Vastu Tips: ವಾಸ್ತು ಪ್ರಕಾರ ನಿಮ್ಮ ಮನೆಯ ಯಾವ ರೂಮಿಗೆ ಯಾವ ಬಣ್ಣ ಬೆಸ್ಟ್?; ಇಲ್ಲಿದೆ ಮಾಹಿತಿ

| Updated By: ಸುಷ್ಮಾ ಚಕ್ರೆ

Updated on: Jul 11, 2021 | 5:45 PM

Vastu Tips for Home: ಮನೆಯಲ್ಲಿರುವ ಪ್ರತಿಯೊಂದು ರೂಮಿಗೂ ವಾಸ್ತು ಪ್ರಕಾರ ಬೇರೆ ಬೇರೆ ಬಣ್ಣಗಳಿವೆ. ಹಾಗಾದರೆ, ವಾಸ್ತು ಪ್ರಕಾರವಾಗಿ ಯಾವ ಕೊಠಡಿಗೆ ಯಾವ ರೀತಿಯ ಪೇಂಟಿಂಗ್ ಸೂಕ್ತ? ಇಲ್ಲಿದೆ ಮಾಹಿತಿ...

Vastu Tips: ವಾಸ್ತು ಪ್ರಕಾರ ನಿಮ್ಮ ಮನೆಯ ಯಾವ ರೂಮಿಗೆ ಯಾವ ಬಣ್ಣ ಬೆಸ್ಟ್?; ಇಲ್ಲಿದೆ ಮಾಹಿತಿ
ಅಡುಗೆಮನೆ
Follow us on

ಯಾವುದೇ ಒಂದು ಮನೆಯ ಅಂದ-ಚಂದವನ್ನು ಸಾಕಷ್ಟು ಅಂಶಗಳು ನಿರ್ಧರಿಸುತ್ತವೆ. ಹಾಲ್ ಎಲ್ಲಿರಬೇಕು, ರೂಮ್ ಎಷ್ಟು ದೊಡ್ಡದಿರಬೇಕು, ಬಾತ್​ರೂಂ ಯಾವ ರೀತಿಯಿರಬೇಕು? ಕಿಚನ್​ನಲ್ಲಿ ಏನೇನಿರಬೇಕು? ಯಾವ ಕಡೆ ಬಾಲ್ಕನಿ ಇರಬೇಕು? ಕಿಟಕಿ ಎಷ್ಟು ದೊಡ್ಡ ಇರಬೇಕು? ಪೂಜಾ ಕೊಠಡಿ ಯಾವ ಸ್ಟೈಲ್​ನಲ್ಲಿರಬೇಕು? ಎಂಬೆಲ್ಲ ವಿಚಾರಗಳತ್ತ ಹೆಚ್ಚು ಗಮನ ಹರಿಸುವ ಬಹುತೇಕ ಜನರು ಸುಂದರವಾದ ಮನೆಗೆ ಸೂಕ್ತವಾದ ಪೇಂಟಿಂಗ್ (Painting) ಮಾಡಿಸುವಲ್ಲಿ ಎಡವುತ್ತಾರೆ. ಅಂದಹಾಗೆ, ಮನೆಯ ಯಾವ ರೂಮುಗಳು ಯಾವ ದಿಕ್ಕಿನಲ್ಲಿರಬೇಕೆಂಬುದಕ್ಕೆ ಹೇಗೆ ವಾಸ್ತು ಇರುತ್ತದೋ ಅದೇ ರೀತಿ ಮನೆಯ ಗೋಡೆಗಳ ಬಣ್ಣಕ್ಕೂ ವಾಸ್ತುವಿಗೂ ಸಂಬಂಧವಿದೆ.

ಮನೆಯ ಗೋಡೆಗಳಿಗೆ ಬಣ್ಣವನ್ನು ಆಯ್ಕೆ ಮಾಡುವುದು ಸುಲಭದ ಮಾತೇನಲ್ಲ. ನೋಡಲು ಸುಂದರವಾಗಿ ಕಾಣುವಂತಹ ಕಾಂಬಿನೇಷನ್​ನಲ್ಲಿ ಪೇಂಟಿಂಗ್ ಮಾಡಿಸಿದರೆ ಆ ಮನೆಯ ಅಂದ ದುಪ್ಪಟ್ಟಾಗುತ್ತದೆ. ಹಾಗೇ, ನಿಮ್ಮ ಮನೆಯ ಗೋಡೆಗಳ ಬಣ್ಣಗಳು ನಿಮ್ಮ ಮನೆಯಲ್ಲಿರುವವರ ಮೂಡ್ ಯಾವ ರೀತಿಯಿದೆ, ಅಭಿರುಚಿ ಹೇಗಿದೆ ಎಂಬುದನ್ನು ಕೂಡ ಪ್ರತಿನಿಧಿಸುತ್ತವೆ.

ನಿಮ್ಮ ಮನೆಯಲ್ಲಿರುವ ಪ್ರತಿಯೊಂದು ರೂಮಿಗೂ ವಾಸ್ತು ಪ್ರಕಾರವಾಗಿ ಬೇರೆ ಬೇರೆ ಬಣ್ಣಗಳಿವೆ. ಆ ಬಣ್ಣಗಳ ಕಾಂಬಿನೇಷನ್​ನಲ್ಲಿ ಪೇಂಟಿಂಗ್ ಮಾಡಿಸಿದರೆ ಮನೆಯಲ್ಲಿ ಅಭಿವೃದ್ಧಿ ಕಾಣುತ್ತದೆ ಎಂಬುದು ನಂಬಿಕೆ. ಇದು ವಾಸ್ತುವನ್ನು ನಂಬುವವರಿಗೆ ಮಾತ್ರ ಅನ್ವಯವಾಗುತ್ತದೆ. ಹಾಗಾದರೆ, ವಾಸ್ತು ಪ್ರಕಾರವಾಗಿ ಯಾವ ಕೊಠಡಿಗೆ ಯಾವ ಬಣ್ಣ ಸೂಕ್ತ? ಇಲ್ಲಿದೆ ಮಾಹಿತಿ…

1. ಲಿವಿಂಗ್ ರೂಂ:
ಯಾರೇ ಆದರೂ ಮನೆಗೆ ಬಂದ ಕೂಡಲೆ ಮೊದಲು ಗಮನ ಸೆಳೆಯುವುದು ಲಿವಿಂಗ್ ರೂಂ. ಎಲ್ಲರೂ ಒಟ್ಟಾಗಿ ಕುಳಿತು ಹರಟುವ ಲಿವಿಂಗ್ ರೂಂ ಆ ಮನೆಯ ಕೇಂದ್ರಬಿಂದುವಾಗಿರುತ್ತದೆ. ಹೀಗಾಗಿ, ಲಿವಿಂಗ್ ರೂಮಿಗೆ ತಿಳಿಯಾದ ಬಣ್ಣವನ್ನು ಬಳಿಸುವುದು ಉತ್ತಮ. ಬಿಳಿ, ತಿಳಿ ಹಳದಿ, ತಿಳಿ ಹಸಿರು, ನೀಲಿ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಲಿವಿಂಗ್ ಏರಿಯಾ ಅಂದವಾಗಿ ಕಾಣುತ್ತದೆ. ಲಿವಿಂಗ್ ರೂಮಿಗೆ ಆದಷ್ಟು ಗಾಢ ಮತ್ತು ಕಣ್ಣುಕುಕ್ಕುವ ಬಣ್ಣಗಳನ್ನು ಬಳಿಸುವುದನ್ನು ಅವಾಯ್ಡ್ ಮಾಡಿ.

2. ಡೈನಿಂಗ್ ಹಾಲ್:
ಇಡೀ ಕುಟುಂಬ ಒಟ್ಟಾಗಿ ಕುಳಿತು ಊಟ ಮಾಡುವ ಡೈನಿಂಗ್ ರೂಂನಲ್ಲಿ ಕೊಂಚ ಗಾಢವಾದ, ಬ್ರೈಟ್ ಆದ ಪೇಂಟಿಂಗ್ ಮಾಡಿಸಿ. ಪೀಚ್ ಬಣ್ಣ, ಹಳದಿ, ತಿಳಿ ಕೇಸರಿ, ಕಡುನೀಲಿ ಬಣ್ಣಗಳು ಡೈನಿಂಗ್ ಹಾಲ್​ಗೆ ಚೆನ್ನಾಗಿ ಕಾಣುತ್ತವೆ. ಡೈನಿಂಗ್ ಹಾಲ್​ಗೆ ಕಪ್ಪು ಮತ್ತು ಬಿಳಿ ಬಣ್ಣದ ರೀತಿಯ ಒಂದಕ್ಕೊಂದು ವಿರುದ್ಧವಾದ ಬಣ್ಣವನ್ನು ಕಾಂಬಿನೇಷನ್ ಮಾಡಿಸುವುದು ಎಂದು ವಾಸ್ತುವಿನಲ್ಲಿದೆ.

3. ಅಡುಗೆ ಮನೆ:
ಮಹಿಳೆಯರು ತಮ್ಮ ದಿನದ ಬಹುಕಾಲ ಕಳೆಯುವುದು ಅಡುಗೆ ಮನೆಯಲ್ಲೇ. ಹೀಗಾಗಿ, ಅಡುಗೆಮನೆಯನ್ನು ಅವರ ಅಭಿರುಚಿಗೆ ತಕ್ಕಂತೆ ನಿರ್ಮಿಸಿಕೊಳ್ಳುವುದು ಒಳ್ಳೆಯದು. ಅಡುಗೆಮನೆಯಲ್ಲಿ ಸ್ಟೌವ್ ಹೊತ್ತಿಸುವುದರಿಂದ ಅಗ್ನಿ ದೇವನಿಗೆ ಪ್ರಿಯವಾದ ಕೇಸರಿ, ಹಳದಿ, ತಿಳಿಗೆಂಪು ಬಣ್ಣವನ್ನು ಬಳಿಸುವುದು ಉತ್ತಮ. ಅಡುಗೆ ಮನೆಯ ಗೋಡೆಗಳಿಗೆ ಕಪ್ಪು, ಕಡುಗೆಂಪು, ಬೂದು ಬಣ್ಣ ಒಳ್ಳೆಯದಲ್ಲ.

4. ದೇವರಕೋಣೆ:
ಪೂಜಾ ಕೊಠಡಿಯಲ್ಲಿ ಬಹಳ ಪಾಸಿಟಿವ್ ಎನರ್ಜಿ ಇರುತ್ತದೆ. ಹೀಗಾಗಿ, ಅಲ್ಲಿ ಇನ್ನಷ್ಟು ಪಾಸಿಟಿವಿಟಿಯನ್ನು ಹೆಚ್ಚಿಸಲು ಬಿಳಿ, ಕ್ರೀಂ ಬಣ್ಣವನ್ನು ಬಳಸಿ. ಹಳದಿ, ಕೇಸರಿ ಬಣ್ಣದಿಂದಲೂ ಪೇಂಟಿಂಗ್ ಮಾಡಿಸಬಹುದು. ಗಾಢ ಬಣ್ಣಗಳು ನೀವು ಪೂಜೆ ಮಾಡುವಾಗ ನಿಮ್ಮ ಗಮನವನ್ನು ಚಂಚಲಗೊಳಿಸುತ್ತವೆ.

5. ಬೆಡ್ ರೂಂ:
ಬೆಡ್ ರೂಂನಲ್ಲಿ ನಿಮಗೆ ಯಾವ ರೀತಿಯ ಬಣ್ಣಗಳು ಬೇಕೋ ಅದನ್ನು ಬಳಸಬಹುದು. ರೊಮ್ಯಾಂಟಿಕ್ ಆಗಿರಲು ಬಯಸುವವರು ನೀಲಿ, ಕೆಂಪು, ಗುಲಾಬಿ ಬಣ್ಣದ ಕಾಂಬಿನೇಷನ್ ಮಾಡಿಸಬಹುದು. ಕೊಂಚ ವಯಸ್ಸಾದವರಿದ್ದರೆ ಅವರು ಮಲಗುವ ರೂಮಿಗೆ ತಿಳಿ ಬಣ್ಣ ಉತ್ತಮ. ಮಕ್ಕಳು ಮಲಗುವ ರೂಮಿಗೆ ವೈಬ್ರಂಟ್ ಬಣ್ಣಗಳನ್ನು ಬಳಿಸಿದರೆ ಚೆನ್ನಾಗಿರುತ್ತದೆ. ನಿಮಗೆ ಬೇಕಾದ ರೀತಿಯ ವಾಲ್ ಸ್ಟಿಕರ್​ಗಳನ್ನು ಕೂಡ ಅಂಟಿಸಿ ನಿಮ್ಮ ರೂಮನ್ನು ಸುಂದರವಾಗಿಸಿಕೊಳ್ಳಬಹುದು. ಆದರೆ, ಬೆಡ್ ರೂಮಿಗೆ ಹಸಿರು ಮತ್ತು ನೀಲಿ ಕಾಂಬಿನೇಷನ್ ಯಾವಾಗಲೂ ಬೆಸ್ಟ್.

6. ಬಾತ್ ರೂಂ:
ಬಾತ್​ರೂಂ ಚಿಕ್ಕದಾಗಿದ್ದರೂ ಸುಂದರವಾಗಿರಬೇಕು. ನಿಮ್ಮ ದೇಹದ ಕೊಳೆಯನ್ನು ಶುದ್ಧವಾಗಿಸಿಕೊಳ್ಳಲು ಬಾತ್ ರೂಮಿಗೆ ಹೋಗುವ ನಿಮ್ಮ ಮನಸಿಗೂ ಖುಷಿಯಾಗುವಂತಿರಬೇಕು. ಹೀಗಾಗಿ, ಬಾತ್ ರೂಮಿಗೆ ಬಿಳಿ, ಕ್ರೀಂ ಬಣ್ಣ, ಗೋಲ್ಡನ್ ಬ್ರೌನ್, ತಿಳಿ ನೀಲಿ ಬಣ್ಣವನ್ನು ಬಳಸಿ. ಗಾಢ ಹಸಿರು, ಗಾಢ ನೀಲಿ, ಕಡುಗೆಂಪು ಬಣ್ಣಗಳು ಮನೆಯೊಳಗೆ ನೆಗೆಟಿವ್ ಎನರ್ಜಿಯನ್ನು ಹೆಚ್ಚಿಸುತ್ತವೆ. ಹಾಗೇ, ಗಾಢ ಬಣ್ಣಗಳು ನಿಮ್ಮ ರೂಮನ್ನು ಮತ್ತಷ್ಟು ಸಣ್ಣದಾಗಿ ಕಾಣುವಂತೆ ಮಾಡುತ್ತವೆ.

ಇದನ್ನೂ ಓದಿ: Vastu tips: ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಿದಲ್ಲಿ ವಾಸ್ತು ಪ್ರಕಾರ ಶುಭವಲ್ಲ! ಯಾವುವು ಆ ವಸ್ತುಗಳೆಂಬ ಮಾಹಿತಿ ಇಲ್ಲಿದೆ

ಇದನ್ನೂ ಓದಿ: Astrology: ಸೂರ್ಯಾಸ್ತದ ನಂತರ ಈ ಆರು ವಸ್ತುಗಳನ್ನು ಮನೆಯ ಹೊರಗೆ ನೀಡಬಾರದು ಏಕೆ ಗೊತ್ತೆ?