ಮದುವೆ ಎನ್ನುವುದು ಜೀವನದ ಒಂದು ಪ್ರಮುಖ ಘಟ್ಟ. ವಿವಾಹದ ಬಳಿಕ ನಮ್ಮ ಜೀವನವು ಸಂತೋಷದಿಂದ ಕೂಡಿರುತ್ತದೆಯೋ ಅಥವಾ ಇಲ್ಲವೋ ಎಂಬುದು ನಾವು ಆರಿಸುವ ಸಂಗಾತಿಯ ಮೇಲೆ ಅವಲಂಬಿತವಾಗಿರುತ್ತದೆ. ಅದಕ್ಕಾಗಿಯೇ ನಾವು ಕೂಲಂಕುಶವಾಗಿ ಪರಿಶೀಲಿಸಿದ ನಂತರವೇ ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಇಲ್ಲವಾದರೆ ನಿಮ್ಮ ಸುಃಖ ದುಃಖಗಳಲ್ಲಿ ನಿಮಗೆ ಬೆಂಬಲವಾಗಿ ನಿಲ್ಲಬೇಕಾದ ವ್ಯಕ್ತಿಯೇ ನಿಮಗೆ ಸಮಸ್ಯೆಯಾಗಿಬಿಡುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಎಚ್ಚರದಿಂದಿರಬೇಕು. ಏಕೆಂದರೆ ಇಂದಿಗೂ ಅನೇಕ ಮನೆಗಳಲ್ಲಿ ಮದುವೆಯ ಬಳಿಕ ಪತ್ನಿಯ ಎಲ್ಲಾ ನಿರ್ಧಾರಗಳನ್ನು ಪತಿಯೇ ತೆಗೆದುಕೊಳ್ಳುತ್ತಾನೆ. ಮದುವೆಯ ಬಳಿಕ ಪತ್ನಿ ಹೊರಗೆ ಹೋಗಿ ಕೆಲಸ ಮಾಡಬೇಕೋ ಅಥವಾ ಬೇಡವೋ ಎಂಬುದು ಅವಳ ಗಂಡನ ನಿರ್ಧಾರವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದರಿಂದ ಖಂಡಿತವಾಗಿಯೂ ನೀವು ಸುಖ ದಾಂಪತ್ಯವನ್ನು ನಡೆಸಲು ಸಾಧ್ಯ.
ಯಾವತ್ತಿಗೂ ಒಬ್ಬ ವ್ಯಕ್ತಿಯ ಹುದ್ದೆ ಅಥವಾ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಆತನನ್ನು ಮದುವೆಯಾಗಬೇಡಿ. ವ್ಯಕ್ತಿಯು ಶ್ರೀಮಂತನಾಗಿದ್ದು, ಅವನು ಗುಣದಲ್ಲಿ ಶ್ರೀಮಂತಿಗೆ ಹೊಂದಿರದೆ ರಾಕ್ಷಸ ಪ್ರವೃತ್ತಿಯವನಾಗಿದ್ದರೆ, ನೀವು ವಿವಾಹವಾಗಿ ಜೀವನಪರ್ಯಂತ ಕಷ್ಟ ಅನುಭವಿಸಬೇಕಾಗುತ್ತದೆ ಅಥವಾ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುವುದಿಲ್ಲ. ಆದ್ದರಿಂದ ಹಣವೇ ಸರ್ವಸ್ವವಲ್ಲ, ನೀವು ಸಂತೋಷವಾಗಿರಬೇಕೆಂದರೆ ಉತ್ತಮ ಗುಣವಿರುವ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಆಯ್ಕೆ ಮಾಡಿ. ಏಕೆಂದರೆ ಹಣಕ್ಕಿಂತ ಪ್ರೀತಿ, ವಿಶ್ವಾಸವಿರುವಲ್ಲಿ ಮಾತ್ರ ಸಂತೋಷದ ಜೀವನ ನಡೆಸಲು ಸಾಧ್ಯ.
ಇದನ್ನೂ ಓದಿ:ಸಂಬಂಧಗಳು ತುಂಬಾ ಸೂಕ್ಷ್ಮ, ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಪಾವನ
ಇತ್ತೀಚಿನ ದಿನಗಳಲ್ಲಿ ಅನೇಕ ಕೆಟ್ಟ ಚಟಗಳು ಮತ್ತು ಅಭ್ಯಾಸಗಳು ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ. ಅಲ್ಲದೆ ಅನೇಕ ಜನರು ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ. ಮಧ್ಯ, ಸಿಗರೇಟ್, ಗಾಂಜಾ ಇತ್ಯಾದಿ ಅಭ್ಯಾಸಗಳಿಗೆ ಅನೇಕರು ದಾಸರಾಗಿದ್ದಾರೆ. ಈ ಚಟವು ಒಂದು ಮನೆಯ ನೆಮ್ಮದಿಯನ್ನು ಖಂಡಿತವಾಗಿಯು ಕೆಡಿಸುತ್ತದೆ. ಕುಡಿದು ಬಂದು ಮಡದಿ ಮಕ್ಕಳೊಂದಿಗೆ ಜಗಳವಾಡುವ ಪತಿಯ ಕುರಿತ ಸುದ್ದಿಗಳನ್ನು ಪದೇ ಪದೇ ನಾವು ಕೇಳುತ್ತಿರುತ್ತೇವೆ. ಕುಡಿತವು ಮನೆ ಹಾಳು ಮಾಡುತ್ತದೆ. ಆದ್ದರಿಂದ ಸಭ್ಯ ಗುಣವಿರುವ ಕುಡಿತದ ಚಟಕ್ಕೆ ದಾಸರಾಗಿರದ ವ್ಯಕ್ತಿಯನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿ.
ಒಬ್ಬ ಜವಬ್ದಾರಿಯುತ ವ್ಯಕ್ತಿಯೊಂದಿಗೆ ಜೀವನ ಸಾಗಿಸುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಏಕೆಂದರೆ ಅಂತಹ ವ್ಯಕ್ತಿ ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಸಂಬಂಧದಲ್ಲಿ ಬರುವ ಎಲ್ಲಾ ಜವಬ್ದಾರಿಗಳನ್ನು ತಾನೇ ತೆಗೆದುಕೊಳ್ಳುತ್ತಾನೆ. ಮತ್ತು ಅಂತಹ ವ್ಯಕ್ತಿ ಯಾವಾಗಲೂ ತನ್ನ ಕುಟುಂಬದ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಾನೆ. ವಿವಾಹದ ಬಳಿಕ ನಿಮ್ಮ ದಾಂಪತ್ಯ ಜೀವನವು ಸುಖವಾಗಿ ಸಾಗಬೇಕೆಂದರೆ, ಒಬ್ಬ ಜವಬ್ದಾರಿಯುತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ