ಕೆಲವೊಮ್ಮೆ ಮಕ್ಕಳು ತಮ್ಮ ನಿರೀಕ್ಷೆಗೆ ಏರದಿದ್ದಾಗ ನೀನು ನನ್ನ ಮಗನೇ ಅಲ್ಲ ಎಂದೋ, ನೀನು ನನ್ನ ಮಗಳೇ ಅಲ್ಲ ಎಂದೂ ಬೈದಿರುವುದಿದೆ. ಇಂತಹ ಪ್ರಸಂಗಗಳಲ್ಲಿ ಮಕ್ಕಳ ಮನಸ್ಸಿನ ಮೇಲೆ ಅದು ತೀವ್ರ ಆಘಾತ ಬೀರಿದೆ. ಅವರು ತಮ್ಮ ಸಾಧನೆಯನ್ನು ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವಾಗಲೂ ಈ ಹೇಳಿಕೆಗಳೇ ಮನಸ್ಸಿನಲ್ಲಿ ಪ್ರತಿಧ್ವನಿಸಿ ಅವರ ಸಾಧನೆಯನ್ನು ಮತ್ತಷ್ಟು ಕುಂಠಿತಗೊಳಿಸಿವೆ. ಅದರಲ್ಲಿಯೂ ಮಕ್ಕಳಿಗೆ ಪೋಷಕರು ತುಂಬ ಮುಖ್ಯವಾಗಿರುತ್ತಾರೆ, ತಮ್ಮ ಬೆಂಬಲಕ್ಕೆ ಅವರು ನಿಲ್ಲುವರು ಎಂದೇ ನಂಬಿರುತ್ತಾರೆ. ಅಂತಹ ಮಕ್ಕಳಿಗೆ ಪೋಷಕರು ಯಾರಾದರೂ ಈ ರೀತಿ ‘ತಮ್ಮ ಮಗ/ಳು’ ಎನ್ನುವುದನ್ನೇ ನಿರಾಕರಿಸುವ ಮಾತಾಡಿದಾಗ ಎಳೆಯ ಮನಸ್ಸುಗಳ ಮೇಲೆ ಆಗುವ ಆಘಾತ ಅಪಾರ.
-ಆರ್. ಶ್ರೀನಾಗೇಶ್, ಲೇಖಕರು, ಆಪ್ತಸಲಹೆಗಾರರು
ನಚಿಕೇತ ವಾಜಶ್ರವಸ್ ಎಂಬ ಋಷಿಯ ಮಗ. ಅಪ್ಪ ಮಹಾ ಸಿಡುಕ. ಬಹು ಶೀಘ್ರ ಕೋಪಿ. ಆತ ಒಮ್ಮೆಒಂದು ಯಾಗ ಮಾಡಿ ದಾನಗಳನ್ನು ಕೊಡುತ್ತಿರುತ್ತಾನೆ. ಎಲ್ಲವನ್ನೂ ಅಪ್ಪ ದಾನ ಮಾಡುವುದನ್ನು ಕಂಡ ನಚಿಕೇತನನ್ನೂ ದಾನವಾಗಿ ಕೊಡುವನು ಎಂದು ನಂಬಿ, ನನ್ನನ್ನು ಯಾರಿಗೆ ದಾನ ಮಾಡುವೆ ಎಂದು ಕೇಳುವನು. ಮೊದಲಿಗೆ ಉತ್ತರಿಸದ ಅಪ್ಪನನ್ನು ಮತ್ತೆ ಮತ್ತೆ ಈ ಪ್ರಶ್ನೆ ಕೇಳಿದಾಗ ಯಮನಿಗೆ ಎಂದು ಬಿಡುವನು. ಆಗ ನಚಿಕೇತ ನೇರವಾಗಿ ಯಮಲೋಕಕ್ಕೆ ಹೋಗಿ, ನನ್ನಅಪ್ಪ ನನ್ನನ್ನು ನಿನಗೆ ದಾನ ಮಾಡಿದ್ದಾನೆ, ಅದಕ್ಕೇ ನೇರವಾಗಿ ನಾನು ನಿನ್ನ ಬಳಿ ಬಂದೆ ಎಂದು ಹೇಳುವನು.
ಆತ್ಮಸಂಯಮಕ್ಕೆ ಹೆಸರಾದ ಋಷಿಗಳೂ ಈ ಭಾವುಕತೆಗೆ ಹೊರತಲ್ಲ, ಅಂದ ಮೇಲೆ ನಮ್ಮ ಪಾಡೇನು, ಅಲ್ಲವೆ! ನಿನ್ನಂತಹ ಮಕ್ಕಳು ಯಾಕಾದರೂ ಹುಟ್ಟಿದರೋ ಎನ್ನುವ ಮಾತನ್ನು ರೋಸಿಹೋದ ಹಲವು ಪೋಷಕರು ಹೇಳುವುದುಂಟು. ಇದು ಅವರು ಎಷ್ಟರಮಟ್ಟಿಗೆ ರೋಸಿ ಹೋಗಿದ್ದಾರೆ ಎನ್ನುವುದರ ದ್ಯೋತಕವೇ ಹೊರತು ಆ ಪ್ರಶ್ನೆಗೆ ಉತ್ತರ ಗೊತ್ತಿದೆ. ಅವರಿಗೆ ಉತ್ತರ ಗೊತ್ತಿಲ್ಲದಿರುವುದು ಮಕ್ಕಳ ಆ ನಡವಳಿಕೆಯಲ್ಲಿ ತಮ್ಮ ಪಾತ್ರವೇನು ಎನ್ನುವುದು. ಮಕ್ಕಳು ಆನುವಂಶಿಕವಾಗಿ ಎರಡೂ ಪೋಷಕರ ಕಡೆಯಿಂದ ಒಂದಷ್ಟು ಗುಣಗಳನ್ನು ರೂಢಿಸಿಕೊಂಡಿರುತ್ತಾರೆ. ಕೆಲವನ್ನುಕಲಿತಿರುತ್ತಾರೆ. ಆ ಕಲಿಕೆ ಏನು ಎನ್ನುವುದರ ಕಡೆ ಗಮನ ಕೊಡಲು ಪೋಷಕರಿಗೆ ವ್ಯವಧಾನ ಇಲ್ಲದಿರಬಹುದು, ಅಥವಾ ಅದು ಅಷ್ಟು ಮುಖ್ಯ ಎನಿಸದಿರಬಹುದು. ಸುಮಾರು ಆರು ವರ್ಷದ ಬಾಲಕನ ನಡವಳಿಕೆಯನ್ನು ಕೆಲವು ದಿನ ಗಮನಿಸಿದ ನಂತರ ನನಗೆ ಅವನ ಪೋಷಕರ ಬಳಿ ಮಾತನಾಡಬೇಕು ಎನಿಸಿತು. ಅಮ್ಮ ಬಂದರು, ಅಪ್ಪ ಬರಲೇಇಲ್ಲ! ಅವರಿಗೆ ಸಮಯ ಸಿಗುವುದಿಲ್ಲ ಎನ್ನುವುದು ನನಗೆ ಕೊಟ್ಟ ಕಾರಣ! ಇದೇ ಮಕ್ಕಳು ಬೆಳೆದು ದೊಡ್ಡವಾರಾದಾಗ ಅವರ ನಡವಳಿಕೆ ಇದೇ ರೀತಿ ಮುಂದುವರೆದರೆ, ತಮ್ಮ ಸಮಯವನ್ನೆಲ್ಲ ಮಕ್ಕಳು ಮಾಡಿದ ಅನಾಹುತಗಳಿಂದ ತಮ್ಮನ್ನು ಕಾಪಾಡಿಕೊಳ್ಳಲು ವಿನಿಯೋಗಿಸಬೇಕಾಗುವುದು ಎಂಬ ಪರಮ ಸತ್ಯ ಇವರ ಗಮನಕ್ಕೆ ಬರುವುದೇಇಲ್ಲ.
ಅಂತಹ ಸಂದರ್ಭದಲ್ಲಿಯೇ ಮೇಲಿನಂತಹ ಹತಾಶ ಪ್ರತಿಕ್ರಿಯೆಗಳು ಹೊರಬೀಳುವುದು.
ಬದಲಿಗೆ ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಮೌಲ್ಯಗಳನ್ನು ಕಲಿಸಿ, ಸರಿ-ತಪ್ಪುಗಳ ವಿಶ್ಲೇಷಣೆ ಮಾಡುವುದನ್ನು ಹೇಳಿಕೊಟ್ಟು, ವಯೋಮಾನಕ್ಕೆ ತಕ್ಕ ಜವಾಬ್ದಾರಿಗಳನ್ನು ನಿಭಾಯಿಸುವ ರೀತಿಯನ್ನು ರೂಢಿ ಮಾಡಿದರೆ, ಹಾಗೆ ಬೆಳೆದ ಮಕ್ಕಳು ಹತಾಶ ಭಾವನೆಯನ್ನು ಮೂಡಿಸುವುದಿಲ್ಲ.
• ಕೆಲವು ಪೋಷಕರು, ಕೆಲವು ಶಿಕ್ಷಕರು ಎಳೆಯ ಮಕ್ಕಳ ಮನಸ್ಸಿನ ಮೇಲೆ ಮಾತಿನ ಬರೆ ಹಾಕುವರು. ನಿನ್ನಂತಹ ಮಗಳು ಇದ್ದರೆ ನಿನ್ನಅಮ್ಮನಿಗೆ ಆರೋಗ್ಯ ಹಾಳಾಗದೆ ಮತ್ತಿನ್ನೇನಾಗುತ್ತದೆ ಎಂದು ಶಿಕ್ಷಕಿ ಹೇಳಿದ ಮಾತು ಆ ಮುಗ್ಧ ಬಾಲಕಿಯ ಮೇಲೆ ಎಂತಹ ತೀವ್ರ ಪರಿಣಾಮ ಬೀರಿತ್ತು ಎಂಬ ಗಂಧವೇ ಆ ಶಿಕ್ಷಕಿಗಿಲ್ಲ.
• ಮತ್ತೊಬ್ಬ ಶಿಕ್ಷಕಿ ಚಾಡಿ ಮಾತು ಕೇಳಿಕೊಂಡು, ನೀನು ಕಳ್ಳಿ ಎಂದು ಒಬ್ಬ ಬಾಲಕಿಯನ್ನು ಜರಿದಾಗ ಆ ಬಾಲಕಿ ಮೂರು ದಿನ ಜ್ವರದಿಂದ ನರಳಿದಳು. ನಾನು ಕಳ್ಳಿಯಲ್ಲ ಎಂದು ಜ್ವರದಲ್ಲಿ ಬಡಬಡಿಸುತ್ತಿದ್ದಳು.
• ಕೆಲವೊಮ್ಮೆ ಮಕ್ಕಳು ತಮ್ಮ ನಿರೀಕ್ಷೆಗೆ ಏರದಿದ್ದಾಗ ನೀನು ನನ್ನ ಮಗನೇ ಅಲ್ಲ ಎಂದೋ, ನೀನು ನನ್ನ ಮಗಳೇ ಅಲ್ಲ ಎಂದೂ ಬೈದಿರುವುದಿದೆ. ಇಂತಹ ಪ್ರಸಂಗಗಳಲ್ಲಿ ಮಕ್ಕಳ ಮನಸ್ಸಿನ ಮೇಲೆ ಅದು ತೀವ್ರ ಆಘಾತ ಬೀರಿದೆ. ಅವರು ತಮ್ಮ ಸಾಧನೆಯನ್ನು ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವಾಗಲೂ ಈ ಹೇಳಿಕೆಗಳೇ ಮನಸ್ಸಿನಲ್ಲಿ ಪ್ರತಿಧ್ವನಿಸಿ ಅವರ ಸಾಧನೆಯನ್ನು ಮತ್ತಷ್ಟು ಕುಂಠಿತಗೊಳಿಸಿವೆ. ಅದರಲ್ಲಿಯೂ ಮಕ್ಕಳಿಗೆ ಪೋಷಕರು ತುಂಬ ಮುಖ್ಯವಾಗಿರುತ್ತಾರೆ, ತಮ್ಮ ಬೆಂಬಲಕ್ಕೆ ಅವರು ನಿಲ್ಲುವರು ಎಂದೇ ನಂಬಿರುತ್ತಾರೆ. ಅಂತಹ ಮಕ್ಕಳಿಗೆ ಪೋಷಕರು ಯಾರಾದರೂ ಈ ರೀತಿ ‘ತಮ್ಮ ಮಗ/ಳು’ ಎನ್ನುವುದನ್ನೇ ನಿರಾಕರಿಸುವ ಮಾತಾಡಿದಾಗ ಎಳೆಯ ಮನಸ್ಸುಗಳ ಮೇಲೆ ಆಗುವ ಆಘಾತ ಅಪಾರ.
ಇವು ಮೂರೂ ಉದಾಹರಣೆಗಳು ಪೋಷಕರಿಗೆ ತಮ್ಮ ಮಾತಿನ ಮೇಲೆ ಯಾಕೆ ಹಿಡಿತವಿರಬೇಕು ಎಂಬ ಸ್ಪಷ್ಟ ಕಲ್ಪನೆಯನ್ನು ಕೊಟ್ಟಿರುವುದುಎಂದು ನಂಬುವೆ!
ಗಣಿತ ಮತ್ತು ವಿಜ್ಞಾನದಲ್ಲಿ ಉತ್ತಮ ಅಂಕ ಗಳಿಸಿದವರನ್ನು ದಡ್ಡರು ಎಂದು ಹಣೆಪಟ್ಟಿ ಹಚ್ಚುವ ಸಂಪ್ರದಾಯ ನಮ್ಮಲ್ಲಿ ಆಳವಾಗಿ ಬೇರೂರಿದೆ. ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ತುಂಬ ಹಿಂದುಳಿದಿದ್ದಾರೆ ಎನ್ನುವ ‘ತಜ್ಞ’ ಅಭಿಪ್ರಾಯವನ್ನೂ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ. ಆ ತೀರ್ಪಿಗೆ ಇವೆರಡೇ ವಿಷಯಗಳನ್ನು ಮಾನದಂಡವಾಗಿಟ್ಟುಕೊಂಡಿದ್ದು ಎಂದರೆ ಅದರ ಉಪಯುಕ್ತತೆಯನ್ನು ಅರ್ಥ ಮಾಡಿಕೊಳ್ಳಬಹುದು.
ಗಣಿತದ ನಂತರ ಮಕ್ಕಳನ್ನು ಹೆಚ್ಚಾಗಿ ಹೆದರಿಸುವ ವಿಷಯ ಎಂದರೆ ಇಂಗ್ಲಿಷ್ ಎಂದು ಹೇಳಲಾಗಿದೆ. ಇಂಗ್ಲಿಷ್ ಬಂದರೆ ಬುದ್ಧಿವಂತರು, ಕನ್ನಡದಲ್ಲಿ (ಅಥವಾ ಮಾತೃಭಾಷೆಯಲ್ಲಿ) ಮಾತನಾಡಿದರೆ ಅದು ಅವಮಾನಕರ ಎನ್ನುವ ಮನೋಭಾವವೂ ಬದಲಾಗಬೇಕು. ಸೋಂಬೇರಿ ಎನ್ನುವುದು ಮತ್ತೊಂದು ಹಣೆಪಟ್ಟಿ. ಸ್ವಲ್ಪ ಕಷ್ಟಪಟ್ಟರೆ ಕಲಿಯಬಹುದು ಸಾರ್. ಪ್ರಯತ್ನಾನೇ ಮಾಡಲ್ಲ. ಸೋಂಬೇರಿ ಎಂದು ತಮ್ಮ ಮಗ ಅಥವಾ ಮಗಳನ್ನು ಅದೆಷ್ಟೋ ಪೋಷಕರು ದೂಷಿಸಿದ್ದಾರೆ.
ಸೋಂಬೇರಿತನ ಹದಿ ವಯಸ್ಸಿನಲ್ಲಿ ಒಂದು ಸಹಜ ಪ್ರಕ್ರಿಯೆ. ಅವರದೇಹದಲ್ಲಿ ವಿವಿಧ ಬೆಳವಣಿಗೆಗಳಾಗುತ್ತಿರುತ್ತವೆ. ಅವರ ಶಕ್ತಿ ಹೆಚ್ಚಾಗಿ ಅದಕ್ಕೇ ವಿನಿಯೋಗವಾಗುವುದರಿಂದ ಅನೇಕ ವೇಳೆ ಸೋಂಬೇರಿಗಳಾಗಿ ಒಂದೆಡೆ ಬಿದ್ದುಕೊಂಡಿರಬಹುದು, ಅಥವಾ ಕುಳಿತ ಕಡೆ ಸೇವೆ ಮಾಡಿಸಿಕೊಳ್ಳುವ ನಡವಳಿಕೆ ತೋರಿಸಬಹುದು. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಇದಕ್ಕೆ ಪರಿಹಾರವನ್ನುಕೊಡುತ್ತದೆ.
ಕೆಲವರಿಗೆ ಬರೆಯಲು ಕಷ್ಟವಾಗುತ್ತದೆ. ಓದುತ್ತಾರೆ, ಉತ್ತರ ಹೇಳುತ್ತಾರೆ. ಆದರೆ ಬರೆಯಲು ಮಾತ್ರ ತುಂಬ ಹಿಂದೇಟು ಹಾಕುತ್ತಾರೆ. ಅದಕ್ಕೆ ಕಾರಣವನ್ನು ಹುಡುಕುವುದು ಅತ್ಯಗತ್ಯ. ಅವರು ಬರೆಯುವ ಸಮಯದಲ್ಲಿ ಲೇಖನಿ ಹಿಡಿಯುವ ಶೈಲಿ ಮತ್ತು ಬರೆಯುವಾಗ ಬೆರಳುಗಳಲ್ಲಿ ನೋವೇನಾದರೂ ಆಗುವುದೇ ಎಂಬುದನ್ನು ಗಮನಿಸಬೇಕು. ಹಾಗೆಯೇ ಕೆಲವೊಂದು ವಿಷಯಗಳು ಕೆಲವರಿಗೆ ಕಷ್ಟಕರವಾಗಬಹುದು. ಅದಕ್ಕೆ ಶಿಕ್ಷಕರು ಪಾಠ ಮಾಡುವ ಶೈಲಿಯೂ ಇರಬಹುದು, ಅಥವಾ ಶಿಕ್ಷಕರು ಇವರೊಂದಿಗೆ ಹೇಗೆ ನಡೆದುಕೊಳ್ಳುವರು ಎನ್ನುವುದೂ ಕಾರಣವಿರಬಹುದು. ಮೆದುಳಿನ ಬಲಭಾಗವನ್ನು ಹೆಚ್ಚಾಗಿ ಬಳಸುವವರು ಗಣಿತ/ವಿಜ್ಞಾನದಲ್ಲಿ ಹಿಂದೆ ಉಳಿಯುವರು, ಎಡಭಾಗವನ್ನು ಹೆಚ್ಚಾಗಿ ಬಳಸುವವರಿಗೆ, ಭಾಷೆ, ಚರಿತ್ರೆ ಮುಂತಾದ ವಿಷಯಗಳು ಕ್ಲಿಷ್ಟ ಎನಿಸುತ್ತದೆ ಎನ್ನುವ ತತ್ವವೂ ಇದೆ. ಸೂಕ್ತ ಕಸರತ್ತುಗಳು ಈ ಕೊರತೆಯನ್ನು ನಿವಾರಿಸಬಹುದು. ಮಕ್ಕಳು ಓದಿಗೆ ಗಮನ ಕೊಡುತ್ತಿಲ್ಲ ಎಂದಾದರೆ, ಮೇಲೆ ಹೇಳಿದ ಕಲಿಕಾದೋಷಗಳು ಕಾರಣವೇ, ಮನೆಯ ವಾತಾವರಣ ಓದಿಗೆ ಪೂರಕವಾಗಿದೆಯೇ, ಮಕ್ಕಳಲ್ಲಿ ಓದುವ ಖುಷಿಯನ್ನು ಮೂಡಿಸುವಲ್ಲಿ ಪೋಷಕರೇನಾದರೂ ವಿಫಲವಾಗಿದ್ದಾರೆಯೇ, ಅಥವಾ ಓದನ್ನುಕುರಿತು ಮಕ್ಕಳಲ್ಲಿ ನಿರ್ಲಕ್ಷ್ಯ ಇರಬಹುದೇ ಎಂಬುದನ್ನು ಕಂಡುಹಿಡಿದುಕೊಂಡರೆ ಪರಿಹಾರ ಸಾಧ್ಯವಿದೆ.
ಅದೊಬ್ಬ ಹುಡುಗಿ ಹತ್ತನೆಯ ಪರೀಕ್ಷೆಯಲ್ಲಿ ನಿರೀಕ್ಷೆ ಮೀರಿ ಶೇ. 94 ಅಂಕ ತೆಗೆದಳು. ಸ್ವಯಂ ಶಿಕ್ಷಕರೇ ಆಗಿದ್ದ ಅವಳ ತಂದೆ, ‘ಮಗಳೇ, ಪಾಪ ತುಂಬ ಕಷ್ಟ ಪಟ್ಟಿದೀಯ. ನನಗೆ ಖುಷಿಯದೆ. ಈ ವರ್ಷ ಆರಾಮಾಗಿ ಓದು’ ಎಂದು ಹೇಳಿದರು. ಅವಳು ಅಪ್ಪನ ಮಾತನ್ನು ಮೀರದೆ ಆರಾಮಾಗಿ ಇದ್ದಳು. ಪರಿಣಾಮ ಮೊದಲ ಪಿಯುನಲ್ಲಿ ಮಧ್ಯಮ ಸಾಧನೆ, ಎರಡನೆಯ ಪಿಯುನಲ್ಲಿ ಫೇಲ್! ಇದಕ್ಕೆ ತಂದೆ ಕಾರಣವೋ, ಆ ಹುಡುಗಿಯೇ ಕಾರಣವೋ? ಮುಖ್ಯ ಪರೀಕ್ಷೆ ಬರೆಯುವವರಿಗೆ ಪರೀಕ್ಷೆಗೆ ಎರಡು ದಿನ ಮುಂಚೆ ಒಂದು ಬ್ರೇಕ್ ತೆಗೆದುಕೊಳ್ಳಿ, ಅಂದು ಪುಸ್ತಕದ ಬೀರುವಿಗೆ ಬೀಗ ಹಾಕಿಡಿ ಎಂದು ಸಲಹೆ ಕೊಡುತ್ತಿರುತ್ತೇನೆ.
ನನ್ನ ಮಗಳು ಹತ್ತನೆಯ ಪರೀಕ್ಷೆ ಬರೆಯುವ ಸಮಯದಲ್ಲಿಇದೇ ಸೂತ್ರ ಅಳವಡಿಸಿಕೊಂಡು, ಅವಳನ್ನೂ, ಆಗ ಅವಳ ಸಹಪಾಠಿಯಾಗಿದ್ದ, ಈಗ ನನ್ನ ಅಳಿಯನಾಗಿರುವ ವಿದ್ಯಾರ್ಥಿಯನ್ನೂ, ಮತ್ತೊಬ್ಬ ವಿದ್ಯಾರ್ಥಿನಿಯನ್ನೂ ಪರೀಕ್ಷೆಗೆ ಎರಡು ದಿನ ಮುಂಚೆ ಒಂದು ಟ್ರೆಕಿಂಗ್ ಕರೆದುಕೊಂಡು ಹೋಗಿದ್ದೆ. ಇವತ್ತು ಓದಿಗೆ ಬ್ರೇಕ್ ಕೊಡಿ ಎಂದೇ ಹೇಳಿದ್ದೆ. ಆದರೆ ಅವರು ಮೂವರೂ ಮನೆಗೆ ವಾಪಸಾದ ಮೇಲೆ ಎರಡು ತಾಸು ಓದಿಗೆ ಗಮನ ಕೊಟ್ಟರು. ನಿಷ್ಠಾವಂತ ವಿದ್ಯಾರ್ಥಿಗಳಿಗೆ ತಾವು ಏನು ಮಾಡುತ್ತೇವೆ ಎನ್ನುವುದು ಚೆನ್ನಾಗಿ ತಿಳಿದಿರುತ್ತದೆ. ಅವರ ಆತ್ಮವಿಶ್ವಾಸ ಕುಗ್ಗದಂತೆ, ಅವರಲ್ಲಿ ಆತಂಕ ಮೂಡದಂತೆ ಅವರನ್ನು ಸುತ್ತುವರಿದ ಎಲ್ಲರೂ ಎಚ್ಚರಿಕೆ ವಹಿಸಬೇಕಷ್ಟೇ.
ಮಕ್ಕಳಿಗೆ ಕೆಲವು ಹಿತನುಡಿಗಳನ್ನೂ ನುಡಿಯುವುದು ಒಳ್ಳೆಯದು.
• ನೀವು ಓದುವುದು ನಿಮ್ಮ ಬೆಳವಣಿಗೆಗಾಗಿ, ನಿಮ್ಮಜೀವನಉತ್ತಮ ಸ್ಥಿತಿಯಲ್ಲಿರಲು. ಇದನ್ನು ಎಂದಿಗೂ ಮರೆಯಬೇಡಿ.
• ನಿಮ್ಮ ಪೋಷಕರು ನೀವು ಬಯಸಿದ ಎಲ್ಲ ಸೌಕರ್ಯಗಳನ್ನು ಒದಗಿಸಲೇ ಬೇಕು, ಅದು ಅವರ ಕರ್ತವ್ಯ ಹಾಗೂ ನಿಮ್ಮ ಹಕ್ಕು ಎಂದು ಪ್ರತಿಪಾದಿಸುವ ಮುನ್ನ ನಿಮ್ಮ ಕರ್ತವ್ಯಗಳೇನು ಎಂಬುದನ್ನು ಗುರುತಿಸಿ, ಅವನ್ನು ನಿಭಾಯಿಸುತ್ತಿದ್ದರೆ ಮಾತ್ರ ನಿಮ್ಮ ಹಕ್ಕನ್ನು ಪ್ರತಿಪಾದಿಸಬಹುದುಎನ್ನುವುದನ್ನು ನೆನಪಿಡಿ.
• ಎಲ್ಲ ಸವಲತ್ತುಗಳನ್ನೂ ಸುಲಭವಾಗಿ ಪಡೆದುಕೊಂಡ ವಿದ್ಯಾರ್ಥಿಗಳಿಗಿಂತ ಸವಲತ್ತುಗಳಿಗೆ ಪರದಾಡಬೇಕಾದ ವಿದ್ಯಾರ್ಥಿಗಳು ಜೀವನದಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ ಎನ್ನುವುದನ್ನು ಮರೆಯಬೇಡಿ.
• ನೀವು ಕಷ್ಟಪಟ್ಟಿರಿ ಎಂದರೆ ನಾವೂ ಕಷ್ಟ ಪಡಬೇಕು ಎಂದಿದೆಯೇ ಎಂದು ಕೆಲವು ಮಕ್ಕಳು ಪೋಷಕರನ್ನು ದಬಾಯಸಿದ ಪ್ರಸಂಗಗಳು ನನ್ನ ಗಮನಕ್ಕೆ ಬಂದಿವೆ.
ನಿಜ, ಅವರು ಕಷ್ಟಪಟ್ಟರು ಎನ್ನುವ ಕಾರಣಕ್ಕೆ ನೀವೂ ಕಷ್ಟಪಡಬೇಕಿಲ್ಲ. ಆದರೆ, ಅವರು ಕಷ್ಟ ಪಟ್ಟುಜೀವನವನ್ನು ರೂಪಿಸಿಕೊಂಡಿದ್ದರಿಂದ ಅವರಿಗೆತಾವು ಗಳಿಸಿಕೊಂಡಿದ್ದರ ಬೆಲೆ ತಿಳಿದಿದೆ. ನೀವು ಬಯಸುವ ಅನುಕೂಲ/ಲಾಭಗಳ ಬೆಲೆಯನ್ನು ನೀವು ಅರ್ಥ ಮಾಡಿಕೊಂಡರೆ, ಅದರ ಸದುಪಯೋಗವನ್ನು ಮಾಡಿಕೊಂಡು ನೀವೂ ಜೀವನದಲ್ಲಿ ಯಶಸ್ಸನ್ನು ಗಳಿಸುವಿರಿ. ನಿಮ್ಮ ಸುಖಕ್ಕಾಗಿ ಪೋಷಕರು ಈಗಲೂ ಕಷ್ಟ ಪಡಬೇಕು ಎನ್ನುವ ವಾದವನ್ನು ಕೈಬಿಟ್ಟು, ಅವರಿಗೆ ಈಗ ನಿಮ್ಮಿಂದಾಗಿ ಕಷ್ಟವಾಗದಂತೆ ನೋಡಿಕೊಳ್ಳಬೇಕಾದುದು ನಿಮ್ಮ ಕರ್ತವ್ಯ ಕೂಡ.
• ಪೋಷಕರು ನಿಮ್ಮನ್ನು ಬೈದಾಗ ಅವರು ಬಳಸಿದ ಪದಗಳನ್ನು ಹಿಡಿದುಕೊಂಡು ಜಗ್ಗಾಡದೆ, ಕುಗ್ಗಿಹೋಗದೆ, ನಿಮ್ಮ ಭವಿಷ್ಯ ಕುರಿತು ಅವರಿಗೆ ಇರುವ ಕಾಳಜಿಯನ್ನು ಅರ್ಥ ಮಾಡಿಕೊಳ್ಳಿ. ಪದಗಳ ಹಿಂದಿನ ಭಾವನೆಯನ್ನು ಗುರುತಿಸಲು ಪ್ರಯತ್ನವನ್ನು ಮಾಡಿ. ನಿನ್ನನ್ನು ಸಾಯಿಸಿಬಿಡುವೆ ಎನ್ನುವುದು ಒಂದು ಹೇಳಿಕೆ. ಸಾಯಿಸುವುದು ಉದ್ದೇಶವಲ್ಲ. ಅದು ಸಿಟ್ಟಿನ ಪ್ರಮಾಣವನ್ನು ತೋರಿಸಿಕೊಡುತ್ತದೆ. ನಿಮ್ಮನ್ನು ಕುರಿತು ಬಳಸಲಾಗುವ ಪದಗಳಿಗೆ ಇದೇ ರೀತಿ ಅರ್ಥ ಹುಡುಕಿ, ನಿಮ್ಮ ಭವಿಷ್ಯ ಉಜ್ವಲವಾಗಿರುವ ಭರವಸೆಯನ್ನು ನಿಮ್ಮ ಪೋಷಕರಿಗೆ ಕೊಡಿ. ಅದು ಮಾತಿನಲ್ಲಿ ಮಾತ್ರವಲ್ಲದೆ, ನಿಮ್ಮ ನಡವಳಿಕೆಯಲ್ಲಿಯೂ ಎದ್ದು ಕಾಣಬೇಕು.
• ಪರೀಕ್ಷೆಗಳು ಆತಂಕವನ್ನು ಸೃಷ್ಟಿಸುವುದು ಸಹಜ. ಈ ಆತಂಕವನ್ನುಕಡಿಮೆ ಮಾಡಿದರೆ, ಸಾಧನೆಯತ್ತ ಗಮನ ಹರಿಸುವುದು ಸಾಧ್ಯವಾಗುತ್ತದೆ. ಪೋಷಕರು, ಶಿಕ್ಷಕರು, ಹಿರಿಯರು ಮಾಡಬೇಕಾಗಿರುವ ಪ್ರಯತ್ನ ಈ ಆತಂಕವನ್ನು ಗುರುತಿಸಿ ಅದನ್ನುಕಡಿಮೆ ಮಾಡುವತ್ತಇರಬೇಕು. ಈ ವಿಷಯದಲ್ಲಿ ಆಪ್ತಸಲಹೆಗಾರರನ್ನು ಸಂಪರ್ಕಿಸುವುದು ಖಂಡಿತ ನೆರವಾಗುತ್ತದೆ. ಯಾವುದೇ ಹಿಂಜರಿತವಿಲ್ಲದೆ ನಿಮ್ಮ ಪರಿಚಯದ ಅಥವಾ ಸಮೀಪದ ಆಪ್ತಸಲಹೆಗಾರರನ್ನು ಸಂಪರ್ಕಿಸಿ.
ಇದನ್ನೂ ಒದಿ :CBSE Board Exam 2021: ಬೋರ್ಡ್ ಪರೀಕ್ಷೆ ಎದುರಿಸಲಿರುವ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಈ ಮಾಹಿತಿ ಗಮನಿಸಿ