ಇತ್ತೀಚಿನ ದಿನಗಳಲ್ಲಿ ಜನರು ವರ್ಷದ ಎಲ್ಲ ದಿನವೂ ಒಡೆದ ಹಿಮ್ಮಡಿಗಳ ಸಮಸ್ಯೆಯನ್ನು ಎದುರಿಸುತ್ತಾರೆ. ಮೊದಲಾದರೆ ಚಳಿಗಾಲದಲ್ಲಿ ಮಾತ್ರ ಈ ಸಮಸ್ಯೆ ತಲೆದೂರುತ್ತಿತ್ತು. ಆದರೆ ಈಗ ಹಾಗಲ್ಲ. ಶುಷ್ಕ ಹವಾಮಾನ ಮತ್ತು ಎಸಿ ಅಡಿಯಲ್ಲಿ ಹೆಚ್ಚು ಕಾಲ ಕುಳಿತುಕೊಳ್ಳುವುದರಿಂದ ಈ ರೀತಿಯ ತೊಂದರೆ ಬೇಸಿಗೆಯಲ್ಲಿಯೂ ಕಾಣಸಿಗುತ್ತದೆ. ಇದಕ್ಕೆ ಮತ್ತೊಂದು ಮುಖ್ಯ ಕಾರಣವೆಂದರೆ ಟೈಲ್ಸ್, ಗ್ರಾನೈಟ್ಗಗಳ ಮೇಲೆ ಓಡಾಡುವುದರಿಂದ. ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡಲು ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಲಭ್ಯವಿವೆ, ಅವು ಒಡೆದ ಹಿಮ್ಮಡಿಗಳನ್ನು ಗುಣಪಡಿಸುವ ಭರವಸೆ ನೀಡುತ್ತವೆ. ಆದರೆ ಉತ್ತಮ ಚಿಕಿತ್ಸೆ ನೀಡಲು ಸಹಾಯ ಮಾಡುವ ಕೆಲವು ಮನೆಮದ್ದುಗಳಿಗಿಂತ ಉತ್ತಮವಾದುದು ಯಾವುದೂ ಇಲ್ಲ ಎನ್ನುತ್ತಾರೆ ತಜ್ಞರು.
ಚರ್ಮರೋಗ ತಜ್ಞೆ ಡಾ. ಗೀತಿಕಾ ಮಿತ್ತಲ್ ಗುಪ್ತಾ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಮನೆಮದ್ದುಗಳನ್ನು ಹಂಚಿಕೊಂಡಿದ್ದಾರೆ. ಇದು ಒಡೆದ ಹಿಮ್ಮಡಿಗಳಿಗೆ ಚಿಕಿತ್ಸೆ ನೀಡಲು ಮತ್ತು ಅವು ಮೃದುವಾಗಿ, ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ನಿಮ್ಮ ಒಡೆದ ಹಿಮ್ಮಡಿಗಳನ್ನು ಸರಿಪಡಿಸಲು ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ” ಎಂದು ಬರೆದುಕೊಂಡಿದ್ದಾರೆ.
ತೇವಾಂಶದಿಂದ ಕೂಡಿರಲಿ: ನಿಮ್ಮ ಪಾದಗಳಿಗೆ ಕ್ರೀಮ್ ಗಳನ್ನು ಹಚ್ಚುವ ಬಗ್ಗೆ ಕಾಳಜಿ ಇರಲಿ. ದಿನಕ್ಕೆ 2-3 ಬಾರಿಯಾದರೂ ನೀವು ಬಳಸುವ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಬಳಿಕ ಮಲಗುವ ಮೊದಲು ಮತ್ತೆ ಇದನ್ನು ಮಾಡಿ. ಇದರಿಂದ ಕಾಲು ತೇವಾಂಶದಿಂದ ಕೂಡಿರುತ್ತದೆ. ನೀವು ಹೆಚ್ಚು ಹೊತ್ತು ಎಸಿ ಅಡಿಯಲ್ಲಿ ಕುಳಿತುಕೊಳ್ಳುವವರಾಗಿದ್ದರೆ ವ್ಯಾಸಲೀನ್ ನಂತಹ ಪೆಟ್ರೋಲಿಯಂ ಜೆಲ್ಲಿಯನ್ನು ತೆಳುವಾಗಿ ಪದರದ ರೀತಿಯಲ್ಲಿ ಹಚ್ಚಿಕೊಳ್ಳಿ.
ಮಾಯಿಶ್ಚರೈಸಿಂಗ್ ಸಾಕ್ಸ್ ಖರೀದಿಸಿ: ಒಣಗಿದ, ಒಡೆದ ಹಿಮ್ಮಡಿಗಳಿಗಾಗಿ ವಿಶೇಷವಾಗಿ ತಯಾರಿಸಿದ ಒಂದು ಜೋಡಿ ಮಾಯಿಶ್ಚರೈಸಿಂಗ್ ಸಾಕ್ಸ್ ಅನ್ನು ತೆಗೆದುಕೊಳ್ಳಿ. ಇವು ಅಲೋವೆರಾ, ವಿಟಮಿನ್ ಇ ಮತ್ತು ಶಿಯಾ ಬೆಣ್ಣೆಯಂತಹ ಪದಾರ್ಥಗಳಿಂದ ತಯಾರು ಮಾಡಲಾಗಿದ್ದು ನಿಮ್ಮ ಚರ್ಮವನ್ನು ತೀವ್ರವಾಗಿ ಹೈಡ್ರೇಟ್ ಮಾಡುತ್ತವೆ.
ಇದನ್ನೂ ಓದಿ: Cracked Heels: ಚಳಿಗಾಲ ಮಾತ್ರವಲ್ಲ, ಬೇಸಿಗೆಯಲ್ಲೂ ಹಿಮ್ಮಡಿ ಒಡೆಯುತ್ತಾ, ಕಾರಣಗಳು, ಪರಿಹಾರಗಳ ತಿಳಿಯಿರಿ
ಪಾದವನ್ನು ನೀರಿನಲ್ಲಿ ಸ್ವಲ್ಪ ಹೊತ್ತು ಇರಿಸಿ: ಕಾಲಿನಲ್ಲಿ ಸಣ್ಣ ಸಣ್ಣ ಬಿರುಕುಗಳು ಇದ್ದಲ್ಲಿ ಪಾದವನ್ನು ಮನೆಯಲ್ಲಿ ಸಿಗುವ ಪದಾರ್ಥಗಳನ್ನು ನೀರಿನಲ್ಲಿ ಬೆರೆಸಿ ಕಾಲನ್ನು ನೆನೆಯಲು ಬಿಡಬೇಕು. ಅಂಗಡಿಗಳಲ್ಲಿ ಅನೇಕ ಆಯ್ಕೆಗಳಿವೆ, ಆದರೆ ನೀವು ಎಕ್ಸ್ಫೋಲಿಯೇಟ್ ಮಾಡಲು ಹಾಲು ಮತ್ತು ಜೇನುತುಪ್ಪದ ಸಂಯೋಜನೆಯನ್ನು ಸಹ ಬಳಸಬಹುದು. ಇದರ ನಂತರ, ಪ್ಯೂಮಿಸ್ ಕಲ್ಲನ್ನು ಬಳಸಬಹುದು.
ತೆಂಗಿನ ಎಣ್ಣೆ ಹಚ್ಚಿರಿ: ತೆಂಗಿನ ಎಣ್ಣೆಯು ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳಿಗೆ ಒಂದು ಉತ್ತಮವಾದ ಮಾಯಿಶ್ಚರೈಸ್ ಆಗಿದೆ. ತೆಂಗಿನ ಎಣ್ಣೆಯ ಅನ್ವಯವು ಚರ್ಮದೊಳಗಿನ ತೇವಾಂಶವನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಚರ್ಮದಲ್ಲಿ ತೇವಾಂಶ ಉಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಬಿರುಕು ಬಿಟ್ಟ ಚರ್ಮವನ್ನು ಹೋಗಲಾಡಿಸಲು ತೆಂಗಿನ ಎಣ್ಣೆಯನ್ನು ನೀವು ಬಳಸಿದರೆ ಇದರಿಂದ ಉತ್ತಮ ಪರಿಹಾರ ನಿಮಗೆ ದೊರೆಯುವುದರಲ್ಲಿ ಆಶ್ಚರ್ಯವೇನಿಲ್ಲ.
ಬಾಳೆಹಣ್ಣಿನ ಪೇಸ್ಟ್ ಹಚ್ಚಿರಿ: ಬಿರುಕು ಬಿಟ್ಟ ಪಾದಗಳಿಂದ ಹೊರಬರಲು ಬಾಳೆಹಣ್ಣು ಸಹ ನಿಮಗೆ ಸಹಾಯ ಮಾಡುತ್ತದೆ. ಎರಡು ಮಾಗಿದ ಬಾಳೆಹಣ್ಣುಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ ಮತ್ತು ಇದರಿಂದ ನಯವಾದ ಪೇಸ್ಟ್ ತಯಾರಿಸಿಕೊಂಡು ಕಾಲಿನ ಬಿರುಕಿದ್ದ ಭಾಗದಲ್ಲಿ ಸವರಿ. ಈ ಪೇಸ್ಟ್ ನಿಮ್ಮ ಕಾಲಿನಲ್ಲಿ ಸರಿಸುಮಾರು ಇಪ್ಪತ್ತು ನಿಮಿಷಗಳ ಕಾಲ ಇರಲು ಬಿಡಿ. ತದ ನಂತರದಲ್ಲಿ ತಂಪಾದ ನೀರಿನಿಂದ ನಿಮ್ಮ ಕಾಲುಗಳನ್ನು ತೊಳೆಯಿರಿ. ಇದರಿಂದ ಸುಂದರವಾದ ಬಿರುಕಿಲ್ಲದ ಪಾದ ನಿಮ್ಮದಾಗಲಿದೆ.
ನಿಮಗೆ ಗೊತ್ತಿರುವ ಹಾಗೇ ಸಮಸ್ಯೆ ಯಾವುದೇ ಆಗಲಿ ಅದಕ್ಕೆ ಪರಿಹಾರ ಎನ್ನುವುದು ಇದ್ದೇ ಇರುತ್ತದೆ. ಈ ಮೇಲೆ ತಿಳಿಸಿದ ಎಲ್ಲಾ ಸಲಹೆಗಳು ನಿಮ್ಮ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಿಮ್ಮಡಿ ಒಡೆದ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಎಲ್ಲಾ ಪರಿಹಾರಗಳನ್ನು ಬಳಸಿ ಉತ್ತಮವಾದ ಫಲಿತಾಂಶ ದೊರೆಯಲಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ