Black Pepper: ಅಡುಗೆ ಮನೆಯಲ್ಲಿರುವ ಕಾಳು ಮೆಣಸು ಆರೋಗ್ಯ ಸಮಸ್ಯೆಗಳಿಗೆ ದಿವ್ಯ ಔಷಧಿ!
ಅಡುಗೆ ರುಚಿಯನ್ನು ಹೆಚ್ಚಿಸುವ ಮಸಾಲೆ ಪದಾರ್ಥಗಳಲ್ಲಿ ಕಾಳು ಮೆಣಸು ಅಥವಾ ಕರಿಮೆಣಸಿನ ಪಾತ್ರ ಅಗಾಧ. ಅಡುಗೆಗೆ ಬಳಸುವ ಈ ಕಾಳು ಮೆಣಸು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಕೆಲ ಆರೋಗ್ಯ ಸಮಸ್ಯೆಗಳಿಗೆ ಕಾಳು ಮೆಣಸಿನಿಂದ ಕಷಾಯ ಮಾಡಿ ಕುಡಿಯುತ್ತಾರೆ. ನಿಮ್ಮ ಮನೆಯಲ್ಲಿ ಕಾಳು ಮೆಣಸು ಇದ್ದರೆ, ಕೆಲವು ಸಮಸ್ಯೆಗಳಿಗೆ ಇದರಿಂದ ಮನೆ ಮದ್ದನ್ನು ತಯಾರಿಸಿ ಆರೋಗ್ಯ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
ಭಾರತೀಯ ಅಡುಗೆ ಮನೆಗಳಲ್ಲಿ ಕಾಣಸಿಗುವ ಮಸಾಲೆ ಪದಾರ್ಥಗಳಲ್ಲಿ ಈ ಕರಿಮೆಣಸು ಅಥವಾ ಕಾಳುಮೆಣಸು ಕೂಡ ಒಂದು. ಸಾಂಬಾರ ಪದಾರ್ಥಗಳ ರಾಜ ಎನ್ನಲಾಗುವ ಕಾಳು ಮೆಣಸು ಅಡುಗೆಯಲ್ಲಿ ಬಳಸುವ ಮುಖ್ಯವಾದ ಮಸಾಲೆ ಪದಾರ್ಥವಾಗಿದೆ. ಆಯುರ್ವೇದದಲ್ಲಿ ಔಷಧಕ್ಕಾಗಿ ಬಳಸುವ ಈ ಕಾಳು ಮೆಣಸಿನಲ್ಲಿ ಕ್ಯಾಲ್ಶಿಯಂ, ಸೋಡಿಯಂ, ಪೊಟ್ಯಾಶಿಯಂ, ವಿಟಾಮಿನ್ ಎ, ವಿಟಮಿನ್ ಕೆ ಸೇರಿದಂತೆ ಹಲವಾರು ಪೋಷಕಾಂಶಗಳು ಹೇರಳವಾಗಿವೆ. ಕಾಳು ಮೆಣಸಿನಿಂದ ಮನೆ ಮದ್ದನ್ನು ತಯಾರಿಸಿ ಸೇವಿಸುವುದರಿಂದ ನಾನಾ ರೀತಿಯ ರೋಗ ರುಜಿನಗಳು ಶಮನವಾಗುತ್ತದೆ.
ಕಾಳು ಮೆಣಸು ಆರೋಗ್ಯ ಸಮಸ್ಯೆಗಳಿಗೆ ದಿವ್ಯ ಔಷಧಿ:
- ಕಾಳು ಮೆಣಸನ್ನು ಜಜ್ಜಿ, ಅದರ ರಸವನ್ನು ನುಂಗುತ್ತಿದ್ದರೆ ನೆಗಡಿ ಸಮಸ್ಯೆಯು ದೂರವಾಗುತ್ತದೆ.
- ಕಾಳು ಮೆಣಸಿನ ಪುಡಿ ಮತ್ತು ಬೆಲ್ಲವನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ, ಈ ಕಷಾಯವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
- ಅರ್ಧ ಚಮಚದಷ್ಟು ಕಾಳುಮೆಣಸಿನ ಚೂರ್ಣಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ ಗಂಟಲು ನೋವು ಶಮನವಾಗುತ್ತದೆ.
- ಕಾಳು ಮೆಣಸು ಹಾಗೂ ಚಿಟಿಕೆ ಉಪ್ಪನ್ನು ಬಾಯಿಗೆ ಹಾಕಿಕೊಂಡು ಜಗಿದು ರಸ ಕುಡಿಯುವುದರಿಂದ ಗಂಟಲುನೋವು ನಿವಾರಣೆಯಾಗುತ್ತದೆ.
- ಹಾಲಿಗೆ ಒಂದು ಚಿಟಿಕೆ ಅರಶಿನದ ಪುಡಿ, ಕಾಳು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ, ರಾತ್ರಿ ಊಟ ಮಾಡಿದ ಮೇಲೆ ಕುಡಿದರೆ ನೆಗಡಿ ಹಾಗೂ ಕೆಮ್ಮಿನ ಸಮಸ್ಯೆಯೂ ದೂರವಾಗುತ್ತದೆ.
- ಒಂದು ಚಮಚದಷ್ಟು ಕಾಳಮೆಣಸಿನ ಚೂರ್ಣವನ್ನು ಅರ್ಧ ಬಟ್ಟಲು ಎಣ್ಣೆಯಲ್ಲಿ ಸೇರಿಸಿ ಕುದಿಸಿ, ಆ ಎಣ್ಣೆಯನ್ನು ಸಂಧಿವಾತ, ಗಂಟು ನೋವು ಇದ್ದಲ್ಲಿ ಹಚ್ಚಿದರೆ ಗುಣಮುಖವಾಗುತ್ತದೆ.
- ನಾಲ್ಕು ಚಮಚ ಈರುಳ್ಳಿ ರಸಕ್ಕೆ ಅರ್ಧ ಚಮಚದಷ್ಟು ಕಾಳುಮೆಣಸು ಪುಡಿ ಸೇರಿಸಿ ಸೇವಿಸುವುದರಿಂದ ವಾಕರಿಕೆ ಮತ್ತು ವಾಂತಿಯಾಗುವ ಸಮಸ್ಯೆಯು ದೂರವಾಗುತ್ತದೆ.
- ಕಾಳು ಮೆಣಸನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿಕೊಂಡರೆ ಹಲ್ಲುನೋವು ಕಡಿಮೆಯಾಗುತ್ತದೆ.
- ಒಂದು ವೀಳ್ಯದೆಲೆಗೆ ನಾಲ್ಕು ಕಾಳುಮೆಣಸು, ಉಪ್ಪು ಹಾಕಿ ಚೆನ್ನಾಗಿ ಜಗಿದು ತಿನ್ನುವುದರಿಂದ ಕಫದ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ಕಾಳು ಮೆಣಸನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುವುದರಿಂದ ಪರಿಣಾಮಕಾರಿ ಔಷಧಿಯಾಗಿದೆ.
- ಕಾಳು ಮೆಣಸನ್ನು ತುಪ್ಪದಲ್ಲಿ ಹುರಿದು ನುಣ್ಣಗೆ ಪುಡಿ ಮಾಡಿ ಜೇನುತುಪ್ಪದಲ್ಲಿ ಬೆರೆಸಿ ದಿನಕ್ಕೆ ಎರಡು ಮೂರು ಬಾರಿ ಸೇವಿಸಿದರೆ ನೆಗಡಿ ಹಾಗೂ ಕೆಮ್ಮು ಕಡಿಮೆಯಾಗುವುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ