ಸಾಂದರ್ಭಿಕ ಚಚಿತ್ರ
ಮನೆಯೇ ಮೊದಲ ಪಾಠ ಶಾಲೆ, ತಾಯಿ ತಾನೇ ಮೊದಲು ಗುರು ಎನ್ನುವ ಮಾತಿದೆ. ಹೀಗಾಗಿ ಏನೇ ಒಳ್ಳೆಯದನ್ನು ಹಾಗೂ ಕೆಟ್ಟದನ್ನು ಕಲಿತರೂ ಮನೆಯಿಂದಲೇ. ಅದರಲ್ಲಿಯೂ ಮಕ್ಕಳು ಒಳ್ಳೆಯದು ಕೆಟ್ಟದನ್ನು ಬೇಗನೇ ಕಲಿತುಕೊಂಡು ಬಿಡುತ್ತಾರೆ. ಹೀಗಾಗಿ ಈ ಮಕ್ಕಳನ್ನು ಬೆಳೆಸುವುದು ಅಷ್ಟು ಸುಲಭವಾದ ಕೆಲಸವಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಮಕ್ಕಳು ದಾರಿ ತಪ್ಪುವ ಸಾಧ್ಯತೆಯೇ ಹೆಚ್ಚು. ಆದರೆ ಮಕ್ಕಳಿಗೆ ಬೇಕು ಬೇಡಗಳನ್ನು ತಿಳಿದುಕೊಳ್ಳುವ ಪೋಷಕರು ಮಗುವಿನ ಬೆಳವಣಿಗೆಯ ವೇಳೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಹೀಗಾಗಿ ಒಂದೇ ಮಗು ಎಂದು ಮುದ್ದಾಗಿ ಬೆಳೆಸುವ ಪೋಷಕರು ಈ ಕೆಲವು ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ.
- ಅವಶ್ಯಕತೆಗಿಂತ ಹೆಚ್ಚಿನದ್ದನ್ನು ಮಾಡಬೇಡಿ : ಒಂದೇ ಮಗು ಇರುವ ಪೋಷಕರು ತಮ್ಮ ಮಗ ಅಥವಾ ಮಗಳಿಗೆ ಯಾವುದರಲ್ಲಿಯೂ ಕೊರತೆಯಾಗಬಾರದು ಎಂದು ಬಯಸುತ್ತಾರೆ. ಹೀಗಾಗಿ ಎಲ್ಲ ಭಾವನೆಗಳನ್ನು ಅಗತ್ಯಕ್ಕಿಂತಲೂ ಹೆಚ್ಚಿಗೆ ವ್ಯಕ್ತಪಡಿಸಿ ಮುದ್ದಿಸುತ್ತಾರೆ. ಮಗ ಅಥವಾ ಮಗಳು ಕೇಳುವ ಮುನ್ನವೇ ಎಲ್ಲವನ್ನು ತಂದು ಮುಂದೆ ಇಡುತ್ತಾರೆ. ಮಗುವಿನ ಶಿಕ್ಷಣ ಹಾಗೂ ಭವಿಷ್ಯದ ವಿಚಾರದಲ್ಲಿಯೂ ಹೆಚ್ಚು ಚಿಂತೆ ಮಾಡುತ್ತಾರೆ. ಈ ಪೋಷಕರ ನಡವಳಿಕೆಯೂ ಮಕ್ಕಳ ಮೇಲೆ ಒತ್ತಡ ಹೇರಲು ಕಾರಣವಾಗುತ್ತದೆ. ಹೀಗಾಗಿ ಮಕ್ಕಳಿಗೆ ಅವಶ್ಯಕತೆಗಿಂತ ಹೆಚ್ಚಿನದ್ದನ್ನು ಮಾಡಬೇಡಿ. ಅತಿಯಾದ ಪ್ರೀತಿ ಕಾಳಜಿಯೂ ಮಕ್ಕಳ ಮೇಲೆ ಒತ್ತಡವನ್ನುಂಟು ಮಾಡಬಹುದು.
- ಮಗು ತಪ್ಪು ಮಾಡಿದರೆ ನಿರ್ಲಕ್ಷ್ಯ ಬೇಡ : ಮಕ್ಕಳನ್ನು ಮುದ್ದಿಸುವ ಭರದಲ್ಲಿ ತಪ್ಪನ್ನು ಮರಮಾಚುವುದು ಸರಿಯಲ್ಲ. ಕೆಲವೊಮ್ಮೆ ಪ್ರೀತಿಯಿಂದ ಮಾಡಿದ ತಪ್ಪನ್ನು ಹೇಳಿದರೆ, ಇನ್ನು ಕೆಲವೊಮ್ಮೆ ಬೈದು ಬುದ್ಧಿ ಹೇಳುವುದು ಮುಖ್ಯ. ತಪ್ಪನ್ನು ನಿರ್ಲಕ್ಷ್ಯ ಮಾಡಿ ಮುದ್ದು ಮಾಡಿದರೆ, ಅದೇ ತಪ್ಪು ಮತ್ತೇ ಆಗುತ್ತದೆ. ಕಟ್ಟುನಿಟ್ಟಾದ ಹಾಗೂ ಶಿಸ್ತುಬದ್ದ ಜೀವನಶೈಲಿಯಿಂದ ಮಕ್ಕಳು ಸರಿದಾರಿಯಲ್ಲಿ ನಡೆಯಲು ಸಾಧ್ಯ. ಅದಲ್ಲದೇ ತಪ್ಪು ಮಾಡಿದಾಗ ಹೆತ್ತವರು ತಿದ್ದಿ ಬುದ್ಧಿ ಹೇಳುವುದರ ಜೊತೆಗೆ ಯಾವುದು ಸರಿ ತಪ್ಪು ಎಂದು ತಿಳಿಸಿಕೊಡುವುದು ಮುಖ್ಯವಾಗುತ್ತದೆ.
- ಒಳ್ಳೆಯ ಸಂಸ್ಕಾರ ಹಾಗೂ ನಡವಳಿಕೆ ಕಲಿಸಿ ಕೊಡಿ : ಪೋಷಕರು ಮಕ್ಕಳನ್ನು ಬೆಳೆಸುವಾಗ ನಡವಳಿಕೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಒಂದು ಮಗುವಿದ್ದರೆ ತಂದೆ ತಾಯಿ ಇಬ್ಬರ ಅತಿಯಾದ ಮುದ್ದು ನಡವಳಿಕೆ ಮೇಲೆ ಋಣಾತ್ಮಕ ಪರಿಣಾಮ ಬೀರದಿರಲಿ. ಮಕ್ಕಳ ಮೇಲೆ ಪ್ರೀತಿ ಕಾಳಜಿಯೊಂದಿಗೆ ಒಳ್ಳೆಯ ಸಂಸ್ಕಾರ ಕಲಿಸಿಕೊಡುವುದು ಮುಖ್ಯ. ಹಿರಿಯರನ್ನು ಗೌರವಿಸುವುದು, ಕಿರಿಯರನ್ನು ಪ್ರೀತಿ ಕಾಳಜಿಯಿಂದ ಕಾಣುವುದು, ತಪ್ಪು ಮಾಡಿದಾಗ ಕ್ಷಮೆ ಕೇಳುವುದು, ಸಂಬಂಧಕ್ಕೆ ಬೆಲೆ ಕೊಡುವುದು ಹೀಗೆ ಉತ್ತಮ ನಡವಳಿಕೆಯೂ ಮಕ್ಕಳ ಭವಿಷ್ಯಕ್ಕೆ ದಾರಿ ದೀಪವಾಗುತ್ತದೆ.
- ಮಕ್ಕಳಿಂದ ಅತಿಯಾದದ್ದನ್ನು ನಿರೀಕ್ಷಿಸಬೇಡಿ : ಈಗಿನ ಕಾಲದಲ್ಲಿ ಹೆಚ್ಚಿನ ದಂಪತಿಗಳಿಗೆ ಒಂದೇ ಮಗು ಇರುತ್ತಾರೆ. ಹೀಗಾಗಿ ತಮ್ಮ ಎಲ್ಲಾ ನಿರೀಕ್ಷೆ ಹಾಗೂ ಆಕಾಂಕ್ಷೆಗಳನ್ನು ಆ ಮಗುವಿನ ಮೇಲೆಯೇ ಇಟ್ಟಿರುತ್ತಾರೆ. ಓದು, ಪರೀಕ್ಷೆ, ಅಂಕ ಹೀಗೆ ಎಲ್ಲದರಲ್ಲಿ ಹೆತ್ತವರ ಅತಿಯಾದ ನಿರೀಕ್ಷೆಗಳು ಮಗುವಿನ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ. ಹೆತ್ತವರ ನಿರೀಕ್ಷೆಗಳನ್ನು ಖುಷಿಪಡಿಸಲಾಗದೇ ಮಗುವು ಹತಾಶೆಯನ್ನು ಅನುಭವಿಸಬಹುದು. ಇದು ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಒಟ್ಟಾರೆ ಪರಿಣಾಮ ಬೀರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ