ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (High Blood Pressure) ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಒತ್ತಡದ ಜೀವನಶೈಲಿಯ ಕಾರಣದಿಂದಾಗಿ ಅನೇಕ ಜನರು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅಂತಿಮವಾಗಿ ಇದು ಹೃದಯರಕ್ತನಾಳಗಳ ಕಾಯಿಲೆಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ರಕ್ತದೊತ್ತಡವನ್ನು ಖಂಡಿತವಾಗಿಯೂ ನಿಯಂತ್ರಣದಲ್ಲಿಡಬಹುದು. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ನಾವು ಸೇವಿಸುವಂತಹ ಆಹಾರಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೆಚ್ಚಿನ ಪ್ರಮಾಣದ ಸೋಡಿಯಂ ಹೊಂದಿರುವ ಆಹಾರದ ಸೇವನೆಯು ಅಧಿಕ ರಕ್ತದೊತ್ತಡವನ್ನು ಉಂಟುಮಾಡಬಹುದು. ಹಾಗೆಯೇ ಪೊಟ್ಯಾಸಿಯಂ, ಮೆಗ್ನೇಸಿಯಮ್ ಮತ್ತು ಫೈಬರ್ ಅಂಶಗಳಿಂದ ಸಮೃದ್ಧವಾಗಿರುವ ಆಹಾರಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯಕರ ರೀತಿಯಲ್ಲಿ ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಫ್ರೋಟೀನ್ ಮತ್ತು ಕಡಿಮೆ ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸಬೇಕಾಗುತ್ತದೆ. ಇನ್ನೂ ಈ ಕೆಲವು ಪಾನೀಯಗಳನ್ನು ಸೇವಿಸುವ ಮೂಲಕವೂ ನೀವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟುಕೊಳ್ಳಬಹುದು.
ಅಧಿಕ ರಕ್ತದೊತ್ತಡವನ್ನು ಸರಿಯಾಗಿ ನಿರ್ವಹಿಸಲು ಯಾವ ರೀತಿ ಜೀವನಶೈಲಿ ಬದಲಾವಣೆ ಮಾಡಿಕೊಳ್ಳಬೇಕು:
ಅಮೇರಿಕನ್ ಹಾರ್ಟ್ ಅಸೋಸಿಯೇನ್ ಪ್ರಕಾರ, ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗದಂತೆ ಹಾಗೂ ಭಾದಿಸದಂತೆ ನೋಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಅಭ್ಯಾಸ ಮಾಡುವುದು ಅತ್ಯಗತ್ಯ. ಮುಖ್ಯವಾಗಿ ಉಪ್ಪಿನಾಂಶ ಕಡಿಮೆ ಇರುವ ಆಹಾರಗಳನ್ನು ಸೇವನೆ ಮಾಡುವುದು ಮುಖ್ಯವಾಗಿದೆ. ಅಲ್ಲದೆ ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸುವುದು, ನಿಯಮಿತವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಧೂಮಪಾನವನ್ನು ತ್ಯಜಿಸುವುದು ಹಾಗೂ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡುವ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಅಧಿಕ ರಕ್ತದೊತ್ತಡವಿದೆಯೇ? ನಿಮ್ಮ ಜೀವನಶೈಲಿಯನ್ನು ಸ್ವಲ್ಪ ಬದಲಿಸಿಬಿಡಿ
ಬೀಟ್ರೂಟ್ ನಲ್ಲಿ ನೈಟ್ರೇಟ್ ಅಂಶವು ಸಮೃದ್ಧವಾಗಿದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸಿ ರಕ್ತದೊತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಟೊಮಟೊ ಲೈಕೋಪೀನ್, ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಇ ನಂತಹ ಪೋಷಕಾಂಶಗಳನ್ನು ಹೊಂದಿದೆ, ಇದು ರಕ್ತದೊತ್ತಡವನ್ನು ಸುಧಾರಿಸುವ ಪರಿಣಾಮಕಾರಿ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ. ಟೊಮೆಟೊ ಮತ್ತು ಬೀಟ್ರೂಟ್ ಎರಡನ್ನು ಮಿಶ್ರಣ ಮಾಡಿ ಜ್ಯೂಸ್ ತಯಾರಿಸಿ ಸೇವಸುವುದರಿಂದ ಹೆಚ್ಚು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಬೀಟ್ರೂಟ್ ರಕ್ತ ನಾಳಗಳಿಗೆ ವಿಶ್ರಾಂತಿ ನೀಡುತ್ತದೆ ಹಾಗೂ ರಕ್ತದ ಹರಿವನ್ನು ಸುಧಾರಿಸುತ್ತದೆ. ಟೊಮೆಟೊ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೊತ್ತಂಬರಿ ಬೀಜದ ನೀರು ಮೂತ್ರ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೇಹದಿಂದ ಹೆಚ್ಚುವರಿ ಸೋಡಿಯಂ ಮತ್ತು ನೀರನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗೂ ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ದಾಳಿಂಬೆ ಫೋಲೆಟ್ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅಲ್ಲದೆ ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಯಿಂದಾಗಿ ದಾಳಿಂಬೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ದಾಳಿಂಬೆ ಜ್ಯೂಸ್ನ್ನು ಪ್ರತಿದಿನ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗೂ ಇದು ರಕ್ತದೊತ್ತಡದ ನಿರ್ವಹಣೆಗೂ ಸಹಕಾರಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ