ಭಾರತದಲ್ಲಿ ಹುಟ್ಟಿ ಬೆಳೆದ ಜನರು ಪ್ರಪಂಚ ಮೂಲೆ ಮೂಲೆಯಲ್ಲಿ ದುಡಿಯುತ್ತಿದ್ದಾರೆ. ಹುಟ್ಟೂರು ಬಿಟ್ಟು ತೆರಳಿದ್ದರೂ ಕೂಡ, ಭಾರತಕ್ಕೆ ಸಂಕಷ್ಟ ಎದುರಾದಾಗ ಈ ಅನಿವಾಸಿಗಳು ನೆರವಿಗೆ ಬರುತ್ತಾರೆ. ತಮ್ಮ ತಾಯಿ ನೆಲೆಯ ಅಭಿವೃದ್ಧಿಗಾಗಿ ಅನಿವಾಸಿ ಭಾರತೀಯರು ನೀಡುವ ಕೊಡುಗೆ ಅಪಾರವಾದದ್ದು. ಹೀಗಾಗಿ ಜನವರಿ 9 ರಂದು ಅವರಿಗಾಗಿ ಪ್ರವಾಸಿ ಭಾರತೀಯ ದಿನವನ್ನು ಮೀಸಲಿಡಲಾಗಿದೆ. ಈ ದಿನದಂದು ಅನಿವಾಸಿ ಭಾರತೀಯರ ಕೊಡುಗೆಯನ್ನು ಸ್ಮರಿಸಲಾಗುತ್ತದೆ
1915ರ ಜ.9ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ ಆಗಿದ್ದರು. ತದನಂತರದಲ್ಲಿ ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಹಿನ್ನಲೆಯಲ್ಲಿ ಗಾಂಧೀಜಿಯವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಭಾರತ ಸರ್ಕಾರ ಜನವರಿ 9 ರಂದು ‘ಪ್ರವಾಸಿ ಭಾರತೀಯ ದಿವಸ್’ ಆಗಿ ಆಚರಿಸುವುದಾಗಿ ಘೋಷಿಸಿತು. ಅಂದಿನಿಂದ ಪ್ರವಾಸಿ ಭಾರತೀಯ ದಿವಸ್ ಆಚರಣೆಯು ಚಾಲ್ತಿಯಲ್ಲಿದೆ.
2003ರಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಸ್ಮರಿಸಲಾಗುವ ಸಲುವಾಗಿ ಈ ಆಚರಣೆಯನ್ನು ಪ್ರಾರಂಭಿಸಲಾಯಿತು. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ವಾಣಿಜ್ಯ ಮಂಡಳಿ ಒಕ್ಕೂಟ, ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದಿಂದ ಸಹಯೋಗದಿಂದ ಈ ಕಾರ್ಯಕ್ರಮ ಆಯೋಜಿಸುತ್ತದೆ. ವರ್ಷಕ್ಕೊಮ್ಮೆ ನಡೆಸಲಾಗುತ್ತಿದ್ದ ಈ ಆಚರಣೆಯನ್ನು 2015ರ ಬಳಿಕ ಪ್ರತೀ ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತಿದೆ. ಈ ದಿನ ನಡೆಯುವ ಸಮಾವೇಶದಲ್ಲಿ ಅನಿವಾಸಿಗಳಿಗೆ ಭಾರತ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.
ಇದನ್ನೂ ಓದಿ: ಮೇಕಪ್ ನ್ಯಾಚುಲರ್ ಆಗಿ ಬರಬೇಕಂದ್ರೆ ಈ ಟಿಪ್ಸ್ ಪಾಲಿಸಿ
ದೇಶದ ಪ್ರಮುಖ ನಗರದಲ್ಲಿ ಸಮಾವೇಶ ನಡೆಸುವ ಮೂಲಕ ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತದೆ. 2015 ರಿಂದ 2023 ರವರೆಗೆ ಒಟ್ಟು 16 ಸಮಾವೇಶಗಳು ನಡೆದಿವೆ. ಈ ವರ್ಷ 18 ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶವನ್ನು ಒಡಿಶಾ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜನವರಿ 8 ರಿಂದ 10 ರವರೆಗೆ ಭುವನೇಶ್ವರದಲ್ಲಿ ನಡೆಯಲಿದೆ. ಪ್ರವಾಸಿ ಭಾರತೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು 50 ಕ್ಕೂ ಹೆಚ್ಚು ದೇಶಗಳಿಂದ ಹೆಚ್ಚಿನ ಸಂಖ್ಯೆಯ ಅನಿವಾಸಿ ಭಾರತೀಯರು ಭಾಗವಹಿಸುತ್ತಿದ್ದು, ಈ ವರ್ಷ ಅಭಿವೃದ್ಧಿ ಹೊಂದಿದ ಭಾರತಕ್ಕೆ ಅನಿವಾಸಿ ಭಾರತೀಯರ ಕೊಡುಗೆ ಎನ್ನುವ ಥೀಮ್ ನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ