಕೊಳ್ಳಿ.

• ಮರುದಿನ ಬೆಳಿಗ್ಗೆ ಎದ್ದ ನಂತರ ನೀರಿನಿಂದ ತೊಳೆಯಿರಿ.

ಈ ಮನೆಮದ್ದನ್ನು ಬಳಸುವುದನ್ನು ಯಾರು ತಪ್ಪಿಸಬೇಕು?

ಕೊತ್ತಂಬರಿ ಅಥವಾ ಅರಿಶಿನದಿಂದ ಅಲರ್ಜಿ ಇರುವವರು ಈ ಪ್ಯಾಕ್ ಬಳಸುವುದನ್ನು ತಪ್ಪಿಸಬೇಕು. ಯಾರೇ ಆಗಲಿ ಈ ಮಿಶ್ರಣವನ್ನು ಇಡೀ ಮುಖಕ್ಕೆ ಅನ್ವಯಿಸುವ ಮೊದಲು ಪ್ಯಾಚ್ ಟೆಸ್ಟ್ ಮಾಡಿಕೊಳ್ಳಿ, ಏಕೆಂದರೆ ಈ ಪದಾರ್ಥಗಳು ಕೆಲವು ಸಂದರ್ಭಗಳಲ್ಲಿ ಕೆಲವರಿಗೆ ಕಿರಿಕಿರಿ ಉಂಟು ಮಾಡಬಹುದು.

ಇದನ್ನೂ ಓದಿ:ಬ್ಲ್ಯಾಕ್ ಹೆಡ್ಸ್​ಗೆ ಇಲ್ಲಿದೆ ಮನೆಮದ್ದು.

ಬ್ಲ್ಯಾಕ್ ಹೆಡ್ಸ್ ನಿವಾರಿಸಲು ಇತರ ನೈಸರ್ಗಿಕ ಮಾರ್ಗಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ:

1. ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ ನಂತರ ನಿಮ್ಮ ಚರ್ಮಕ್ಕೆ ನಿಧಾನವಾಗಿ ಹಚ್ಚಿಕೊಳ್ಳಿ. ಇದು ಬ್ಲ್ಯಾಕ್ ಹೆಡ್ಸ್ ಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮದಲ್ಲಿನ ಪಿಎಚ್ ಮಟ್ಟವನ್ನು ತಟಸ್ಥಗೊಳಿಸುತ್ತದೆ ಈ ಮೂಲಕ ಅವು ಮತ್ತೆ ಕಾಣಿಸಿಕೊಳ್ಳುವುದನ್ನು ತಡೆಯುತ್ತದೆ.

2. ಜೇನುತುಪ್ಪ ಮತ್ತು ದಾಲ್ಚಿನ್ನಿ: ಜೇನುತುಪ್ಪ ಮತ್ತು ದಾಲ್ಚಿನ್ನಿಯ ಮಿಶ್ರಣವನ್ನು ಫೇಸ್ ಮಾಸ್ಕ್ ಆಗಿ ಅನ್ವಯಿಸಬಹುದು ಎಂದು ಡಾ. ಸೌರವ್ ಸಲಹೆ ನೀಡುತ್ತಾರೆ. ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿಯಾಗಿದೆ, ಮತ್ತು ದಾಲ್ಚಿನ್ನಿ ನಂಜು ನಿರೋಧಕವಾಗಿದ್ದು, ಇದು ಬ್ಲ್ಯಾಕ್ ಹೆಡ್ಸ್ ತಡೆಗಟ್ಟಲು ಸಹಾಯ ಮಾಡಲು ಮತ್ತು ನಿಮ್ಮ ಚರ್ಮದ ಮೇಲಿನ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಓಟ್ ಮೀಲ್ ಮತ್ತು ಮೊಸರು: ಓಟ್ ಮೀಲ್ ಮತ್ತು ಮೊಸರನ್ನು ಬೆರೆಸಿ ಸ್ಕ್ರಬ್ ತಯಾರಿಸಿ. ಇದು ನಿಮ್ಮ ಚರ್ಮದ ರಂಧ್ರಗಳಿಂದ ಕೊಳೆ ಮತ್ತು ಕಲ್ಮಶಗಳನ್ನು ತೆಗೆದು ಶುದ್ಧೀಕರಿಸುತ್ತದೆ. ಮತ್ತೊಂದೆಡೆ, ಮೊಸರು ಚರ್ಮದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.

ನೆನಪಿಡಿ, ಮನೆಮದ್ದುಗಳ ಬಗ್ಗೆ ಜಾಗರೂಕರಾಗಿರುವುದು ಉತ್ತಮ ಮತ್ತು ಯಾವುದೇ ಕಿರಿಕಿರಿ ಉಂಟಾದರೆ ಬಳಕೆಯನ್ನು ನಿಲ್ಲಿಸುವುದು ಮುಖ್ಯವಾಗುತ್ತದೆ. ನಿಮ್ಮ ಮುಖದಲ್ಲಿ ಬ್ಲ್ಯಾಕ್ ಹೆಡ್ಸ್ ಉಲ್ಬಣಗೊಂಡಿದ್ದರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ