
ಕೂದಲು ಉದುರುವಿಕೆ (hair loss) ಇಂದಿನ ದಿನಗಳಲ್ಲಿ ಬಹುತೇಕ ಮಂದಿ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಸಿಕ್ಕ ಸಿಕ್ಕ ಎಣ್ಣೆ, ರಾಸಾಯನಿಕ ಮಿಶ್ರಿತ ಶ್ಯಾಂಪೂಗಳ ಬಳಕೆ, ಒತ್ತಡ, ಕಳಪೆ ಜೀವನಶೈಲಿ ಇವೆಲ್ಲವೂ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಇದಲ್ಲದೆ ನಿಮ್ಮ ಆಹಾರಕ್ರಮವೂ ಕೂದಲು ಉದುರುವ ಸಮಸ್ಯೆಗೆ ಒಂದು ಕಾರಣ. ಹೌದು ಕೆಲವು ಆಹಾರಗಳ ಅತಿಯಾದ ಸೇವನೆಯು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವ ಸಮಸ್ಯೆಯನ್ನೂ ಹೆಚ್ಚು ಮಾಡುತ್ತದೆ. ಆ ಆಹಾರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಕ್ಕರೆ: ಅತಿಯಾದ ಸಕ್ಕರೆ ಸೇವನೆ ಸಹ ಕೂದಲು ಉದುರುವಿಕೆಗೆ ಕಾರಣ. ಹೆಚ್ಚು ಸಕ್ಕರೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಮತ್ತು ಆಂಡ್ರೊಜೆನ್ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು. ಈ ಹಾರ್ಮೋನುಗಳು ಕೂದಲು ಕಿರುಚೀಲಗಳನ್ನು ಕುಗ್ಗಿಸುತ್ತವೆ, ಇದು ಕೂದಲು ಉದುರುವಿಕೆ ಮತ್ತು ಕೂದಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಜಂಕ್ ಫುಡ್: ಫಾಸ್ಟ್ ಫುಡ್ ಮತ್ತುಎಣ್ಣೆಯಲ್ಲಿ ಕರಿದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಅನಾರೋಗ್ಯಕರ ಕೊಬ್ಬುಗಳಿದ್ದು, ಇವು ಕೂದಲನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.
ಉಪ್ಪು: ಅತಿಯಾದ ಉಪ್ಪಯ ಸೇವನೆಯಿಂದ ದೇಹ ನಿರ್ಜಲೀಕರಣಗೊಳ್ಳುವುದರ ಜೊತೆಗೆ ನೆತ್ತಿಯೂ ದುರ್ಬಲಗೊಳ್ಳುತ್ತದೆ. ಇದರಿಂದ ಕೂದಲಿನ ಬೇರು ದುರ್ಬಲಗೊಂಡು ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಮದ್ಯ: ಆಲ್ಕೋಹಾಲ್ ನಿರ್ಜಲೀಕರಣವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಸತು ಮತ್ತು ಇತರ ಅಗತ್ಯ ಪೋಷಕಾಂಶಗಳು ಕಡಿಮೆಯಾಗಲು ಕಾರಣವಾಗುತ್ತದೆ. ಸತುವಿನ ಕೊರತೆಯು ಕೂದಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಯಾವತ್ತಿಗೂ ಕೂದಲಿಗೆ ಎಣ್ಣೆ ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ
ಸಂಸ್ಕರಿಸಿದ ಆಹಾರಗಳು: ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಹಾರಗಳು DHT (ಡೈಹೈಡ್ರೊಟೆಸ್ಟೊಸ್ಟೆರಾನ್) ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಹಾರ್ಮೋನ್ ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಹೆಚ್ಚು ಕೆಫೀನ್: ಅತಿಯಾದ ಕೆಫೀನ್ ಸೇವನೆಯೂ ನಿರ್ಜಲೀಕರಣವನ್ನು ಉಂಟಾಗುತ್ತದೆ, ಇದು ನೆತ್ತಿಯನ್ನು ಒಣಗಿಸಿ ಕೂದಲಿನ ಬೆಳವಣಿಗೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ