Relationship Tips :ಗಂಡ ಹೆಂಡತಿ ಸಂಬಂಧ ಗಟ್ಟಿಯಾಗಿರಲು ಏನು ಮಾಡ್ಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 08, 2024 | 3:00 PM

ಯಾವ ಸಂಬಂಧಗಳಲ್ಲಿ ಮನಸ್ತಾಪ ಹಾಗೂ ಜಗಳಗಳು ಇಲ್ಲ ಹೇಳಿ. ಜಗಳವಿದ್ದ ಕಡೆಯಲ್ಲಿ ಪ್ರೀತಿಯೂ ಹೆಚ್ಚಿರುತ್ತದೆ ಎನ್ನುವ ಮಾತಿದೆ. ಗಂಡ ಹೆಂಡತಿ ಸಂಬಂಧವು ಕೂಡ ಇದಕ್ಕೆ ಹೊರತಾಗಿಲ್ಲ. ಸಂಗಾತಿಗಳಿಬ್ಬರ ನಡುವೆ ಬಾಂಧವ್ಯವನ್ನು ಈ ಸಣ್ಣ ಪುಟ್ಟ ವಿಚಾರಗಳನ್ನು ಹಾಳು ಮಾಡುತ್ತವೆ. ಹೀಗಾಗಿ ದಂಪತಿಗಳ ನಡುವಿನ ಬಾಂಧವ್ಯವು ಗಟ್ಟಿಯಾಗಿರಬೇಕಾದ್ರೆ ಈ ಕೆಲವು ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡಬೇಕು.

Relationship Tips :ಗಂಡ ಹೆಂಡತಿ ಸಂಬಂಧ ಗಟ್ಟಿಯಾಗಿರಲು ಏನು ಮಾಡ್ಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us on

ಗಂಡ ಹೆಂಡಿರ ನಡುವಿನ ಸಂಬಂಧವು ಹಾಲು ಜೇನಿನಂತಿರಬೇಕು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಾಗಿದಾಗ ಸಂಸಾರದಲ್ಲಿ ಸದಾ ಸಂತೋಷ ನೆಲೆಸಲು ಸಾಧ್ಯ. ಮದುವೆಯಾದ ನಂತರ ಸಂಬಂಧವನ್ನು ಉಳಿಸಿಕೊಳ್ಳುವುದು ಪತಿ-ಪತ್ನಿ ಇಬ್ಬರ ಜವಾಬ್ದಾರಿಯಾಗಿದೆ. ಆದರೆ ಸಣ್ಣ ಪುಟ್ಟ ಮುನಿಸುಗಳು ದಾಂಪತ್ಯ ಜೀವನವನ್ನು ಹಾಳು ಮಾಡುತ್ತವೆ. ಆದ್ದರಿಂದ, ದಂಪತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ತಕ್ಷಣವೇ ಪರಿಹರಿಸಿಕೊಳ್ಳುವುದು ಅವಶ್ಯಕ. ಅದಲ್ಲದೇ, ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಈ ಕೆಲವು ವಿಷಯಗಳಿಗೆ ಹೆಚ್ಚು ಗಮನ ಹರಿಸಿದರೆ ಇಬ್ಬರ ನಡುವಿನ ಸಂಬಂಧವು ಇನ್ನಷ್ಟು ಗಟ್ಟಿಯಾಗುತ್ತವೆ.

  • ನಿಮ್ಮ ಸಂಗಾತಿಗೆ ಸಾಕಷ್ಟು ಸಮಯವನ್ನು ನೀಡಿ: ಪ್ರತಿ ಸಂಬಂಧವು ಬಲಪಡಿಸುವ ಅಸ್ತ್ರವೇ ಈ ಸಮಯ. ಒಬ್ಬರಿಗೊಬ್ಬರು ಸಮಯ ನೀಡುವುದು ಸಂಬಂಧವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಉದ್ಯೋಗಸ್ಥ ದಂಪತಿಗಳಿಗೆ ಪರಸ್ಪರ ಒಟ್ಟಿಗೆ ಕಳೆಯಲು ಸಮಯವೇ ಇಲ್ಲ. ಇದರಿಂದ ಪತಿ-ಪತ್ನಿಯರ ನಡುವಿನ ಅಂತರವು ಹೆಚ್ಚಾಗುತ್ತದೆ. ಹೀಗಾಗಿಯೇ ಸಂಬಂಧವು ಮತ್ತಷ್ಟು ದುರ್ಬಲಗೊಳ್ಳುತ್ತದೆ. ಈ ಕಾರಣದಿಂದ ನಿಮ್ಮ ಸಂಗಾತಿಗಾಗಿ ಸಮಯ ಮೀಸಲಿಡಲು ಪ್ರಯತ್ನಿಸಿ.
  • ಸಂಭಾಷಣೆ ಅಗತ್ಯ: ದಂಪತಿಗಳಿಬ್ಬರೂ ಜಗಳವಾಡುವ ಸಮಯದಲ್ಲಿ ಒಬ್ಬರು ಮೌನವಾಗಿರುವುದು ಅತ್ಯವಶ್ಯಕ. ಇಲ್ಲದಿದ್ದರೆ ಮಾತಿಗೆ ಮಾತು ಬೆಳೆದು ವೈವಾಹಿಕ ಜೀವನವು ಹಾಳಾಗುತ್ತದೆ. ಅದಲ್ಲದೇ, ನಿಮ್ಮ ಸಂಗಾತಿಯೂ ಏನಾದರೂ ಕೋಪಮಾಡಿಕೊಂಡಿದ್ದರೆ ಪ್ರೀತಿಯ ಸಂಭಾಷಣೆಯ ಮೂಲಕ ಕೋಪವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ನಾನೇಕೆ ಮಾತನಾಡಲಿ ಎನ್ನುವ ಅಹಂ ಭಾವವು ಬಂದರೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತವೆ.ಹೀಗಾಗಿ ಸಂಭಾಷಣೆಯಿಂದ ಎಲ್ಲವನ್ನು ಬಗೆಹರಿಸಿಕೊಳ್ಳುವುದು ಮುಖ್ಯ.
  • ತಪ್ಪನ್ನು ಒಪ್ಪಿಕೊಳ್ಳುವ ಗುಣವಿರಲಿ : ತಪ್ಪು ಯಾರಿಂದ ಆಗಲ್ಲ ಹೇಳಿ, ಕೆಲವೊಮ್ಮೆ ತಿಳಿದೋ ತಿಳಿಯದೇನೋ ತಪ್ಪುಗಳಾಗುತ್ತದೆ. ಇದರಿಂದಲೇ ಎಷ್ಟೋ ಸಲ ಸಂಗಾತಿಯ ಮನಸ್ಸಿಗೆ ನೋವಾಗುತ್ತದೆ. ಈ ಸಂದರ್ಭದಲ್ಲಿ ಸಂಗಾತಿಯ ಬಳಿ ಕ್ಷಮಿಸಿ ಎಂದು ಹೇಳಲು ಹಿಂಜರಿಯಬಾರದು. ಕ್ಷಮಿಸಿ ಎಂದು ಕೇಳುವುದರಿಂದ ಸಂಬಂಧದಲ್ಲಿ ಬಿರುಕು ಮೂಡುವುದಿಲ್ಲ. ಸಂಗಾತಿಗಳಿಬ್ಬರೂ ಈ ಕೆಲ ವಿಷಯಗಳ ಬಗ್ಗೆ ಗಮನಹರಿಸಿದರೆ ದಾಂಪತ್ಯ ಜೀವನವು ಸುಖಕರವಾಗಿರಲು ಸಾಧ್ಯವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ