ನೆಲ ಒರೆಸುವ ನೀರಿಗೆ ಈ ವಸ್ತುಗಳನ್ನು ಬೆರೆಸಿದರೆ ನಿಮ್ಮ ಮನೆ ಇಡೀ ದಿನ ಘಮಘಮಿಸುತ್ತದೆ

ಮನೆ ಘಮ ಘಮಿಸುತ್ತಾ, ತಾಜಾತನದಿಂದ ಕೂಡಿದ್ದರೆ, ಅಲ್ಲಿ ಒಂದು ರೀತಿಯ ಪಾಸಿಟಿವ್‌ ವೈಬ್‌ ಕೂಡ ಇರುತ್ತದೆ. ಅದಕ್ಕಾಗಿಯೇ ಅನೇಕರು ರೂಮ್‌ ಫ್ರೆಶ್ನರ್‌ಗಳನ್ನು ಬಳಸುತ್ತಾರೆ. ಇದಲ್ಲದೆ ನೆಲ ಒರೆಸುವ ನೀರಿಗೆ ಈ ಒಂದಷ್ಟು ವಸ್ತುಗಳನ್ನು ಬೆರೆಸಿ, ನೆಲ ಕ್ಲೀನ್‌ ಮಾಡೋದ್ರಿಂದ ಕೂಡ ಪೂರ್ತಿ ಮನೆ ಘಮಘಮಿಸುತ್ತಂತೆ.

ನೆಲ ಒರೆಸುವ ನೀರಿಗೆ ಈ ವಸ್ತುಗಳನ್ನು ಬೆರೆಸಿದರೆ ನಿಮ್ಮ ಮನೆ ಇಡೀ ದಿನ ಘಮಘಮಿಸುತ್ತದೆ
ಸಾಂದರ್ಭಿಕ ಚಿತ್ರ
Image Credit source: vecteezy

Updated on: Dec 03, 2025 | 5:07 PM

ಮನೆಯನ್ನು ಸ್ವಚ್ಛವಾಗಿ, ಸುಂದರವಾಗಿ ಇಟ್ಟುಕೊಳ್ಳುವಂತೆ ಮನೆ ದುರ್ವಾಸನೆ ಬಾರದಂತೆ ನೋಡಿಕೊಳ್ಳುವುದು ಕೂಡ ತುಂಬಾನೇ ಮುಖ್ಯವಾಗಿರುತ್ತದೆ. ಇದಕ್ಕಾಗಿ ಅನೇಕರು ರೂಮ್‌ ಫ್ರೆಶ್ನರ್‌ಗಳನ್ನು ಬಳಸುತ್ತಾರೆ ಇಲ್ಲವೇ ನೆಲ ಒರೆಸುವ ನೀರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ವಿವಿಧ ಬಗೆಯ ಲಿಕ್ವಿಡ್‌ಗಳನ್ನು ಹಾಕುತ್ತಾರೆ. ಇದಲ್ಲದೆ ಮನೆ ಘಮ ಘಮ ಪರಿಮಳ (Fresh Smelling) ಬರಲು, ನೆಲದಲ್ಲಿ ಅಂಟಿರುವ ಸೂಕ್ಷ್ಮ ಜೀವಿಗಳನ್ನು ತೊಡೆದು ಹಾಕಲು ಈ ಕೆಲವೊಂದು ವಸ್ತುಗಳನ್ನು ಸಹ ನೆಲ ಒರೆಸುವ ನೀರಿಗೆ ಬೆರೆಸಬಹುದು.

ಮನೆ ಘಮಘಮಿಸಲು ನೆಲ ಒರೆಸುವ ನೀರಿಗೆ ಈ ವಸ್ತುಗಳನ್ನು ಬೆರೆಸಿ:

ನಿಂಬೆ ರಸ: ನಿಂಬೆ ರಸವು ಆಮ್ಲೀಯ ಗುಣಗಳನ್ನು ಹೊಂದಿದ್ದು, ಇದು ಉತ್ತಮ ವಾಸನೆ ನೀಡುವುದಲ್ಲದೆ, ನೆಲದಲ್ಲಿ ಅಂಟಿರುವ ಸೂಕ್ಷ್ಮ ಜೀವಿಗಳನ್ನು ಸಹ ತೆಗೆದುಹಾಕುತ್ತದೆ. ಆದ್ದರಿಂದ ಮನೆ ಒರೆಸುವಾಗ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ.

ಅಡಿಗೆ ಸೋಡಾ: ಒಂದು ಬಕೆಟ್‌ ನೀರಿಗೆ ಅರ್ಧ ಕಪ್‌ ಅಡಿಗೆ ಸೋಡಾ ಸೇರಿಸಿ. ಇದು ನೆಲವನ್ನು ತಾಜಾಗೊಳಿಸುತ್ತದೆ ಮತ್ತು ನೆಲದ ಮೇಲಿನ ಸೂಕ್ಷ್ಮ ಜೀವಿಗಳನ್ನು ತೊಡೆದುಹಾಕುತ್ತದೆ.

ನಿಂಬೆ ಎಣ್ಣೆ: ನಿಂಬೆ ಎಣ್ಣೆಯನ್ನು ನೆಲ ಒರೆಸುವ ನೀರಿಗೆ ಬೆರೆಸುವುದರಿಂದ ನೆಲದ ಮೇಲಿನ ಎಣ್ಣೆಯ ಕಲೆಗಳು ನಿವಾರಣೆಯಾಗುತ್ತದೆ, ಇದು ಸೂಕ್ಷ್ಮ ಜೀವಿಗಳನ್ನು ಸಹ ಕೊಲ್ಲುತ್ತದೆ. ಜೊತೆಗೆ ಮನೆಗೆ ಉತ್ತಮ ವಾಸನೆಯನ್ನು ನೀಡುತ್ತದೆ.

ಟೀ ಟ್ರೀ ಆಯಿಲ್: ಟೀ ಟ್ರೀ ಎಣ್ಣೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ನೆಲದ ಮೇಲಿನ ಸೂಕ್ಷ್ಮ ಜೀವಿಗಳನ್ನು ತೊಡೆದು ಹಾಕುತ್ತದೆ ಮತ್ತು ನೆಲವನ್ನು ತಾಜಾವಾಗಿಡುತ್ತದೆ.

ಇದನ್ನೂ ಓದಿ: ಯಾವತ್ತಿಗೂ ಕೂದಲಿಗೆ ಎಣ್ಣೆ ಹಚ್ಚುವಾಗ ತಪ್ಪುಗಳನ್ನು ಮಾಡಬೇಡಿ

ಸಿಟ್ರಸ್‌ ಹಣ್ಣಿನ ಸಿಪ್ಪೆ: ನಿಂಬೆ, ಕಿತ್ತಳೆಯಂತಹ ಸಿಟ್ರಸ್‌ ಹಣ್ಣಿನ ಸಿಪ್ಪೆಗಳು ಸಹ ಒಳ್ಳೆಯ ಪರಿಮಳ ನೀಡುತ್ತವೆ. ಇದಕ್ಕಾಗಿ ಮೊದಲು ಈ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಆ ನೀರನ್ನು ನೆಲ ಒರೆಸುವ ನೀರಿಗೆ ಸೇರಿಸಿ.

ಲ್ಯಾವೆಂಡರ್‌ ಎಣ್ಣೆ: ಒಂದು ಬಕೆಟ್‌ ನೀರಿಗೆ ಸ್ವಲ್ಪ ಅಡುಗೆ ಸೋಡಾ ಮತ್ತು ಕೆಲವು ಹನಿ ಲ್ಯಾವೆಂಡರ್‌ ಎಣ್ಣೆಯನ್ನು ಸೇರಿಸುವುದರಿಂದ ಅದು ಮನೆಗೆ ಉತ್ತಮ ವಾಸನೆಯನ್ನು ನೀಡುತ್ತದೆ ಮತ್ತು ನಿಮ್ಮ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ