ವಾತಾವರಣವು ಕೂಲ್ ಆಗಿರುವಾಗ ಬಿಸಿ ಬಿಸಿಯಾಗಿರುವ ಏನನ್ನಾದರೂ ತಿಂಡಿ ತಿನ್ನಬೇಕೆಂದು ಮನಸ್ಸು ಬಯಸುವುದು ಸಹಜ. ಸಂಜೆ ಕಾಫಿ ಹಾಗೂ ಟೀ ಜೊತೆಗೆ ಖಾರವಾದ ಬಿಸಿ ಬಿಸಿ ತಿಂಡಿಯಿದ್ದು ಬಿಟ್ಟರೆ ಬೇರೆ ಬಾಯಿ ಚಪ್ಪರಿಸಿಕೊಂಡು ಸವಿಯುತ್ತಾರೆ. ಆದರೆ ನೀವು ಮನೆಯಲ್ಲಿ ಹೊಸದನ್ನು ಟ್ರೈ ಮಾಡ್ಬೇಕು ಅಂತಿದ್ರೆ ಆಲೂಗೆಡ್ಡೆಯಿಂದ ಆಲೂ ಬಾಲ್ಸ್ ಮಾಡಿ ಸವಿಯಬಹುದು. ಆಲೂಗೆಡ್ಡೆಯಿಂದ ತಯಾರಿಸಿದ ಈ ಖಾದ್ಯವು ಡಿಫ್ರೆಂಟ್ ರುಚಿಯನ್ನು ಕೊಡುವುದರೊಂದಿಗೆ ಎಣ್ಣೆಯನ್ನು ಬಳಸದ ಕಾರಣ ಆರೋಗ್ಯಕ್ಕೂ ಒಳ್ಳೆಯದು. ಮಕ್ಕಳಂತೂ ಇಷ್ಟ ಪಟ್ಟು ಸವಿಯುವ ಈ ಆಲೂ ಬಾಲ್ಸ್ ರೆಸಿಪಿಯನ್ನು ಮಾಡುವುದಂತೂ ಸುಲಭ.
* ಎರಡು ಆಲೂಗಡ್ಡೆ
* ಒಂದು ಹಸಿಮೆಣಸಿನಕಾಯಿ
* ಕಾಲು ಚಮಚ ಅರಿಶಿನಪುಡಿ
* ಅರ್ಧ ಚಮಚ ಖಾರದ ಪುಡಿ
* ಅರ್ಧ ಚಮಚ ಗರಂ ಮಸಾಲಾ
* ಒಂದು ಚಮಚ ಜೀರಿಗೆ ಪುಡಿ
* ಒಂದು ಚಮಚ ಅಕ್ಕಿಹಿಟ್ಟು
* ಕೊತ್ತಂಬರಿಸೊಪ್ಪು
* ರುಚಿಗೆ ತಕ್ಕಷ್ಟು ಉಪ್ಪು
* ಮೊದಲಿಗೆ ಆಲೂಗಡ್ಡೆಯನ್ನು ಕುಕ್ಕರ್ ನಲ್ಲಿ ನೀರನ್ನು ಹಾಕಿ ಬೇಯಿಸಿಕೊಳ್ಳಿ. ತಣ್ಣಗಾದ ಬಳಿಕ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ.
* ಆ ಬಳಿಕ ಆಲೂಗಡ್ಡೆ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿರುವ ಹಸಿಮೆಣಸಿನಕಾಯಿ ಅರಿಶಿಣಪುಡಿ, ಖಾರದಪುಡಿ, ಗರಂಮಸಾಲ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
* ತದನಂತರದಲ್ಲಿ ಈ ಮಿಶ್ರಣಕ್ಕೆ ಅಕ್ಕಿಹಿಟ್ಟು, ಕತ್ತರಿಸಿಟ್ಟ ಕೊತ್ತಂಬರಿಸೊಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಕಲಸಿಕೊಂಡು ಉಂಡೆಗಳಾಗಿ ಮಾಡಿಟ್ಟುಕೊಳ್ಳಿ.
* ಆ ಬಳಿಕ ಸ್ಟೌವ್ ಮೇಲೆ ಪಡ್ಡು ಪ್ಯಾನ್ ಇಟ್ಟು ಬಿಸಿಯಾಗುತ್ತಿದ್ದಂತೆ ಆಲೂಗಡ್ಡೆ ಉಂಡೆಗಳನ್ನು ಅದರಲ್ಲಿಟ್ಟು ಮುಚ್ಚಳ ಮುಚ್ಚಿ ಎರಡು ನಿಮಿಷಗಳ ಕಾಲ ಬೇಯಲು ಬಿಡಿ.
* ಮತ್ತೆ ಮುಚ್ಚಳ ತೆಗೆದು ಆಲೂಗಡ್ಡೆಯ ಉಂಡೆಗಳನ್ನು ತಿರುಗಿಸಿ, ಎರಡು ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಹೀಗೆ ಮಾಡಿದ್ರೆ ಸಂಜೆ ಕಾಫಿ ಟೀ ಜೊತೆಗೆ ಎಣ್ಣೆಯೇ ಬಳಸದೇ ಮಾಡಿದ ಆಲೂ ಬಾಲ್ಸ್ ಸವಿಯಲು ಸಿದ್ಧ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ