ಹರಪ್ಪಾ ನಾಗರಿಕತೆಯ ಅದ್ಭುತ ವ್ಯಾಪಾರ, ಮೂಲಸೌಕರ್ಯ ವ್ಯವಸ್ಥೆ; ಸಂಶೋಧನೆಯಲ್ಲಿ 2000 ವರ್ಷಗಳ ಹಿಂದಿನ ಕ್ಯಾರವಾನ್ಸೆರೈ ಪತ್ತೆ
21ನೆಯ ಈ ಶತಮಾನದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸೌಲಭ್ಯಗಳಿದ್ದರೂ ನಮ್ಮ ದೇಶದಲ್ಲಿ ಅಲ್ಲಲ್ಲಿ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಗುಂಡಿ ಬಿದ್ದ ರಸ್ತೆ, ಕಳಪೆ ಗುಣಮಟ್ಟದ ಸೌಕರ್ಯಗಳು ಇತ್ಯಾದಿ ಸಮಸ್ಯೆಗಳ ಸರಮಾಲೆಯೇ ಇದೆ. ಆದರೆ ಸಾವಿರಾರು ವರ್ಷಗಳ ಹಿಂದೆ, ಹರಪ್ಪ ನಾಗರಿಕತೆ ಕಾಲದಲ್ಲೇ ಈಗಿನ ನಗರ ವ್ಯವಸ್ಥೆಯನ್ನೂ ನಾಚಿಸುವಂತಹ ಸೌಕರ್ಯಗಳಿದ್ದುದು ಬೆಳಕಿಗೆ ಬಂದಿದೆ. ಹಾಗಾದರೆ, ಹರಪ್ಪ ನಾಗರಿಕತೆ ಕಾಲದ ನಗರ ವ್ಯವಸ್ಥೆ ಹೇಗಿತ್ತು? ಏನೇನು ಅದ್ಭುತಗಳಿದ್ದವು? ಸಂಪೂರ್ಣ ಮಾಹಿತಿ ಇಲ್ಲಿದೆ.

ಹರಪ್ಪಾ ನಾಗರಿಕತೆಯು (Harappan civilization) ಸುಮಾರು 2500 ವರ್ಷಗಳಷ್ಟು ಹಳೆಯದು. ಆ ಕಾಲದಲ್ಲಿಯೇ ಅಂದಿನ ಜನ ಅದ್ಭುತ ನಗರ ಯೋಜನೆಯನ್ನು ನಿರ್ಮಿಸಿದ್ದರು. ಈ ನಾಗರಿಕತೆಯ ಕಾಲದ ನಗರಗಳು ವಿಶಾಲವಾದ ರಚನಾತ್ಮಕ ಬೀದಿಗಳು, ಬೀದಿ ದೀಪಗಳು, ಕಸದ ತೊಟ್ಟಿಯ ವ್ಯವಸ್ಥೆ, ಸಾರ್ವಜನಿಕ ಬಾವಿ, ವಸಾಹತು ಕೇಂದ್ರ, ಸುಧಾರಿತ ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಈಗಿನ ಕಾಲದ ವ್ಯವಸ್ಥೆಗಳನ್ನೇ ನಾಚಿಸುವಂತಹ ಸುಸಜ್ಜಿತ ನಗರ ವ್ಯವಸ್ಥೆಗಳನ್ನು ಹೊಂದಿದ್ದವು. ಈ ಎಲ್ಲಾ ಸಂಗತಿಗಳ ಬಗ್ಗೆ ನಿಮಗೂ ಗೊತ್ತಿದೆ ಅಲ್ವಾ. ಇದೀಗ ಹೊಸ ಸಂಶೋಧನೆಯಲ್ಲಿ ಈ ನಾಗರಿಕತೆಯ ಸಂಘಟಿತ ವ್ಯಾಪಾರ ಮೂಲಸೌಕರ್ಯ ವ್ಯವಸ್ಥೆಗೆ ಸಂಬಂಧಿಸಿದ ಕ್ಯಾರವಾನ್ಸೆರೈ ಪತ್ತೆಯಾಗಿದೆ. ಹೋಟೆಲ್‌ಗಳಂತೆಯೇ ಇದ್ದ ಈ ಕ್ಯಾರವಾನ್ಸೆರೈ ಕಂಚಿನ ಯುಗದ ವ್ಯಾಪಾರಿಗಳಿಗೆ ವಸತಿ, ಆಹಾರ ಮತ್ತು ರಕ್ಷಣೆಯನ್ನು ಒದಗಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿತ್ತು.
ಹೊಸ ಸಂಶೋಧನೆಯಲ್ಲಿ 2000 ವರ್ಷಗಳ ಹಿಂದಿನ ಕ್ಯಾರವಾನ್ಸೆರೈ ಪತ್ತೆ:
ಸುಮಾರು 4,000 ವರ್ಷಗಳ ಹಿಂದೆ, ಗುಜರಾತ್‌ನ ಕೊಟಡಾ ಭಡ್ಲಿಯ ಹರಪ್ಪಾ ವಸಾಹತು ತಾಣವು ವ್ಯಾಪಾರಿಗಳಿಗೆ ಊಟ, ಕುಡಿಯುವ ನೀರು, ವಿಶ್ರಾಂತಿ ತಾಣ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಕ್ಯಾರವಾನ್ಸೆರೈ (ಪ್ರವಾಸಿ ತಂಗುತಾಣ) ಹೊಂದಿತ್ತು. ಇದು ದೂರದ ವ್ಯಾಪಾರಿಗಳಿಗೆ ತಂಗಲು ಹೋಟೆಲ್‌ನಂತಹ ವ್ಯವಸ್ಥೆಯಾಗಿತ್ತು. ಪುಣೆಯ ಡೆಕ್ಕನ್ ಕಾಲೇಜಿನ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆ, ಸಿಂಬಿಯೋಸಿಸ್ ಸ್ಕೂಲ್ ಫಾರ್ ಲಿಬರಲ್ ಆರ್ಟ್ಸ್ ಮತ್ತು ನವದೆಹಲಿಯ ಪುರಾತತ್ವ ಸಮೀಕ್ಷೆ (ASI) ನಡೆಸಿದ ಹೊಸ ಸಂಶೋಧನೆಯು ಈ ಕ್ಯಾರವಾನ್‌ಸೆರೈ ಅನ್ನು ಪತ್ತೆಹಚ್ಚಿದೆ. ಈ ಸಂಶೋಧನೆಯನ್ನು ವೈಜ್ಞಾನಿಕ ನಿಯತಕಾಲಿಕೆ L’Anthropologie (ಎಲ್ಸೆವಿಯರ್, 2025) ನಲ್ಲಿ ಪ್ರಕಟ ಮಾಡಲಾಗಿದೆ.
ಈ ಸಂಶೋಧನೆಯು ಭಾರತೀಯ ಉಪಖಂಡದಲ್ಲಿ 2,000 ವರ್ಷಗಳ ಹಿಂದೆ ಸಂಘಟಿತ ವ್ಯಾಪಾರ ವ್ಯವಸ್ಥೆ ಮೂಲಸೌಕರ್ಯದ ಹೇಗಿತ್ತು ಎಂಬುದನ್ನು ತೆರೆದಿಟ್ಟಿದೆ. ಇದು ಹರಪ್ಪಾ ನಾಗರಿಕತೆಯು ನಗರ ಯೋಜನೆ ಮತ್ತು ಸಮುದ್ರ ವ್ಯಾಪಾರವನ್ನು ಕರಗತ ಮಾಡಿಕೊಂಡಿದ್ದಲ್ಲದೆ, ದೂರದೂರಿನ ವ್ಯಾಪಾರಿಗಳಿಗೆ ಆಶ್ರಯ, ಅವರ ಸರಕು ಸಾಗಾಟದ ಪ್ರಾಣಿಗಳ ಆಶ್ರಯ ಮತ್ತು ಆಹಾರ, ಪಾನೀಯದ ವ್ಯವಸ್ಥೆ ಸೇರಿದಂತೆ ವ್ಯಾಪಾರಕ್ಕೆ ಸಂಬಂಧಿಸಿದ ವ್ಯವಸ್ಥಿತ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಹೊಂದಿತ್ತು ಎಂಬುದನ್ನು ತೋರಿಸಿಕೊಟ್ಟಿದೆ. “ಇದು ಹರಪ್ಪಾ ನಾಗರಿಕತೆಯಲ್ಲಿ ಕ್ಯಾರವಾನ್ಸೆರೈ ಇದ್ದಿರುವುದಕ್ಕೆ ಬಲವಾದ ಪುರಾತತ್ತ್ವ ಶಾಸ್ತ್ರದ ಪುರಾವೆಯಾಗಿದೆ” ಎಂದು ಡೆಕ್ಕನ್ ಕಾಲೇಜಿನ ಪ್ರಮುಖ ಸಂಶೋಧಕ ಪ್ರಬೋಧ್ ಶಿರ್ವಾಲ್ಕರ್ ಹೇಳಿದ್ದಾರೆ.
ವರದಿಗಳ ಪ್ರಕಾರ, ಇದೀಗ ಪತ್ತೆಯಾಗಿರುವ ಕ್ಯಾರವಾನ್ಸೆರೈ ಸಿಂಧೂ ಕಣಿವೆ ನಾಗರಿಕತೆಯ ಕಾಲವಾದ ಕ್ರಿ.ಪೂ. 2300 ಮತ್ತು 1900 ರ ನಡುವಿನ ಅವಧಿಗೆ ಸೇರಿದೆ. ಈ ಆವಿಷ್ಕಾರವು ಭಾರತದಲ್ಲಿ ಸಂಘಟಿತ ವ್ಯಾಪಾರ ವ್ಯವಸ್ಥೆ ಬಹಳ ಹಿಂದೆಯೇ ಪ್ರಾರಂಭವಾದವು ಎಂಬುದನ್ನು ಬಹಿರಂಗಪಡಿಸುತ್ತದೆ. ಈ ಉತ್ಖನನದಲ್ಲಿ ಹಲವಾರು ಕೊಠಡಿಗಳನ್ನು ಹೊಂದಿರುವ ಕೇಂದ್ರ ಕಟ್ಟಡ, ಕೋಟೆ ಕೊತ್ತಲಗಳಿಂದ ಸುತ್ತುವರೆದಿರುವ ಗೋಡೆಗಳು ಮತ್ತು ಒಂಟೆಗಳು, ಎತ್ತುಗಳು ಸೇರಿದಂತೆ ಸರಕುಗಳನ್ನು ಹೊರುವ ಪ್ರಾಣಿಗಳ ವಿಶ್ರಾಂತಿಗಾಗಿ ಮಾಡಿಸಿದಂತಹ ತೆರೆದ ವಿಶ್ರಾಂತಿ ಕೊಠಡಿಗಳು ಪತ್ತೆಯಾಗಿವೆ. ಅಲ್ಲದೆ ಕುಂಬಾರಿಕೆಗಳು ಮತ್ತು ದೂರದ ದೇಶಗಳಿಂದ ಆಮದು ಮಾಡಿಕೊಂಡ ಸರಕುಗಳು ಪತ್ತೆಯಾಗಿದ್ದು, ಈ ಸ್ಥಳವು ವ್ಯಾಪಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಸೂಚಿಸುತ್ತದೆ.
ಪೋಸ್ಟ್ ಇಲ್ಲಿದೆ ನೋಡಿ:
‘Bronze age traders had luxury stops’: Harappans built India’s 1st roadside inns in Gujarat 4,000 years ago; Kotada Bhadli site reveals organised trade infra https://t.co/bbgF9kItyF
“Bronze Age traders crossing Gujarat stopped at well-organised roadside facilities that offered… pic.twitter.com/OHLhxGc5XV
— Amit Paranjape (@aparanjape) October 22, 2025
ಈ ಸ್ಥಳವನ್ನು ಡೆಕ್ಕನ್ ಕಾಲೇಜು 2010 ಮತ್ತು 2013 ರ ನಡುವೆ ಗುಜರಾತ್ ರಾಜ್ಯ ಪುರಾತತ್ವ ಇಲಾಖೆಯ ಸಹಯೋಗದೊಂದಿಗೆ ಉತ್ಖನನ ಮಾಡಿತ್ತು. ಈಗ ಇದನ್ನು ರಾಡಾರ್, ಐಸೊಟೋಪ್ ಮತ್ತು ಲಿಪಿಡ್ ವಿಶ್ಲೇಷಣೆಯಂತಹ ಸುಧಾರಿತ ತಂತ್ರಗಳನ್ನು ಬಳಸಿಕೊಂಡು ಮರು-ಮೌಲ್ಯಮಾಪನ ಮಾಡಲಾಗಿದೆ. ಈ ಸಂಶೋಧನೆ ಹರಪ್ಪಾ ನಾಗರಿಕತೆಯ ಸುಸಜ್ಜಿತ ವ್ಯಾಪಾರ ವ್ಯವಸ್ಥೆ ಹೇಗಿತ್ತು ಎಂಬುದನ್ನು ತೋರಿಸುತ್ತದೆ.
ಸಂಶೋಧಕರಾದ ಈಶಾ ಪ್ರಸಾದ್ ಮತ್ತು ಯದುಬೀರ್ ಸಿಂಗ್ ರಾವತ್ ಅವರ ಪ್ರಕಾರ, ಈ ಆವಿಷ್ಕಾರವು ಇಲ್ಲಿಯವರೆಗೆ ನಿಗೂಢವಾಗಿ ಉಳಿದಿದ್ದ ಸಿಂಧೂ ಕಣಿವೆಯ ವ್ಯಾಪಾರ ಜಾಲದ ತುಣುಕಾಗಿದ್ದು, ಹರಪ್ಪಾ ನಾಗರಿಕತೆಯ ವ್ಯಾಪಾರವು ನಗರಗಳು ಮತ್ತು ಬಂದರುಗಳಿಗೆ ಸೀಮಿತವಾಗಿರಲಿಲ್ಲ, ಬದಲಾಗಿ ವ್ಯಾಪಾರಿಗಳು ವಿಶ್ರಾಂತಿ ಪಡೆಯಲು, ತಮ್ಮ ಪ್ರಾಣಿಗಳಿಗೆ ಆಹಾರವನ್ನು ನೀಡಲು ಇದ್ದಂತಹ ಸುಸಜ್ಜಿತ ವ್ಯವಸ್ಥೆಯೂ ಇಲ್ಲಿತ್ತು.
ಇದನ್ನೂ ಓದಿ: ಅಕ್ರಮ ಸಂಬಂಧದಲ್ಲಿ ಬೆಂಗಳೂರು ಫಸ್ಟ್; ಗ್ಲೀಡನ್ ವರದಿಯಲ್ಲಿ ಬಹಿರಂಗ
ಹರಪ್ಪಾ ನಾಗರಿಕತೆಯ ಸಮಯದಲ್ಲಿ ಹೇಗೆ ನಡೆಯುತ್ತಿತ್ತು ವ್ಯಾಪಾರ?
ಹರಪ್ಪಾ ನಾಗರಿಕತೆಯ ವ್ಯಾಪಾರವು ಮೆಸೊಪಟ್ಯಾಮಿಯಾ (ಆಧುನಿಕ ಇರಾಕ್) ಮತ್ತು ಭಾರತದ ಇತರ ಭಾಗಗಳಿಗೆ ವಿಸ್ತರಿಸಿತ್ತು. ಆದರೆ ಈ ವ್ಯಾಪಾರ ಹೇಗೆ ನಡೆಯಿತು ಎಂಬುದು ನಿಗೂಢವಾಗಿಯೇ ಉಳಿದಿತ್ತು. ಈಗ, ಈ ಅಧ್ಯಯನವು ಧೋಲಾವಿರ, ಲೋಥಾಲ್ ಮತ್ತು ಶಿಕಾರ್‌ಪುರದಂತಹ ನಗರಗಳನ್ನು ಸಂಪರ್ಕಿಸುವ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಹರಪ್ಪನ್ನರು ಕೋಟೆಯ ವಿಶ್ರಾಂತಿ ಕೇಂದ್ರಗಳನ್ನು ನಿರ್ಮಿಸಿದ್ದರು, ಈ ಕೇಂದ್ರಗಳಿಂದ, ವ್ಯಾಪಾರಿಗಳು ಲೋಹಗಳು, ಮಣಿಗಳು, ಜವಳಿ, ಮಸಾಲೆಗಳು, ಕುಂಬಾರಿಕೆ ಮತ್ತು ಇತರ ಸರಕುಗಳನ್ನು ಸಾಗಿಸುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಿದೆ.
ಈ ವಸಾಹತುಗಳು ಧೋಲಾವಿರ, ಲೋಥಾಲ್ ಮತ್ತು ಶಿಕಾರ್‌ಪುರದಂತಹ ದೊಡ್ಡ ಗುಜರಾತ್ ನಗರಗಳ ನಡುವಿನ ವ್ಯಾಪಾರ ಮಾರ್ಗಗಳಲ್ಲಿ ಕಾರ್ಯತಂತ್ರವಾಗಿ ನೆಲೆಗೊಂಡಿದ್ದವು. ಕೊಟಡಾ ಭಡ್ಲಿ ಸುರಕ್ಷಿತ, ನಗರೇತರ ತಾಣವಾಗಿದ್ದು, ಇದನ್ನು ಶಾಶ್ವತ ವಾಸಸ್ಥಳಕ್ಕಿಂತ ಹೆಚ್ಚಾಗಿ ಅಲ್ಪಾವಧಿಯ ವಾಸ್ತವ್ಯಕ್ಕಾಗಿ ನಿರ್ಮಿಸಲಾಗಿತ್ತು ಎಂದು ಸಂಶೋಧಕ ಪ್ರಬೋಧ್ ಶಿರ್ವಾಲ್ಕರ್ ಹೇಳುತ್ತಾರೆ. ಕೋಟೆಗಳು, ಪ್ರಾಣಿಗಳನ್ನು ಕಟ್ಟಿಹಾಕಲು ಇದ್ದಂತಹ ಸ್ಥಳಗಳು, ವಿಶ್ರಾಂತಿ ಸ್ಥಳ, ಆಮದು ಮಾಡಿಕೊಂಡ ಸರಕುಗಳನ್ನು ಇಟ್ಟುಕೊಳ್ಳಲು ಇದ್ದಂತಹದ ಕಾರವಾನ್ಸೆರೈ ತರಹದ ವೈಶಿಷ್ಟ್ಯಗಳನ್ನು ಪತ್ತೆಹಚ್ಚುವ ಮೂಲಕ, ಈ ಸಂಶೋಧನಾ ಪ್ರಬಂಧವು ಹರಪ್ಪಾ ನಾಗರಿಕತೆಯು ಎರಡು ಸಾವಿರ ವರ್ಷಗಳ ಮೊದಲೇ ಸಂಘಟಿತ ವ್ಯಾಪಾರ ಮೂಲಸೌಕರ್ಯವನ್ನು ನಿರ್ವಹಿಸಿತ್ತು ಎಂದು ಸೂಚಿಸುತ್ತದೆ.
ಇದು ಭಾರತದ ಆರಂಭಿಕ ವ್ಯಾಪಾರ ಜಾಲದ ಒಂದು ನೋಟ:
ಈ ಆವಿಷ್ಕಾರವು ಸಿಂಧೂ ಕಣಿವೆ ನಾಗರಿಕತೆಯು ದೀರ್ಘ-ದೂರ ವ್ಯಾಪಾರವನ್ನು ಹೇಗೆ ನಿರ್ವಹಿಸುತ್ತಿತ್ತು ಎಂಬುದರ ಕುರಿತ ಅಪರೂಪದ ಒಳನೋಟವನ್ನು ನೀಡುತ್ತದೆ. ಹರಪ್ಪನ್ನರು ನಗರಗಳು ಮತ್ತು ಬಂದರುಗಳನ್ನು ನಿರ್ಮಿಸಿದ್ದರಲ್ಲದೆ, ಸುರಕ್ಷಿತ ಆಶ್ರಯಗಳು, ಆಹಾರ ಸರಬರಾಜು ವ್ಯವಸ್ಥೆ ಮತ್ತು ಪ್ರಾಣಿ ಆರೈಕೆ ಕೇಂದ್ರ ಸೇರಿದಂತೆ ಸುಸಜ್ಜಿತ ಪ್ರಯಾಣ ಮೂಲಸೌಕರ್ಯದ ವ್ಯವಸ್ಥೆಯನ್ನು ಅಂದಿನ ಕಾಲದಲ್ಲಿಯೇ ವ್ಯವಸ್ಥಿತವಾಗಿ ಸ್ಥಾಪಿಸಿದ್ದರು ಎಂಬುದನ್ನು ತೋರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 am, Sun, 26 October 25




