ಸಾಂದರ್ಭಿಕ ಚಿತ್ರ
ಮನುಷ್ಯ ಎಂದ ಮೇಲೆ ಒಳ್ಳೆತನ ಹಾಗೂ ಕೆಟ್ಟತನ ಎರಡು ಗುಣ ಇದ್ದೆ ಇರುತ್ತದೆ. ಆದರೆ ಸಮಯ ಸಂದರ್ಭಕ್ಕೆ ತಕ್ಕಂತೆ ವ್ಯಕ್ತಿಯಲ್ಲಿರುವ ನಿಜವಾದ ಗುಣಗಳು ಹೊರಗೆ ಬರುತ್ತದೆ. ಮನುಷ್ಯನಲ್ಲಿರುವ ಈ ಗುಣಗಳು ಸಂತೋಷಕ್ಕೆ ಕಾರಣವಾಗುತ್ತದೆ ಎಂದು ವಿದುರನು ತನ್ನ ನೀತಿಯಲ್ಲಿ ಉಲ್ಲೇಖ ಮಾಡಿದ್ದಾನೆ. ಈ ಐದು ಗುಣಗಳು ಯಾವ ವ್ಯಕ್ತಿಯಲ್ಲಿ ಇರುತ್ತದೆಯೋ, ಅಂತಹವರು ತನ್ನ ಜೀವನದಲ್ಲಿ ಸದಾ ಖುಷಿಯಾಗಿರಲು ಸಾಧ್ಯವಂತೆ. ಹೀಗಾಗಿ ಈ ಕೆಲವು ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಿ ಎಂದು ವಿದುರ ತಿಳಿಸಿದ್ದಾನೆ.
- ಸಕಾರಾತ್ಮಕ ಚಿಂತನೆ : ನಾವು ಯೋಚಿಸುವ ರೀತಿಯೂ ನಮ್ಮ ಸಂತೋಷಕ್ಕೆ ಕಾರಣವಾಗುತ್ತದೆ. ನಮ್ಮ ಆಲೋಚನೆ ಕೂಡ ಧನಾತ್ಮಕವಾಗಿದ್ದು, ನಮ್ಮ ಸುತ್ತಮುತ್ತಲಿನ ಒಳ್ಳೆಯ ಜನರಿದ್ದರೆ ಅದು ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ನಿರ್ಲಕ್ಷ್ಯ, ಸೋಮಾರಿತನ, ಕೋಪ, ದುರಾಸೆ, ಭಯ, ಕುಡಿತ, ಅನೈತಿಕ ಚಟುವಟಿಕೆಗಳಿಂದ ಸದಾ ದೂರವಿರಬೇಕು. ಈ ಅಭ್ಯಾಸಗಳನ್ನು ಹೊಂದಿರುವ ಜನರಿಂದಲೂ ದೂರವಿರುವುದು ಕೂಡ ಸಂತೋಷಕ್ಕೆ ಕಾರಣವಾಗುತ್ತದೆ. ಇಂತಹವರಿದ್ದರೆ ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯವಿಲ್ಲ. ಅದಲ್ಲದೇ ಸಂತೋಷ, ಶಾಂತಿ, ನೆಮ್ಮದಿ ಇರುವುದಿಲ್ಲ.
- ಕ್ಷಮಿಸುವ ಹಾಗೂ ದಾನ ಧರ್ಮ ಮಾಡುವ ಗುಣ : ಶ್ರೇಷ್ಠ ಗುಣಗಳಿರುವವರ ವ್ಯಕ್ತಿಯ ಸಹವಾಸವು ಕಲ್ಪವೃಕ್ಷವಿದ್ದಂತೆ. ವಿದುರ ಹೇಳುವಂತೆ ಕ್ಷಮಿಸುವ ಗುಣ ಇರುವವರು, ದಾನ ಮಾಡುವ ಹೃದಯವುಳ್ಳವರು ಜಗತ್ತಿನಲ್ಲೇ ಶ್ರೇಷ್ಠರು. ಈ ಗುಣಗಳು ನಿಮ್ಮಲ್ಲಿದ್ದರೆ ನೆಮ್ಮದಿಯುತ ಬದುಕು ನಿಮ್ಮದಾಗುತ್ತದೆ. ನಿಮ್ಮ ಸುತ್ತಮುತ್ತಲಿನ ಜನರು ಈ ಗುಣಗಳನ್ನು ಹೊಂದಿದ್ದರೆ ನಿಮ್ಮ ಜೀವನವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಜೀವನ ಮಧುರವಾಗಲು ಇಂತಹ ಗುಣಗಳಿರುವವರ ಜೊತೆ ಸ್ನೇಹ ಬೆಳೆಸಿ ಇಲ್ಲವಾದರೆ ಈ ಗುಣಗಳು ನಿಮ್ಮಲ್ಲಿ ಇರಲಿ.
- ಹಿರಿಯರನ್ನು ಗೌರವಿಸುವ ಗುಣ : ಪ್ರತಿಯೊಬ್ಬರ ಜೀವನದಲ್ಲಿ ಹಿರಿಯರ ಪಾತ್ರ ಬಹಳ ದೊಡ್ಡದು. ಹಿರಿಯರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಕರ್ತವ್ಯ ಕೂಡ ಆಗಿದೆ. ಹಿರಿಯರ ಸೇವೆ ಮಾಡುವುದು ಹಾಗೂ ಹಿರಿಯರನ್ನು ಗೌರವಿಸುವ ಮನೆಗಳಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಿರುತ್ತದೆ. ಈ ಮನೆಹೆ ಲಕ್ಷ್ಮಿ ದೇವಿಯ ಆಶೀರ್ವಾದವು ಸದಾ ಇರುತ್ತದೆ. ಯಾರ ಮನೆಯಲ್ಲಿ ಹಿರಿಯರನ್ನು ಗೌರವಿಸುವುದಿಲ್ಲವೋ ಅಲ್ಲಿ ದುಃಖವೇ ತುಂಬಿರುತ್ತದೆ ಎಂದು ವಿದುರು ತಿಳಿಸಿದ್ದಾನೆ.
- ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು : ವಿದುರನು ತನ್ನ ನೀತಿಶಾಸ್ತ್ರದಲ್ಲಿ ಮನೆಯ ಸ್ವಚ್ಛತೆಯ ಬಗ್ಗೆ ಉಲ್ಲೇಖ ಮಾಡಿದ್ದಾನೆ. ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ. ಸ್ವಚ್ಛತೆ ಇಲ್ಲದ ಮನೆಯಲ್ಲಿ ಬಡತನವೇ ತುಂಬಿರುತ್ತದೆ. ಲಕ್ಷ್ಮಿ ದೇವಿಯೂ ಸ್ವಚ್ಛ ಮನೆಯಲ್ಲಿ ಇರುತ್ತಾಳೆ, ಆಕೆ ಇದ್ದಲ್ಲಿ ನೆಮ್ಮದಿ ಸಂತೋಷವೇ ಇರುತ್ತದೆ. ಹೀಗಾಗಿ ಮನೆಯ ಸ್ವಚ್ಛತೆಯತ್ತ ಎಲ್ಲರೂ ಗಮನ ಹರಿಸಿ ಎಂದು ಸಲಹೆ ನೀಡಿದ್ದಾನೆ ವಿದುರ.
- ದೇವರ ಮೇಲೆ ನಂಬಿಕೆ : ವಿದುರ ನೀತಿಯ ಪ್ರಕಾರ ದೇವರಲ್ಲಿ ನಂಬಿಕೆಯಿಟ್ಟು ಯಾವುದೇ ಕೆಲಸವನ್ನು ಆರಂಭಿಸಿದರೂ ಜೀವನದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ. ಆದರೆ, ಕೆಲವರು ತಮ್ಮನ್ನೇ ಶ್ರೇಷ್ಠ ಹಾಗೂ ತಮ್ಮ ಬಗ್ಗೆಯೇ ಹೆಮ್ಮೆಪಟ್ಟುಕೊಳ್ಳುತ್ತಾರೆ. ಅಂತಹವರು ಜೀವನದಲ್ಲಿ ಕಷ್ಟಗಳನ್ನೇ ಎದುರಿಸುತ್ತಾರೆ. ಪ್ರಾಮಾಣಿಕ ಕೆಲಸವು ಜೀವನದಲ್ಲಿ ಸಂತೋಷಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ವಿದುರನು ತನ್ನ ನೀತಿಯಲ್ಲಿ ತಿಳಿಸಿದ್ದಾನೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ