ಡೆಂಗ್ಯೂ ಜ್ವರ ಶಮನಕ್ಕೆ ಯಾವ ಬಣ್ಣದ ಪೇರಳೆ ಹಣ್ಣು ಉತ್ತಮ? ಇಲ್ಲಿದೆ ಮಾಹಿತಿ
ಪೇರಳೆ ಹಣ್ಣು ತಿನ್ನಲು ರುಚಿಕರವಾದದ್ದು ಮಾತ್ರವಲ್ಲದೆ, ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ನಿಯಮಿತ ಸೇವನೆಯಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ನಾವು ಸಾಮಾನ್ಯವಾಗಿ ಬಿಳಿ ಮತ್ತು ಗುಲಾಬಿ ಬಣ್ಣದ ಪೇರಳೆ ಹಣ್ಣುಗಳನ್ನು ಸೇವನೆ ಮಾಡುತ್ತೇವೆ. ಆದರೆ ಇವುಗಳಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬ ಬಗ್ಗೆ ನಿಮಗೆ ತಿಳಿದಿದೆಯಾ? ಈ ಕುರಿತ ಮಾಹಿತಿ ಇಲ್ಲಿದೆ.
ಮಾರುಕಟ್ಟೆಯಲ್ಲಿ ಪೇರಳೆ ಹಣ್ಣುಗಳು ಸುಲಭವಾಗಿ ದೊರೆಯುತ್ತದೆ. ಸ್ಥಳೀಯವಾಗಿ ಬೆಳೆಯುವ ಈ ಹಣ್ಣು ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ವಿಟಮಿನ್ ಸಿ, ಕೆ ಮತ್ತು ವಿಟಮಿನ ಬಿ, ಲೈಕೋಪೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳು ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಪೇರಳೆ ಹಣ್ಣಿನಲ್ಲಿರುವ ಮ್ಯಾಂಗನೀಸ್ ಆಹಾರದಲ್ಲಿನ ಅಗತ್ಯ ಪೋಷಕಾಂಶಗಳನ್ನು ನಮ್ಮ ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಮಲಬದ್ಧತೆಯಿಂದ ಉಪಶಮಣ ನೀಡುವುದರ ಜೊತೆಗೆ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಈ ಕಾರಣದಿಂದ ಮಧುಮೇಹಿಗಳು ಪೇರಳೆ ಹಣ್ಣನ್ನು ಸೇವಿಸಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ನಾವು ಎರಡು ಬಗೆಯ ಪೇರಳೆ ಹಣ್ಣನ್ನು ಕಾಣಬಹುದು. ಒಂದು ಬಿಳಿ, ಇನ್ನೊಂದು ಗುಲಾಬಿ. ಈ ಎರಡು ಬಗೆಯ ಪೇರಳೆ ಹಣ್ಣುಗಳಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬುದರ ಬಗ್ಗೆ ನಿಮಗೆ ತಿಳಿದಿದೆಯಾ? ಈ ಕುರಿತ ಮಾಹಿತಿ ಇಲ್ಲಿದೆ.
ಬಿಳಿ ಅಥವಾ ಗುಲಾಬಿ ಯಾವ ಬಣ್ಣದ ಪೇರಳೆ ಆರೋಗ್ಯಕ್ಕೆ ಉತ್ತಮ:
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಗುಲಾಬಿ ಮತ್ತು ಬಿಳಿ ಬಣ್ಣದ ಎರಡು ಬಗೆಯ ಪೇರಳೆ ಹಣ್ಣುಗಳು ಕಾಣಸಿಗುತ್ತವೆ. ಆದರೆ ಈ ಎರಡರಲ್ಲಿ ಯಾವುದು ಹೆಚ್ಚು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಬಗ್ಗೆ ಪೌಷ್ಟಿಕ ತಜ್ಞೆ ಶಿಖಾ ಕುಮಾರಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬಿಳಿ ಪೇರಳಗಿಂತ ಗುಲಾಬಿ ಬಣ್ಣದ ಪೇರಳೆ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಪೌಷ್ಟಿಕ ತಜ್ಞೆ ಶಿಖಾ ಕುಮಾರಿ ಹೇಳುತ್ತಾರೆ. ಸಾಮಾನ್ಯವಾಗಿ ಬಿಳಿ ಬಣ್ಣದ ಪೇರಳೆಗೆ ಹೋಲಿಸಿದರೆ ಗುಲಾಬಿ ಬಣ್ಣದ ಪೇರಳೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ಲಭಿಸುತ್ತದೆ ಎಂದು ಅನೇಕ ಅಧ್ಯಯನಗಳು ದೃಢಪಡಿಸಿವೆ. ಅದರಲ್ಲಿ ಒಂದು ಅಧ್ಯಯನವು ಗುಲಾಬಿ ಬಣ್ಣದ ಪೇರಳೆ ಹಣ್ಣು ಡೆಂಗ್ಯೂ ಜ್ವರವನ್ನು ಶಮನ ಮಾಡಲು ಸಹಕಾರಿ ಎಂದು ಹೇಳಿದೆ. ಅಲ್ಲದೆ ಗುಲಾಬಿ ಬಣ್ಣದ ಪೇರಳೆ ಹಣ್ಣು ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಗಿಂತ ಎರಡು ಪಟ್ಟು ಹೆಚ್ಚು ಪೋಷಕಾಂಶವನ್ನು ಹೊಂದಿದೆ.
View this post on Instagram
ಬಿಳಿ ಮತ್ತು ಗುಲಾಬಿ ಬಣ್ಣದ ಪೇರಳೆ ನಡುವಿನ ವ್ಯತ್ಯಾಸ:
ಗುಲಾಬಿ ಮತ್ತು ಬಿಳಿ ಬಣ್ಣದ ಪೇರಳೆಯ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಬಣ್ಣ ಮತ್ತು ರುಚಿ. ಗುಲಾಬಿ ಬಣ್ಣದ ಪೇರಳೆ ಹಣ್ಣು ತಿನ್ನಲು ಹೆಚ್ಚು ರುಚಿರವಾಗಿದೆ. ಅವುಗಳಲ್ಲಿರುವ ಪೋಷಕಾಂಶಗಳ ಬಗ್ಗೆ ಹೇಳುವುದಾದರೆ, ಕೆಂಪು ಪೇರಳೆ ಹಣ್ಣಿನಲ್ಲಿ ನೀರಿನ ಪ್ರಮಾಣ ಹೆಚ್ಚು ಹಾಗೂ ಸಕ್ಕರೆ ಮತ್ತು ಪಿಷ್ಟದ ಪ್ರಮಾಣ ಕಡಿಮೆ ಇರುತ್ತದೆ. ಇದಲ್ಲದೆ ಗುಲಾಬಿ ಪೇರಳೆ ಹಣ್ಣಿನಲ್ಲಿ ಬೀಜಗಳು ಕಡಿಮೆ ಇರುತ್ತದೆ. ಪಿಷ್ಟ, ಸಕ್ಕರೆ ಬಿಳಿ ಪೇರಳೆಯಲ್ಲಿ ಹೆಚ್ಚು ಕಂಡುಬರುತ್ತದೆ. ಮತ್ತು ಇದು ಹೆಚ್ಚಿನ ಬೀಜಗಳನ್ನು ಸಹ ಹೊಂದಿರುತ್ತದೆ.
ಇದನ್ನೂ ಓದಿ: ಪೇರಳೆ ಹಣ್ಣು ಆರೋಗ್ಯದ ಜತೆಗೆ ಸೌಂದರ್ಯವನ್ನೂ ಕಾಪಾಡುತ್ತೆ ಹೇಗೆ ತಿಳಿಯಿರಿ
ಪೇರಳೆ ಹಣ್ಣು ತಿನ್ನುವುದರಿಂದ ಲಭಿಸುವ ಪ್ರಯೋಜನಗಳು:
• ಪೇರಳೆ ಹಣ್ಣು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
• ಪೇರಳೆ ತಿಂದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
• ಪೇರಳೆ ಹಣ್ಣು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಸಹಕಾರಿಯಾಗಿದೆ.
• ಈ ಹಣ್ಣಿನ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು.
• ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:49 pm, Tue, 8 August 23