
ಮದುವೆ ಎನ್ನುವಂತಹದ್ದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ.ಈ ಮದುವೆ (Marriage Life) ಎನ್ನುವಂತಹದ್ದು ಗಂಡು ಹೆಣ್ಣಿನ ಬಾಳಿನ ಶಾಶ್ವತವಾದ ಸಂಬಂಧ. ಹಾಗಾಗಿ ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗನಿಗೆ-ಮಗಳಿಗೆ ಮದುವೆ ಮಾಡಬೇಕು, ಮಗನಿಗೆ ಒಳ್ಳೆಯ ಕುಟುಂಬದಿಂದ ಹೆಣ್ಣು ತರಬೇಕು ಎಂದೆಲ್ಲಾ ಬಯಸುತ್ತಾರೆ. ಹೀಗೆ ಮದುವೆ ಮಾಡುವ ಯೋಜನೆಯಲ್ಲಿರುವ ಪೋಷಕರು ಮದುವೆಯಾಗುವ ತಮ್ಮ ಮಕ್ಕಳಿಗೆ ಒಂದಷ್ಟು ಜೀವನಪಾಠಗಳನ್ನು ಕಲಿಸಬೇಕು. ಸಾಮಾನ್ಯವಾಗಿ ಮಗಳಿಗೆ ಅತ್ತೆಮನೆಯಲ್ಲಿ ಹೇಗಿರಬೇಕು, ಯಾವ ರೀತಿ ಎಲ್ಲಾ ಸಂದರ್ಭವನ್ನು ಸಂಭಾಳಿಕೊಂಡು ಹೋಗಬೇಕು ಎನ್ನುವಂತಹದ್ದನ್ನು ಹೇಳಿಕೊಡುತ್ತಾರೆ ಅಲ್ವಾ. ಅದೇ ರೀತಿ ಮಗನಾದವನಿಗೂ ಪೋಷಕರು (Parents) ಹೆಂಡತಿಯನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬುದರಿಂದ ಹಿಡಿದು ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದರವರೆಗೆ ಒಂದಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಡಬೇಕಂತೆ. ಆ ವಿಚಾರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹೆಂಡತಿಗೆ ಸಮಾನ ಸ್ಥಾನಮಾನ: ಮದುವೆಯಾದ ನಂತರ ಬೇರೆ ಮನೆಯಿಂದ ಬರುವ ಹೆಣ್ಣು ತನ್ನ ಅತ್ತೆ ಮನೆಯಲ್ಲಿ ಜವಾವ್ದಾರಿಗಳನ್ನು ಎಷ್ಟು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾಳೆ ಅಲ್ವಾ. ಅಂತಹ ಮಹಾಲಕ್ಷ್ಮಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದು ನಿನ್ನ ಜವಾಬ್ದಾರಿ. ಆಕೆಯ ಮನಸ್ಸಿಗೆ ನೋವಾಗದಂತೆ ಪ್ರೀತಿಯಿಂದ ನಡೆದುಕೊಳ್ಳಬೇಕು ಎನ್ನುವಂತಹ ವಿಚಾರವನ್ನು ಹೆತ್ತವರು ಮಗನಿಗೆ ಹೇಳಿಕೊಡಬೇಕು.
ಮನೆ ಕೆಲಸದಲ್ಲಿ ಸಹಾಯ ಮಾಡುವುದು: ಮನೆ ಕೆಲಸದ ಭಾರವನ್ನು ಬರೀ ನಿನ್ನ ಹೆಂಡತಿಯ ಹೆಗಲ ಮೇಲೆ ಹೊರಿಸಬಾರದು. ನೀವು ಕೂಡಾ ಆಕೆಗೆ ಮನೆಕೆಲಸದಲ್ಲಿ ಸ್ವಲ್ಪ ಸಹಾಯ ಮಾಡಬೇಕು ಎಂಬ ಒಳ್ಳೆಯ ಪಾಠವನ್ನು ಹೇಳಿಕೊಡಿ. ಇದು ಖಂಡಿತವಾಗಿ ಮುಂದಿನ ದಿನಗಳಲ್ಲಿ ಮಗ ಸೊಸೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ.
ಹೆಂಡತಿಯ ಕುಟುಂಬವನ್ನೂ ನೋಡಿಕೊಳ್ಳಬೇಕು: ಕೆಲ ಪೋಷಕರು ತಮ್ಮ ಮಗ ಹೆಂಡತಿಯ ಕುಟುಂಬಕ್ಕೆ ಸಹಾಯ ಮಾಡುತ್ತಾನೆ, ಆಕೆಯ ಕುಟುಂಬವನ್ನು ನೋಡಿಕೊಳ್ಳುತ್ತಾನೆ ಎಂದು ಸಿಟ್ಟುಮಾಡಿಕೊಳ್ಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಹಾಗೆ ಮಾಡಬೇಡಿ, ಬಂದ ಸೊಸೆ ನಿಮ್ಮ ಕುಟುಂಬದ ಏಳಿಗೆಗಾಗಿ ಎಷ್ಟು ದುಡಿಯುತ್ತಾಳೆ ಅಲ್ವಾ. ಅದೇ ರೀತಿ ನಿಮ್ಮ ಮಗನಿಗೂ ಕೂಡಾ ತನ್ನ ಹೆಂಡತಿಯ ಕುಟುಂಬಕ್ಕೆ ಸಹಾಯ ಮಾಡುವಂತಹದ್ದು, ಆಕೆಯ ಪೋಷಕರನ್ನು ಗೌರವಿಸುವಂತಹದ್ದು ಇದೆಲ್ಲವನ್ನು ಮಾಡಲು ಹೇಳಿ. ಖಂಡಿತವಾಗಿ ಇದು ಎರಡೂ ಕುಟುಂಬದ ಸಂಬಂಧವನ್ನು ಮತ್ತಷ್ಟು ಬಲಗೊಳಿಸುತ್ತದೆ.
ಇದನ್ನೂ ಓದಿ: ಮೊಮ್ಮಕ್ಕಳು ಅಜ್ಜ-ಅಜ್ಜಿಯೊಂದಿಗೆ ಸಮಯ ಕಳೆಯಬೇಕು ಎನ್ನುವುದು ಇದಕ್ಕೆ ನೋಡಿ
ಹೊಗಳಿಕೆಯ ಮಾತು: ಪ್ರತಿಯೊಬ್ಬ ಹೆಣ್ಣು ಕೂಡಾ ತನ್ನ ಸಂಗಾತಿಯಿಂದ ಹೊಗಳಿಕೆಯ ಮಾತುಗಳನ್ನು ಬಯಸುತ್ತಾಳೆ. ಆದ್ದರಿಂದ ಹೆಂಡತಿಗೆ ಥ್ಯಾಂಕ್ಸ್ ಹೆಳುವಂತಹದ್ದು, ಆಕೆಯನ್ನು ಅಡುಗೆಯನ್ನು ಹೊಗಳುವಂತಹದ್ದು ಮಾಡುತ್ತಿರಬೇಕು, ಇದು ನಿಮ್ಮ ಜೀವನದಲ್ಲಿ ಸದಾ ಹೊಸತನವನ್ನು ತರುತ್ತದೆ ಎಂದು ಮಗನಿಗೆ ಹೇಳಿಕೊಡಿ. ಹೀಗೆ ಪೋಷಕರು ತಮ್ಮ ಮಗನಿಗೆ ಹೇಳಿಕೊಡುವ ಈ ಬುದ್ಧಿಮಾತು ಆತನ ಸಂಸಾರವನ್ನು ಖಂಡಿತವಾಗಿಯೂ ಬೆಳಗುತ್ತದೆ. ಯಾವಾಗಲೂ ಸೊಸೆಯಾದವಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ, ಇದರಿಂದ ಇಡೀ ಕುಟುಂಬವೇ ಸಂತೋಷದಿಂದ ಇರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ