Summer Tips: ಬೇಸಿಗೆಯಲ್ಲಿ ಬೆವರಿನ ಕೆಟ್ಟ ವಾಸನೆಯಿಂದ ಮುಜುಗರ ಆಗ್ತಿದ್ಯಾ? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 25, 2025 | 12:43 PM

ಬೇಸಿಗೆ ಶುರುವಾಗುತ್ತಿದ್ದಂತೆ ಕೆಲವರು ಅತಿಯಾಗಿ ಬೆವರುತ್ತಾರೆ. ಇದರಿಂದ ತನ್ನ ಸುತ್ತಮುತ್ತಲಿನ ಜನರೊಂದಿಗೆ ಬೆರೆಯಲು ಆಗುವುದಿಲ್ಲ. ಅತಿಯಾಗಿ ಬೆವರುವುದು ಹಾಗೂ ಬೆವರಿನ ದುರ್ನಾತದಿಂದ ತನ್ನ ಬಗ್ಗೆ ಇತರರು ಏನು ಅಂದುಕೊಳ್ಳುತ್ತಾರೋ ಎನ್ನುವುದು ಕಾಡುತ್ತದೆ. ಆದರೆ ಬೇಸಿಗೆಯಲ್ಲಿ ಬೆವರಿನ ವಾಸನೆಯನ್ನು ತಪ್ಪಿಸಲು ಪ್ರತಿದಿನ ಸ್ನಾನ ಮಾಡುವುದು ಮತ್ತು ನಿಯಮಿತವಾಗಿ ಬಟ್ಟೆ ಬದಲಾಯಿಸುವಂತಹ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಅದಲ್ಲದೆ, ಬೆವರಿನ ವಾಸನೆಯಿಂದ ಮುಕ್ತಿ ಹೊಂದಲು ಈ ಕೆಲವು ಸಲಹೆಗಳನ್ನು ಅನುಸರಿಸುವುದು ಉತ್ತಮ.

Summer Tips: ಬೇಸಿಗೆಯಲ್ಲಿ ಬೆವರಿನ ಕೆಟ್ಟ ವಾಸನೆಯಿಂದ ಮುಜುಗರ ಆಗ್ತಿದ್ಯಾ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us on

ಸುಡು ಬಿಸಿಲು ಜೋರಾಗಿದೆ, ಹೊರಗಡೆ ಹೋಗಿ ಬಂದರಂತೂ ಕೇಳುವುದೇ ಬೇಡ ತಲೆ ಸಿಡಿದು ಹೋಗುವುದಲ್ಲದೇ, ದೇಹದಿಂದ ನೀರು ಇಳಿಯುತ್ತದೆ. ಕೆಲವರಂತೂ ಅತಿಯಾಗಿ ಬೆವರು (Sweat) ತ್ತಾರೆ. ಇದರಿಂದ ಕೆಟ್ಟ ವಾಸನೆ (Bad Smell) ಬರಲು ಶುರುವಾಗುತ್ತದೆ. ಈ ಸಮಸ್ಯೆಯೂ ಬೇಸಿಗೆಯಲ್ಲಿ ಹೆಚ್ಚಿನವರಲ್ಲಿ ಕಾಡುವುದಿದೆ. ಆಹಾರ ಪದ್ಧತಿ, ಜೀವನ ಶೈಲಿ ಹಾಗೂ ಹಾರ್ಮೋನ್ ಬದಲಾವಣೆ (Harmone Changes) ಹೀಗೆ ಹತ್ತು ಹಲವು ಕಾರಣಗಳಿಂದ ಕೆಲವರು ಹೆಚ್ಚಾಗಿ ಬೆವರುತ್ತಾರೆ. ಬೇಸಿಗೆಯಲ್ಲಿ ಅತಿಯಾಗಿ ಬೆವರುವುದರಿಂದ, ಬೆವರಿನ ವಾಸನೆ (Sweat odour) ಯನ್ನು ಬರಲು ಪ್ರಾರಂಭಿಸಿದರೆ, ಈ ಕೆಲವು ಸಲಹೆಗಳಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಳ್ಳಬಹುದು.

ಬೆವರಿನ ವಾಸನೆಯಿಂದ ಮುಕ್ತಿ ಹೊಂದಲು ಇಲ್ಲಿದೆ ಟಿಪ್ಸ್

  •  ನಿಂಬೆ ನೀರು ಹಾಗೂ ಮೊಸರು : ಬೆವರಿನ ವಾಸನೆ ಬರುವುದು ತಪ್ಪಿಸಲು ಸರಿಯಾದ ಆಹಾರವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹೀಗಾಗಿ ಆಹಾರದಲ್ಲಿ ನಿಂಬೆ ನೀರು ಹಾಗೂ ಮೊಸರನ್ನು ಸೇರಿಸಿಕೊಳ್ಳಿ. ಇದು ಬೆವರಿನಲ್ಲಿ ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
  • ಗ್ರೀನ್ ಟೀ ಬ್ಯಾಗ್ : ನಿಮ್ಮ ಮನೆಯಲ್ಲಿ ಗ್ರೀನ್ ಟೀ ಬ್ಯಾಗನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟು, ಈ ನೀರನ್ನು ಕಂಕುಳ ಭಾಗಕ್ಕೆ ಹಚ್ಚಿ ಹತ್ತು ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡಿದರೆ ಬೆವರಿನ ದುರ್ನಾತವು ದೂರವಾಗುತ್ತದೆ.
  • ರೋಸ್ ವಾಟರ್ ಬಳಸಿ : ಸ್ನಾನಕ್ಕೆ ಬಳಸುವ ಸ್ನಾನದ ನೀರಿಗೆ ಸ್ವಲ್ಪ ರೋಸ್ ವಾಟರ್ ಬೆರೆಸಬಹುದು. ಈ ರೋಸ್ ವಾಟರ್ ಹಗುರವಾದ ಪರಿಮಳವನ್ನು ನೀಡಿ, ಬೆವರಿನ ವಾಸನೆಯೂ ಕಡಿಮೆಯಾಗುತ್ತದೆ.
  • ನೀರಿಗೆ ಹರಳೆಣ್ಣೆ ಬೆರೆಸಿ ಸ್ನಾನ ಮಾಡಿ : ಅತಿಯಾಗಿ ಬೆವರುತ್ತಿದ್ದರೆ, ಸ್ನಾನ ಮಾಡುವ ಮೊದಲು ಒಂದೆರಡು ಚಮಚ ಹರಳೆಣ್ಣೆ ನೀರಿಗೆ ಸೇರಿಸಿಕೊಳ್ಳಿ. 5 ರಿಂದ 8 ನಿಮಿಷಗಳ ಕಾಲ ನಿಮ್ಮ ಕಂಕುಳಲ್ಲಿ ಮಸಾಜ್ ಮಾಡಿ. ಇದು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಈ ಬೆವರಿನ ವಾಸನೆಯಿಂದ ಮುಕ್ತಿ ಪಡೆಯಬಹುದು.
  • ನೀಲಗಿರಿ ತೈಲ : ಬೆವರಿನಿಂದ ಉಂಟಾಗುವ ವಾಸನೆಯನ್ನು ತಪ್ಪಿಸಲು ಸ್ನಾನದ ನೀರಿಗೆ ನೀಲಗಿರಿ ಎಣ್ಣೆಯನ್ನು ಸೇರಿಸಬಹುದು. ಇವು ಬೆವರಿನಿಂದ ಉಂಟಾಗುವ ವಾಸನೆಯನ್ನು ನಿವಾರಿಸುವುದಲ್ಲದೆ, ಚರ್ಮವನ್ನು ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸುತ್ತದೆ.
  • ಈ ತರಕಾರಿ ಬಳಸಿ : ಬದನೆಕಾಯಿ ಹೋಳುಗಳನ್ನು ನೆನೆಸಿದ ನೀರಿನಲ್ಲಿ ಮೈ ಕೈ ತೊಳೆಯುತ್ತಿದ್ದರೆ ಬೆವರುವುದು ಕಡಿಮೆಯಾಗುತ್ತದೆ. ಅದಲ್ಲದೇ, ಆಲೂಗಡ್ಡೆಯನ್ನು ತುಂಡರಿಸಿ ಹತ್ತು ನಿಮಿಷಗಳ ಕಾಲ ಕಂಕುಳಿನ ಭಾಗದಲ್ಲಿ ಉಜ್ಜುವುದರಿಂದ ಅತಿಯಾಗಿ ಬೆವರುವುದು ಹಾಗೂ ಬೆವರಿನ ವಾಸನೆಯಿಂದ ಮುಕ್ತಿ ಪಡೆಯಬಹುದು. ಇಲ್ಲದಿದ್ದರೆ ಮುಳ್ಳು ಸೌತೆಯ ಹೋಳುಗಳಿಂದ ಬೆವರುವ ಜಾಗವನ್ನು ಉಜ್ಜಿಕೊಳ್ಳುವುದು ಪರಿಣಾಮಕಾರಿಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ