ನಿದ್ರೆಯೊಂದು (Sleep) ಸರಿಯಾಗಿಬಿಟ್ಟರೆ ಆ ದಿನವೆಲ್ಲ ಆರಾಮದಾಯಕವಾಗಿರುತ್ತದೆ. ನಿದ್ರೆಯೇ ಸರಿಯಾಗದಿದ್ದರೆ ಯಾವ ಕೆಲಸ ಮಾಡಲೂ ಮೂಡ್ ಇರುವುದಿಲ್ಲ, ತಲೆನೋವು, ಸುಸ್ತು ಮುಂತಾದ ಆರೋಗ್ಯದ ಕಿರಿಕಿರಿಗಳೂ ಉಂಟಾಗುತ್ತವೆ. ಒಳ್ಳೆಯ ರಾತ್ರಿಯ ನಿದ್ರೆ ನಿಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿರಿಸುತ್ತದೆ. ಹೃದಯ ಮತ್ತು ರಕ್ತನಾಳಗಳು ಸರಿಯಾಗಿ ಕೆಲಸ ಮಾಡಲು ನಿದ್ರೆ ಕೂಡ ಮುಖ್ಯವಾದ ಅಂಶ. ಈ ನಿದ್ರೆಗೂ ವಾಸ್ತುವಿಗೂ ಸಂಬಂಧವಿದೆ. ನೀವು ಬೆಡ್ರೂಂ (Bed Room) ಸಿದ್ಧಪಡಿಸಿಕೊಳ್ಳುವಾಗ ಅಥವಾ ರೀ-ಅರೇಂಜ್ ಮಾಡಿಕೊಳ್ಳುವಾಗ ಬೆಡ್ರೂಂ ಯಾವ ರೀತಿಯಲ್ಲಿ ಸುಂದರವಾಗಿ ಕಾಣಬೇಕು ಎಂಬುದನ್ನು ಮಾತ್ರ ಗಮನಿಸದೆ ವಾಸ್ತುವಿಗೂ ಪ್ರಾಮುಖ್ಯತೆ ನೀಡಬೇಕಾಗುತ್ತದೆ.
ಈ ಕುರಿತು ಇಂಡಿಯಾ ಡಾಟ್ ಕಾಂನಲ್ಲಿ ವಾಸ್ತು ಆಚಾರ್ಯ ಮನೋಜ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ. “ನಮ್ಮಲ್ಲಿ ಅನೇಕರಿಗೆ ನಿದ್ರೆಯ ಸಮಯದಲ್ಲಿ ನಮ್ಮ ಸುಪ್ತಾವಸ್ಥೆಯು ಹೆಚ್ಚು ಸಕ್ರಿಯವಾಗಿರುತ್ತದೆ ಎಂದು ತಿಳಿದಿರುವುದಿಲ್ಲ. ಆದ್ದರಿಂದ ನಾವು ನಮ್ಮ “ಬಲ ಮೆದುಳಿಗೆ” ನಮ್ಮ ನಿದ್ರೆಯ ಸಮಯದಲ್ಲಿ ಯಾವ ಶಕ್ತಿಗಳನ್ನು ನೀಡುತ್ತೇವೆ ಎಂಬುದನ್ನು ನಾವು ತಿಳಿದಿರುವುದು ಮುಖ್ಯವಾಗಿದೆ. ನಮ್ಮ ಸುಪ್ತಾವಸ್ಥೆಯು ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳನ್ನು ಪಡೆಯುವ ಆಂಟೆನಾದಂತಿದೆ. ಅದು ನಮ್ಮ ಪಂಚೇಂದ್ರಿಯಗಳಿಗೆ ಗ್ರಹಿಸಲು ಸಾಧ್ಯವಾಗದಿದ್ದರೂ ನಮ್ಮ ಮನಸ್ಸು ಮತ್ತು ದೇಹವು ಈ ಸೂಕ್ಷ್ಮ ಶಕ್ತಿಗಳೊಂದಿಗೆ ಪ್ರತಿಧ್ವನಿಸುತ್ತದೆ. ಇದು ನಮ್ಮ ಮನಸ್ಸು, ಮನಸ್ಥಿತಿ, ನಡವಳಿಕೆ ಮತ್ತು ದೇಹದ ಅಂಗಗಳ ಮೇಲೆ ಆಳವಾದ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಾಗಾದರೆ, “ಒಳ್ಳೆಯ ನಿದ್ರೆಯ ಪ್ರಯೋಜನಗಳನ್ನು ಪಡೆಯಲು ನಾವು ನಮ್ಮ ಹಾಸಿಗೆಯ ಬಳಿ ಯಾವ ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು?” ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ನೀವು ಈ ವಸ್ತುಗಳ ಬಗ್ಗೆ ಯೋಚಿಸಿದರೆ, ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ, ನಿಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ನಿಮ್ಮ ಮನಸ್ಸಿಗೆ ಅಭದ್ರತೆಗೂ ಪರಿಹಾರ ಸಿಗುತ್ತದೆ.
* ಮೊಬೈಲ್ ಫೋನ್‌ಗಳು
ಮಲಗುವಾಗ ಹಾಸಿಗೆಯ ಪಕ್ಕ ಮೊಬೈಲ್ ಫೋನ್‌ಗಳನ್ನು ಇಡುವುದನ್ನು ಮೊದಲು ತಪ್ಪಿಸಬೇಕು. ರಾತ್ರಿ ಮಲಗುವಾಗ ಮೊಬೈಲ್ ಫೋನ್ ಅನ್ನು ದಿಂಬಿನ ಕೆಳಗೆ, ದಿಂಬಿನ ಪಕ್ಕದಲ್ಲಿ ಅಥವಾ ಹಾಸಿಗೆಯ ಪಕ್ಕದ ಮೇಜಿನ ಮೇಲೆ ಇಡುವುದು ಸಾಮಾನ್ಯವಾಗಿದೆ. ಮೊಬೈಲ್ ಫೋನ್‌ಗಳು ಮೊಬೈಲ್ ಟವರ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತವೆ ಮತ್ತು ಅದರಿಂದ ಸಾಕಷ್ಟು ವಿದ್ಯುತ್ಕಾಂತೀಯ ವಿಕಿರಣವನ್ನು ಉತ್ಪಾದಿಸುತ್ತವೆ. ನೀವು ಸರಿಯಾಗಿ ನೆಟ್‌ವರ್ಕ್ ಸಿಗದ ಪ್ರದೇಶದಲ್ಲಿದ್ದಾಗ ಅಥವಾ ಮೊಬೈಲ್ ಅನ್ನು ಚಾರ್ಜ್‌ನಲ್ಲಿ ಇರಿಸಿದಾಗ ಅದರಿಂದ ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈ ವಿಕಿರಣಗಳ ದುಷ್ಪರಿಣಾಮಗಳನ್ನು ತಪ್ಪಿಸಲು ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಅಥವಾ ಫ್ಲೈಟ್ ಮೋಡ್‌ನಲ್ಲಿ ಇರಿಸಿ. ಅಥವಾ ಅದ್ಯಾವುದೂ ಸಾಧ್ಯವಾಗದಿದ್ದರೆ ಮೊಬೈಲನ್ನು ನಿಮ್ಮ ಮಲಗುವ ಸ್ಥಾನದಿಂದ 7 ಅಡಿಗಳಿಗಿಂತ ಹೆಚ್ಚು ದೂರದಲ್ಲಿ ಇಡುವುದು ಉತ್ತಮ.
* ವೈಫೈ ರೂಟರ್‌ಗಳು
ಈ ವೈಫೈ ರೂಟರ್‌ಗಳು ಮೊಬೈಲ್ ಫೋನ್‌ಗಳಿಗಿಂತ ಹೆಚ್ಚು ವಿಕಿರಣವನ್ನು ಉತ್ಪಾದಿಸುತ್ತವೆ. ಅದರಿಂದ ಮಲಗುವ ಕೋಣೆಗಳಲ್ಲಿ ವೈಫೈ ರೂಟರ್ಗಳನ್ನು ಇಡದಿರುವುದು ಉತ್ತಮ. ಪ್ರಾಯೋಗಿಕ ಕಾರಣಗಳಿಗಾಗಿ ನಿಮಗೆ ಯಾವುದೇ ಆಯ್ಕೆ ಇಲ್ಲದಿದ್ದರೆ, ರಾತ್ರಿ ಹೊತ್ತಿನಲ್ಲಿ ವೈಫೈ ರೂಟರ್ ಆಫ್ ಮಾಡಿ ಮಲಗಿ.
* ಮೃದು ಆಟಿಕೆಗಳು
ಚಿಕ್ಕ ಮಕ್ಕಳು ಮತ್ತು ವಯಸ್ಕರು ಸಹ ಮೃದುವಾದ ಆಟಿಕೆಗಳನ್ನು ನಿದ್ರೆಯ ಪರಿಕರವಾಗಿ ಪರಿಗಣಿಸುತ್ತಾರೆ. ಮೃದುವಾದ ಆಟಿಕೆಗಳು ಪರಿಸರದಿಂದ ತೇವಾಂಶ, ಕೊಳಕು ಮತ್ತು ಧೂಳನ್ನು ಮಾತ್ರ ಹೀರಿಕೊಳ್ಳುವುದಿಲ್ಲ. ಅವುಗಳು ಎಲ್ಲಾ ನಕಾರಾತ್ಮಕ ಭಾವನೆಗಳನ್ನು ಕೂಡ ಹೊಂದಿರುತ್ತವೆ. ಹಾಗಾಗಿ, ಅವುಗಳನ್ನು ಬೆಡ್ನಿಂದ ದೂರ ಇಡುವುದು ಉಮ್ಮ.
* ಬಾಕ್ಸ್ ಹಾಸಿಗೆಗಳು
ಬದಲಾಗುತ್ತಿರುವ ಕಾಲದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಈಗ ಕಾಟನ್ ಹಾಸಿಗೆ ಬದಲಾಗಿ ಬಾಕ್ಸ್ ಹಾಸಿಗೆಗಳನ್ನು ಹೆಚ್ಚು ಜನರು ಉಪಯೋಗಿಸಲಾರಂಭಿಸಿದ್ದಾರೆ. ಆಧುನಿಕ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವ ಜನರು ವಸ್ತುಗಳನ್ನು ಶೇಖರಿಸಿಡಲು ಸರಿಯಾದ ಸ್ಥಳವಿಲ್ಲ ಎಂಬ ಕಾರಣಕ್ಕೆ ಬಾಕ್ಸ್ ಹಾಸಿಗೆಯತ್ತ ವಾಲುತ್ತಿದ್ದಾರೆ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಹಾಸಿಗೆಯ ಕೆಳಗೆ ಗಾಳಿಯು ಮುಕ್ತವಾಗಿ ಪ್ರಸಾರವಾಗುವಂತೆ ಪೆಟ್ಟಿಗೆಯ ಹಾಸಿಗೆಗಳ ಮೇಲೆ ಮಲಗದಂತೆ ಸಲಹೆ ನೀಡಲಾಗುತ್ತದೆ.
* ಡಾರ್ಕ್ ಪೇಂಟಿಂಗ್ಸ್
ಹೆಚ್ಚಿನ ಜನರು ತಮ್ಮ ಹಾಸಿಗೆಗಳ ಹಿಂದೆ ದೊಡ್ಡ ವರ್ಣಚಿತ್ರವನ್ನು ತೂಗು ಹಾಕುತ್ತಾರೆ. ಅತ್ಯಂತ ಪ್ರಕಾಶಮಾನವಾದ ಅಥವಾ ಡಾರ್ಕ್ ಆದ ಚಿತ್ರಕಲೆಯು ನಿಮಗೆ ಒಳ್ಳೆಯ ರಾತ್ರಿಯ ನಿದ್ರೆಯನ್ನು ಹಾಳು ಮಾಡುತ್ತದೆ. ಗಾಢವಾದ ಭಾವನೆಗಳನ್ನು ತೋರಿಸುವ ಕಪ್ಪು ವರ್ಣಚಿತ್ರವು ನಿಮ್ಮ ಮನಸ್ಥಿತಿ ಮತ್ತು ಉತ್ಸಾಹವನ್ನು ಕುಗ್ಗಿಸುತ್ತದೆ. ನಿಮ್ಮ ಹಾಸಿಗೆಯ ಹಿಂದೆ ಯಾವುದೇ ವರ್ಣಚಿತ್ರವನ್ನು ಹಾಕದಿರುವುದೇ ಉತ್ತಮ.
ಇವು ವಾಸ್ತು ಆಚಾರ್ಯ ಮನೋಜ್ ಶ್ರೀವಾಸ್ತವ ಅವರ ವೈಯಕ್ತಿಕ ಸಲಹೆಗಳಾಗಿರುತ್ತವೆ. ಇದಕ್ಕೂ ಟಿವಿ-9ಗೂ ಯಾವುದೇ ಸಂಬಂಧ ಇರುವುದಿಲ್ಲ.
ಇದನ್ನೂ ಓದಿ: ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸುಲಭ ಮಾರ್ಗಗಳು
Weight Loss: ಸುಖವಾದ ನಿದ್ರೆಯಿಂದಲೂ ತೂಕ ಇಳಿಸಿಕೊಳ್ಳಬಹುದೆಂದು ನಿಮಗೆ ಗೊತ್ತಾ?