ಮಕ್ಕಳು ವೇಗವಾಗಿ ಬೆಳೆಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಪೋಷಕರು ಯಾವಾಗಲೂ ಮಕ್ಕಳ ಬಗ್ಗೆ ಎಚ್ಚರ ವಹಿಸುವುದು ತುಂಬಾ ಅವಶ್ಯಕ. ಒಳ್ಳೆಯ ಸಂಸ್ಕಾರದ ಜೊತೆಗೆ ನೈರ್ಮಲ್ಯದ ಬಗ್ಗೆಯೂ ಮಕ್ಕಳಿಗೆ ತಿಳಿ ಹೇಳುವುದು ಬಹಳ ಮುಖ್ಯ. ವಿಶೇಷವಾಗಿ ಮಕ್ಕಳು ಹದಿಹರೆಯದ ವಯಸ್ಸಿಗೆ ಬಂದಾಗ ಅವರಿಗೆ ಪ್ರೌಢಾವಸ್ಥೆಯಲಾಗುವ ಬದಲಾವಣೆಯ ಬಗ್ಗೆ ಹೇಳಬೇಕು. ಕೆಲವು ಹುಡುಗಿಯರು ತಮ್ಮ ದೈಹಿಕ ಬದಲಾವಣೆಗಳ ಬಗ್ಗೆ ತಂಬಾ ಹಗುರವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಕೆಲವು ಮಕ್ಕಳು ಈ ಬದಲಾವಣೆಗಳಿಂದ ಉದ್ವೇಗಕ್ಕೆ ಒಳಗಾಗುತ್ತಾರೆ ಹಾಗೂ ಈ ಬದಲಾವಣೆಯಿಂದ ವಿಚಲಿತರಾಗುತ್ತಾರೆ. ಅದರಲ್ಲೂ ಹುಡುಗಿಯರಲ್ಲಿ ಹದಿಹರೆಯದ ವಯಸ್ಸಿನಲ್ಲಿ ದೈಹಿಕ ಬದಲಾವಣೆಗಳು ಹೆಚ್ಚಾಗಿ ಕಂಡುಬರುತ್ತವೆ. ಅವುಗಳಲ್ಲಿ ದೇಹದಲ್ಲಿ ಕೂದಲು ವೇಗವಾಗಿ ಬೆಳೆಯುವುದು, ಮೊಡವೆಗಳು ಮೂಡುವುದು, ಸ್ತನದ ಗಾತ್ರದ ಬದಲಾವಣೆ, ಅಲ್ಲದೆ ಋತುಚಕ್ರ ಆರಂಭವಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಗಳ ದೇಹದಲ್ಲಾಗುವ ಈ ಬದಲಾವಣೆಯ ಬಗ್ಗೆ ತಾಯಂದಿರು ತಮ್ಮ ಮಗಳ ಬಳಿ ಮುಕ್ತವಾಗಿ ಮಾತನಾಡುವುದು ಹಾಗೂ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದು ತುಂಬಾನೇ ಮುಖ್ಯ. ಇದರಿಂದ ದೇಹದಲ್ಲಾಗುವ ಬದಲಾವಣೆಯ ಬಗ್ಗೆ ಮಕ್ಕಳು ಭಯಪಡುವುದಿಲ್ಲ.
ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಕಾಲಿಡಲು ಆರಂಭಿಸಿದಾಗ ಅವರಿಗೆ ಮೊದಲು ದೈಹಿಕ ಸ್ವಚ್ಛತೆಯ ಬಗ್ಗೆ ಹೇಳಿ ಕೊಡಿ. ವಿಶೇಷವಾಗಿ ಮುಟ್ಟಿಗೆ ಸಂಬಂಧಿಸಿದ ಶುಚಿತ್ವದ ಬಗ್ಗೆ. ಉದಾಹರಣೆಗೆ ಸ್ಯಾನಿಟರ್ ಪ್ಯಾಡ್ಗಳನ್ನು ಯಾವಾಗ ಬದಲಾಯಿಸಬೇಕು, ಕೈ ತೊಳೆಯುವುದು, ದೇಹದ ಖಾಸಗಿ ಭಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಪ್ರತಿದಿನ ಒಳಉಡುಪುಗಳನ್ನು ಬದಲಾಯಿಸುವುದು ಮತ್ತು ಅವುಗಳನ್ನು ಸ್ವಚ್ಛವಾಗಿ ತೊಳೆದಿಟ್ಟುಕೊಳ್ಳಬೇಕು ಈ ಎಲ್ಲದರ ಬಗ್ಗೆ ನಿಮ್ಮ ಮಗಳಿಗೆ ಕಲಿಸಿ ಮತ್ತು ಸ್ವಚ್ಛತೆಯ ಅಗತ್ಯತೆಯ ಬಗ್ಗೆ ಆಕೆಗೆ ವಿವರಿಸಿ.
ಪ್ರತಿಯೊಬ್ಬರಿಗೂ ವ್ಯಾಯಾಮ ಅಗತ್ಯ. ವ್ಯಾಯಾಮ, ಧ್ಯಾನ, ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ಮಗಳಿಗೆ ವಿವರಿಸಿ. ವ್ಯಾಯಾಮ ಮಾಡಲು ಅವರನ್ನು ಪ್ರೋತ್ಸಾಹಿಸಿ. ವ್ಯಾಯಾಮವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದಲ್ಲದೆ, ಹಾರ್ಮೋನುಗಳನ್ನು ಸಮತೋಲನದಲ್ಲಿಡುತ್ತದೆ. ಇದು ಸರಾಗವಾದ ಮುಟ್ಟಿನಿಂದ ಹಿಡಿದು ತೂಕ ನಿಯಂತ್ರಣದವರೆಗೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಆರೋಗ್ಯಕರವಾಗಿರಲು ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರದ ಸೇವನೆಯು ಬಹಳ ಮುಖ್ಯ. ಜಂಕ್ ಫುಡ್, ಬೀದಿಬದಿಯ ಆಹಾರಗಳು, ಮಸಾಲೆಯುಕ್ತ ಆಹಾರ ಹಾಗೂ ಎಣ್ಣೆಯಲ್ಲಿ ಕರಿದ ಆಹಾರ ಇವೆಲ್ಲವೂ ಮಕ್ಕಳ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ. ಈ ಆಹಾರಗಳ ಸೇವನೆಯಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ನಿಮ್ಮ ಮಗಳಿಗೆ ವಿವರಿಸಿ. ಈ ರೀತಿಯ ಆಹಾರ ಸೇವನೆ ಮುಖದಲ್ಲಿ ಮೊಡವೆಗಳನ್ನು ಉಂಟುಮಾಡಬಹುದು ಮತ್ತು ಹಾರ್ಮೋನುಗಳ ಸಮಸ್ಯೆಯನ್ನು ಉಂಟುಮಾಡಬಹುದು. ಹಾಗಾಗಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳಿಂದ ಸಮೃದ್ಧವಾಗಿರುವ ಆಹಾರವನ್ನು ತಿನ್ನಲು ಕಲಿಸಿ ಹಾಗೂ ಪ್ರತಿನಿತ್ಯ ಹಣ್ಣು ತರಕಾರಿಗಳನ್ನು ಸೇವಿಸಲು ಅಭ್ಯಾಸವನ್ನು ರೂಢಿಸಿ.
ಇದನ್ನೂ ಓದಿ: ಮಕ್ಕಳಿಗೆ ಸ್ವಯಂ ಪ್ರೀತಿಯನ್ನು ಕಲಿಸಿಕೊಡಬೇಕಾದ ಕೆಲವು ವಿಧಾನಗಳು ಇಲ್ಲಿವೆ
ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಗಳಿಗೆ ವಿವರಿಸಿ. ಇದರಿಂದ ಆಕೆ ತನ್ನ ದೇಹದಲ್ಲಿ ಆಗುವ ಬದಲಾವಣೆಯ ಬಗ್ಗೆ ಭಯ ಪಡುವುದಿಲ್ಲ ಅಥವಾ ವಿಚಲಿತಳಾಗುವುದಿಲ್ಲ. ಅಲ್ಲದೆ ಮುಖ್ಯವಾಗಿ ಮುಟ್ಟಿನ ಬಗ್ಗೆ ನಿಮ್ಮ ಹೆಣ್ಣು ಮಗಳಿಗೆ ಹೇಳಿ. ಆಕೆಯ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿ.
ಮುಟ್ಟಿನ ಸಮಯದಲ್ಲಿ ತುಂಬಾ ನೋವು ಕಂಡುಬಂದರೆ, ತೂಕವು ಇದ್ದಕ್ಕಿದ್ದಂತೆ ಹೆಚ್ಚಾದರೆ ಅಥವಾ ಕಡಿಮೆಯಾದರೆ , ಚರ್ಮದ ಬಣ್ಣದಲ್ಲಿ ಬದಲಾವಣೆ ಕಂಡು ಬಂದರೆ, ಸ್ತನದ ಗಾತ್ರ ವೇಗವಾಗಿ ಬದಲಾಗುತ್ತಿದ್ದರೆ, ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಮುಖ್ಯ. ಈ ರೀತಿಯಾಗಿ ವೈದ್ಯಕೀಯ ತಪಾಸಣೆ ಮಾಡುವ ಮೂಲಕ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರು ಕಂಡುಬಂದರೆ ಸಕಾಲದಲ್ಲಿ ಚಿಕಿತ್ಸೆ ಪಡೆಯಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: