
ಸ್ನಾನ (Bath) ನಮ್ಮ ದಿನಚರಿಯ ಒಂದು ಪ್ರಮುಖ ಭಾಗವಾಗಿದ್ದು, ಕೆಲವರು ಅನೇಕ ಪ್ರಯೋಜನಗಳು ಲಭಿಸುತ್ತವೆ ಎಂಬ ಕಾರಣಗಳಿಗೆ ನೀರಿಗೆ ಸ್ವಲ್ಪ ರೋಸ್ ವಾಟರ್ ಅಥವಾ ಅರಶಿನ ಅಥವಾ ಹಸಿ ಹಾಲನ್ನು ಬೆರೆಸಿ ಸ್ನಾನ ಮಾಡುತ್ತಾರೆ. ಅಂತೆಯೇ ನೀರಿಗೆ ಚಿಟಿಕೆ ಕಲ್ಲುಪ್ಪನ್ನು (salt) ಬೆರೆಸಿ ಸ್ನಾನ ಮಾಡುವುದರಿಂದಲೂ ಅನೇಕಾರು ಪ್ರಯೋಜನಗಳನ್ನು ಪಡೆಯಬಹುದಂತೆ. ಹೌದು ಮೆಗ್ನೇಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಹಲವಾರು ಖನಿಜಗಳಿಂದ ಸಮೃದ್ಧವಾಗಿರುವ ಹಾಗೂ ಅಡುಗೆಯಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುವ ಉಪ್ಪು ದೇಹಕ್ಕೂ ಪ್ರಯೋಜನಕಾರಿ. ಉಪ್ಪನ್ನು ನೀರಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಸುತ್ತಲಿನ ನಕಾರಾತ್ಮಕ ಶಕ್ತಿ ನಿವಾರಣೆಯಾಗುವುದರ ಜೊತೆಗೆ ದೇಹಕ್ಕೂ ಹಲವಾರು ಪ್ರಯೋಜನಗಳಿವೆ. ಹಾಗಿದ್ರೆ ಉಪ್ಪು ನೀರಿನಿಂದ (salt water) ಸ್ನಾನ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ನೋಡೋಣ.
ಸ್ನಾನದ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದಲ್ಲಿ ಅಡಗಿರುವ ಕೊಳೆ ಸ್ವಚ್ಛವಾಗುತ್ತದೆ. ಅಲ್ಲದೆ ಇದು ಸತ್ತ ಜೀವಕೋಶಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ, ಬೇಸಿಗೆಯಲ್ಲಿ ಬೆವರಿನಿಂದ ಉಂಟಾಗುವ ರಿಂಗ್‌ವರ್ಮ್, ತುರಿಕೆ ಇತ್ಯಾದಿ ಚರ್ಮದ ಸೋಂಕುಗಳ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಜೊತೆಗೆ ಇದು ಚರ್ಮವನ್ನು ಕಾಂತಿಯುತವಾಗಿಸಲು ಸಹಕಾರಿ. ಅಷ್ಟೇ ಅಲ್ಲದೆ ಕಲ್ಲುಪ್ಪು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಚರ್ಮವನ್ನು ಸೋಂಕುಗಳಿಂದ ರಕ್ಷಿಸುತ್ತದೆ.
ಪ್ರತಿದಿನ ಓಡಾಟದ ಸಂದರ್ಭದಲ್ಲಿ ದೇಹದಲ್ಲಿ ನೋವು ಕಾಣಿಸಿಕೊಂಡರೆ, ಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ ಸ್ನಾನ ಮಾಡಬೇಕು. ಇದು ನೋವನ್ನು ನಿವಾರಿಸಲು, ಕೀಲು ನೋವು, ಮೊಣಕಾಲು ಮತ್ತು ಬೆನ್ನು ನೋವಿನಿಂದಲೂ ಪರಿಹಾರ ನೀಡುತ್ತದೆ. ಬೆಚ್ಚಗಿನ ನೀರಿಗೆ ಕಲ್ಲುಪ್ಪು ಸೇರಿಸಿ ಸ್ನಾನ ಮಾಡುವುದರಿಂದ ಊತ ಸಹ ಕಡಿಮೆಯಾಗುತ್ತದೆ.
ಪ್ರತಿದಿನ ಸ್ನಾನದ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಆಯಾಸ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಅಲ್ಲದೆ ಇದು ಆಯಾಸವನ್ನು ನಿವಾರಿಸುವುದರ ಜೊತೆಗೆ ದೇಹಕ್ಕೆ ಉಲ್ಲಾಸವನ್ನು ಒದಗಿಸುತ್ತದೆ.
ಇದನ್ನೂ ಓದಿ: ಜೇನುತುಪ್ಪದೊಂದಿಗೆ ಬೆಂಡೆಕಾಯಿ ನೀರು ಸೇವನೆ, ದೇಹದ ಆರೋಗ್ಯದಲ್ಲಿ ಈ 6 ಬದಲಾವಣೆ ಖಂಡಿತ
ಕಲ್ಲುಪ್ಪು ಬೇರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ಅದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಇದು ದೇಹದಲ್ಲಿ ಸುಡುವ ಸಂವೇದನೆ, ತುರಿಕೆ ಮತ್ತು ಊತದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಉಪ್ಪು ಉತ್ತಮ ಶುದ್ಧೀಕರಣ ಗುಣಗಳನ್ನು ಹೊಂದಿರುವುದರಿಂದ ಸ್ನಾನದ ನೀರಿಗೆ ಚಿಟಿಕೆ ಉಪ್ಪನ್ನು ಸೇರಿಸಿ ಸ್ನಾನ ಮಾಡುವುದರಿಂದ ದೇಹದಿಂದ ನಕಾರಾತ್ಮಕ ಶಕ್ತಿ ಮತ್ತು ಕಲ್ಮಶಗಳನ್ನು ತೆಗೆದು ಹಾಕಬಹುದು.
ಮೊದಲು ಒಂದು ಬಕೆಟ್ ತೆಗೆದುಕೊಂಡು ಅದಕ್ಕೆ ನೀರು ತುಂಬಿಸಿ. ಈ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನೀರಿನಲ್ಲಿ ಉಪ್ಪು ಬೆರೆತ ನಂತರ ಸ್ನಾನ ಮಾಡಿ. ಉಪ್ಪು ನೀರಿನಿಂದ ಸ್ನಾನ ಮಾಡುವುದು ನಿಮ್ಮ ಚರ್ಮಕ್ಕೂ ಪ್ರಯೋಜನಕಾರಿ ಹಾಗೆಯೇ ಇದರಿಂದ ನಕಾರಾತ್ಮಕ ಶಕ್ತಿಯನ್ನು ಕೂಡ ದೂರ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ