ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 15 ರಂದು ಬಹಳ ವಿಜೃಂಭನೆಯಿಂದ ಸ್ವಾತಂತ್ರ್ಯ ದಿನವನ್ನು ಆರಿಸಲಾಗುತ್ತದೆ. ಶಾಲಾಕಾಲೇಜು ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿಗಳು, ಸಂಘಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ಸಾರ್ವಜನಿಕರಿಗೆ ಸಿಹಿ ತಿನಿಸು ಹಂಚುತ್ತಾ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತದ ಧ್ವಜ ಸಂಹಿತೆ 2002ರ ಪ್ರಕಾರ ಧ್ವಜವನ್ನು ಆಚರಿಸಲು ಅದರದ್ದೇ ಆದ ನಿಯಮಗಳಿವೆ, ರಾಷ್ಟ್ರ ಧ್ವಜಕ್ಕೆ ಎಂದಿಗೂ ಅವಮಾನಿಸಬಾರದು. ಹಿಂದಿನ ವರ್ಷ ಸ್ವಾತಂತ್ರ್ಯ ದಿವಸದ ಅಮೃತ ಮಹೋತ್ಸವದ ಸಲುವಾಗಿ ಹರ್ ಘರ್ ತಿರಂಗಾ ಎಂಬ ಅಭಿಯಾನದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಧ್ವಜವನ್ನು ಹಾರಿಸುವ ಅವಕಾಶವನ್ನು ನೀಡಲಾಗಿತ್ತು. ಈ ಬಾರಿಯೂ ಮನೆಯಲ್ಲಿ ಧ್ವಜವನ್ನು ಹಾರಿಸಲು ಯೋಜಿಸುತ್ತಿದ್ದರೆ, ಈ ಕೆಲವು ನಿಯಮಗಳನ್ನು ನೀವು ಶಿಸ್ತುಬದ್ಧವಾಗಿ ಪಾಲಿಸಬೇಕಾಗುತ್ತದೆ.
ಈ ವರ್ಷ ನಿಮ್ಮ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ನೀವು ಯೋಜಿಸುತ್ತಿದ್ದರಾ? ಭಾರತದ ಧ್ವಜ ಸಂಹಿತೆ 2002ರ ಪ್ರಕಾರ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
• ಧ್ವಜದ ಅನುಪಾತದಿಂದ ಪ್ರಾರಂಭಿಸಿ, ಧ್ವಜ ಸಂಹಿತೆ 2002 ರ ಪ್ರಕಾರ ತ್ರಿವರ್ಣ ಧ್ವಜ 3:2 ಅನುಪಾತದಲ್ಲಿರಬೇಕು. ತ್ರಿವರ್ಣ ಧ್ವಜವನ್ನು ಎಂದಿಗೂ ತಲೆಕೆಳಗಾಗಿ ಪ್ರದರ್ಶಿಸಬಾರದು. ಮೇಲಿನ ಫಲಕದ ಬಣ್ಣವು ಕೇಸರಿ, ಮಧ್ಯ ಬಿಳಿ ಮತ್ತು ಕೆಳಗಿನ ಫಲಕವು ಹಸಿರು ಬಣ್ಣದ್ದಾಗಿರಬೇಕು.
• ಪ್ರದರ್ಶನದಲ್ಲಿರುವ ತ್ರಿವರ್ಣ ಧ್ವಜವು ಗೌರವದ ಸ್ಥಾನದಲ್ಲಿರಬೇಕು.
• ಹಾನಿಗೊಳಗಾದ ಅಥವಾ ಕಳಚಿದ ಧ್ವಜವನ್ನು ಎಂದಿಗೂ ಪ್ರದರ್ಶಿಸಬಾರದು. ರಾಷ್ಟ್ರ ಧ್ವಜ ಯಾವಾಗಲೂ ಪರಿಪೂರ್ಣ ಸ್ಥಿತಿಯಲ್ಲಿರಬೇಕು.
• ತ್ರಿವರ್ಣ ಧ್ವಜದ ಮಧ್ಯಭಾಗವು 24 ಸಮಾನ ಅಂತರದ ಗೆರಗಳೊಂದಿಗೆ ಕಡು ನೀಲಿ ಬಣ್ಣದಲ್ಲಿನ ಅಶೋಕ ಚಕ್ರವನ್ನು ಹೊಂದಿರಬೇಕು. ನೀವು ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರೆ, ಧ್ವಜ ವಾಲದಂತೆ ಮತ್ತು ನೆಲ ಅಥವಾ ನೀರನ್ನು ಮುಟ್ಟದಂತೆ ನೋಡಿಕೊಳ್ಳಿ.
ತ್ರಿವರ್ಣ ಧ್ವಜದ ಬಗ್ಗೆ ಸಷ್ಟವಾದ ನಿಯಮಗಳು ಮತ್ತು ನಿಬಂಧನೆಗಳಿವೆ. ಈ ನಿಯಮಗಳಿಗೆ ಒಳಪಟ್ಟು ವ್ಯಕ್ತಿಯು ಧ್ವಜವನ್ನು ಏರಿಸಬೇಕು ಮತ್ತು ಇಳಿಸಬೇಕು. ಹರ್ ಘರ್ ತಿರಂಗ ಅಭಿಯಾನವು ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಮನೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವ ಅವಕಾಶವನ್ನು ನೀಡಿತು. ಆದರೆ ಧ್ವಜಾರೋಹಣ ಮಾಡುವಾಗ ಎಷ್ಟು ಗೌರವ ಕೊಡುತ್ತೇವೆಯೋ, ಅದನ್ನು ಇಳಿಸುವಾಗಲೂ ಅಷ್ಟೇ ಗೌರವ ಕೊಡಬೇಕು. ತ್ರಿವರ್ಣ ಧ್ವಜವನ್ನು ಗೌರವಯುತವಾಗಿ ತೆಗೆಯಬೇಕು, ಬಳಿಕ ಅದನ್ನು ಮಡಚಿ ಸುರಕ್ಷಿತ ಸ್ಥಳದಲ್ಲಿಡಬೇಕು.
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ನಾಳೆ ಧ್ವಜಾರೋಹಣ, ಪ್ರಧಾನಿ ಮೋದಿ ಭಾಷಣ ಲೈವ್ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ
ತ್ರಿವರ್ಣ ಧ್ವಜವನ್ನು ಮಡಚಲು ಸ್ಪಷ್ಟ ನಿಯಮವಿದೆ. ಮೊದಲನೆಯದಾಗಿ, ಇಬ್ಬರು ವ್ಯಕ್ತಿಗಳು ತ್ರಿವರ್ಣ ಧ್ವಜವನ್ನು ಹಿಡಿಯಬೇಕು. ನಂತರ ಹಸಿರು ಬಣ್ಣದ ಪಟ್ಟಿಯನ್ನು ಮೊದಲು ಮಡಚಬೇಕು. ಹಸಿರು ಬಣ್ಣದ ಪಟ್ಟಿಯ ಮೇಲೆ ಕೇಸರಿ ಬಣ್ಣದ ಪಟ್ಟಿಯನ್ನು ಮುಚ್ಚಬೇಕು. ಹೀಗೆ ಸರಿಯಾಗಿ ಮಡಚಿದಾಗ ಅಶೋಕ ಚಕ್ರ ಚಿಹ್ನೆಯು ಮೇಲ್ಭಾಗದಲ್ಲಿ ಕಾಣಿಸುತ್ತದೆ. ನಂತರ ಅದನ್ನು ಗೌರವಯುತವಾಗಿ ಸುರಕ್ಷಿತ ಸ್ಥಳದಲ್ಲಿಡಬೇಕು.
ಪ್ರತಿಯೊಬ್ಬರೂ ತ್ರಿವರ್ಣ ಧ್ವಜವನ್ನು ಗೌರವಿಸಬೇಕು. ಆದರೆ ತ್ರಿವರ್ಣ ಧ್ವಜ ಹರಿದರೆ ಅಥವಾ ಹಾನಿಗೊಳಗಾದರೆ ಅದನ್ನು ಗೌರವಯುತವಾಗಿ ವಿಳೇವಾರಿ ಮಾಡುವುದು ಬಹಳ ಮುಖ್ಯ. ಒಂದು ವೇಳೆ ತ್ರಿವರ್ಣಧ್ವಜ ಹಾನಿಗೊಳಗಾದರೆ ಅದನ್ನು ಕಸದ ಬುಟ್ಟಿ ಅಥವಾ ಇನ್ನಾವುದೇ ಸ್ಥಳದಲ್ಲಿ ಎಸೆಯಬಾರದು ಬದಲಿಗೆ ಗೌರವಯುತವಾಗಿ ಸುಡಬೇಕು ಅಥವಾ ಹೂಳಬೇಕು. ಸುಟ್ಟ ನಂತರ ಆ ಬೂದಿಯನ್ನು ನದಿ ನೀರಿನಲ್ಲಿ ಬಿಡಬೇಕು.
ತ್ರಿವರ್ಣ ಧ್ವಜವನ್ನು ತೆಗೆದ ನಂತರ ಅದನ್ನು ಮಡಚಿ ಸುರಕ್ಷಿತ ಸ್ಥಳದಲ್ಲಿ ಇರಿಸಿ. ನಿಮ್ಮ ಮನೆಯೊಳಗೆ ಅಥವಾ ಸುತ್ತಮುತ್ತ ಧ್ವಜವನ್ನು ಯಾವುದೇ ಕಾರಣಕ್ಕೂ ಅವಮಾನಿಸಬಾರದು. ಧ್ವಜವನ್ನು ಅಗೌರವಿಸಿದರೆ ಅಥವಾ ಅದನ್ನು ದುರುಪಯೋಗಪಡಿಸಿಕೊಂಡರೆ ಮೂರು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಬಹುದು. ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕಾನೂನು ನಿಬಂಧನೆಗಳಿವೆ. ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸದಿದ್ದರೆ ಅದು ಶಿಕ್ಷಾರ್ಹ ಅಪರಾಧ. ಆದ್ದರಿಂದ ರಾಷ್ಟ್ರಧ್ವಜಕ್ಕೆ ಸಂಪೂರ್ಣ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: