
ಹೊಸ ಭರವಸೆ, ಕನಸುಗಳೊಂದಿಗೆ ಎಲ್ಲರೂ ಹೊಸ ವರ್ಷವನ್ನು ಸ್ವಾಗತಿಸಲು ಭರದಿಂದ ತಯಾರಿ ನಡೆಸುತ್ತಿದ್ದಾರೆ. ಮುಂಬರುವ ವರ್ಷವು ಉತ್ತಮವಾಗಿ, ಸಕಾರಾತ್ಮಕವಾಗಿ, ಸಂತೋಷದಿಂದ ತುಂಬಿರಬೇಕೆಂದು ಒಂದಷ್ಟು ಹಲವು ಒಂದಷ್ಟು ರೆಸೆಲ್ಯೂಷನ್‌ಗಳನ್ನು (resolutions) ಸಹ ಮಾಡುತ್ತಾರೆ. ಆದರೆ ಇಂದಿನ ಒತ್ತಡದ ಜೀವನಶೈಲಿಯ ಕಾರಣದಿಂದಾಗಿ ಆರೋಗ್ಯಕರ ಆಹಾರ ಸೇವನೆ ಮಾಡುವುದು, ಆರೋಗ್ಯಕರ ಜೀವನಶೈಲಿಯನ್ನು ನಡೆಸುವುದು ಸೇರಿದಂತೆ ಒಟ್ಟಾರೆ ಆರೋಗ್ಯದ ಕಾಳಜಿ ವಹಿಸುವುದಿಲ್ಲ. ಹೀಗಿರುವಾಗ ಮುಂದಿನ ವರ್ಷದಿಂದ ಒತ್ತಡ ಮುಕ್ತ, ಕಾಯಿಲೆ ಮುಕ್ತವಾಗಿ ಫಿಟ್ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಂಕಲ್ಪಗಳನ್ನು ಕೈಗೊಳ್ಳಿ. ಆರೋಗ್ಯವನ್ನು ಸುಧಾರಿಸುವ ಆ ಸಂಕಲ್ಪಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಪ್ರತಿದಿನ ವ್ಯಾಯಾಮ ಮಾಡುವುದು: ನೀವು ಜಿಮ್‌ಗೆ ಹೋಗಿಯೇ ವ್ಯಾಯಾಮ ಮಾಡಬೇಕೆಂದಿಲ್ಲ. ನಿಮಗಾಗಿ ಪ್ರತಿದಿನ 30 ನಿಮಿಷಗಳು ಮೀಸಲಿಟ್ಟು ಮನೆಯಲ್ಲಿಯೇ ದೈಹಿಕ ಚಟುವಟಿಕೆಗಳನ್ನು ಮಾಡಿದರೆ ಸಾಕು. ನೀವು ವಾಕಿಂಗ್, ಯೋಗ, ಸೈಕ್ಲಿಂಗ್, ನೃತ್ಯ ಅಥವಾ ಲಘು ಸ್ಟ್ರೆಚಿಂಗ್ ಇತ್ಯಾದಿಗಳನ್ನು ಮಾಡಬಹುದು. ಈ ದೈಹಿಕಚಟುವಟಿಕೆಗಳು ತೂಕವನ್ನು ನಿಯಂತ್ರಿಸಲು, ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಮಾತ್ರವಲ್ಲ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸಮತೋಲಿತ ಮತ್ತು ಆರೋಗ್ಯಕರ ಆಹಾರ ಸೇವನೆ: ಸಮತೋಲಿತ ಆಹಾರ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನೀವು ನಿಯಮಿತವಾಗಿ ಜಂಕ್ ಫುಡ್ ಮತ್ತು ಹೊರಗಡೆಯ ಅನಾರೋಗ್ಯಕರ ಆಹಾರವನ್ನು ಸೇವನೆ ಮಾಡುತ್ತಿದ್ದರೆ ಮುಂದಿನ ವರ್ಷ ಅದನ್ನು ತ್ಯಜಿಸುವ ಮತ್ತು ಕೇವಲ ಆರೋಗ್ಯಕರ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸುವ ಸಂಕಲ್ಪ ಕೈಗೊಳ್ಳಿ. ಹಣ್ಣುಗಳು, ತರಕಾರಿಗಳು ಮತ್ತು ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವ ಸಾಕಷ್ಟು ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.
ನಿದ್ರೆಗೆ ಆದ್ಯತೆ ನೀಡಿ: ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ, ಜನರು ನಿದ್ರೆ ಮಾಡದೆ ತಡರಾತ್ರಿಯವರೆಗೆ ತಮ್ಮ ಫೋನ್‌ಗಳಲ್ಲಿಯೇ ಇರುತ್ತಾರೆ. ಈ ನಿದ್ರೆಯ ಕೊರತೆಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಒತ್ತಡವು ಹೆಚ್ಚಾಗಿ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ ಹಾಗಾಗಿ ಈ ಬಾರಿಯ ನಿಮ್ಮ ಹೊಸ ವರ್ಷದ ಸಂಕಲ್ಪದಲ್ಲಿ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವ ಅಭ್ಯಾಸವನ್ನು ಸೇರಿಸಿಕೊಳ್ಳಿ. ಈ ಅಭ್ಯಾಸ ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ.
ಇದನ್ನೂ ಓದಿ: ಮೋಜು-ಮಸ್ತಿ ಮಾತ್ರವಲ್ಲ, ಈ ರೀತಿಯೂ ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಬಹುದು
ಮಾನಸಿಕ ಆರೋಗ್ಯದ ಕಡೆಗೆ ಗಮನ: ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಹಾಗಾಗಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಪ್ರತಿದಿನ ನಿಮಗಾಗಿ ಸ್ವಲ್ಪ ಸಮಯ ಮೀಸಲಿಟ್ಟು ಧ್ಯಾನ, ಉಸಿರಾಟದ ವ್ಯಾಯಾಮ, ಪುಸ್ತಕ ಓದುವುದು, ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡುವುದು ಅಥವಾ ನಿಮ್ಮ ನೆಚ್ಚಿನ ಹವ್ಯಾಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ನೀವು ಸಾಕಾರಾತ್ಮಕತೆಯಿಂದ ಇರಲು ಸಹಾಯ ಮಾಡುತ್ತದೆ.
ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು: ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದರ ಕಡೆಗೆ ಗಮನ ನೀಡಿ. ನೀವು ಧೂಮಪಾನ ಅಥವಾ ಮದ್ಯಪಾನ ಮಾಡುತ್ತಿದ್ದರೆ, ಅದನ್ನು ತ್ಯಜಿಸಿ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ, ವ್ಯಾಯಾಮ ಮಾಡಿ, ಮೊಬೈಲ್ ಫೋನ್‌ನಿಂದ ದೂರವಿದ್ದು, ಪ್ರಕೃತಿ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ. ಇದು ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ