
ಸೊಳ್ಳೆ, ಹಲ್ಲಿ (lizards), ಜಿರಳೆ, ಇಲಿ ಇವೆಲ್ಲವೂ ಪ್ರತಿ ಮನೆಗೂ ಕರೆಯದೆ ಬರುವ ಅತಿಥಿಗಳು ಅಂತಾನೇ ಹೇಳಬಹುದು. ಒಮ್ಮೆ ಮನೆಯೊಳಗೆ ನುಸುಳಿದರೆ ಸಾಕು ಇವು ಸಿಕ್ಕಾಪಟ್ಟೆ ಕಿರಿಕಿರಿ ಉಂಟು ಮಾಡುತ್ತವೆ. ಇವುಗಳನ್ನು ಓಡಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಗೋಡೆಯ ಮೇಲೆ ಓಡಾಡುವ ಹಲ್ಲಿಗಳು ಯಾವಾಗ ಮೈ ಮೇಲೆ ಬೀಳುತ್ತವೋ, ತಯಾರಿಸಿಟ್ಟ ಆಹಾರದ ಮೇಲೆ ಬೀಳುತ್ತವೋ ಎಂಬ ಸಣ್ಣ ಭಯ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದಕ್ಕಾಗಿ ಇವುಗಳನ್ನು ಓಡಿಸಲು ಹಲವರು ಅನೇಕಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ನೀವು ಸಹ ಇದೇ ರೀತಿ ಹಲ್ಲಿಗಳ ಕಾಟದಿಂದ ಬೇಸತ್ತಿದ್ದೀರಾ? ಹಾಗಿದ್ರೆ ಈ ಮನೆಯಲ್ಲಿ ಈ ಗಿಡಗಳನ್ನು ನೆಡಿ. ಈ ಗಿಡಗಳು ವಿಶಿಷ್ಟವಾದ ವಾಸನೆಯನ್ನು ಹೊಂದಿದ್ದು, ಇವು ಹಲ್ಲಿಗಳನ್ನು ನೈಸರ್ಗಿಕವಾಗಿ ದೂರವಿಡಲು ಸಹಾಯ ಮಾಡುತ್ತವೆ.
ಲ್ಯಾವೆಂಡರ್ ಸಸ್ಯ: ಲ್ಯಾವೆಂಡರ್ ಬಲವಾದ ವಾಸನೆ ಹಾಗೂ ಲಿನೂಲ್ ಎಂಬ ಸಂಯುಕ್ತವನ್ನು ಹೊಂದಿದ್ದು, ಇದು ಪ್ರಬಲವಾದ ನೈಸರ್ಗಿಕ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ವಾಸನೆಯನ್ನು ಹಲ್ಲಿಗಳು, ಇತರ ಕೀಟಗಳು ಇಷ್ಟಪಡುವುದಿಲ್ಲ. ಹಾಗಾಗಿ ನೀವು ಕಿಟಕಿಗಳ ಬಳಿ, ಮನೆಯ ಬಾಲ್ಕನಿ, ಪ್ರವೇಶದ್ವಾರದ ಬಳಿ ಇಡಬಹುದು. ಇದರ ಸುವಾಸನೆಯು ಹಲ್ಲಿಗಳನ್ನು ದೂರವಿಡುವುದಲ್ಲದೆ ನಿಮ್ಮ ಮನೆಗೆ ತಾಜಾ ಸುವಾಸನೆಯನ್ನು ನೀಡುತ್ತದೆ.
ತುಳಸಿ ಗಿಡ: ತುಳಸಿಯ ಕಟುವಾದ ಮತ್ತು ವಿಶಿಷ್ಟವಾದ ವಾಸನೆಯು ಹಲ್ಲಿಗಳಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಇದು ಹಲ್ಲಿಗಳನ್ನು ಮಾತ್ರವಲ್ಲದೆ, ಸೊಳ್ಳೆಗಳು ಮತ್ತು ಇತರೆ ಕೀಟಗಳನ್ನು ಮನೆಯಿಂದ ದೂರವಿಡುತ್ತದೆ. ಅಡುಗೆಮನೆಯ ಕಿಟಕಿಗಳು, ಬಾಲ್ಕನಿಗಳು, ಪ್ರವೇಶ ದ್ವಾರದ ಬಳಿ ಕುಂಡಗಳಲ್ಲಿ ತುಳಸಿ ಗಿಡವನ್ನು ನೆಡಿ. ಈ ಸಸ್ಯವು ನೈಸರ್ಗಿಕವಾಗಿ ಮನೆಯನ್ನು ರಕ್ಷಿಸುವುದಲ್ಲದೆ ಪರಿಸರವನ್ನು ಶುದ್ಧೀಕರಿಸುತ್ತದೆ.
ಪುದೀನಾ ಗಿಡ: ಪುದೀನಾದಲ್ಲಿರುವ ಬಲವಾದ ಮೆಂಥಾಲ್ ವಾಸನೆಯು ಹಲ್ಲಿಗಳ ಸೂಕ್ಷ್ಮ ಇಂದ್ರಿಯಗಳಿಗೆ ಅತ್ಯಂತ ಅಹಿತಕರವಾಗಿದೆ. ಹಾಗಾಗಿ ಮನೆಯ ಆರ್ದ್ರ ಪ್ರದೇಶಗಳಾದ ಸ್ನಾನಗೃಹದ ಕಿಟಕಿ ಅಥವಾ ಅಡುಗೆಮನೆಯ ಬಳಿ ಪುದೀನಾ ಗಿಡಗಳನ್ನು ಕುಂಡದಲ್ಲಿ ನೆಡಿ. ಹೆಚ್ಚುವರಿಯಾಗಿ, ನೀವು ಕೆಲವು ಹನಿ ಪುದೀನಾ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಹಲ್ಲಿಗಳು ಓಡಾಡುವ ಸ್ಥಳಗಳಲ್ಲಿ ಸ್ಪ್ರೇ ಮಾಡಬಹುದು.
ರೋಸ್ಮೆರಿ ಗಿಡ: ರೋಸ್ಮರಿಯು ಕಟುವಾದ ವಾಸನೆಯನ್ನು ಹಲ್ಲಿಗಳು ಮಾತ್ರವಲ್ಲದೆ ನೊಣಗಳು, ಸೊಳ್ಳೆಗಳು ಸಹ ಇಷ್ಟಪಡುವುದಿಲ್ಲ. ಹಾಗಾಗಿ ಈ ಹಲ್ಲಿಗಳನ್ನು ಪರಿಣಾಮಕಾರಿಯಾಗಿ ಓಡಿಸಲು ನೀವು ರೋಸ್ಮೆರಿ ಗಿಡಗಳನ್ನು ಕುಂಡದಲ್ಲಿ ನೆಟ್ಟು ಮನೆಯ ಬಾಲ್ಕನಿ, ಕಿಟಕಿಗಳ ಬಳಿ ಇಡಬಹುದು.
ಇದನ್ನೂ ಓದಿ: ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಈ ಸರಳ ಸಲಹೆಯನ್ನು ಪಾಲಿಸಿ
ಚೆಂಡು ಹೂವಿನ ಗಿಡ: ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ, ಚೆಂಡು ಹೂಗಳ ಪರಿಮಳವು ಕೀಟಗಳು ಮತ್ತು ಹಲ್ಲಿಗಳನ್ನು ಸಹ ಹಿಮ್ಮೆಟ್ಟಿಸುತ್ತದೆ. ಹಾಗಾಗಿ ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆ ಸುತ್ತಲೂ ಚೆಂಡು ಹೂವಿನ ಗಿಡ ನೆಡಿ.
ಲೆಮನ್‌ಗ್ರಾಸ್: ಲೆಮನ್‌ಗ್ರಾಸ್ ಸಿಟ್ರೊನೆಲ್ಲಾ ಎಣ್ಣೆಯನ್ನು ಹೊಂದಿರುತ್ತದೆ, ಇದು ಪ್ರಬಲವಾದ ನೈಸರ್ಗಿಕ ಕೀಟ ನಿವಾರಕವಾಗಿದೆ. ಇದರ ಬಲವಾದ, ಸಿಟ್ರಸ್ ಪರಿಮಳವು ಹಲ್ಲಿಗಳಿಗೆ ತುಂಬಾ ಕಿರಿಕಿರಿಯನ್ನು ಉಂಟುಮಾಡುತ್ತವೆ. ಹಾಗಾಗಿ ನೀವು ಮನೆ ಬಳಿ ಈ ಗಿಡಗಳನ್ನು ನೆಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ