ಮೊದಲ ಬಾರಿಗೆ ಪ್ರಾಣಿಗಳನ್ನು ಸಾಕಲು, ಮನೆಗೆ ತರುವಾಗ ಅವುಗಳ ಮುಗ್ದ ಮುಖ, ತುಂಟಾಟ, ಸಣ್ಣ ಸಣ್ಣ ಪಾದಗಳನ್ನಿಡುತ್ತಾ ಮನೆಯೊಳಗೆ ಬರುತ್ತವೆ, ಬಂದ ಅತಿ ಶೀಘ್ರದಲ್ಲೇ ನಮ್ಮ ಜೀವನದ ಅತಿದೊಡ್ಡ ಭಾಗವಾಗಿ ಬಿಡುತ್ತವೆ. ಜೊತೆಗೆ ನಮ್ಮ ಮನೆಯ ಸದಸ್ಯರಲ್ಲಿ ಅವು ಕೂಡ ಒಬ್ಬರಾಗುತ್ತವೆ. ಈ ರೀತಿಯ ಘಟನೆ ಹಲವು ಮನೆಗಳಲ್ಲಿ ನಡೆದಿರುತ್ತದೆ. ಪ್ರಾಣಿಗಳಿಗೆ ನಮ್ಮ ರೀತಿ ಮಾತನಾಡಲು ಬರದಿದ್ದರೂ ಅವರ ಪ್ರೀತಿ, ನಮ್ಮ ಜೊತೆಗೆ ಅವುಗಳ ಭಾಂದವ್ಯ, ಇದೆಲ್ಲದರಿಂದ ನಮ್ಮ ಮನಸ್ಸನ್ನು ಕಡಿಮೆ ಸಮಯದಲ್ಲಿ ಗೆದ್ದು ಬಿಡುತ್ತವೆ. ಆದರೆ ಅವರ ಜೀವನ ನಮಗಿಂತ ತುಂಬಾ ಚಿಕ್ಕದಾಗಿರುವುದರಿಂದ ಕೆಲವೊಮ್ಮೆ ಬಹು ಬೇಗ ಅವರನ್ನು ಕಳೆದು ಕೊಳ್ಳುತ್ತೇವೆ. ಒಂದು ದಿನ ಅವರನ್ನು ಕೆಳೆದುಕೊಂಡಾಗ ಆಗುವ ನೋವು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಇದು ಮರೆಯಲಾಗದ ದುಃಖದ ಜೊತೆಗೆ ನೋವನ್ನು ಕೂಡ ನೀಡುತ್ತದೆ.
ನಾಯಿ, ಬೆಕ್ಕು ಅಥವಾ ವಿವಿಧ ರೀತಿಯ ಪಕ್ಷಿಯನ್ನು ಮನೆಯಲ್ಲಿ ಮಕ್ಕಳಂತೆ ಸಾಕಿ, ಆಕಸ್ಮಿಕವಾಗಿ ಅವುಗಳನ್ನು ಕಳೆದುಕೊಂಡಾಗ ದುಃಖದ ಜೊತೆ ಜೊತೆಗೆ ಒಂಟಿತನ ಕಾಡುತ್ತದೆ. ಆದರೆ, ಸಮಯ ಕಳೆದಂತೆ ನಾವು ಆ ನೋವನ್ನು ಮರೆಯಲು ಕಲಿಯುತ್ತೇವೆ ಮತ್ತು ಅವರು ನಮ್ಮೊಂದಿಗೆ ಕಳೆದ ಸಂತೋಷದ ದಿನಗಳನ್ನು ನೆನಪು ಮಾಡಿಕೊಳ್ಳಲು ಅದನ್ನು ಎಂದಿಗೂ ಜೀವಂತವಾಗಿಡಲು ಪ್ರಯತ್ನಿಸುತ್ತೇವೆ. ಹಾಗಾದರೆ ನಮ್ಮ ಮನೆಯ ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ನೆನಪಿಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಐದು ಮಾರ್ಗಗಳು.
ಮನೆಯಲ್ಲಿ ಎಷ್ಟೋ ವರ್ಷಗಳಿದ್ದು ಅವರು ನೀಡಿದ ಸಂತೋಷದ ಕ್ಷಣಗಳನ್ನು ಮೆಲುಕು ಹಾಕುವುದು ತುಂಬಾ ಒಳ್ಳೆಯದು. ಏಕಂದರೆ ಯಾವುದೇ ಪ್ರಾಣಿಯಾಗಿರಲಿ ನೀವು ದುಃಖದಲ್ಲಿರುವುದನ್ನು ನೋಡಲು ಬಯಸುವುದಿಲ್ಲ. ಹಾಗಾಗಿ ನಾವು ಕಳೆದ ಸಂತೋಷದ ನೆನಪುಗಳನ್ನು ಮಾತ್ರ ಫೋಟೋ ಆಲ್ಬಂ ಮಾಡುವುದು ತುಂಬಾ ಒಳ್ಳೆಯದು ಅಥವಾ ಗೋಡೆಗಳ ಮೇಲೆ ಫ್ರೇಮ್ ಮಾಡಬಹುದು. ಇದರಿಂದ ಆ ಹಳೆಯ ದಿನಗಳನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಬಹುದು.
ನೀವು ಸಾಕಿರುವ ಪ್ರಾಣಿಗೆ ಮನೆಯಲ್ಲಿ ಯಾವುದಾದರೂ ಒಂದು ಮೂಲೆ ತುಂಬಾ ಇಷ್ಟವಾಗಿರುತ್ತದೆ. ಅದು ಬಾಲ್ಕನಿಯಾಗಿರಲಿ, ಲಿವಿಂಗ್ ರೂಮ್ ಆಗಿರಲಿ ತಮ್ಮದೇ ಆದ ಒಂದು ಜಾಗವಿರುತ್ತದೆ. ಅಂತಹ ಒಂದು ಮೂಲೆಯನ್ನು ಚೆನ್ನಾಗಿ ಅಲಂಕರಿಸಿ. ಅಲ್ಲಿ ಅವರ ಫೋಟೋ, ಅವುಗಳು ಬಳಸಿದ ಸಾಮಗ್ರಿಗಳನ್ನು ಇಡಬಹುದು.
ಇದನ್ನೂ ಓದಿ: ಮೊಸರು ತುಂಬಾ ಹುಳಿಯಾಗಿದೆಯೇ? ಹೀಗೆ ಮಾಡಿದರೆ ತಕ್ಷಣ ಹುಳಿ ಕಡಿಮೆಯಾಗುತ್ತದೆ!
ಪ್ರಾಣಿಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳಲು, ಅವರ ಹೆಸರಿನಲ್ಲಿ ಒಂದು ಪುಟ್ಟ ಗಿಡ ನೆಡಿ. ನಿಮ್ಮ ಮನೆಯ ಅಂಗಳ ಅಥವಾ ಸುತ್ತಮುತ್ತಲಿನ ಜಾಗದಲ್ಲಿ ನಿಮಗಿಷ್ಟವಾದ ಗಿಡ ನೆಡಿ. ಪ್ರತಿ ಬಾರಿ ಅದು ಹೂವು ಅಥವಾ ಹಣ್ಣು ಬಿಟ್ಟಾಗ ನಾವು ಅವರೊಂದಿಗೆ ಕಳೆದ ಸಂತೋಷದ ಕ್ಷಣಗಳು ನಮಗೆ ನೆನಪಾಗುತ್ತದೆ.
ಸಾಕು ಪ್ರಾಣಿಗಳನ್ನು ನೆನಪಿಟ್ಟುಕೊಳ್ಳಲು, ಅವುಗಳ ಹೆಸರಿನಲ್ಲಿ ಬೀದಿ ಪ್ರಾಣಿಗಳನ್ನು ಸಾಕುವ ಚಾರಿಟಿಗೆ ದಾನ ಮಾಡುವುದಕ್ಕಿಂತ ಉತ್ತಮ ಮಾರ್ಗವಿಲ್ಲ. ಆ ರೀತಿ ಮಾಡುವುದರಿಂದ ಇತರ ಪ್ರಾಣಿಗಳಿಗೆ ಸಹಾಯ ಆಗುತ್ತದೆ. ಜೊತೆಗೆ ಅವರಿಗೆ ನಿಮ್ಮಿಂದ ಒಂದು ನಾಲ್ಕು ಹೊತ್ತಿನ ಊಟ ಸಿಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ