ಈ ವರ್ಷ ಭಾರತವು ತನ್ನ 76ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯನ್ನು ಗೃಹಿಣಿಯರು ಕೂಡಾ ಮನೆಯಲ್ಲಿಯೇ ವಿಶೇಷವಾಗಿ ಆಚರಿಸಬಹುದು. ನೀವು ಸಹ ಮನೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿವಸವನ್ನು ವಿಶೇಷವಾಗಿ ಆಚರಿಸಲು ಬಯಸಿದರೆ ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಪಲಾವ್ ರೆಸಿಪಿ ತಯಾರಿಸಿ, ಮನೆಮಂದಿಗೆ ಬಡಿಸಿ. ತ್ರಿವರ್ಣ ಪಲಾವ್ ರೆಸಿಪಿಯ ಸುಲಭ ಪಾಕವಿಧಾನದ ಮಾಹಿತಿ ಇಲ್ಲಿದೆ.
3 ಕಪ್ ಬಾಸ್ಮತಿ ಅಕ್ಕಿ
6 ಲವಂಗ
1 ಕಪ್ ಕಿತ್ತಳೆ ರಸ
ಸಣ್ಣಗೆ ಹೆಚ್ಚಿದ ಈರುಳ್ಳಿ
50 ಗ್ರಾಂ ಕೊತ್ತಂಬರಿ ಸೊಪ್ಪು
1 ಚಮಚ ತೆಂಗಿನಕಾಯಿ ತುರಿ
1 ಕಪ್ ತುರಿದ ಪನೀರ್
2 ಇಂಚು ದಾಲ್ಚಿನ್ನಿ ತುಂಡು
3 ರಿಂದ 4 ಏಲಕ್ಕಿ
1 ಕ್ಯಾರೆಟ್
ತುಪ್ಪ
3 ರಿಂದ 4 ಹಸಿ ಮೆಣಸಿನಕಾಯಿ
2 ರಿಂದ 3 ಬೆಳ್ಳುಳ್ಳಿ
ಸ್ವಲ್ಪ ಶುಂಠಿ
1/2 ಕಪ್ ಹಸಿ ಬಟಾಣಿ
ರುಚಿಗೆ ತಕ್ಕಷ್ಟು ಉಪ್ಪು
ಕೇಸರಿ ಬಣ್ಣ
ತ್ರಿವರ್ಣ ಪಲಾವ್ ಮಾಡಲು ಮೊದಲು ಬಾಸ್ಮತಿ ಅಕ್ಕಿಯನ್ನು ಎರಡು ಭಾಗಗಳಾಗಿ ವಿಂಗಡಿಸಿ, ಒಂದು ಭಾಗದಲ್ಲಿ 2 ಕಪ್ ಅಕ್ಕಿ ಮತ್ತು ಇನ್ನೊಂದು ಭಾಗದಲ್ಲಿ 1 ಕಪ್ ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ಪ್ರತ್ಯೇಕವಾಗಿ ನೆನೆಯಲು ಬಿಡಿ.
ಈಗ ಬಾಣಲೆಯಲ್ಲಿ 1 ಚಮಚ ತುಪ್ಪವನ್ನು ಬಿಸಿ ಮಾಡಿ, ಲವಂಗ, ದಾಲ್ಚಿನ್ನಿ ಏಲಕ್ಕಿ ಹಾಕಿ ಸ್ವಲ್ಪ ಹುರಿಯಿರಿ. ಈಗ ಅದಕ್ಕೆ 2 ಕಪ್ ಅಕ್ಕಿ ಸೇರಿಸಿ 2 ನಿಮಿಷ ಹುರಿಯಿರಿ. ನಂತರ 2 ಅಕ್ಕಿಗೆ 4 ಕಪ್ ನೀರು ಸೇರಿಸಿ ಮತ್ತು ಅನ್ನವನ್ನು ಬೇಯಿಸಿ. ಕುಕ್ಕರ್ನಲ್ಲಿಯೂ ಈ ಅನ್ನವನ್ನು ನೀವು ಬೇಯಿಸಬಹುದು. ಬೆಂದ ನಂತರ ಅನ್ನವನ್ನು ಪಕ್ಕಕ್ಕೆ ಇಟ್ಟುಬಿಡಿ.
ಒಂದು ಬಾಣಲೆಗೆ ತುಪ್ಪ ಹಾಕಿ ಅದರಲ್ಲಿ ತುರಿದ ಕ್ಯಾರೆಟ್ ಹುರಿಯಿರಿ ನಂತರ ಮೊದಲೇ ನೆನೆಸಿಟ್ಟ 1 ಕಪ್ ಅಕ್ಕಿ ಸೇರಿಸಿ. ಈಗ ಅದಕ್ಕೆ ಕಿತ್ತಳೆ ರಸ, ಒಂದು ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು 7 ರಿಂದ 8 ಹನಿ ಕೇಸರಿ ಬಣ್ಣವನ್ನು ಸೇರಿಸಿ ಅನ್ನವನ್ನು ಬೇಯಿಸಿದರೆ ಕೇಸರಿ ಪಲಾವ್ ಕೂಡ ರೆಡಿ.
ಬಿಳಿ ಬಣ್ಣದ ಪಲಾವ್ ಮಾಡಲು ಮೊದಲು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಅದಕ್ಕೆ ತುರಿದ ಪನ್ನೀರ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಈಗ ಅದಕ್ಕೆ 1 ಕಪ್ ಬೇಯಿಸಿದ ಅನ್ನವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಬಿಳಿ ಬಣ್ಣದ ಪಲಾವ್ ಸಿದ್ಧ.
ಹಸಿರು ಬಣ್ಣದ ಪಲಾವ್ ಮಾಡಲು ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ, ಶುಂಠಿ, ಹಸಿಮೆಣಸು, ಬೆಳ್ಳುಳ್ಳಿಯನ್ನು ಒಂದು ಮಿಕ್ಸಿ ಜಾರ್ ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬಾಣಲೆಯಲ್ಲಿ ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ ಮತ್ತು ಮೊದಲೇ ತಯಾರಿಸಿಟ್ಟ ಕೊತ್ತಂಬರಿ ಸೊಪ್ಪು ಪೇಸ್ಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ ಬೇಯಿಸಿಕೊಳ್ಳಿ. ಈಗ ಅದಕ್ಕೆ ಹಸಿ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಬೇಯಲು ಬಿಟ್ಟುಬಿಡಿ. ಬಟಾಣಿ ಬೆಂದ ನಂತರ ಅದಕ್ಕೆ ಒಂದು ಕಪ್ ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಹಸಿರು ಬಣ್ಣದ ಪಲಾವ್ ರೆಡಿ.
ಇದನ್ನೂ ಓದಿ: ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮುನ್ನ ಈ ಕ್ರಮಗಳನ್ನು ಗಮನಿಸಿ
ದೊಡ್ಡ ಪಾತ್ರೆಯಲ್ಲಿ ತುಪ್ಪ ಹಾಕಿ ಅದಕ್ಕೆ ಮೊದಲು ಕೇಸರಿ ಬಣ್ಣದ ಅನ್ನವನ್ನು ಸೇರಿಸಿ ಅದರ ಮೇಲೆ ತುರಿದ ಪನೀರ್ ಹಾಕಿ. ನಂತರ ಅದರ ಮೇಲೆ ಬಿಳಿ ಬಣ್ಣದ ಅನ್ನವನ್ನು ಹರಡಿ. ಮತ್ತೊಮ್ಮೆ ತುರಿದ ಪನೀರ್ನ್ನು ಬಿಳಿ ಅನ್ನದ ಮೇಲೆ ಹರಡಿ. ಈಗ ಹಸಿರು ಬಣ್ಣದ ಅನ್ನವನ್ನು ಸೇರಿಸಿ ಅದರ ಮೇಲೂ ತುರಿದ ಪನೀರ್ ಸೇರಿಸಿ. ಈಗ ಈ ಮಿಶ್ರಣವನ್ನು 10 ನಿಮಿಷಗಳ ಕಾಲ ಕಡಿಮೆ ಹುರಿಯಲ್ಲಿ ಬೇಯಲು ಬಿಡಿ. ಬಳಿಕ ಸ್ಟವ್ ಆಫ್ ಮಾಡಿ. ತ್ರಿವರ್ಣ ಪಲಾವ್ ನ್ನು ರೈತಾ ದೊಂದಿಗೆ ಬಡಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: