Dinner Mistakes: ರಾತ್ರಿಯ ಊಟದ ನಂತರ ಮಾಡುವ ಈ ಕೆಲವು ತಪ್ಪುಗಳು ತೂಕ ಹೆಚ್ಚಾಗಲು ಕಾರಣವಾಗಬಹುದು
ತೂಕ ಹೆಚ್ಚಾಗುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿಯೇ ಹೆಚ್ಚಿನ ಜನರು ಸಮತೋಲಿತ ಆಹಾರ ಪದ್ಧತಿಯನ್ನು ಪಾಲನೆ ಮಾಡುತ್ತಾರೆ. ಇದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಹೀಗಿದ್ದರೂ ಕೂಡಾ ರಾತ್ರಿಯ ಊಟದ ನಂತರ ಮಾಡುವ ಕೆಲವೊಂದು ತಪ್ಪುಗಳು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ದೇಹ ತೂಕವು ವೇಗವಾಗಿ ಹೆಚ್ಚಾಗಿ ಅದು ಸ್ಥೂಲಕಾಯತೆಗೆ ಕಾರಣವಾಗಬಹುದು.

ಇಂದಿನ ಬಿಡುವಿಲ್ಲದ ಜೀವನಶೈಲಿಯಿಂದಾಗಿ ಜನರು ತಡರಾತ್ರಿಯವರೆಗೆ ಕೆಲಸ ಮಾಡಿ ನಂತರ ರಾತ್ರಿಯ ಊಟವನ್ನು ಸೇವನೆ ಮಾಡುತ್ತಾರೆ. ಈ ಅಭ್ಯಾಸವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಬಹುದು. ಹೀಗೆ ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದ ಕೆಲವು ತಪ್ಪು ಅಭ್ಯಾಸಗಳಿಂದ ಸ್ಥೂಲಕಾಯತೆ, ಮಧುಮೇಹ, ಅಧಿಕ ರಕ್ತದೊತ್ತಡ ದಂತಹ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಮುಖ್ಯವಾಗಿ ದೇಹಾರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ, ತೂಕವನ್ನು ನಿಯಂತ್ರಣದಲ್ಲಿಡವುದು ಬಹಳ ಮುಖ್ಯ. ಹೀಗೆ ತೂಕವನ್ನು ನಿಯಂತ್ರಣದಲ್ಲಿಡಲು ಹೆಚ್ಚಿನ ಜನರು ಸಮತೋಲಿತ ಆಹಾರ ಕ್ರಮವನ್ನು ಪಾಲನೆ ಮಾಡುತ್ತಾರೆ. ಹೀಗಿದ್ದರೂ ರಾತ್ರಿ ಊಟ ಮಾಡಿದ ತಕ್ಷಣ ನೀವು ಮಾಡುವ ಕೆಲವು ತಪ್ಪುಗಳು ವೇಗವಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು. ಹಾಗಾಗಿ ರಾತ್ರಿಯ ಊಟದ ನಂತರ ಮಾಡುವ ಈ ಕೆಲವು ತಪ್ಪು ಅಭ್ಯಾಸಗಳನ್ನು ಬಿಟ್ಟುಬಿಡಿ.
ರಾತ್ರಿ ಊಟವಾದ ತಕ್ಷಣ ಮಾಡುವ ಈ ಕೆಲವು ತಪ್ಪುಗಳು ತೂಕ ಹೆಚ್ಚಾಗಲು ಕಾರಣವಾಗಬಹುದು:
ಊಟವಾದ ತಕ್ಷಣ ನೀರು ಕುಡಿಯುವುದು:
ಉತ್ತಮ ಜಲಸಂಚಯನಕ್ಕಾಗಿ ನೀರು ಕುಡಿಯುವುದು ಬಹಳ ಮುಖ್ಯ. ಆದರೆ ಆಹಾರ ಸೇವಿಸಿದ ತಕ್ಷಣ ನೀರು ಕುಡಿಯಬಾರದು. ಆರೋಗ್ಯ ತಜ್ಞರ ಪ್ರಕಾರ ನಾವು ಆಹಾರವನ್ನು ತಿಂದ ಬಳಿಕ ದೇಹವು ಅದನ್ನು ಜೀರ್ಣಿಸಿಕೊಳ್ಳಲು ಕನಿಷ್ಠ ಎರಡು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಈ ಮಧ್ಯೆ ನೀರು ಕುಡಿದರೆ ಅದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆಹಾರವನ್ನು ಸೇವಿಸಿದ ನಂತರ ಕನಿಷ್ಠ 45 ರಿಂದ 60 ನಿಮಿಷಗಳ ನಂತರ ನೀರನ್ನು ಕುಡಿಯಬೇಕು. ಇದರ ಹೊರತಾಗಿ ನೀವು ಊಟದ ಮೊದಲು ನೀರನ್ನು ಕುಡಿಯಲು ಬಯಸಿದರೆ ಅರ್ಧ ಗಂಟೆಯ ಮೊದಲು ನೀರನ್ನು ಕುಡಿಯುವುದು ಉತ್ತಮ.
ಊಟವಾದ ತಕ್ಷಣ ಮಲಗುವುದು:
ಹೆಚ್ಚಿನ ಜನರು ಊಟವಾದ ತಕ್ಷಣ ಮಲಗುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಈ ಅಭ್ಯಾಸವು ದೇಹ ತೂಕದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡಬಹುದು. ನೀವು ತಿಂದ ತಕ್ಷಣ ಮಲಗಿದಾಗ, ನಿಮ್ಮ ದೇಹದ ಜೀರ್ಣಕ್ರಿಯೆಯ ಪ್ರತಿಕ್ರಿಯೆಯು ನಿಧಾನವಾಗುತ್ತದೆ. ಮತ್ತು ಚಯಾಪಚಯಕ್ರಿಯೆಯು ನಿಧಾನಗೊಳ್ಳುತ್ತದೆ. ಇದು ದೇಹದಲ್ಲಿ ಹೆಚ್ಚುವರಿ ಕ್ಯಾಲೋರಿ ಶೇಖರಣೆಯಾಗಲು ಕಾರಣವಾಗಬಹುದು. ಇದರಿಂದ ದೇಹ ತೂಕವೂ ಹೆಚ್ಚಾಗಬಹುದು. ಹಾಗಾಗಿ ತಿನ್ನುವ ಮತ್ತು ಮಲಗುವ ನಡುವೆ ಕನಿಷ್ಠ 4 ರಿಂದ 5 ಗಂಟೆಗಳ ಅಂತರವನ್ನು ಕಾಯ್ದಿರಿಸಿಕೊಳ್ಳುವುದು ಮುಖ್ಯ.
ಇದನ್ನೂ ಓದಿ: ಒಂದು ವಾರದಲ್ಲಿ ನೈಸರ್ಗಿಕವಾಗಿ ಗುಲಾಬಿ ತುಟಿ ಪಡೆಯಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಕೆಫೀನ್ ಸೇವನೆ:
ತೃಪ್ತಿಕರ ಭೋಜನದ ನಂತರ ಅನೇಕರು ಒಂದು ಕಪ್ ಕಾಫಿ ಅಥವಾ ಚಹಾವನ್ನು ಸೇವನೆ ಮಾಡುತ್ತಾರೆ. ತಜ್ಞರ ಪ್ರಕಾರ ಆಹಾರ ತಿಂದ ತಕ್ಷಣ ಕೆಫೀನ್ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ. ದೇಹವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಗ್ಯಾಸ್ ಮತ್ತು ಅಸಿಡಿಟಿಯಂತಹ ಸಮಸ್ಯೆಗಳು ಉಂಟಾಗುತ್ತದೆ. ಇದರೊಂದಿಗೆ ದೇಹ ತೂಕವೂ ಹೆಚ್ಚಾಗುತ್ತದೆ. ಅಲ್ಲದೆ ಇದು ನಿದ್ರಾಹೀನತೆಗೂ ಕಾರಣವಾಗಬಹುದು. ಆದ್ದರಿಂದ ಊಟವಾದ ನಂತರ ಕಾಫಿ ಅಥವಾ ಟೀ ಸೇವನೆ ಮಾಡಬೇಡಿ. .
ರಾತ್ರಿ ಊಟ ಮಾಡಿದ ತಕ್ಷಣ ಹಣ್ಣುಗಳನ್ನು ಸೇವನೆ ಮಾಡುವುದು:
ಅನೇಕರು ರಾತ್ರಿ ಊಟದ ನಂತರ ಹಣ್ಣುಗಳನ್ನು ಸೇವನೆ ಮಾಡುತ್ತಾರೆ. ಆದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದಲ್ಲ. ರಾತ್ರಿಯ ಊಟದ ನಂತರ ಹಣ್ಣುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿಯಾಗಬಹುದು. ಏಕೆಂದರೆ ಹಣ್ಣುಗಳು ಫೈಬರ್ ಮತ್ತು ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದಲ್ಲದೆ ಪೇರಳೆ, ಮಾವು ಮುಂತಾದ ಹಣ್ಣುಗಳು ಹೆಚ್ಚಿನ ಆಮ್ಲೀಯತೆಯನ್ನು ಹೊಂದಿದ್ದು, ಇದು ಹೊಟ್ಟೆಯಲ್ಲಿ ಆಮ್ಲೀಯತೆಯ ಸಮಸ್ಯೆಯನ್ನು ಉಂಟುಮಾಡಬಹುದು. ಹಾಗಾಗಿ ರಾತ್ರಿಯ ಊಟದ 1 ರಿಂದ 2 ಗಂಟೆಯ ಮೊದಲು ಅಥವಾ ನಂತರ ಹಣ್ಣುಗಳನ್ನು ಸೇವನೆ ಮಾಡುವುದು ಉತ್ತಮ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: