ಕೆಮ್ಮಿ ಕೆಮ್ಮಿ ಸುಸ್ತಾಯ್ತ?; ಅಡುಗೆ ಮನೆಯಲ್ಲೇ ಇದೆ ಪರಿಹಾರ
ಶೀತ, ಜ್ವರ, ಕೆಮ್ಮಿನ ಸಮಸ್ಯೆಗೆ ನೀವು ಆಧುನಿಕ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ನಿಮಗೆ ಉತ್ತಮ ಮತ್ತು ಆರಾಮದಾಯಕವಾಗಲು ಸಹಾಯ ಮಾಡುವ ಈ ಕೆಲವು ಮನೆಮದ್ದುಗಳನ್ನು ನೀವು ಪ್ರಯತ್ನಿಸಬಹುದು. ಇದರಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಇದು ಆರೋಗ್ಯಕ್ಕೂ ಒಳ್ಳೆಯದು.
ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ನಮ್ಮಲ್ಲಿ ಅನೇಕರು ಅಲರ್ಜಿಗಳು ಮತ್ತು ಮಾಲಿನ್ಯದ ಅಡ್ಡಪರಿಣಾಮಗಳನ್ನು ಎದುರಿಸುತ್ತಾರೆ. ಚಳಿಗಾಲದ ಸಂದರ್ಭದಲ್ಲಿ ಶೀತ ಮತ್ತು ಕೆಮ್ಮು ಸಾಕಷ್ಟು ಸಾಮಾನ್ಯವಾಗಿದೆ. ಈಗಂತೂ ಎಲ್ಲಿ ನೋಡಿದರೂ ವೈರಲ್ ಜ್ವರದ ಕಾಟ. ಈ ಸಂದರ್ಭದಲ್ಲಿ ಜ್ವರ, ಶೀತ, ಕೆಮ್ಮು ಒಬ್ಬರಿಂದ ಒಬ್ಬರಿಗೆ ಹರಡುವುದು ಸುಲಭ. ಕೆಮ್ಮು ಮತ್ತು ಶೀತದಿಂದ ಆರಾಮ ಪಡೆಯಲು ಅಡುಗೆ ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸಬಹುದು.
ನಮ್ಮ ಅಜ್ಜಿಯರು ಈ ಪದಾರ್ಥಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಿದ್ದರು. ಗಾಯವನ್ನು ವಾಸಿಮಾಡಲು ಅಥವಾ ಗಂಟಲಿನ ಕಿರಿಕಿರಿಯಿಂದ ಪರಿಹಾರವನ್ನು ಕಂಡುಕೊಳ್ಳಲು ಇವುಗಳನ್ನು ಬಳಸುತ್ತಿದ್ದರು. ನೀವು ಸಹ ಈ ಕೆಳಗಿನ ಪದಾರ್ಥಗಳನ್ನು ಯಾವುದೇ ತೊಂದರೆಯಿಲ್ಲದೆ ಬಳಸಬಹುದು. ಇವು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತವೆ.
ಇದನ್ನೂ ಓದಿ: ಶೀತ ಬಾರದಂತೆ ತಡೆಗಟ್ಟುವ 5 ಮುನ್ನೆಚ್ಚರಿಕಾ ಕ್ರಮಗಳಿವು
ಶುಂಠಿ ಪುಡಿ ಹಾಕಿ ಕುದಿಸಿದ ನೀರು:
ಶುಂಠಿ ಪುಡಿ ಹಾಕಿ ಕುದಿಸಿದ ನೀರು ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಇದು ಗಂಟಲು ನೋವು, ಗಂಟಲ ಕಿರಿಕಿರಿ, ಕೆಮ್ಮು, ಕಫವನ್ನು ಕಡಿಮೆ ಮಾಡುತ್ತದೆ. ಒಂದು ಪಾತ್ರೆಯಲ್ಲಿ ಈ ಕಷಾಯವನ್ನು ಮಾಡಿಟ್ಟುಕೊಂಡರೆ ಇಡೀ ದಿನ ಆಗಾಗ ಒಂದೆರಡು ಸಿಪ್ ಕುಡಿಯುತ್ತಿದ್ದರೆ ಗಂಟಲಿಗೆ ಆರಾಮ ಎನಿಸುತ್ತದೆ.
ಶುಂಠಿ ನೀರಿಗೆ ಬೇಕಾಗುವ ಸಾಮಗ್ರಿಗಳು:
1 ಲೀಟರ್ ನೀರು
1/2 ಟೀಚಮಚ ಶುಂಠಿ ಪುಡಿ
ತಾಜಾ ಶುಂಠಿಯ ತುಂಡು
ಇದನ್ನು ಮಾಡುವುದು ಹೇಗೆ?:
– ನೀರನ್ನು ಕುದಿಸಿ. ಮೇಲೆ ತಿಳಿಸಿದ ಪ್ರಮಾಣದಲ್ಲಿ ತಾಜಾ ಶುಂಠಿ ಮತ್ತು ಅದರ ಪುಡಿಯನ್ನು ಸೇರಿಸಿ.
– ಆ ಮಿಶ್ರಣವನ್ನು 10 ನಿಮಿಷಗಳ ಕಾಲ ಕುದಿಸಿ. ಇದರಿಂದ ಶುಂಠಿಯ ಎಲ್ಲಾ ಪೌಷ್ಟಿಕಾಂಶದ ಸಾರಗಳು ನೀರಿನೊಂದಿಗೆ ಮಿಶ್ರಣವಾಗುತ್ತವೆ.
– ನಂತರ ಅದನ್ನು ಸೋಸಿಕೊಳ್ಳಿ. ಅದನ್ನು ಸೇವಿಸುವ ಮೊದಲು ಸ್ವಲ್ಪ ತಣ್ಣಗಾಗಲು ಬಿಡಿ. ಈ ನೀರನ್ನು ಪ್ಲಾಸ್ಟಿಕ್ ಪಾತ್ರೆ ಅಥವಾ ಲೋಟದ ಬದಲು ಸ್ಟೀಲ್ ಪಾತ್ರೆಯಲ್ಲೇ ಹಾಕಿಡುವುದು ಉತ್ತಮ. ನಂತರ ಇದನ್ನು ಸೇವಿಸಿ.
ಇದನ್ನೂ ಓದಿ: ಶೀತ ಮತ್ತು ಕೆಮ್ಮು ಇದೆಯೇ? ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು 5 ಆರೋಗ್ಯಕರ ಸೂಪ್‌ಗಳು
ಅರಿಶಿನದ ನೀರಿನಿಂದ ಗಾರ್ಗ್ಲ್ ಮಾಡಿ:
ನಿರಂತರ ಕೆಮ್ಮಿಗೆ ಮತ್ತೊಂದು ಮನೆಮದ್ದು ಅರಿಶಿನ ನೀರಿನಿಂದ ಗಾರ್ಗ್ಲಿಂಗ್ ಮಾಡುವುದು. ಕಹಿಯಾದ ಆಧುನಿಕ ಔಷಧವನ್ನು ಬಳಸಲು ಮುಖ ಸಿಂಡರಿಸುವ ಮಕ್ಕಳಿಗೆ ಇದು ಬೆಸ್ಟ್ ಆಯ್ಕೆ.
ಅರಿಶಿನ ನೀರಿನ ಗಾರ್ಗಲ್ ಮಿಶ್ರಣಕ್ಕೆ ಬೇಕಾದ ಪದಾರ್ಥಗಳು:
ಅರಿಶಿನ 1 ಟೀಚಮಚ
1 ಗ್ಲಾಸ್ ನೀರು
ಅರಿಶಿನ ನೀರಿನ ಗಾರ್ಗಲ್ ಮಿಶ್ರಣವನ್ನು ಹೇಗೆ ಮಾಡುವುದು?:
– ಮೊದಲು ನೀರನ್ನು ಕುದಿಸಿ ಮತ್ತು ಅದಕ್ಕೆ ಅರಿಶಿನ ಸೇರಿಸಿ.
– ಆ ಮಿಶ್ರಣವನ್ನು 3-5 ನಿಮಿಷಗಳ ಕಾಲ ಜ್ವಾಲೆಯ ಮೇಲೆ ಇರಿಸಿ. ಇದರಿಂದ ಅರಿಶಿನವು ಸಂಪೂರ್ಣವಾಗಿ ಕರಗುತ್ತದೆ.
– ಆ ಮಿಶ್ರಣ ತಣ್ಣಗಾದ ನಂತರ ವಯಸ್ಕರು ದಿನಕ್ಕೆ ಗರಿಷ್ಠ 3 ಬಾರಿ ಗಾರ್ಗ್ಲ್ ಮಾಡಬಹುದು. ಮಕ್ಕಳು ದಿನಕ್ಕೆ ಒಮ್ಮೆ ಮಾತ್ರ ಇದನ್ನು ಮಾಡಬೇಕು. ಏಕೆಂದರೆ ಅವರಿಗೆ ಒಂದು ಸಣ್ಣ ಡೋಸ್ ಸಾಕು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ