ಕೇಕ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಚಾಕೊಲೇಟ್ ಕೇಕ್ ಅಂದರೆ ಬಾಯಲ್ಲಿ ನೀರು ಬರುತ್ತೆ. ಈ ಬಾರಿ ಕ್ರಿಸ್ಮಸ್ ಪ್ರಯುಕ್ತ ನಿಮ್ಮ ಮನೆಯಲ್ಲಿ ಸ್ಪೆಷಲ್ ಆಗಿ ಚಾಕೊಲೇಟ್ ಕೇಕ್ ಮಾಡಿ. ವಿಧಾನ ಕೂಡಾ ಸುಲಭವಾಗಿದೆ. ಹಬ್ಬಕ್ಕೆ ಚಾಕೊಲೇಟ್ ಕೇಕ್ ಮಾಡುವ ಮೂಲಕ ಕ್ರಿಸ್ಮಸ್ ಸಂಭ್ರಮವನ್ನು ಹೆಚ್ಚಿಸಿ. ಚಾಕೊಲೇಟ್ ಕೇಕ್ ಮಾಡಲು ಬೇಕಾಗುವ ಸಾಮಾಗ್ರಿಗಳನ್ನ ಮತ್ತು ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಹಂತ- 1
ಮೊದಲು ಒಂದು ಮಧ್ಯಮ ಗಾತ್ರದ ಕುಕ್ಕರ್ ತೆಗೆದುಕೊಳ್ಳಿ. ಅದನ್ನ ಗ್ಯಾಸ್ ಮೇಲೆ ಇಡಿ. ಉರಿ ಸಣ್ಣದಾಗಿರಲಿ. ಅದಕ್ಕೆ ಅರ್ಧ ಕಪ್ ಪುಡಿ ಉಪ್ಪು ಹಾಕಿ. ಪುಡಿ ಉಪ್ಪು ಹಾಕಿದ ಬಳಿಕ ಉಪ್ಪಿನ ಮೇಲೆ ರಂಧ್ರವಿರುವ ಸ್ಟೀಲ್ ತಟ್ಟೆಯಿಂದ ಮುಚ್ಚಿ. ಬಳಿಕ ಕುಕ್ಕರ್ ಮುಚ್ಚಳವನ್ನು ರಬ್ಬರ್ ಮತ್ತು ವಿಶಲ್ ಹಾಕದೇ ಮುಚ್ಚಿ. ಸ್ವಲ್ಪ ಹೊತ್ತು ಪ್ರೀ ಹೀಟ್ ಮಾಡಬೇಕು.
ಹಂತ -2
ನಂತರ ಇನ್ನೊಂದು ಕೇಕ್ ಆಕಾರ ಬರುವ ಪಾತ್ರೆಯನ್ನು ತೆಗೆದುಕೊಳ್ಳಿ. ಅದರ ಒಳಗೆ ವೃತ್ತಾಕಾರವಾಗಿ ಕತ್ತರಿಸಿದ ಟಿಶ್ಯು ಪೇಪರ್ ಹಾಕಿ.
ಹಂತ- 3
ಮತ್ತೊಂದು ಬೌಲ್ಗೆ ಒಂದೂವರೆ ಕಪ್ ಮೈದಾ ಹಿಟ್ಟು ಹಾಕಿ. ಅದಕ್ಕೆ ಒಂದು ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್ ಹಾಕಿ. ಒಂದು ಟೇಬಲ್ ಸ್ಪೂನ್ ಬೇಕಿಂಗ್ ಪೌಡರ್, ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡ ಹಾಕಿ. ಮೂರು ಟೇಬಲ್ ಸ್ಪೂನ್ ಕೊಕೊ ಪೌಡರ್ ಹಾಕಿ. ಇವೆಲ್ಲವನ್ನೂ ಜರಡಿಯಿಂದ ಸೋಸಿಕೊಳ್ಳಬೇಕು. ಕಾರಣ ಪುಡಿಗಳಲ್ಲಿ ಉಂಡೆ ಉಂಡೆಯಿದ್ದರೆ ಕೇಕ್ ಚೆನ್ನಾಗಿರುವುದಿಲ್ಲ.
ಹಂತ- 4
ಒಂದು ಬೌಲ್ಗೆ 1 ಕಪ್ ಸಕ್ಕರ್, 1/4 ಕಪ್ ಮೊಸರು, 1/4 ಕಪ್ ಹಾಲು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ 1/4 ಕಪ್ ಅಡುಗೆ ಎಣ್ಣೆ ಹಾಕಿ. ಬಳಿಕ ಚಾಕೊಲೇಟ್ ಸಿರಪ್ ಹಾಕಿ, ವೆನಿಲ್ಲಾ ಸಾರ ಒಂದು ಟೇಬಲ್ ಸ್ಪೂನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮೂರನೇ ಹಂತದಲ್ಲಿ ಸಿದ್ಧಪಡಿಸಿದ ಮಿಶ್ರಣಕ್ಕೆ ಹಾಕಿ. ನಂತರ ಮತ್ತೆ ಚೆನ್ನಾಗಿ ಕಲೆಸಬೇಕು. ಮೆಲ್ಟ್ ಆಗಿರುವ ಚಾಕೊಲೇಟ್ನಂತೆ ಮಿಶ್ರಣ ಸಿದ್ಧವಾಗುತ್ತದೆ. ನಂತರ ಸ್ವಲ್ಪ ಹಾಲು, ಒಂದು ಟೇಬಲ್ ಸ್ಪೂನ್ ವೆನಿಗಾರ್ ಹಾಕಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ.
ಹಂತ-5
ಮೇಲಿನ ಮಿಶ್ರಣವನ್ನು ಕೇಕ್ ಮಾಡಲು ಸಿದ್ಧಪಡಿಸಿ ಪಾತ್ರೆಗೆ ಹಾಕಿ. ನಂತರ ಇದನ್ನು ಉಪ್ಪು ಹಾಕಿದ್ದ ಕುಕ್ಕರ್ ಒಳಗೆ ಇಡೀ. 35ರಿಂದ 40 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುಕ್ಕರ್ನಲ್ಲಿ ಬೇಯಿಸಬೇಕು. (ಕುಕ್ಕರ್ಗೆ ವಿಶಲ್ ಮತ್ತು ಬೆಲ್ಟ್ ಹಾಕಬಾರದು)
ಹಂತ- 6
ಒಂದು ಬೌಲ್ಗೆ 100 ml ಅಮುಲ್ ಫ್ರೆಶ್ ಕ್ರೀಮ್ ಹಾಕಿಕೊಳ್ಳಿ. ಇದನ್ನು ಸಣ್ಣ ಉರಿಯಲ್ಲಿ ಒಂದು ಕುದಿ ಬರುವವರೆಗೆ ಬೇಯಿಸಬೇಕು. ಇನ್ನೊಂದು ಬೌಲ್ಗೆ 100 ಗ್ರಾಮ್ಗೆ ಚಾಕೊ ಚಿಪ್ಸ್ ಹಾಕಿ. ಈ ಚೋಕೊ ಚಿಪ್ಸ್ಗೆ ಬಿಸಿ ಮಾಡಿದ ಫ್ರೆಶ್ ಕ್ರೀಮಮ್ನ ಹಾಕಿ. ಎರಡು ನಿಮಿಷ ಒಂದು ಪ್ಲೇಟ್ನಿಂದ ಮುಚ್ಚಿಡಬೇಕು. ಎರಡು ನಿಮಿಷದ ಬಳಿಕ ಒಂದು ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ. ಚಾಕೊ ಚಿಪ್ಸ್ ಕರುಗುತ್ತದೆ. ಇದಕ್ಕೆ ಒಂದು ಚಮಚ ಬೆಣ್ಣೆ ಹಾಕಿ ಎರಡು ಗಂಟೆಗಳ ಕಾಲ ರೂಮ್ ಟೆಂಪ್ರೆಚರ್ನಲ್ಲಿ ತಣ್ಣಗಾಗಲು ಬಿಡಿ.
ಹಂತ- 7
ಕುಕ್ಕರ್ನಲ್ಲಿ ಹಾಕಿದ ಮಿಶ್ರಣ ಕೇಕ್ ರೀತಿ ಬಂದಾಗ ಅದನ್ನು ಹೊರಗೆ ತೆಗೆದು 5 ನಿಮಿಷ ಹಾಗೇ ಬಿಡಿ. ತಣ್ಣಗಾದ ಬಳಿಕ ಮೇಲಿನ ಒಂದು ಲೇಯರ್ ಚಾಕುವಿನಿಂದ ಕತ್ತರಿಸಿ. ಕೆಳಗಿನ ಲೇಯರ್ಗೆ ಆರನೇ ಹಂತದಲ್ಲಿ ಸಿದ್ಧಪಡಿಸಿದ ಚಾಕೊಲೇಟ್ ಮಿಶ್ರಣವನ್ನು ಹಾಕಿ. ಪುನಃ ಎರಡು ಲೇಯರ್ನ ಜೋಡಿಸಿ. ಮೇಲಿಂದ ಕೇಕ್ ಮೇಲೆ ಚಾಕೊಲೇಟ್ ಮಿಶ್ರಣವನ್ನು ಸುರಿಯಿರಿ. 3 ಗಂಟೆಗಳ ಕಾಲ ಪ್ರಿಡ್ಜ್ನಲ್ಲಿ ಇಡಿ. ನಂತರ ಕತ್ತರಿಸಿ ಮನೆಯವರೊಂದಿಗೆ ತಿನ್ನಿ.
ಇದನ್ನೂ ಓದಿ
Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು
Diet Tips: ಡಯೆಟ್ ಸಮಯದಲ್ಲಿ ಹಸಿವನ್ನು ನಿವಾರಿಸಿಕೊಳ್ಳಲು ಈ ಆಹಾರವನ್ನು ಸೇವಿಸಿ