ಮೊಡವೆಗಳ ಸಮಸ್ಯೆಯು ಸಾಮಾನ್ಯವಾಗಿ ಹದಿಹರೆಯದವರಿಂದ ಹಿಡಿದು ಮದ್ಯವಯಸ್ಸಿನವರಲ್ಲೂ ಕಂಡುಬರುತ್ತದೆ. ಮೊಡವೆಗಳು ಮುಖದ ಅಂದವನ್ನು ಹಾಳು ಮಾಡುವುದಲ್ಲದೆ ವ್ಯಕ್ತಿಯ ಆತ್ಮಸ್ಥೈರ್ಯದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಮೊಡವೆಗಳು ಉಂಟಾಗಲು ಹಲವು ಕಾರಣಗಳಿರಬಹುದು. ಹದಿಹರೆಯದವರಲ್ಲಿ ಹಾರ್ಮೋನುಗಳ ಬದಲಾವಣೆಯಿಂದಾಗಿ ಮೊಡವೆಗಳ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗೂ ಹೆಚ್ಚುತ್ತಿರುವ ಮಾಲಿನ್ಯ, ಧೂಳು, ಜಂಕ್ ಫುಡ್ ಮತ್ತು ಕರಿದ ಆಹಾರಗಳ ಸೇವನೆ ನಮ್ಮ ಚರ್ಮವನ್ನು ಎಣ್ಣೆಮುಕ್ತವಾಗಿಸುವುದರ ಜೊತೆಗೆ ಮೊಡವೆಗಳು ಉಂಟಾಗಲು ಕಾರಣವಾಗುತ್ತದೆ. ಮೊಡವೆಗಳು ದೇಹದ ಆಂತರಿಕ ಸಮಸ್ಯೆಗಳಿಗೆ ಸಂಬಂಧಿಸಿದೆ. ಅದ್ದರಿಂದ ಅದನ್ನು ತೊಡೆದುಹಾಕಲು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಚಿಕಿತ್ಸೆ ನೀಡುವುದು ಅವಶ್ಯಕ. ನಾವು ಸೇವಿಸುವ ಆಹಾರಗಳು ಮೊಡವೆಗಳ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವುದು ಅವಶ್ಯಕ. ಇನ್ನು ಕೆಲವರು ಮೊಡವೆಗಳನ್ನು ಹೋಗಲಾಡಿಸಲು ಔಷಧಿಗಳು ಹಾಗೂ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಇದರ ಬದಲಿಗೆ ಮನೆಮದ್ದುಗಳು ಹೆಚ್ಚು ಪ್ರಯೋಜನಕಾರಿಯಾಗಬಲ್ಲವು.
ಟೀ ಟ್ರೀ ಆಯಿಲ್ ಮೊಡವೆಗಳಿಗೆ ಉತ್ತಮವಾಗಿದೆ: ಟೀ ಟ್ರೀ ಆಯಿಲ್ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ಮತ್ತು ಚರ್ಮದ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೆಸರುವಾಸಿಯಾದ ಸಾರಭೂತ ತೈಲವಾಗಿದೆ. ನೀವು ಕೆಲವು ಹನಿ ಟೀ ಟ್ರೀ ಆಯಿಲ್ ನ್ನು ನೀರು ಅಥವಾ ರೋಸ್ ವಾಟರ್ ನಲ್ಲಿ ಬೆರೆಸಿ ನೇರವಾಗಿ ಮೊಡವೆಗಳಿಗೆ ಹಚ್ಚಬಹುದು. ಇದು ಮೊಡವೆಗಳನ್ನು ತೊಡೆದುಹಾಕಲು ಪರಿಣಾಮಕಾರಿ ಮನೆಮದ್ದಾಗಿದೆ.
ಜೇನುತುಪ್ಪ ಮತ್ತು ದಾಲ್ಚಿನ್ನಿ ಮಾಸ್ಕ್: ಜೀನುತುಪ್ಪ ಮತ್ತು ದಾಲ್ಚಿನ್ನಿ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಮೊಡವೆಗಳು ಮತ್ತು ಅದರ ಉರಿಯೂತವನ್ನು ಕಡಿಮೆ ಮಾಡಲು ಎರಡು ಚಮಚ ಜೇನುತುಪ್ಪವನ್ನು ಒಂದು ಚಮಚ ದಾಲ್ಚಿನ್ನಿಯೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ನ್ನು ಮುಖಕ್ಕೆ ಹಚ್ಚಿ ಮತ್ತು 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.
ಐಸ್ ಪ್ಯಾಕ್: ಮೊಡವೆಯ ಸಮಸ್ಯೆಯನ್ನು ಹೋಗಲಾಡಿಸಲು ನೀವು ಐಸ್ನ್ನು ಬಳಸಬಹುದು. ಐಸ್ ತುಂಡನ್ನು ಒಂದು ಸ್ವಚ್ಛವಾದ ತೆಳುವಾದ ಬಟ್ಟೆಯಲ್ಲಿ ಸುತ್ತಿ ಮತ್ತು ಮತ್ತು ಮೊಡವೆಯ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ದಿನಕ್ಕೆರಡು ಬಾರಿ ಹೀಗೆ ಮಾಡುವುದರಿಂದ ಮುಖದಲ್ಲಿನ ಊತ ಮತ್ತು ಮೊಡವೆಗಳು ಕಡಿಮೆಯಾಗುತ್ತದೆ.
ಇದನ್ನೂ ಓದಿ: ಮೊಣಕಾಲು ನೋವಿಗೆ ಇಲ್ಲಿದೆ ಮನೆಮದ್ದು
ನಿಂಬೆ ರಸ: ನಿಂಬೆ ರಸವು ನೈಸರ್ಗಿಕ ಸಂಕೋಚನ ಗುಣವನ್ನು ಹೊಂದಿದೆ. ಮತ್ತು ಇದು ವಿಟಮಿನ್ ಸಿ ಅಂಶದಿಂದ ಸಮೃದ್ಧವಾಗಿದೆ. ಇದು ಮೊಡವೆಗಳನ್ನು ತೊಡೆದುಹಾಕಲು ಸಹಕಾರಿ. ಹತ್ತಿಯ ಮೇಲೆ ತಾಜಾ ನಿಂಬೆ ರಸವನ್ನು ಸುರಿದು ಅದನ್ನು ಮೊಡವೆಯ ಮೆಲೆ ಅನ್ವಯಿಸಿ. ಇದರಿಂದ ಮೊಡವೆಗಳನ್ನು ತೊಡೆದು ಹಾಕಬಹುದು
ಗ್ರೀನ್ ಟೀ: ಗ್ರೀನ್ ಟೀಯಲ್ಲಿ ಉತ್ಕಷ‍್ಣ ನಿರೋಧಕಗಳು ಹೆಚ್ಚಿರುವುದರಿಂದ ಇದು ಉತ್ತಮ ಆರೋಗ್ಯ ಪ್ರಯೋಜನವನ್ನು ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅಲ್ಲದೆ ಇದು ಮೊಡವೆಗಳನ್ನು ತೊಡೆದುಹಾಕಲು ಕೂಡಾ ಸಹಕಾರಿಯಾಗಿದೆ. ಗ್ರೀನ್ ಟೀ ಫ್ಲೇವನಾಯ್ಡ್ ಮತ್ತು ಟ್ಯಾನಿನ್ಗಳನ್ನು ಹೊಂದಿರುವುದರಿಂದ ಇದು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಮೊಡವೆಗಳ ಬೆಳವಣಿಗೆಯನ್ನು ತಡೆಯುತ್ತದೆ. ಮೊದಲು ನೀವು ಗ್ರೀನ್ ಟೀ ಕುದಿಸಿ ಅದನ್ನು ತಣ್ಣಗಾಗಲು ಬಿಡಿ. ತಣ್ಣದಾದ ಬಳಿಕ ಗ್ರೀನ್ ಟೀಯನ್ನು ಹತ್ತಿ ಚೆಂಡನ್ನು ಬಳಸಿ ಮುಖಕ್ಕೆ ಅನ್ವಯಿಸಿ ಅಥವಾ ಸ್ಪ್ರೇ ಬಾಟಲಿಯ ಸಹಾಯದಿಂದ ಅದನ್ನು ಮುಖಕ್ಕೆ ಸ್ಪ್ರೇ ಮಾಡಬಹುದು. 10 ರಿಂದ 15 ನಿಮಿಷಗಳ ಬಳಿಕ ಮುಖವನ್ನು ಸ್ವಚ್ಛ ನೀರಿನಿಂದ ತೊಳೆಯಿರಿ. ಇದು ಕೂಡ ಮೊಡವೆಯನ್ನು ಹೋಗಲಾಡಿಸಲು ಪರಿಣಾಮಕಾರಿ ಮನೆಮದ್ದಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: